ಏಷ್ಯಾ ಕಪ್ | ಪಾಕ್ ಇನ್ನಿಂಗ್ಸ್‌ಗೆ ತಿರುವು ನೀಡಿದ ಮೊರ್ತಜಾ ಮೋಹಕ ಕ್ಯಾಚ್!

ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ (ಯುಎಇ) ನಡೆಯುತ್ತಿರುವ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಕೆಲವು ರೋಮಾಂಚಕ ಫೀಲ್ಡಿಂಗ್ ಕ್ಷಣಗಳು ಕ್ರಿಕೆಟ್ ಪ್ರೇಮಿಗಳನ್ನು ಮುದಗೊಳಿಸಿದೆ. ಕನ್ನಡಿಗ ಮನೀಶ್ ಪಾಂಡೆ ಮೊದಲು ಸುದ್ದಿಯಾದರೆ, ಈಗಿನ ಸರದಿ ಬಾಂಗ್ಲಾದೇಶದ ಕಪ್ತಾನ ಮೊರ್ತಜಾ ಅವರದ್ದು

ಪಾಕಿಸ್ತಾನ ವಿರುದ್ಧದ ಮಾಡು ಇಲ್ಲವೇ ಮಡಿ ಹೋರಾಟದಲ್ಲಿ ಬಾಂಗ್ಲಾದೇಶದ ಗೆಲುವಿನಲ್ಲಿ ಬಹುಮುಖ್ಯ ಪಾತ್ರ ವಹಿಸಿದವರಲ್ಲಿ ನಾಲ್ವರು ಪ್ರಮುಖರು. ಆಘಾತಕಾರಿ ಆರಂಭ ಕಂಡಿದ್ದ ಬಾಂಗ್ಲಾದೇಶಕ್ಕೆ ಅಭೂತಪೂರ್ವ ಬ್ಯಾಟಿಂಗ್‌ನೊಂದಿಗೆ ಆಸರೆಯಾದ ಮುಷ್ಪೀಕರ್ ರಹೀಮ್ ಮತ್ತು ಅವರೊಂದಿಗೆ ನಾಲ್ಕನೇ ವಿಕೆಟ್‌ ಜತೆಯಾಟದಲ್ಲಿ ೧೪೪ ರನ್‌ಗಳ ಜತೆಯಾಟವಾಡಿದ ಮೊಹಮದ್ ಮಿಥುನ್ ಮೊದಲಿಗರು.

ಪಾಕಿಸ್ತಾನದ ರನ್ ಚೇಸಿಂಗ್‌ನಲ್ಲಿ ಮಾರಕ ದಾಳಿ ಸಂಘಟಿಸಿದ ಮುಸ್ತಾಫಿಜುರ್ ರೆಹಮಾನ್ ಮೂರನೆಯವರು. ಇನ್ನು, ನಾಲ್ಕನೇ ವ್ಯಕ್ತಿ ನಾಯಕ ಮಶ್ರಫೆ ಮೊರ್ತಜಾ. ಈ ನಾಲ್ವರು ಕ್ರಿಕೆಟಿಗರು ಪಾಕಿಸ್ತಾನವನ್ನು ಆಟದ ಎಲ್ಲ ವಿಭಾಗಗಳಲ್ಲೂ ಹತ್ತಿಕ್ಕಿದರು. ಅಂದಹಾಗೆ, ರನ್ ಚೇಸಿಂಗ್‌ನಲ್ಲಿ ಬಾಂಗ್ಲಾಗೆ ಅಪಾಯಕಾರಿಯಾಗಿ ಪರಿಣಮಿಸಿದ್ದ ಶೋಯೆಬ್ ಮಲಿಕ್ ವಿಕೆಟ್ ಪತನ ಕಂಡದ್ದು ಕೂಡ ಪಂದ್ಯದ ಬಹುಮುಖ್ಯ ತಿರುವುಗಳಲ್ಲಿ ಒಂದು.

ಒಂದು ಹಂತದಲ್ಲಿ ಸರಿದಿಸೆಯಲ್ಲಿಯೇ ಸಾಗಿದ್ದ ಬಾಂಗ್ಲಾದೇಶ, ಭಾರತ ವಿರುದ್ಧ ಟೂರ್ನಿಯಲ್ಲಿ ಮೂರನೇ ಬಾರಿಗೆ ಕಾದಾಡುವ ಅವಕಾಶಕ್ಕಾಗಿ ಹೊಂಚು ಹಾಕಿತ್ತು. ಸ್ಪಿನ್ನರ್ ರೂಬೆಲ್ ಹುಸೇನ್ ೨೧ನೇ ಓವರ್‌ನಲ್ಲಿ ಬೌಲ್ ಮಾಡಲು ಇಳಿದರು. ಶೋಯೆಬ್ ಮಲಿಕ್ ಬಾರಿಸಿದ ಚೆಂಡನ್ನು ಮಿಡ್‌ವಿಕೆಟ್ ನಲ್ಲಿದ್ದ ಮೊರ್ತಜಾ ಎಡಕ್ಕೆ ಜಿಗಿದು ಕ್ಯಾಚ್ ಪಡೆದು ಮೈದಾನದಲ್ಲಿದ್ದವರನ್ನು ಸ್ತಂಭಿಸಿದರಲ್ಲದೆ, ಪಾಕ್ ಇನ್ನಿಂಗ್ಸ್‌ಗೂ ಬರೆ ಎಳೆದರು.

ಇದನ್ನೂ ಓದಿ : ಏಷ್ಯಾ ಕಪ್ | ಮನೀಶ್ ಪಾಂಡೆ ಪ್ರಚಂಡ ಕ್ಯಾಚ್‌ಗೆ ಅಭಿಮಾನಿಗಳು ಕ್ಲೀನ್ ಬೌಲ್ಡ್

ಫಾರ್ಮ್‌ನಲ್ಲಿದ್ದ ಶೋಯೆಬ್ ಮಲಿಕ್ ವಿಕೆಟ್ ಕಳೆದುಕೊಂಡದ್ದು ಪಾಕಿಸ್ತಾನದ ಇನ್ನಿಂಗ್ಸ್‌ಗೆ ಬಲವಾದ ಹೊಡೆತ ನೀಡಿತ್ತು. ಆರಂಭಿಕ ಇಮಾಮ್ ಉಲ್ ಹಕ್ ಹೋರಾಟದ ಅರ್ಧಶತಕಕ್ಕೆ ಶೋಯೆಬ್ ಮಲಿಕ್ ಸಾಥ್ ನೀಡಿದ್ದರೆ ಬಹುಶಃ ಪಂದ್ಯ ಪಾಕ್ ಕಡೆ ವಾಲುತ್ತಿತ್ತೇನೋ. ೫೧ ಎಸೆತಗಳಲ್ಲಿ ಎರಡು ಬೌಂಡರಿ ಸೇರಿದ ೩೦ ರನ್‌ಗಳಿಗೆ ಶೋಯೆಬ್ ವಿಕೆಟ್ ಕಳೆದುಕೊಂಡದ್ದು ಬಾಂಗ್ಲಾದೇಶ ಪಂದ್ಯದಲ್ಲಿ ಹಿಡಿತ ಸಾಧಿಸಲು ಆಸ್ಪದ ಕಲ್ಪಿಸಿತು.

ಅಂದಹಾಗೆ, ಟೂರ್ನಿಯ ಆರಂಭದಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಕೂಡ ಕನ್ನಡಿಗ ಮನೀಶ್ ಪಾಂಡೆ ಇಂಥದ್ದೇ ಸಂಚಲನಕಾರಿ ಕ್ಯಾಚ್‌ನಿಂದ ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿದ್ದರು. ನಿರ್ಣಾಯಕ ಘಟ್ಟದಲ್ಲಿ ಆಡಲಿಳಿದಿದ್ದ ಪಾಕ್ ನಾಯಕ ಸರ್ಫರಾಜ್ ಅಹಮದ್ ಅವರನ್ನು ಔಟ್ ಮಾಡುವಲ್ಲಿ ಬೌಂಡರಿ ಗೆರೆಯಲ್ಲಿದ್ದ ಮನೀಶ್ ಹಿಡಿದ ಕ್ಯಾಚ್ ನಿರ್ಣಾಯಕವೆನಿಸಿತ್ತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More