ಎರಡು ವರ್ಷದ ಬಳಿಕ ಮತ್ತೊಂದು ಏಷ್ಯಾ ಕಪ್ ಫೈನಲ್‌ಗೆ ಭಾರತ-ಬಾಂಗ್ಲಾ ಸಜ್ಜು

೨೦೧೬ರ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಮತ್ತೊಮ್ಮೆ ಏಷ್ಯಾ ಕಪ್ ಫೈನಲ್‌ ಹಣಾಹಣಿಗೆ ಸಜ್ಜಾಗಿವೆ. ಕೂದಲೆಳೆಯ ಅಂತರದಿಂದ ಕಳೆದ ಬಾರಿ ಪ್ರಶಸ್ತಿ ವಂಚಿತವಾದ ಬಾಂಗ್ಲಾದೇಶ, ರೋಹಿತ್ ಶರ್ಮಾ ಪಡೆಯನ್ನು ಮಣಿಸುವ ಛಲ ತೊಟ್ಟಿದೆ

ವ್ಯಾಖ್ಯಾನಕ್ಕೆ ಸಿಗದ ಅನಿಶ್ಚಿತತೆಯ ಪ್ರದರ್ಶನ ನೀಡುತ್ತಿರುವ ಬಾಂಗ್ಲಾದೇಶ ತಂಡಕ್ಕೆ ಎರಡನೇ ಬಾರಿ ಆಘಾತ ನೀಡಲು ಭಾರತ ಸರ್ವಸನ್ನದ್ಧವಾಗಿದೆ. ಎರಡು ವರ್ಷಗಳ ಹಿಂದಿನ ಏಷ್ಯಾ ಕಪ್ ಟಿ೨೦ ಮಾದರಿಯದ್ದಾದರೆ, ಈ ಬಾರಿಯ ಏಷ್ಯಾ ಕಪ್‌ ೫೦ ಓವರ್‌ಗಳ ಮಾದರಿಯದ್ದು. ಎರಡೂ ಪ್ರಕಾರದ ಕ್ರಿಕೆಟ್‌ ವೈವಿಧ್ಯತೆಯದ್ದು. ಸದ್ಯದ ಸ್ಥಿತಿಯಲ್ಲಿ ಭಾರತ ಫೇವರಿಟ್ ಎನಿಸಿದರೂ, ಪಂದ್ಯದ ಯಾವುದೇ ಘಟ್ಟದಲ್ಲಿ ಬೇಕಾದರೂ ಅಪಾಯಕಾರಿಯಾಗಿ ಪರಿಣಮಿಸುವ ಚಾಲಾಕಿ ಬಾಂಗ್ಲಾದೇಶ ತಂಡ. ಹೀಗಾಗಿ, ಸಹಜವಾಗಿಯೇ ಶುಕ್ರವಾರ (ಸೆ.೨೮) ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯ ಕುತೂಹಲ ಕೆರಳಿಸಿದೆ.

ಆರು ಬಾರಿ ಏಷ್ಯಾ ಚಾಂಪಿಯನ್ ಆಗಿರುವ ಭಾರತ ತಂಡ ಈ ಬಾರಿಯೂ ಫೇವರಿಟ್ ಎನಿಸಿದೆ. ಮೊದಲ ಪಂದ್ಯವನ್ನು ಹೊರತುಪಡಿಸಿ ಟೂರ್ನಿಯಾದ್ಯಂತ ಅಮೋಘ ನಿರ್ವಹಣೆ ನೀಡಿರುವ ರೋಹಿತ್ ಶರ್ಮಾ ಸಾರಥ್ಯದ ಭಾರತ ತಂಡ, ಬಾಂಗ್ಲಾ ಕಾಲೆಳೆಯಲು ಸನ್ನದ್ಧವಾಗಿದೆ. ಅಂದಹಾಗೆ, ಕಳೆದ ಬಾರಿ, ಎಂ ಎಸ್ ಧೋನಿ ಸಾರಥ್ಯದ ಭಾರತ ತಂಡ, ಫೈನಲ್‌ನಲ್ಲಿ ಬಾಂಗ್ಲಾವನ್ನು ಮಣಿಸಿ ಚಾಂಪಿಯನ್ ಎನಿಸಿತ್ತು.

ಆದರೆ ಈ ಬಾರಿ, ಮಾಡು ಇಲ್ಲವೇ ಮಡಿ ಎಂಬಂತಿದ್ದ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿದ ಬಾಂಗ್ಲಾದೇಶ, ಭಾರತವನ್ನು ಫೈನಲ್‌ನಲ್ಲಿ ಮಣಿಸುವ ವಿಶ್ವಾಸದಲ್ಲಿದೆ. ಆದರೆ, ಮಶ್ರಫೆ ಮೊರ್ತಜಾ ಪಡೆ ಗಾಯದ ಸಮಸ್ಯೆಯಿಂದ ನಲುಗುತ್ತಿದ್ದು, ಇದು ಕೊಂಚ ಹಿನ್ನಡೆ ಉಂಟುಮಾಡಬಹುದು. ಏತನ್ಮಧ್ಯೆ, ಕಳೆದ ಭಾನುವಾರ ನಡೆದ ಪಂದ್ಯದಲ್ಲಿ ಇದೇ ಭಾರತದ ಎದುರು ೭ ವಿಕೆಟ್ ಸೋಲನುಭವಿಸಿದ್ದ ಬಾಂಗ್ಲಾದೇಶ, ಭಾರತದ ಸವಾಲಿಗೆ ಮತ್ತೊಮ್ಮೆ ಎದೆಯೊಡ್ಡಲು ಅಣಿಯಾಗಿದೆ.

ಆರದ ಗಾಯ

ಆರಂಭಿಕ ಪಂದ್ಯದಲ್ಲಿ ಮುಂಗೈ ಮಣಿಕಟ್ಟಿಗೆ ಗಾಯ ಮಾಡಿಕೊಂಡ ತಮೀಮ್ ಇಕ್ಬಾಲ್ ಸೇವೆ ಕಳೆದುಕೊಂಡ ಬಳಿಕ ಬಾಂಗ್ಲಾದೇಶ ಗಾಯದ ಸಮಸ್ಯೆಯಿಂದ ಮುಕ್ತವಾಗಿಲ್ಲ. ಆಲ್ರೌಂಡರ್ ಶಕೀಬ್ ಅಲ್ ಹಸನ್ ಬೆರಳ ಗಾಯದಿಂದ ಬಳಲುತ್ತಿರುವುದೂ ಬಾಂಗ್ಲಾ ಪಾಳೆಯದ ತಲೆನೋವನ್ನು ಹೆಚ್ಚಿಸಿದೆ. ಎಡಗೈ ಆಲ್ರೌಂಡರ್ ಶಕೀಬ್, ಪಾಕ್ ವಿರುದ್ಧದ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದರು. ಸದ್ಯ, ಢಾಕಾಗೆ ಹಿಂದಿರುಗಿರುವ ಅವರು, ಕನಿಷ್ಠ ಮೂರರಿಂದ ಆರು ವಾರಗಳ ಕಾಲ ವಿಶ್ರಾಂತಿ ಪಡೆಯುವ ಸಂಭವವಿದೆ.

ಗಾಯದ ಸಮಸ್ಯೆಯ ಮಧ್ಯೆಯೂ ಬಾಂಗ್ಲಾದೇಶ ಹೇಗೂ ಫೈನಲ್‌ವರೆಗೆ ಬಂದು ನಿಲ್ಲುವಲ್ಲಿ ಸಫಲವಾಗಿದೆ. ಮುಷ್ಪೀಕರ್ ರಹೀಮ್, ಮಶ್ರಫೆ ಮೊರ್ತಜಾ, ಮಹಮುದುಲ್ಲಾ, ಮುಸ್ತಾಫಿಜುರ್ ರೆಹಮಾನ್ ಮುಂತಾದವರು ಬಾಂಗ್ಲಾ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಪಾಕ್ ವಿರುದ್ಧದ ಪಂದ್ಯದಲ್ಲಂತೂ ಮುಷ್ಪೀಕರ್ ಮನೋಜ್ಞ ಬ್ಯಾಟಿಂಗ್‌ನೊಂದಿಗೆ ತಂಡಕ್ಕೆ ಆಸರೆಯಾಗಿದ್ದರು. ಅವರ ೯೯ ರನ್‌ ಮತ್ತು ನಾಲ್ಕನೇ ವಿಕೆಟ್‌ಗೆ ಮೊಹಮದ್ ಮಿಥುನ್ ಜೊತೆ ಕಲೆಹಾಕಿದ ೧೪೪ ರನ್‌ ಬಾಂಗ್ಲಾಗೆ ಅಭೂತಪೂರ್ವ ಗೆಲುವು ತಂದುಕೊಟ್ಟಿತ್ತು. ಒಟ್ಟಾರೆ, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲಿಯೂ ಮಿಂಚಬಲ್ಲ ಆಟಗಾರರು ಬಾಂಗ್ಲಾ ಬೆನ್ನಿಗಿದ್ದಾರೆ.

ಇದನ್ನೂ ಓದಿ : ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆಯೇ ಹಿಟ್ ಮ್ಯಾನ್ ರೋಹಿತ್ ಶರ್ಮಾ?

ಭಾರತಕ್ಕೆ ಅಜೇಯ ಗುರಿ

ಹಾಂಕಾಂಗ್ ವಿರುದ್ಧ ಪ್ರಯಾಸದ ಗೆಲುವಿನೊಂದಿಗೆ ಪ್ರಸ್ತುತ ಏಷ್ಯಾ ಕಪ್ ಪಂದ್ಯಾವಳಿಯನ್ನು ಆರಂಭಿಸಿದ ಭಾರತ ತಂಡ, ಟೂರ್ನಿಯಲ್ಲಿ ಕೊಂಚ ತಿಣುಕಿದ್ದು ಆಫ್ಗಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಮಾತ್ರವೇ. ಸೂಪರ್ ಫೋರ್ ನಾಲ್ಕರ ಘಟ್ಟದ ಈ ಕೊನೆಯ ಪಂದ್ಯಕ್ಕೆ ಪ್ರಚಂಡ ಫಾರ್ಮ್‌ನಲ್ಲಿದ್ದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ವಿಶ್ರಾಂತಿ ಪಡೆದಿದ್ದರು ಎಂಬುದು ಗಮನಾರ್ಹ.

ಇಷ್ಟರ ಮಧ್ಯೆಯೂ ಆಫ್ಘಾನಿಸ್ತಾನ ಧೋನಿ ಸಾರಥ್ಯದ ಭಾರತ ತಂಡವನ್ನು ಕಾಡಿದ್ದು ಕೂಡ ಅಷ್ಟೇ ಸತ್ಯ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ೨೦೦ನೇ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಧೋನಿ, ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗದೆ ಹೋದರೂ, ರೋಚಕ ಟೈ ಸಾಧಿಸುವುದರೊಂದಿಗೆ ಸೋಲಿನಿಂದ ಪಾರಾಗಿದ್ದರು.

ಇವೆರಡು ಪಂದ್ಯ ಹೊರತುಪಡಿಸಿದರೆ ಭಾರತ ಪ್ರಸಕ್ತ ಟೂರ್ನಿಯಲ್ಲಿ ಅತ್ಯಮೋಘ ಪ್ರದರ್ಶನ ನೀಡಿದೆ. ಈ ಪೈಕಿ, ಎರಡು ಬಾರಿ ಪಾಕಿಸ್ತಾನವನ್ನು ಹಣಿದ ರೋಹಿತ್ ಪಡೆ, ಬಾಂಗ್ಲಾದೇಶಕ್ಕೂ ಸೋಲುಣಿಸಿದೆ. ಮಧ್ಯಮ ಕ್ರಮಾಂಕ ಕೊಂಚ ಅಸ್ಥಿರ ಆಟವನ್ನು ತಿದ್ದಿಕೊಂಡರೆ, ಭಾರತ ಬೃಹತ್ ಮೊತ್ತ ಪೇರಿಸಲು ಯಾವುದೇ ಅಡ್ಡಿ ಇಲ್ಲ. ಇನ್ನು, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್‌ ವೇಗದ ಬೌಲಿಂಗ್‌ನ ಅಸ್ತ್ರಗಳಾಗಿದ್ದರೆ, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್‌ ಮತ್ತು ರವೀಂದ್ರ ಜಡೇಜಾ ಸ್ಪಿನ್ ವಲಯದಲ್ಲಿ ಬಲಿಷ್ಠವಾಗಿದ್ದಾರೆ.

ತಂಡಗಳು ಇಂತಿವೆ

ಭಾರತ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಅಂಬಟಿ ರಾಯುಡು, ದಿನೇಶ್ ಕಾರ್ತಿಕ್, ಎಂ ಎಸ್ ಧೋನಿ (ವಿಕೆಟ್‌ ಕೀಪರ್), ಕೇದಾರ್ ಜಾಧವ್, ರವೀಂದ್ರ ಜಡೇಜಾ, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಮನೀಶ್ ಪಾಂಡೆ, ಸಿದ್ಧಾರ್ಥ್ ಕೌಲ್, ಕೆ ಎಲ್ ರಾಹುಲ್ ಮತ್ತು ದೀಪಕ್ ಚಾಹರ್.

ಬಾಂಗ್ಲಾದೇಶ: ಮಶ್ರಫೆ ಮೊರ್ತಜಾ (ನಾಯಕ), ಶಕೀಬ್ ಅಲ್ ಹಸನ್, ತಮೀಮ್ ಇಕ್ಬಾಲ್, ಮೊಹಮದ್ ಮಿಥುನ್, ಲಿಟನ್ ದಾಸ್, ಮುಷ್ಪೀಕರ್ ರಹೀಮ್, ಅರಿಫುಲ್ ಹಕ್, ಮಹಮುದುಲ್ಲಾ, ಮೊಸಾದಕ್ ಹುಸೇನ್, ನಜ್ಮುಲ್ ಹುಸೇನ್, ಮೆಹಿದಿ ಮಿರಾಜ್, ನಜ್ಮುಲ್ ಇಸ್ಲಾಮ್, ರೂಬೆಲ್ ಹುಸೇನ್, ಮುಸ್ತಾಫಿಜುರ್ ರೆಹಮಾನ್, ಅಬು ಹೈದರ್.

ಪಂದ್ಯ ಆರಂಭ: ಸಂಜೆ ೫.೦೦ | ಸ್ಥಳ: ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣ | ನೇರ ಪ್ರಸಾರ: ಸ್ಟಾರ್ ನೆಟ್ವರ್ಕ್

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More