ಏಷ್ಯಾ ಕಪ್ | ಬಾಂಗ್ಲಾ ವಿರುದ್ಧದ ಗೆಲುವಿನ ಜೊತೆಗೆ ಧೋನಿಗೆ ದಾಖಲೆ ಸಂಭ್ರಮ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ ಎಸ್ ಧೋನಿ ಏಷ್ಯಾ ಕಪ್ ಗೆಲುವಿನ ಜೊತೆಗೆ ವೈಯಕ್ತಿಕ ದಾಖಲೆ ಸಂಭ್ರಮದಲ್ಲಿ ತೇಲಿದರು. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಎರಡು ಸ್ಟಂಪೌಟ್ ಮಾಡಿದ ಧೋನಿ, ಆ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ೮೦೦ನೇ ಸ್ಟಂಪೌಟ್ ದಾಖಲೆ ಬರೆದರು

ಭಾರತ ಮತ್ತು ಬಾಂಗ್ಲಾದೇಶ ನಡುವಣದ ಏಷ್ಯಾ ಕಪ್ ಫೈನಲ್‌ ಪಂದ್ಯವು ಹಲವು ವೈಶಿಷ್ಟ್ಯಪೂರ್ಣತೆಯಿಂದ ದಾಖಲೆ ಪುಟ ಸೇರಿತು. ಮೊದಲಿಗೆ, ರೋಹಿತ್ ಶರ್ಮಾ ನಾಯಕತ್ವದಲ್ಲಿ ಅಜೇಯ ತಂಡವಾಗಿ ಮೊಟ್ಟಮೊದಲ ಬಾರಿಗೆ ಭಾರತ ತಂಡ ಏಷ್ಯಾ ಕಪ್ ಜಯಿಸಿತಲ್ಲದೆ, ಈ ಪಂದ್ಯ ಧೋನಿಯ ೮೦೦ನೇ ಅಂತಾರಾಷ್ಟ್ರೀಯ ಸ್ಟಂಪೌಟ್‌ ದಾಖಲೆಗೂ ಸಾಕ್ಷಿಯಾಯಿತು.

ಭಾರತ ತಂಡದ ಮೂರು ವಿಕೆಟ್‌ಗಳ ರೋಚಕ ಗೆಲುವಿಗೂ ಧೋನಿಯ ಕೊಡುಗೆ ಮಹತ್ವದ ಕಾಣಿಕೆ ನೀಡಿತು. ಬಾಂಗ್ಲಾ ನೀಡಿದ್ದ ೨೨೩ ರನ್‌ ಗುರಿಯನ್ನು ಬೆನ್ನುಹತ್ತಿದ್ದ ಭಾರತ, ಕಡು ಪ್ರಯಾಸದಿಂದ ಇನ್ನಿಂಗ್ಸ್‌ನ ಕೊನೇ ಎಸೆತದಲ್ಲಿ ಗೆಲುವು ಸಾಧಿಸಿತ್ತು. ಬಾಂಗ್ಲಾದೇಶದ ಬೌಲರ್‌ಗಳು ಭಾರತದ ಬ್ಯಾಟ್ಸ್‌ಮನ್‌ಗಳನ್ನು ಆ ಬಗೆಯಲ್ಲಿ ಕಾಡಿದ್ದರು. ಒಂದೊಮ್ಮೆ ಬಾಂಗ್ಲಾ ಇನ್ನೂ ೨೦ರಿಂದ ೩೦ ರನ್‌ ಹೆಚ್ಚುವರಿ ಪೇರಿಸಿದ್ದರೆ ಭಾರತಕ್ಕೆ ಈ ಮೊತ್ತವನ್ನು ಬೇಧಿಸುವುದು ಕಷ್ಟವಾಗುತ್ತಿತ್ತು.

ಆದರೆ, ಧೋನಿಯ ಸಮಯೋಚಿತ ಆಟದಲ್ಲಿ ಬಾಂಗ್ಲಾದೇಶ ಕೇವಲ ೨೨೨ ರನ್‌ಗಳಿಗೆ, ಅದೂ ೯ ಎಸೆತಗಳು ಬಾಕಿ ಇರುವಂತೆಯೇ ಸರ್ವಪತನ ಕಂಡಿತ್ತು. ಮೊದಲಿಗೆ, ಕ್ರೀಸ್‌ಗೆ ಕಚ್ಚಿನಿಂತಿದ್ದ ಲಿಟನ್ ದಾಸ್ ಅವರನ್ನು ಕ್ರೀಸ್ ತೊರೆಯುವಂತೆ ಮಾಡಿದ ಧೋನಿ, ಬಾಂಗ್ಲಾ ಕುಸಿತಕ್ಕೆ ಕಾರಣರಾದರು. ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕದೊಂದಿಗೆ ೧೨೧ ರನ್ ಗಳಿಸಿದ್ದ ದಾಸ್ ಅವರನ್ನು ಕುಲದೀಪ್ ಯಾದವ್ ಬೌಲಿಂಗ್‌ನಲ್ಲಿ ಧೋನಿ ಸ್ಟಂಪೌಟ್ ಮಾಡಿದರು.

ಇದನ್ನೂ ಓದಿ : ಅಫ್ರಿದಿ ಸಿಕ್ಸರ್ ದಾಖಲೆ ಸರಿಗಟ್ಟಿದ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್!

ಇನ್ನು, ಅವರ ಬಳಿಕ ಧೋನಿಯ ಮತ್ತೊಂದು ಮಹತ್ವಪೂರ್ಣ ಸ್ಟಂಪಿಂಗ್ ಎಂದರೆ ಅದು ಬಾಂಗ್ಲಾ ನಾಯಕ ಮಶ್ರಫೆ ಮೊರ್ತಜಾ ಅವರದ್ದು. ಅಪಾಯಕಾರಿ ಆಟಗಾರರಲ್ಲಿ ಒಬ್ಬರಾದ ಹಾಗೂ ಬಿರುಸಿನ ಆಟಕ್ಕೆ ಹೆಸರಾದ ಮೊರ್ತಜಾ ಅವರನ್ನು ಕೇವಲ ಏಳು ರನ್‌ಗೆ ನಿಯಂತ್ರಿಸಿದ ಧೋನಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ೮೦೦ನೇ ಸ್ಟಂಪಿಂಗ್ ಸಾಧನೆ ಮೆರೆದರು. ಈ ಎರಡು ಸ್ಟಂಪೌಟ್‌ಗಳು ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದವು ಎಂಬುದು ಕೂಡ ಗಮನಾರ್ಹ.

ಈ ಮಧ್ಯೆ, ಕುಸಿತ ಕಂಡಿದ್ದ ಭಾರತದ ಇನ್ನಿಂಗ್ಸ್‌ಗೂ ಧೋನಿ ಜೀವ ತುಂಬುವಲ್ಲಿ ನಿರ್ಣಾಯಕರೆನಿಸಿದರು. 83 ರನ್‌ಗಳಿಗೆ ಮೂರು ಮಹತ್ವದ ವಿಕೆಟ್ ಕಳೆದುಕೊಂಡು ತಡವರಿಸುತ್ತಿದ್ದ ಭಾರತಕ್ಕೆ ದಿನೇಶ್ ಕಾರ್ತಿಕ್ (೩೭) ಜೊತೆಗೂಡಿದ ಧೋನಿ (೩೬) ಸಹನೆಯ ಬ್ಯಾಟಿಂಗ್‌ನಿಂದ ಉತ್ತಮ ಜೊತೆಯಾಟವಾಡಿದ್ದು, ಭಾರತದ ರನ್ ಚೇಸಿಂಗ್‌ಗೆ ನೆರವಾಯಿತು. ಅಂದಹಾಗೆ, ಈ ಬಾರಿಯ ಏಷ್ಯಾ ಕಪ್‌ನಲ್ಲಿ ಧೋನಿ, ಹನ್ನೆರಡು ಮಂದಿ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದ್ದು, ನಂತರದ ಸ್ಥಾನದಲ್ಲಿ ಬಾಂಗ್ಲಾ ವಿಕೆಟ್ ಕೀಪರ್ ಮುಷ್ಪೀಕರ್ ರಹೀಮ್ (೬) ಇದ್ದಾರೆ.

ವಿಕೆಟ್‌ ಕೀಪರ್‌ಗಳ ಸಾಧನಾ ಪಟ್ಟಿಯಲ್ಲಿ ಧೋನಿಗೆ ೩ನೇ ಸ್ಥಾನ

ಟೆಸ್ಟ್, ಏಕದಿನ ಮತ್ತು ಟಿ೨೦ ಈ ಮೂರೂ ಪ್ರಕಾರದಲ್ಲಿ ಅತಿ ಹೆಚ್ಚು ಬಾರಿ ಆಟಗಾರರನ್ನು ಔಟ್ ಮಾಡಿದವರ ಪಟ್ಟಿಯಲ್ಲಿ ೨೦೧೧ರ ಐಸಿಸಿ ವಿಶ್ವಕಪ್ ವಿಜೇತ ಧೋನಿ ಮೂರನೆಯವರಾಗಿದ್ದಾರೆ

  • ಮಾರ್ಕ್ ಬೌಷರ್: ದಕ್ಷಿಣ ಆಫ್ರಿಕಾ - 998 (ಡಿಸ್‌ಮಿಸ್)
  • ಆ್ಯಡಂ ಗಿಲ್‌ಕ್ರಿಸ್ಟ್: ಆಸ್ಟ್ರೇಲಿಯಾ - ೯೦೫ (ಡಿಸ್‌ಮಿಸ್)
  • ಎಂ ಎಸ್ ಧೋನಿ: ಭಾರತ - 800 (ಡಿಸ್‌ಮಿಸ್)
  • ಕುಮಾರ್ ಸಂಗಕ್ಕಾರ: ಶ್ರೀಲಂಕಾ - ೬೭೮ (ಡಿಸ್‌ಮಿಸ್)
  • ಇಯಾನ್ ಹೀಲೆ: ಆಸ್ಟ್ರೇಲಿಯಾ - ೬೨೮ (ಡಿಸ್‌ಮಿಸ್)
ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More