ಲಿಟನ್ ದಾಸ್ ಶತಕದ ಸೊಬಗಿನಲ್ಲಿ ಮೈಮರೆತ ಬಾಂಗ್ಲಾಗೆ ಭಾರತ ಕಡಿವಾಣ

ಲಿಟನ್ ದಾಸ್ (೧೨೧) ಶತಕದ ಸೊಬಗಿನಲ್ಲಿ ಮೈಮರೆತ ಬಾಂಗ್ಲಾ ವಿರುದ್ಧ ಮಿಂಚಿದ ಭಾರತದ ಸ್ಪಿನ್ನರ್‌ಗಳು ನಿರ್ಣಾಯಕ ಘಟ್ಟದಲ್ಲಿ ಪುಟಿದೆದ್ದರು. ಒಂದು ಹಂತದಲ್ಲಿ ೩೦೦ರ ಗಡಿ ದಾಟುವ ಸ್ಥಿತಿಯಲ್ಲಿದ್ದ ಬಾಂಗ್ಲಾದೇಶ, ಇನ್ನೂ ಒಂಬತ್ತು ಎಸೆತಗಳಿರುವಂತೆಯೇ ೨೨೨ ರನ್‌ಗಳಿಗೆ ಸರ್ವಪತನ ಕಂಡದ್ದು ಸೋಜಿಗ!

ಉಪಖಂಡದ ಕ್ರಿಕೆಟ್ ಸಾಮ್ರಾಜ್ಞಿಯಾಗುವ ಹೋರಾಟದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ, ಸರಿಯಾದ ಸಮಯದಲ್ಲಿ ಪುಟಿದೆದ್ದಿತು. ಮೊದಲ ೨೦ ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ೧೨೦ ರನ್ ಗಳಿಸಿದ್ದ ಬಾಂಗ್ಲಾದೇಶ, ಆನಂತರದ ೨೫ ಓವರ್‌ಗಳಲ್ಲಿ ೧೦೨ ರನ್‌ಗಳಿಗೆ ಏಳು ವಿಕೆಟ್ ಕಳೆದುಕೊಂಡದ್ದು ಅದರ ಹಿನ್ನಡೆಗೆ ಕಾರಣವಾಯಿತು. ಲಿಟನ್ ದಾಸ್ ಚೊಚ್ಚಲ ಶತಕದ ಸೊಬಗಿನಲ್ಲಿ ಮೈಮರೆತ ಬಾಂಗ್ಲಾದೇಶ, ಬಲಿಷ್ಠ ಭಾರತಕ್ಕೆ ಸಾಮಾನ್ಯ ಮೊತ್ತದ ಗುರಿ ನೀಡಿತು.

ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶುಕ್ರವಾರ (ಸೆ ೨೮) ನಡೆದ ಏಷ್ಯಾ ಕಪ್ ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶ ಅತ್ಯಮೋಘ ಆರಂಭದ ಮಧ್ಯೆಯೂ ೪೯.೩ ಓವರ್‌ಗಳಲ್ಲಿ ೨೨೨ ರನ್‌ಗಳಿಗೆ ಸರ್ವಪತನ ಕಂಡಿತು. ಕುಲದೀಪ್ ಯಾದವ್ (೪೫ಕ್ಕೆ ೩), ಕೇದಾರ್ ಜಾಧವ್ (೪೧ಕ್ಕೆ ೨) ಬಾಂಗ್ಲಾದೇಶದ ಇನ್ನಿಂಗ್ಸ್‌ಗೆ ಭಾರೀ ಪೆಟ್ಟು ನೀಡಿದರು. ಸ್ಪಿನ್ನರ್‌ಗಳ ಸಕಾಲಿಕ ತಿರುಗೇಟಿನಲ್ಲಿ ಬಾಂಗ್ಲಾ ಮತ್ತೆ ಚೇತರಿಸಿಕೊಳ್ಳಲಾಗದೆ ಅಂತಿಮವಾಗಿ ನಿಗದಿತ ಓವರ್‌ಗಳನ್ನೂ ಪೂರೈಸದೆ ಸರ್ವಪತನ ಕಂಡಿತು.

ಬಲಾಢ್ಯ ಬ್ಯಾಟಿಂಗ್ ಕ್ರಮಾಂಕ ಹೊಂದಿರುವ ಭಾರತದಂಥ ತಂಡವನ್ನು ಈ ಅಲ್ಪ ಮೊತ್ತವನ್ನಿಟ್ಟುಕೊಂಡೇ ಜಯಿಸುವುದು ಕಷ್ಟಸಾಧ್ಯ. ಆದಾಗ್ಯೂ, ಬಾಂಗ್ಲಾ ತಂಡದ ಬೌಲಿಂಗ್ ಕೋಚ್ ಆಗಿರುವ ಕನ್ನಡಿಗ ಸುನೀಲ್ ಜೋಶಿ, ಆರಂಭದಲ್ಲಿ ನಾವು ವಿಕೆಟ್ ಕೀಳಲು ಯಶಸ್ವಿಯಾದರೆ, ಈ ಮೊತ್ತವನ್ನೇ ಗೆಲುವಾಗಿ ಪರಿವರ್ತಿಸಲು ಸಾಧ್ಯ ಎಂದು ಬಾಂಗ್ಲಾ ಇನ್ನಿಂಗ್ಸ್ ಮುಗಿಯುತ್ತಿದ್ದಂತೆ ಪ್ರತಿಕ್ರಿಯಿಸಿದರು. ಹೀಗಾಗಿ, ಬಾಂಗ್ಲಾ ಬೌಲರ್‌ಗಳ ಮುಂದೆ ಬಹುದೊಡ್ಡ ಸವಾಲೇ ಎದುರಾಗಿತ್ತು.

ಇದನ್ನೂ ಓದಿ : ಕಡೇ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಭಾರತಕ್ಕೆ ನಿದಾಸ್ ಟ್ರೋಫಿ ತಂದಿತ್ತ ಕಾರ್ತಿಕ್

ದಾಸ್ ಅಮೋಘ ಶತಕ

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗಿಳಿಸಲ್ಪಟ್ಟ ಬಾಂಗ್ಲಾದೇಶ, ಅತ್ಯಮೋಘ ಆರಂಭ ಪಡೆಯಿತು. ಆರಂಭಿಕ ಜೋಡಿಯಾದ ಲಿಟನ್ ದಾಸ್ (೧೨೧: ೧೧೭ ಎಸೆತ, ೧೨ ಬೌಂಡರಿ, ೨ ಸಿಕ್ಸರ್) ಮತ್ತು ಮೆಹಿದಿ ಹಸನ್ (೩೨: ೫೯ ಎಸೆತ, ೩ ಬೌಂಡರಿ) ಮೊದಲ ವಿಕೆಟ್‌ಗೆ ೧೨೦ ರನ್ ಕಲೆಹಾಕಿದಾಗ ರೋಹಿತ್ ಶರ್ಮಾ ತಾನು ಟಾಸ್ ಗೆದ್ದರೂ ಮೊದಲು ಬ್ಯಾಟಿಂಗ್‌ಗೆ ಇಳಿಯದೆ ಹೋದದ್ದು ತಪ್ಪಾಯಿತೇ ಎಂದು ಚಿಂತಿಸುವಂತಾಯಿತು.

ಭಾರತೀಯ ಬೌಲರ್‌ಗಳನ್ನು ನಿರ್ಭಿಡೆಯಿಂದ ಎದುರಿಸಿದ ಈ ಜೋಡಿ ಮೊದಲ ೨೦ ಓವರ್‌ಗಳಲ್ಲಿ ವಿಕೆಟ್ ಬೀಳದಂತೆ ನೋಡಿಕೊಂಡಿತು. ಲಿಟನ್ ದಾಸ್ ಅಂತೂ, ಕಳೆದ ಪಂದ್ಯಗಳಲ್ಲಿನ ಅಸ್ಥಿರ ಆಟದಿಂದ ಹೊರಬಂದು ಭರ್ಜರಿ ಬ್ಯಾಟಿಂಗ್ ನಡೆಸಿದರು. ಬೌಂಡರಿ ಮತ್ತು ಸಿಕ್ಸರ್‌ಗಳೊಂದಿಗೆ ವಿಜೃಂಭಿಸಿದ ದಾಸ್, ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು.

ತಿರುವು ನೀಡಿದ ಜಾಧವ್

ಪರಿಪರಿಯಾಗಿ ಯತ್ನಿಸಿದರೂ, ಜಗ್ಗದ ಈ ಜೋಡಿಯನ್ನು ಬೇರ್ಪಡಿಸಲು ಸಾಕಷ್ಟು ಹೆಣಗಿದ ರೋಹಿತ್ ಶರ್ಮಾ, ೨೧ನೇ ಓವರ್‌ನಲ್ಲಿ ಕೇದಾರ್ ಜಾಧವ್ ಅವರನ್ನು ಬೌಲಿಂಗ್‌ಗಿಳಿಸಿದರು. ಈ ಓವರ್‌ನ ಐದನೇ ಎಸೆತದಲ್ಲಿ ಬಾಂಗ್ಲಾ ಜೋಡಿ ಬೇರ್ಪಟ್ಟಿತು. ಜಾಧವ್ ಎಸೆತವನ್ನು ಫ್ಲಿಕ್ ಮಾಡಲು ಹೋದ ಮೆಹಿದಿ ಹಸನ್ ಕವರ್‌ಪಾಯಿಂಟ್‌ನಲ್ಲಿ ಫೀಲ್ಡಿಂಗ್‌ನಲ್ಲಿದ್ದ ಅಂಬಟಿ ರಾಯುಡು ಅವರಿಗೆ ಕ್ಯಾಚಿತ್ತು ವಿಕೆಟ್ ಕಳೆದುಕೊಂಡರು.

ಇಲ್ಲಿಂದ ಶುರುವಾದ ಬಾಂಗ್ಲಾ ಆಟಗಾರರ ಪರೇಡ್ ನಿರಂತರವಾಗಿ ಸಾಗಿತು. ೫೯ ಎಸೆತಗಳಲ್ಲಿ ಮೂರು ಆಕರ್ಷಕ ಬೌಂಡರಿಗಳುಳ್ಳ ೩೨ ರನ್‌ಗಳೊಂದಿಗೆ ಹಸನ್ ನಿರ್ಗಮಿಸಿದ ನಂತರದಲ್ಲಿ ಬಂದ ನಾಲ್ವರು ಆಟಗಾರರು ಎರಡಂಕಿ ದಾಟಲಿಲ್ಲ. ಬಹುಮುಖ್ಯವಾಗಿ ಅಪಾಯಕಾರಿಗಳಾದ ಇಮ್ರುಲ್ ಕಾಯೆಸ್ (೨) ಅವರನ್ನು ಚಾಹಲ್ ಎಲ್‌ಬಿ ಬಲೆಗೆ ಸಿಲುಕಿಸಿದರೆ, ಮುಷ್ಪೀಕರ್ ರಹೀಮ್ (೫) ಕೇದಾರ್ ಜಾಧವ್ ಬೌಲಿಂಗ್‌ನಲ್ಲಿ ಬುಮ್ರಾಗೆ ಕ್ಯಾಚಿತ್ತು ಹೊರನಡೆದರು. ನಂತರ ಮೊಹಮದ್ ಮಿಥುನ್ ರನೌಟ್ ಅದರೆ, (೨) ಮಹಮುದುಲ್ಲಾ (೪) ಕುಲದೀಪ್ ಯಾದವ್ ಬೌಲಿಂಗ್‌ನಲ್ಲಿ ಬುಮ್ರಾಗೆ ಕ್ಯಾಚಿತ್ತು ಕ್ರೀಸ್ ತೊರೆದರು.

ಪಂದ್ಯದ ನಿರ್ಣಾಯಕ ಘಟ್ಟದಲ್ಲಿ ಬಾಂಗ್ಲಾ ಎಡವಿದ್ದು ಭಾರತ ಹಿಡಿತ ಕಳೆದುಕೊಂಡಿದ್ದ ಪಂದ್ಯದಲ್ಲಿ ಮತ್ತೆ ಪುಟಿದೇಳಲು ನೆರವಾಯಿತು. ಏತನ್ಮಧ್ಯೆ, ಮಹಮುದುಲ್ಲಾ ನಿರ್ಗಮಿಸಿದ ಬೆನ್ನಲ್ಲೇ ಲಿಟನ್ ದಾಸ್, ಇನ್ನಿಂಗ್ಸ್‌ನ ೪೧ನೇ ಓವರ್‌ನಲ್ಲಿ ಧೋನಿ ಸ್ಟಂಪೌಟ್ ಮಾಡಿದರು. ಆ ಬಳಿಕ ಬಾಂಗ್ಲಾ ಪರ ಎರಡಂಕಿ ದಾಟಿದ್ದು ಸೌಮ್ಯ ಸರ್ಕಾರ್ (೩೩: ೪೫ ಎಸೆತ, ೧ ಬೌಂಡರಿ, ೧ ಸಿಕ್ಸರ್) ಮಾತ್ರವೇ.

ಸಂಕ್ಷಿಪ್ತ ಸ್ಕೋರ್

ಬಾಂಗ್ಲಾದೇಶ: ೪೮.೩ ಓವರ್‌ಗಳಲ್ಲಿ ೨೨೨ (ಲಿಟನ್ ದಾಸ್ ೧೨೧, ಮೆಹದಿ ಹಸನ್ ೩೨, ಸೌಮ್ಯ ಸರ್ಕಾರ್ ೩೩; ಕುಲದೀಪ್ ಯಾದವ್ ೪೫ಕ್ಕೆ ೩, ಕೇದಾರ್ ಜಾಧವ್ ೪೧ಕ್ಕೆ ೨)

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More