ಕೊರಿಯಾ ಓಪನ್ ಬ್ಯಾಡ್ಮಿಂಟನ್ | ಕ್ವಾರ್ಟರ್‌ಫೈನಲ್‌ಗೆ ಸೈನಾ ನೆಹ್ವಾಲ್ ಲಗ್ಗೆ

ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಕೊರಿಯಾ ಓಪನ್ ಟೂರ್ನಿಯಲ್ಲಿ ಎಂಟರ ಘಟ್ಟಕ್ಕೆ ಕಾಲಿಟ್ಟಿದ್ದಾರೆ. ಮಹತ್ವದ ಈ ಟೂರ್ನಿಯಲ್ಲಿ ಭಾರತದ ಪರ ಏಕಾಂಗಿ ಹೋರಾಟ ಮುಂದುವರಿಸಿರುವ ಸೈನಾ ನೆಹ್ವಾಲ್, ಪಂದ್ಯಾವಳಿಯಲ್ಲಿ ಪ್ರಶಸ್ತಿ ಜಯಿಸುವ ಭರವಸೆ ಮೂಡಿಸಿದ್ದಾರೆ

ವಿಶ್ವದ ಮಾಜಿ ನಂ.೧ ಆಟಗಾರ್ತಿ ಸೈನಾ ನೆಹ್ವಾಲ್ ಕೊರಿಯಾ ಓಪನ್‌ನಲ್ಲಿ ಮತ್ತೊಂದು ಹೆಜ್ಜೆ ಕ್ರಮಿಸಿದ್ದಾರೆ. ಗುರುವಾರ (ಸೆ.೨೭) ನಡೆದ ಪ್ರೀಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಸೈನಾ, ಕೊರಿಯಾದ ಕಿಮ್ ಗಾ ಉನ್ ವಿರುದ್ಧ ೨೧-೧೮, ೨೧-೧೮ರ ಎರಡು ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು.

ಐದನೇ ಶ್ರೇಯಾಂಕಿತ ಆಟಗಾರ್ತಿ ಸೈನಾ ನೆಹ್ವಾಲ್ ೩೭ ನಿಮಿಷಗಳ ಕಾದಾಟದಲ್ಲಿ ಕೊರಿಯಾ ಆಟಗಾರ್ತಿಯಿಂದ ದಿಟ್ಟ ಪೈಪೋಟಿ ಎದುರಿಸಿದರೂ, ಆಕೆಯನ್ನು ಹಣಿಯುವಲ್ಲಿ ಸಫಲವಾದರು. ಕ್ವಾರ್ಟರ್‌ಫೈನಲ್ ಸೆಣಸಿನಲ್ಲಿ ೨೦೧೭ರ ವಿಶ್ವ ಚಾಂಪಿಯನ್ ಹಾಗೂ ಮೂರನೇ ಶ್ರೇಯಾಂಕಿತೆ ನೊಜೊಮಿ ಒಕುಹಾರ ವಿರುದ್ಧ ಕಾದಾಡಲಿದ್ದಾರೆ.

ಒಕುಹಾರ ವಿರುದ್ಧದ ಒಟ್ಟಾರೆ ಮುಖಾಮುಖಿಯಲ್ಲಿ ೬-೩ ಮುನ್ನಡೆ ಸಾಧಿಸಿರುವ ಸೈನಾ, ಕಳೆದ ಎರಡು ಮುಖಾಮುಖಿಯಲ್ಲಿ ಮಾತ್ರ ಸೋಲನುಭವಿಸಿದ್ದಾರೆ. ಏತನ್ಮಧ್ಯೆ, ಕೊರಿಯಾ ಆಟಗಾರ್ತಿ ಕಿಮ್ ವಿರುದ್ಧದ ಸೆಣಸಾಟದಲ್ಲಿ ಸೈನಾ ಅತ್ಯಬ್ಬರದ ಆಟವಾಡಿದರು. ೧೦-೨ ಮುನ್ನಡೆ ಸಾಧಿಸಿದ ಸೈನಾ ಆಕ್ರಮಣಕಾರಿ ಆಟದಿಂದ ಕಿಮ್ ಅವರಲ್ಲಿ ಅಸ್ಥಿರತೆ ಮೂಡಿಸಿದರು. ಆದಾಗ್ಯೂ, ಸೈನಾಗೆ ಪ್ರತಿಯಾಗಿ ಕೊಂಚ ಚೇತರಿಕೆ ಕಂಡ ಕಿಮ್, ಮಧ್ಯಂತರದ ಹೊತ್ತಿಗೆ ೮-೧೧ ಅಂತರ ಕಾಯ್ದುಕೊಂಡರು.

ಇದನ್ನೂ ಓದಿ : ಕೊರಿಯಾ ಓಪನ್ ಬ್ಯಾಡ್ಮಿಂಟನ್| ಪ್ರೀಕ್ವಾರ್ಟರ್‌ಫೈನಲ್‌ಗೆ ಸೈನಾ ನೆಹ್ವಾಲ್

ಇನ್ನು, ವಿರಾಮದ ಬಳಿಕ ಸೈನಾ ಇನ್ನಷ್ಟು ಆಕ್ರಮಣಕಾರಿಯಾದರಲ್ಲದೆ ೧೬-೧೦ ಮೇಲುಗೈ ಸಾಧಿಸಿದರು. ಇತ್ತ, ಒಂದರ ಹಿಂದೊಂದರಂತೆ ಆರು ಪಾಯಿಂಟ್ಸ್ ಗಳಿಸಿದ ಕಿಮ್ ಪ್ರತಿರೋಧ ತೋರಿದರು. ಆದರೆ, ಗೆಲುವಿಗೆ ಬೇಕಿದ್ದ ಮೂರು ಪಾಯಿಂಟ್ಸ್‌ಗಳನ್ನು ಸೈನಾ ಕಲೆಹಾಕುವುದರೊಂದಿಗೆ ಮೊದಲ ಗೇಮ್ ಅನ್ನು ಕೈವಶಮಾಡಿಕೊಂಡರು.

ಮೊದಲ ಗೇಮ್ ಅನ್ನು ಕಳೆದುಕೊಂಡ ಕಿಮ್, ಎರಡನೇ ಗೇಮ್‌ನಲ್ಲಿ ನಂಬಲಸಾಧ್ಯ ರೀತಿಯಲ್ಲಿ ಸೈನಾಗೆ ದಿಗಿಲು ಮೂಡಿಸಿದರು. ಶರವೇಗದ ಆಟದೊಂದಿಗೆ ವಿಜೃಂಭಿಸಿದ ಕೊರಿಯಾ ಆಟಗಾರ್ತಿ ೮-೧ ಮುನ್ನಡೆ ಸಾಧಿಸಿದರು. ಆದರೆ, ಅನುಭವಿ ಆಟಗಾರ್ತಿ ಸೈನಾ ೧೦-೧೩ರಿಂದ ತಿರುಗೇಟು ನೀಡಿದರು. ನಂತರದಲ್ಲಿ ಇನ್ನೇಳು ಪಾಯಿಂಟ್ಸ್ ಪಡೆದ ಕಿಮ್, ೧೭-೧೩ರಿಂದ ಮೇಲುಗೈ ಸಾಧಿಸಿದರು. ಬಳಿಕ ಕಿಮ್ ತಿರುಗೇಟು ನೀಡಲು ಯತ್ನಿಸಿದರೂ, ಆಕೆ ಗಳಿಸಿದ್ದು ಕೇವಲ ೫ ಪಾಯಿಂಟ್ಸ್‌ಗಳನ್ನಷ್ಟೆ.

ಈ ಋತುವಿನಲ್ಲಿ ಸೈನಾ ಇಂಡೋನೇಷ್ಯಾ ಮಾಸ್ಟರ್ಸ್ ಪಂದ್ಯಾವಳಿಯಲ್ಲಿ ಫೈನಲ್ ತಲುಪಿದ್ದಲ್ಲದೆ, ಏಪ್ರಿಲ್‌ನಲ್ಲಿ ನಡೆದ ಏಷ್ಯಾ ಕ್ರೀಡಾಕೂಟದಲ್ಲಿ ಪ್ರಶಸ್ತಿ ಜಯಿಸಿದರು. ಸಹ ಆಟಗಾರ್ತಿ ಪಿ ವಿ ಸಿಂಧುವನ್ನು ಮಣಿಸಿದ ಸೈನಾ ಎರಡನೇ ಬಾರಿಗೆ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಐತಿಹಾಸಿಕ ಸಾಧನೆ ಮೆರೆದಿದ್ದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More