ವಿಶ್ವ ಮಹಿಳಾ ಬಾಕ್ಸಿಂಗ್‌ನಲ್ಲಿ ಭಾರತವನ್ನು ಮುನ್ನಡೆಸಲಿದ್ದಾರೆ ಮೇರಿ ಕೋಮ್

ನವೆಂಬರ್ ೧೫ರಿಂದ ೨೪ರವರೆಗೆ ನಡೆಯಲಿರುವ ಎಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ೧೦ ಮಂದಿ ಬಾಕ್ಸರ್‌ಗಳಿರುವ ಭಾರತ ತಂಡವನ್ನು ಮೇರಿ ಕೋಮ್ ಮುನ್ನಡೆಸಲಿದ್ದಾರೆ. ೫ ಬಾರಿ ವಿಶ್ವ ಚಾಂಪಿಯನ್ ಆಗಿರುವ ಮೇರಿ ಕೋಮ್, ದಾಖಲೆಯ ಆರನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ

ಒಲಿಂಪಿಕ್ಸ್ ಕಂಚು ಪದಕ ವಿಜೇತೆ ಮೇರಿ ಕೋಮ್ ಮತ್ತೊಮ್ಮೆ ವಿಶ್ವ ಬಾಕ್ಸಿಂಗ್ ರಿಂಗ್‌ನಲ್ಲಿ ಮಿಂಚಲು ಅಣಿಯಾಗಿದ್ದಾರೆ. ಈಗಾಗಲೇ ಅದಕ್ಕಾಗಿ ಸೂಕ್ತ ತಯಾರಿ ಮಾಡಿಕೊಂಡಿರುವ ಆಕೆ, ತವರಿನಲ್ಲಿ ವಿಶ್ವ ಚಾಂಪಿಯನ್ ಆಗಿ ಮೆರೆದಾಡಲು ಉತ್ಸುಕವಾಗಿದ್ದಾರೆ. ಅಂದಹಾಗೆ, ಇತ್ತೀಚೆಗೆ ಪೋಲೆಂಡ್‌ನಲ್ಲಿ ನಡೆದ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮೇರಿ ಚಾಂಪಿಯನ್ ಆಗಿದ್ದರು.

ಶುಕ್ರವಾರ (ಸೆ.೨೮) ಪ್ರಕಟಿಸಿರುವ ಹತ್ತು ಮಂದಿ ಬಾಕ್ಸರ್‌ಗಳಲ್ಲಿ ಮೇರಿ ಸೇರಿದಂತೆ ಪಿಂಕಿ ಜಂಗ್ರಾ (೫೧ ಕೆಜಿ), ಮನಿಶಾ (೫೪ ಕೆಜಿ), ಸೋನಿಯಾ (೫೭ ಕೆಜಿ), ಎಲ್ ಸರಿತಾ ದೇವಿ (೬೦ ಕೆಜಿ), ಸಿಮ್ರನ್‌ಜಿತ್ ಕೌರ್ (೬೪ ಕೆಜಿ), ಲಾವ್ಲಿನಾ ಬೊರ್ಗೊಹೈನ್ (೬೯ ಕೆಜಿ), ಸವೀಟಿ ಬೂರಾ (೭೫ ಕೆಜಿ), ಭಾಗ್ಯವತಿ ಕಚಾರಿ (೮೧ ಕೆಜಿ) ಮತ್ತು ಸೀಮಾ ಪೂನಿಯಾ (+೮೧ ಕೆಜಿ) ಸ್ಪರ್ಧೆಗಿಳಿಯಲಿದ್ದಾರೆ.

ಮೇರಿ ಕೋಮ್, ಲಾವ್ಲಿನಾ, ಸರಿತಾ, ಭಾಗ್ಯವತಿ ಹಾಗೂ ಸಿಮ್ರನ್‌ಜಿತ್ ಪೋಲೆಂಡ್‌ನಲ್ಲಿ ನಡೆದ ಇತ್ತೀಚಿನ ೧೩ನೇ ಅಂತಾರಾಷ್ಟ್ರೀಯ ಸಿಲೇಸಿಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಹಾಗೂ ಟರ್ಕಿಯಲ್ಲಿನ ೩೨ನೇ ಆಹ್ಮೆಟ್ ಕಾಮೆರ್ಟ್ ಪಂದ್ಯಾವಳಿಯಲ್ಲಿ ನೀಡಿದ ಪ್ರದರ್ಶನದ ಮೇರೆಗೆ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಗಳಿಸಿದ್ದಾರೆ.

ಇದನ್ನೂ ಓದಿ : ಮೇರಿ ಕೋಮ್ ದಾರಿ ಹಿಡಿಯಲಿದ್ದಾರೆಯೇ ಕುಸ್ತಿಪಟು ಸುಶೀಲ್ ಕುಮಾರ್?

ಇನ್ನುಳಿದ ಬಾಕ್ಸರ್‌ಗಳನ್ನು ಶುಕ್ರವಾರ ನಡೆದ ಆಯ್ಕೆ ಟ್ರಯಲ್ಸ್‌ ಆಧರಿಸಿ ಆರಿಸಲಾಗಿದೆ. ಈ ಆಯ್ಕೆ ಟ್ರಯಲ್ಸ್‌ನಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟದ ಮಾಜಿ ಕಂಚು ವಿಜೇತೆ ಪಿಂಕಿ ಜಂಗ್ರಾ, ರಿತು ಗ್ರೇವಲ್ ವಿರುದ್ಧ ಗೆಲುವು ಸಾಧಿಸಿದರೆ, ಟರ್ಕಿಯಲ್ಲಿ ಬೆಳ್ಳಿ ಗೆದ್ದಿದ್ದ ಮೀನಾ ಕುಮಾರಿ ದೇವಿಯನ್ನು ಮನಿಶಾ ಮಣಿಸಿದರು. ಇನ್ನು, ಯುವ ವಿಶ್ವ ಚಾಂಪಿಯನ್ ಶಶಿ ಚೋಪ್ರಾ ೫೭ ಕೆಜಿ ವಿಭಾಗದಲ್ಲಿ ಸೋನಿಯಾ ವಿರುದ್ಧ ಫೇವರಿಟ್ ಆಗಿದ್ದರೂ, ಅನನುಭವ ಅವರ ವಿಶ್ವ ಚಾಂಪಿಯನ್‌ಶಿಪ್‌ಗೆ ಪೂರಕವಾಗಲಿಲ್ಲ.

ಅಂದಹಾಗೆ, ೨೦೦೬ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿತ್ತು. ನಾಲ್ಕು ಸ್ವರ್ಣ, ಮೂರು ಬೆಳ್ಳಿ ಹಾಗೂ ಒಂದು ಕಂಚಿನ ಪದಕವನ್ನು ಭಾರತದ ಬಾಕ್ಸರ್‌ಗಳು ಗೆದ್ದು ಬೀಗಿದ್ದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More