ಏಷ್ಯಾ ಕಪ್ | ಪಾಕ್ ಹೊರದಬ್ಬಿದ ಬಾಂಗ್ಲಾಗೆ ಫೈನಲ್‌ನಲ್ಲಿ ಭಾರತದ ಸವಾಲು

ಕೇವಲ ಒಂದು ರನ್ ಅಂತರದಿಂದ ಶತಕ ವಂಚಿತರಾದ ಮುಷ್ಪೀಕರ್ ರಹೀಮ್ (೯೯) ಹೋರಾಟ ವ್ಯರ್ಥವಾಗಲಿಲ್ಲ. ಮುಸ್ತಾಫಿಜುರ್ ರೆಹಮಾನ್ (43ಕ್ಕೆ ೪) ಪ್ರಚಂಡ ಬೌಲಿಂಗ್ ನೆರವಿನೊಂದಿಗೆ ಪಾಕಿಸ್ತಾನವನ್ನು ೩೭ ರನ್‌ಗಳಿಂದ ಮಣಿಸಿದ ಬಾಂಗ್ಲಾದೇಶ, ಪ್ರಶಸ್ತಿಗಾಗಿ ಭಾರತದ ವಿರುದ್ಧ ಸೆಣಸಲಿದೆ

ಬಾಂಗ್ಲಾದೇಶದ ಆಲ್ರೌಂಡ್ ಪ್ರದರ್ಶನದ ಮುಂದೆ ಪಾಕಿಸ್ತಾನದ ಪ್ರತಾಪವೆಲ್ಲ ಉಡುಗಿಹೋಯಿತು. ವಾಸ್ತವವಾಗಿ, ಇಡೀ ಪಂದ್ಯಾವಳಿಯಲ್ಲಿ ಪಾಕ್ ತಂಡ ಒಂದು ಶಕ್ತಿಯಾಗಿ ಆಡದೆಹೋದದ್ದು ಅದರ ಏಷ್ಯಾ ಕಪ್ ನಿರ್ಗಮನಕ್ಕೆ ಪ್ರಮುಖ ಕಾರಣ. ಕಳೆದ ಪಂದ್ಯಗಳಿಗೆ ಹೋಲಿಸಿದರೆ, ಬಾಂಗ್ಲಾದೇಶ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಆರಂಭದಲ್ಲಿ ಪಾಕ್ ಬೌಲಿಂಗ್ ಕೊಂಚ ಮೊನಚಿನಿಂದ ಕೂಡಿತ್ತಾದರೂ, ಮುಷ್ಪೀಕರ್ ರಹೀಮ್ ಮನೋಜ್ಞ ಬ್ಯಾಟಿಂಗ್‌ನಲ್ಲಿ ಅದು ಮಂಕಾಯಿತು.

ಬುಧವಾರ (ಸೆ.೨೬) ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ ಸೂಪರ್ ಫೋರ್ ಹಂತದ ಕೊನೆಯ ನಿರ್ಣಾಯಕ ಪಂದ್ಯದಲ್ಲಿ ಬಾಂಗ್ಲಾದೇಶ ತನ್ನೆಲ್ಲ ಪ್ರತಿಭೆ ಹಾಗೂ ಶಕ್ತಿ ಧಾರೆ ಎರೆದು ವಿಜಯಶಾಲಿಯಾಯಿತು. ಗೆಲುವು ಸಾಧಿಸಲು ಬಾಂಗ್ಲಾದೇಶ ನೀಡಿದ್ದ ೨೪೦ ರನ್ ಗುರಿಗೆ ಪ್ರತಿಯಾಗಿ ಪಾಕಿಸ್ತಾನ, ೫೦ ಓವರ್‌ಗಳಲ್ಲಿ ೯ ವಿಕೆಟ್ ನಷ್ಟಕ್ಕೆ ೨೦೨ ರನ್ ಗಳಿಸಿ ಹೋರಾಟ ಮುಗಿಸಿತು.

ತಂಡಕ್ಕೆ ಗೆಲುವು ತಂದುಕೊಡಲು ಏಕಾಂಗಿ ಹೋರಾಟ ನಡೆಸಿದ ಇಮಾಮ್ ಉಲ್ ಹಕ್ (೮೩: ೧೦೫ ಎಸೆತ, ೨ ಬೌಂಡರಿ, ೧ ಸಿಕ್ಸರ್) ತಂಡದ ಸೋಲಿನ ಅಂತರವನ್ನು ತುಸು ತಗ್ಗಿಸಿದ್ದು ಬಿಟ್ಟರೆ, ಅವರಿಂದ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಕಳೆದ ಪಂದ್ಯಗಳಲ್ಲಿ ತಂಡಕ್ಕೆ ಆಸರೆಯಾಗಿದ್ದ ಮಧ್ಯಮ ಕ್ರಮಾಂಕಿತ ಆಟಗಾರ ಶೋಯೆಬ್ ಮಲಿಕ್ (೩೦) ಹಾಗೂ ಆಸೀಫ್ ಅಲಿ (೩೧) ಶ್ರಮವೂ ತಂಡದ ನೆರವಿಗೆ ಬರಲಿಲ್ಲ. ಅಂತಿಮವಾಗಿ ಪಾಕ್ ನಿರಾಶಾದಾಯಕ ಫಲಿತಾಂಶದೊಂದಿಗೆ ತವರಿನ ಹಾದಿ ಹಿಡಿಯಿತು. ಶುಕ್ರವಾರ (ಸೆ.೨೮) ನಡೆಯಲಿರುವ ಪ್ರಶಸ್ತಿ ಸುತ್ತಿನ ಸೆಣಸಾಟದಲ್ಲಿ ಭಾರತ ಮತ್ತು ಬಾಂಗ್ಲಾದೇಶ ಕಾದಾಡಲಿವೆ.

ಇದನ್ನೂ ಓದಿ : ಏಷ್ಯಾ ಕಪ್ | ಭಾರತ ವಿರುದ್ಧ ರೋಚಕ ಟೈ ಸಾಧಿಸಿದ ಆಫ್ಘಾನಿಸ್ತಾನ ನಿರ್ಗಮನ

ಮುಷ್ಪೀಕರ್ ಭರ್ಜರಿ ಬ್ಯಾಟಿಂಗ್

ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗಿಳಿದ ಬಾಂಗ್ಲಾದೇಶದ ಆರಂಭ ಅತ್ಯಂತ ಭೀಕರವಾಗಿತ್ತು. ಅಗ್ರ ಕ್ರಮಾಂಕದ ಮೂವರೂ ಬ್ಯಾಟ್ಸ್‌ಮನ್‌ಗಳು ಎರಡಂಕಿ ದಾಟದೆ ಬಾಂಗ್ಲಾ ಅಭಿಮಾನಿಗಳಲ್ಲಿ ತಲ್ಲಣ ಸೃಷ್ಟಿಸಿದರು. ಲಿಟನ್ ದಾಸ್ (೬), ಸೌಮ್ಯ ಸರ್ಕಾರ್ (೦) ಜುನೈದ್ ಖಾನ್‌ಗೆ ಬಲಿಯಾದರೆ, ಮೊಮಿನಲ್ ಹಕ್ (೫) ಶಾಹೀನ್ ಅಫ್ರಿದಿಗೆ ಬೌಲ್ಡ್ ಆದರು. ಕೇವಲ ೧೨ ರನ್ ಗಳಿಸುವಷ್ಟರಲ್ಲಿ ೩ ವಿಕೆಟ್ ಕಳೆದುಕೊಂಡ ಬಾಂಗ್ಲಾದೇಶ, ಅತ್ಯಂತ ನಿಕೃಷ್ಟ ಮೊತ್ತಕ್ಕೆ ಕುಸಿಯುವ ಅಪಾಯದಲ್ಲಿತ್ತು.

ಈ ವೇಳೆ ಜೊತೆಯಾದ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ಮುಷ್ಪೀಕರ್ ರಹೀಮ್ (೯೯: ೧೧೬ ಎಸೆತ, ೯ ಬೌಂಡರಿ) ಮತ್ತು ಮೊಹಮದ್ ಮಿಥುನ್ (೬೦: ೮೪ ಎಸೆತ, ೪ ಬೌಂಡರಿ) ನಾಲ್ಕನೇ ವಿಕೆಟ್‌ಗೆ ದಾಖಲೆಯ ೧೪೪ ರನ್ ಜೊತೆಯಾಟವಾಡಿ ತಂಡದ ಇನ್ನಿಂಗ್ಸ್‌ಗೆ ಮರುಜೀವ ನೀಡಿದರು. ವಾಸ್ತವವಾಗಿ ಬಾಂಗ್ಲಾದೇಶದ ಮೊತ್ತದಲ್ಲಿ ಈ ಇಬ್ಬರು ಆಟಗಾರರದ್ದೇ ನಿರ್ಣಾಯಕ ಇನ್ನಿಂಗ್ಸ್ ಎನಿಸಿಕೊಂಡಿತು. ಅತ್ಯದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ರಹೀಮ್, ಕೇವಲ ಒಂದು ರನ್ ಅಂತರದಿಂದ ಶತಕವಂಚಿತರಾಗಿ ನಿರಾಸೆಯಿಂದ ಪೆವಿಲಿಯನ್ ಸೇರಿಕೊಂಡರು. ಅಂದಹಾಗೆ, ೯೯ ರನ್‌ಗಳಿಗೆ ವಿಕೆಟ್ ಕಳೆದುಕೊಂಡ ಬಾಂಗ್ಲಾದೇಶದ ಮೊಟ್ಟಮೊದಲ ಬ್ಯಾಟ್ಸ್‌ಮನ್ ಆಗಿಯೂ ರಹೀಮ್ ದಾಖಲೆ ಪಟ್ಟಿ ಸೇರಿದರು.

ಮುಷ್ಪೀಕರ್ ಮತ್ತು ಮಿಥುನ್ ನಿರ್ಗಮನದ ಬಳಿಕ ಬಂದವರ ಪೈಕಿ ಮಹಮುದುಲ್ಲಾ (೨೫) ಬಿಟ್ಟರೆ ಮಿಕ್ಕವರಾರೂ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಆದಾಗ್ಯೂ, ಮೆಹದಿ ಹಸನ್ (೧೨) ಮತ್ತು ಮಶ್ರಫೆ ಮೊರ್ತಜಾ (೧೩) ಎರಡಂಕಿ ದಾಟುವುದರೊಂದಿಗೆ ೪೮.೫ ಓವರ್‌ಗಳಲ್ಲಿ ೨೩೯ ರನ್‌ಗಳಿಗೆ ಬಾಂಗ್ಲಾದೇಶ ಆಲೌಟ್ ಆಯಿತು. ಮಾರಕ ಬೌಲಿಂಗ್ ನಡೆಸಿದ ಜುನೈದ್ ಖಾನ್, ಕೇವಲ ೧೯ ರನ್‌ಗಳಿಗೆ ೪ ವಿಕೆಟ್ ಉರುಳಿಸಿದರು.

ಸಂಕ್ಷಿಪ್ತ ಸ್ಕೋರ್

ಬಾಂಗ್ಲಾದೇಶ: ೪೮.೫ ಓವರ್‌ಗಳಲ್ಲಿ ೨೩೯ (ಮುಷ್ಪೀಕರ್ ರಹೀಮ್ ೯೯, ಮೊಹಮದ್ ಮಿಥುನ್ ೬೦; ಜುನೈದ್ ಖಾನ್ ೧೯ಕ್ಕೆ ೪, ಶಾಹೀನ್ ಅಫ್ರಿದಿ ೪೭ಕ್ಕೆ ೨, ಹಸನ್ ಅಲಿ ೬೦ಕ್ಕೆ ೨) ಪಾಕಿಸ್ತಾನ: ೫೦ ಓವರ್‌ಗಳಲ್ಲಿ ೨೦೨/೯ (ಇಮಾಮ್ ಉಲ್ ಹಕ್ ೮೩, ಶೋಯೆಬ್ ಮಲಿಕ್ ೩೦, ಆಸೀಫ್ ಅಲಿ ೩೧) ಫಲಿತಾಂಶ: ಬಾಂಗ್ಲಾದೇಶಕ್ಕೆ ೩೭ ರನ್ ಗೆಲುವು ಪಂದ್ಯಶ್ರೇಷ್ಠ: ಮುಷ್ಪೀಕರ್ ರಹೀಮ್

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More