ರೋಚಕ ಹಣಾಹಣಿಯಲ್ಲಿ ಬಾಂಗ್ಲಾ ಹಣಿದ ಭಾರತ ಮತ್ತೆ ಏಷ್ಯಾ ಚಾಂಪಿಯನ್

ಭಾರತದ ಅಜೇಯ ಓಟಕ್ಕೆ ತಡೆಹಾಕುವ ಬಾಂಗ್ಲಾದ ಹವಣಿಕೆ ಫಲಿಸಲಿಲ್ಲ. ಲಿಟನ್ ದಾಸ್ ಚೊಚ್ಚಲ ಶತಕವೂ ಬಾಂಗ್ಲಾ ನೆರವಿಗೆ ಬಾರಲಿಲ್ಲ. ಕೊಂಚ ತಡವರಿಸಿದರೂ, ಇನ್ನಿಂಗ್ಸ್‌ನ ಕೊನೇ ಎಸೆತದಲ್ಲಿ ಲೆಗ್ ಬೈಸ್‌ನಲ್ಲಿ ರನ್ನೊಂದನ್ನು ಗಳಿಸಿದ ಜಾಧವ್ ಬಾಂಗ್ಲಾದೇಶದ ಹೃದಯ ಬಿರಿಯುವಂತೆ ಮಾಡಿದರು!

ಇನ್ನಿಂಗ್ಸ್‌ನ ಕೊನೆಯ ಓವರ್ ಅದು. ಏಳನೇ ಬಾರಿಗೆ ಏಷ್ಯಾ ಕಪ್ ಎತ್ತಿಹಿಡಿಯುವ ಧಾವಂತದಲ್ಲಿ ಭಾರತ ತಂಡವಿದ್ದರೆ, ಚೊಚ್ಚಲ ಟ್ರೋಫಿಗೆ ಮುದ್ದಿಡುವ ತವಕ ಹಾಗೂ ತಲ್ಲಣದಲ್ಲಿತ್ತು ಬಾಂಗ್ಲಾದೇಶ. ಭಾರತ ತಂಡಕ್ಕೆ ಆರು ರನ್‌ಗಳ ಅಗತ್ಯವಿತ್ತು. ಇಡೀ ಟೂರ್ನಿಯಲ್ಲಿ ತಂಡವನ್ನು ಅದ್ಭುತವಾಗಿ ಮುನ್ನಡೆಸಿದ್ದ ಮಶ್ರಫೆ ಮೊರ್ತಜಾ ಚೆಂಡನ್ನು ಮಹಮುದುಲ್ಲಾಗೆ ನೀಡಿದರು.

ಕ್ರೀಡಾಂಗಣದಲ್ಲಿದ್ದ ಪ್ರತಿಯೊಬ್ಬರೂ ಚಡಪಡಿಕೆಯಲ್ಲಿದ್ದರು. ಮೊದಲ ಎಸೆತದಲ್ಲಿ ಕುಲದೀಪ್ ಯಾದವ್ ೧ ರನ್ ಗಳಿಸಿದರೆ, ಎರಡನೇ ಎಸೆತದಲ್ಲಿ ಕೇದಾರ್ ಜಾಧವ್ ೧ ರನ್ ಪೇರಿಸಿದರು. ಮೂರನೇ ಎಸೆತದಲ್ಲಿ ಕುಲದೀಪ್ ೨ ರನ್ ಗಳಿಸುತ್ತಿದ್ದಂತೆ ಬಾಂಗ್ಲಾ ಎದೆ ಢವಗುಟ್ಟತೊಡಗಿತು. ಆದರೆ, ನಾಲ್ಕನೇ ಎಸೆತದಲ್ಲಿ ಮಹಮದುಲ್ಲಾ ಯಾವುದೇ ರನ್ ನೀಡಲಿಲ್ಲ. ನಂತರದ ಎಸೆತದಲ್ಲಿ ಕುಲದೀಪ್ ಒಂದು ರನ್ ಗಳಿಸಿದಾಗ ಪಂದ್ಯ ಇನ್ನಷ್ಟು ರೋಚಕತೆ ಸೃಷ್ಟಿಸಿತು.

ಬಹುತೇಕ ಸೂಪರ್ ಓವರ್‌ಗೆ ಪಂದ್ಯ ಜಾರುತ್ತದೆ ಎನ್ನುವ ಸ್ಥಿತಿಯೂ ನಿರ್ಮಾಣ ಆಗಿತ್ತು. ಆದರೆ, ಕೊನೆಯ ಎಸೆತದಲ್ಲಿ ಲೆಗ್ ಬೈಸ್‌ನಿಂದಾಗಿ ಒಂದು ರನ್ ಪಡೆದ ಕೇದಾರ್ ಜಾಧವ್, ಬಾಂಗ್ಲಾದೇಶದ ತಂಡ ಮತ್ತು ಅಭಿಮಾನಿಗಳ ಹೃದಯ ಬಿರಿಯುವಂತೆ ಮಾಡಿದರು. ಮೂರು ವಿಕೆಟ್‌ಗಳಿಂದ ಬಾಂಗ್ಲಾವನ್ನು ಮಣಿಸಿದ ಭಾರತ ತಂಡ ಮತ್ತೊಮ್ಮೆ ಏಷ್ಯಾ ಕಪ್ ಎತ್ತಿಹಿಡಿದು ಸಂಭ್ರಮಿಸಿತು. ಎರಡು ವರ್ಷಗಳ ಹಿಂದಿನ ಟಿ೨೦ ಮಾದರಿಯಲ್ಲಿಯೂ ಇದೇ ರೀತಿ ಪ್ರಶಸ್ತಿ ಅಂಚಿನಲ್ಲಿ ಎಡವಿದ್ದ ಬಾಂಗ್ಲಾದೇಶ, ೫೦ ಓವರ್‌ಗಳ ಮಾದರಿಯಲ್ಲೂ ಭಾರತದ ಎದುರು ಸೋಲೊಪ್ಪಿಕೊಂಡಿತು!

ಮೆರೆದಾಡಿದ ರೋಹಿತ್ ಪಡೆ

ಇದನ್ನೂ ಓದಿ : ಲಿಟನ್ ದಾಸ್ ಶತಕದ ಸೊಬಗಿನಲ್ಲಿ ಮೈಮರೆತ ಬಾಂಗ್ಲಾಗೆ ಭಾರತ ಕಡಿವಾಣ

ಶುಕ್ರವಾರ (ಸೆ.೨೮) ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತ ಪ್ರಶಸ್ತಿ ಗೆಲ್ಲುವ ಫೇವರಿಟ್ ಆಗಿತ್ತಾದರೂ, ಮೊರ್ತಜಾ ಪಡೆ ಆತ್ಮವಿಶ್ವಾಸದಿಂದ ಹಾಗೂ ಕೆಚ್ಚೆದೆಯ ಆಟವಾಡಿತು. ಆದರೆ, ಲಿಟನ್ ದಾಸ್ ಅವರ ಅಭೂತಪೂರ್ವ ಶತಕ ಮಾತ್ರ ತಂಡದ ಹೋರಾಟಕ್ಕೆ ಸಾಕಾಗಲಿಲ್ಲ. ೨೦ರಿಂದ ೩೦ ರನ್ ಹಿನ್ನಡೆ ಅನುಭವಿಸಿದ ಬಾಂಗ್ಲಾ ಬೌಲಿಂಗ್‌ನಲ್ಲಿ ತಿರುಗಿಬೀಳಲು ಯತ್ನಿಸಿದರೂ, ಅದರಲ್ಲಿ ಯಶಸ್ವಿಯಾಗಲಿಲ್ಲ.

೨೨೩ ರನ್‌ಗಳ ಗುರಿ ಬೆನ್ನುಹತ್ತಿದ ಭಾರತಕ್ಕೆ ನಾಯಕ ರೋಹಿತ್ ಶರ್ಮಾ ಉತ್ತಮ ವೇದಿಕೆ ಹಾಕಿಕೊಟ್ಟರು. ಇನ್ನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ನಜ್ಮುಲ್ ಇಸ್ಲಾಮ್ ಅಪಾಯಕಾರಿ ಆಟಗಾರ ಶಿಖರ್ ಧವನ್ (೧೫) ವಿಕೆಟ್ ಎಗರಿಸಿ ಭಾರತಕ್ಕೆ ಮೊದಲ ಪೆಟ್ಟು ನೀಡಿದರು. ಬಳಿಕ ಬಂದ ಅಂಬಟಿ ರಾಯುಡು (೨) ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಾಗದೆ ಪೆವಿಲಿಯನ್ ದಾರಿ ತುಳಿದರು.

ಆದರೆ, ರೋಹಿತ್ ಧೃತಿಗೆಡದೆ ಆಕ್ರಮಣಕಾರಿ ಆಟಕ್ಕೆ ಮುನ್ನುಗ್ಗಿದರು. ರೋಹಿತ್ ಅವರನ್ನು ಹೆಚ್ಚು ಕಾಲ ಉಳಿಯಲು ಬಿಟ್ಟರೆ ತನಗೆ ಅಪಾಯ ತಪ್ಪಿದ್ದಲ್ಲ ಎಂಬುದನ್ನು ಚೆನ್ನಾಗಿ ಅರಿತಿದ್ದ ಬಾಂಗ್ಲಾದೇಶ ೧೨ ಓವರ್‌ಗಳಾಗುತ್ತಿದ್ದಂತೆ ಭಾರತದ ರನ್‌ಗತಿಗೂ ಕಡಿವಾಣ ಹಾಕಿತು. ನಾಲ್ಕನೇ ಬಾರಿಗೆ ಚೆಂಡನ್ನು ಬೌಂಡರಿ ಗೆರೆಯಾಚೆಗೆ ದಾಟಿಸುವ ಯತ್ನದಲ್ಲಿ ರೋಹಿತ್ ಶರ್ಮಾ ವಿಕೆಟ್ ಕೈಚೆಲ್ಲಿದರು. ಅಂಚಿನಲ್ಲಿದ್ದ ನಜ್ಮುಲ್ ಇಸ್ಲಾಮ್ ಹಿಡಿದ ಕ್ಯಾಚ್‌ನೊಂದಿಗೆ ರೋಹಿತ್ ಕ್ರೀಸ್ ತೊರೆದರು. ೫೫ ಎಸೆತಗಳನ್ನು ಎದುರಿಸಿದ ರೋಹಿತ್, ತಲಾ ೩ ಬೌಂಡರಿ ಮತ್ತು ಸಿಕ್ಸರ್‌ ಸೇರಿದ ೪೮ ರನ್‌ಗಳಿಗೆ ಹೋರಾಟ ಮುಗಿಸಿದರು.

ಈ ಹಂತದಲ್ಲಿ ಭಾರತಕ್ಕೆ ಜತೆಯಾದದ್ದು ದಿನೇಶ್ ಕಾರ್ತಿಕ್ (೩೭: ೬೧ ಎಸೆತ, ೧ ಬೌಂಡರಿ, ೧ ಸಿಕ್ಸರ್) ಮತ್ತು ಮಾಜಿ ನಾಯಕ ಎಂ ಎಸ್ ಧೋನಿ (೩೬: ೬೭ ಎಸೆತ, ೩ ಬೌಂಡರಿ). ೮೩ ರನ್‌ಗಳಿಗೆ ಮೂರು ಪ್ರಮುಖ ವಿಕೆಟ್ ಕಳೆದುಕೊಂಡ ಭಾರತ, ಒಂದು ವಿಧದಲ್ಲಿ ಆತಂಕಕ್ಕೆ ಸಿಲುಕಿತ್ತು. ಆದರೆ, ಅನುಭವಿ ಆಟಗಾರರಾದ ಕಾರ್ತಿಕ್ ಮತ್ತು ಧೋನಿ ನಾಲ್ಕನೇ ವಿಕೆಟ್‌ಗೆ ಎಚ್ಚರಿಕೆಯಿಂದ ಪೆರಿಸಿದ ೫೪ ರನ್ ಜತೆಯಾಟ ಭಾರತದ ಇನ್ನಿಂಗ್ಸ್‌ಗೆ ಚೇತನ ನೀಡಿತಲ್ಲದೆ, ದಿನೇಶ್ ಕಾರ್ತಿಕ್ ನಿರ್ಗಮನದ ನಂತರದಲ್ಲಿ ಕೇದಾರ್ ಜಾಧವ್ (ಅಜೇಯ ೨೩) ಜತೆಗೆ ೨೩ ರನ್ ಕಲೆಹಾಕಿದ ಧೋನಿಯ ಆಟ ಬಾಂಗ್ಲಾಗೆ ಮುಳುವಾಯಿತು.

ಅಂದಹಾಗೆ, ೩೬ನೇ ಓವರ್‌ನಲ್ಲಿ ಮುಸ್ತಾಫಿಜುರ್, ಧೋನಿಯನ್ನು ಬಲಿ ಪಡೆದಾಗ ಭಾರತ ಇನ್ನಷ್ಟು ಚಡಪಡಿಸಿತು. ಒತ್ತಡದಾಯಕ ಸನ್ನಿವೇಶದಲ್ಲಿ ಆಡಲಿಳಿದ ಭುವನೇಶ್ವರ್ ಕುಮಾರ್ (೨೧: ೩೧ ಎಸೆತ, ೧ ಬೌಂಡರಿ, ೧ ಸಿಕ್ಸರ್) ಕೂಡ ಬಾಂಗ್ಲಾ ಬೌಲರ್ಗಳ ಬೆವರಿಳಿಸಿದರು. ೪೯ನೇ ಓವರ್‌ನಲ್ಲಿ ದಾಳಿಗಿಳಿದ ಮುಸ್ತಾಫಿಜುರ್ ಮೊದಲ ಎಸೆತದಲ್ಲೇ ಭುವಿಯ ಹೋರಾಟಕ್ಕೆ ತಡೆಯೊಡ್ಡಿದರು. ಆದರೆ, ನಂತರದಲ್ಲಿ ಕುಲದೀಪ್ ಯಾದವ್ (ಅಜೇಯ ೫) ಜತೆಗೂಡಿದ ಕೇದಾರ್ ಜಾಧವ್ ಭಾರತ ಮತ್ತೆ ಎಡವದಂತೆ ನೋಡಿಕೊಂಡರು.

ದಾಸ್ ಅಮೋಘ ಶತಕ

ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ, ಲಿಟನ್ ದಾಸ್ ಅವರ ಚೊಚ್ಚಲ ಶತಕದ ಮಧ್ಯೆಯೂ ನಿರ್ಣಾಯಕ ಹಂತದಲ್ಲಿ ಎಡವಿ ಸಾಮಾನ್ಯ ಮೊತ್ತಕ್ಕೆ ಕುಸಿಯಿತು. ಬಾಂಗ್ಲಾದೇಶದ ಇಡೀ ಇನ್ನಿಂಗ್ಸ್‌ನ ಜೀವಾಳ ಲಿಟನ್ ದಾಸ್ ಮಾತ್ರವೇ ಎನ್ನುವಷ್ಟು ಮಿಕ್ಕ ಆಟಗಾರರು ಕೆಟ್ಟ ಹೊಡೆತಗಳಿಗೆ ಕೈಹಾಕಿ ಭಾರತ ಪುಟಿದೇಳಲು ರಹದಾರಿ ನಿರ್ಮಿಸಿಕೊಟ್ಟರು. ಮೆಹಿದಿ ಹಸನ್ (೩೨) ಮತ್ತು ಸೌಮ್ಯ ಸರ್ಕಾರ್ (೩೩) ಬಿಟ್ಟರೆ ಮಿಕ್ಕ ಯಾರೂ ಎರಡಂಕಿ ದಾಟದೆ ಹೋದದ್ದು ಭಾರತದ ಕೈ ಮೇಲಾಗಲು ಕಾರಣವಾಯಿತು. ಸಕಾಲದಲ್ಲಿ ಭಾರತದ ಸ್ಪಿನ್ನರ್‌ಗಳು ಬಾಂಗ್ಲಾ ಇನ್ನಿಂಗ್ಸ್‌ಗೆ ಕಡಿವಾಣ ಹಾಕುವಲ್ಲಿ ಸಫಲವಾದರು.

ಸಂಕ್ಷಿಪ್ತ ಸ್ಕೋರ್

ಬಾಂಗ್ಲಾದೇಶ: ೪೮.೩ ಓವರ್‌ಗಳಲ್ಲಿ ೨೨೨ (ಲಿಟನ್ ದಾಸ್ ೧೨೧, ಮೆಹಿದಿ ಹಸನ್ ೩೨, ಸೌಮ್ಯ ಸರ್ಕಾರ್ ೩೩; ಕುಲದೀಪ್ ಯಾದವ್ ೪೫ಕ್ಕೆ ೩, ಕೇದಾರ್ ಜಾಧವ್ ೪೧ಕ್ಕೆ ೨; ಭಾರತ: ೫೦ ಓವರ್‌ಗಳಲ್ಲಿ ೨೨೩ (ರೋಹಿತ್ ಶರ್ಮಾ ೪೮, ದಿನೇಶ್ ಕಾರ್ತಿಕ್ ೩೭, ಎಂ ಎಸ್ ಧೋನಿ ೩೬, ಕೇದಾರ್ ಜಾಧವ್ ೨೩*, ಕುಲದೀಪ್ ಯಾದವ್ ೫*); ಫಲಿತಾಂಶ: ಭಾರತಕ್ಕೆ ೩ ವಿಕೆಟ್ ಗೆಲುವು; ಪಂದ್ಯಶ್ರೇಷ್ಠ: ಲಿಟನ್ ದಾಸ್; ಸರಣಿಶ್ರೇಷ್ಠ: ಶಿಖರ್ ಧವನ್

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More