ವಿಂಡೀಸ್ ಸರಣಿಗೆ ವಾಪಸಾದ ಕೊಹ್ಲಿ; ಕಡೆಗೂ ಮಯಾಂಕ್‌ಗೆ ಕರೆ ಕೊಟ್ಟ ಆಯ್ಕೆ ಸಮಿತಿ

ಮುಂದಿನ ತಿಂಗಳು ಅಕ್ಟೋಬರ್ ೪ರಿಂದ ಶುರುವಾಗಲಿರುವ ವೆಸ್ಟ್‌ಇಂಡೀಸ್ ವಿರುದ್ಧದ ಸರಣಿಗೆ ಭಾರತ ತಂಡವನ್ನು ಆರಿಸಲಾಗಿದ್ದು, ಏಷ್ಯಾ ಕಪ್‌ನಿಂದ ವಿಶ್ರಾಂತಿ ಪಡೆದಿದ್ದ ವಿರಾಟ್ ಕೊಹ್ಲಿ ತಂಡಕ್ಕೆ ಮರಳಿದ್ದಾರೆ. ಏತನ್ಮಧ್ಯೆ, ಕನ್ನಡಿಗ ಮಯಾಂಕ್ ಅಗರ್ವಾಲ್‌ಗೆ ಕಡೆಗೂ ಆಯ್ಕೆಸಮಿತಿ ಕರೆ ಕೊಟ್ಟಿದೆ

ಪ್ರವಾಸಿ ವೆಸ್ಟ್ಇಂಡೀಸ್ ವಿರುದ್ಧದ ಸರಣಿಗೆ ಭಾರತೀಯ ಕ್ರಿಕೆಟ್ ಆಯ್ಕೆಸಮಿತಿ ಹಲವು ಅಚ್ಚರಿ ನೀಡಿದೆ. ಮೊದಲಿಗೆ, ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಜಯಿಸಿದ ಶಿಖರ್ ಧವನ್‌ಗೆ ವಿಂಡೀಸ್ ಸರಣಿಯಿಂದ ಕೊಕ್ ನೀಡಲಾಗಿದೆ. ಆಯ್ಕೆಸಮಿತಿಯ ಈ ನಿರ್ಧಾರಕ್ಕೆ ಪ್ರಮುಖ ಏಷ್ಯಾ ಕಪ್‌ಗೂ ಮುನ್ನ ಇಂಗ್ಲೆಂಡ್ ಸರಣಿಯಲ್ಲಿ ಅನುಭವಿಸಿದ ವೈಫಲ್ಯ.

ಇನ್ನು, ಯುವ ಆಟಗಾರರಾದ ಪೃಥ್ವಿ ಶಾ, ಹೈದರಾಬಾದ್‌ನ ಯುವ ವೇಗಿ ಮತ್ತು ಕನ್ನಡಿಗ ಮಯಾಂಕ್ ಅಗರ್ವಾಲ್‌ಗೆ ಸ್ಥಾನ ಕಲ್ಪಿಸಿರುವುದರ ಹಿಂದೆ ಮುಂಬರುವ ಆಸ್ಟ್ರೇಲಿಯಾದಂಥ ಮಹತ್ವದ ಸರಣಿಗೆ ಪೂರ್ವ ತಯಾರಿ ಕೊಡಿಸುವ ಇರಾದೆಯೂ ಇದ್ದಂತೆ ಕಾಣುತ್ತಿದೆ. ಏತನ್ಮಧ್ಯೆ, ಶನಿವಾರ (ಸೆ ೨೯) ಪ್ರಕಟಿಸಲಾಗಿರುವ ಹದಿನೈದು ಮಂದಿ ಆಟಗಾರರ ತಂಡದಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಭುವನೇಶ್ವರ್ ಕುಮಾರ್‌ಗೆ ವಿಶ್ರಾಂತಿ ಕಲ್ಪಿಸಲಾಗಿದೆ.

ಇನ್ನು, ಇಂಗ್ಲೆಂಡ್ ವಿರುದ್ಧದ ಸರಣಿಯ ಕೊನೆಯ ಎರಡು ಪಂದ್ಯಗಳಿಂದ ಕೈಬಿಡಲ್ಪಟ್ಟಿದ್ದ ತಮಿಳುನಾಡು ಬ್ಯಾಟ್ಸ್‌ಮನ್ ಮುರಳಿ ವಿಜಯ್ ಅವರನ್ನು ಆಯ್ಕೆಸಮಿತಿ ಮತ್ತೊಮ್ಮೆ ಉಪೇಕ್ಷಿಸಿದ್ದರೆ, ದಿನೇಶ್ ಕಾರ್ತಿಕ್ ಮತ್ತು ಕರುಣ್ ನಾಯರ್‌ಗೂ ಅವಕಾಶ ನಿರಾಕರಿಸಿದೆ. ಕಾರ್ತಿಕ್ ಅವರನ್ನು ಕೈಬಿಟ್ಟಿರುವ ಆಯ್ಕೆಸಮಿತಿ ಇಂಗ್ಲೆಂಡ್ ಸರಣಿಯಲ್ಲಿ ಗಮನ ಸೆಳೆದಿದ್ದ ದೆಹಲಿ ಆಟಗಾರ ರಿಷಭ್ ಪಂತ್‌ ಅವರನ್ನು ಉಳಿಸಿಕೊಂಡಿದೆ. ಪಂತ್ ವಿಕೆಟ್‌ಕೀಪಿಂಗ್‌ನಲ್ಲಿ ಗಮನ ಸೆಳೆದಿದ್ದಲ್ಲದೆ, ಕೊನೆಯ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸಿದ್ದರು.

ಇದನ್ನೂ ಓದಿ : ಮಯಾಂಕ್ ಮತ್ತಷ್ಟು ಕಾಲ ಕಾಯುವುದು ಅನಿವಾರ್ಯ ಎಂದ ಎಂಎಸ್‌ಕೆ ಪ್ರಸಾದ್‌

ಇನ್ನು, ಹೈದರಾಬಾದ್‌ನ ಮತ್ತೋರ್ವ ಯುವ ಆಟಗಾರ ಹನುಮ ವಿಹಾರಿ ಕೂಡ ಲಂಡನ್‌ನ ದಿ ಓವಲ್‌ನಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಗಮನ ಸೆಳೆದಿದ್ದರು. ಎಂ ಎಸ್ ಕೆ ಪ್ರಸಾದ್ ನೇತೃತ್ವದ ಆಯ್ಕೆಸಮಿತಿ ಈ ಯುವ ಆಟಗಾರನನ್ನೂ ವಿಂಡೀಸ್ ವಿರುದ್ಧದ ಸರಣಿಗೆ ಆರಿಸಲಾದ ತಂಡದಲ್ಲಿ ಸೇರ್ಪಡೆಗೊಳಿಸಿದೆ.

“ಇತ್ತೀಚಿನ ಅತಿಯಾದ ಕ್ರಿಕೆಟ್ ಪಂದ್ಯಾವಳಿಗಳಿಂದ ಸಾಕಷ್ಟು ಬಳಲಿರುವ ಭುವನೇಶ್ವರ್ ಮತ್ತು ಬುಮ್ರಾಗೆ ವಿಶ್ರಾಂತಿ ನೀಡಲು ನಿರ್ಧರಿಸಲಾಯಿತು. ಅಂತೆಯೇ ವೇಗಿ ಇಶಾಂತ್ ಶರ್ಮಾ ಮತ್ತು ಏಷ್ಯಾ ಕಪ್ ಪಂದ್ಯಾವಳಿಯ ಪಾಕ್ ವಿರುದ್ಧದ ಪಂದ್ಯದಲ್ಲಿ ಬೆನ್ನುನೋವಿಗೆ ಗುರಿಯಾದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನೂ ಈ ಸರಣಿಗೆ ಪರಿಗಣಿಸಿಲ್ಲ. ಇಬ್ಬರೂ ಗಾಯದಿಂದ ಚೇತರಿಸಿಕೊಳ್ಳಲಿ ಎಂದು ಅವರನ್ನು ಕೈಬಿಡಲಾಗಿದೆ,’’ ಎಂದು ಆಯ್ಕೆಸಮಿತಿ ತಿಳಿಸಿದೆ.

ಮೊದಲ ಟೆಸ್ಟ್ ಪಂದ್ಯ ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯಲಿದ್ದರೆ, ಅಕ್ಟೋಬರ್ ೧೨ರಿಂದ ಆರಂಭವಾಗಲಿರುವ ಎರಡನೇ ಹಾಗೂ ಕೊನೆಯ ಟೆಸ್ಟ್ ಪಂದ್ಯವು ಹೈದರಾಬಾದ್‌ನ ರಾಜೀವ್‌ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಜರುಗಲಿದೆ.

ತಂಡ ಇಂತಿದೆ

ವಿರಾಟ್ ಕೊಹ್ಲಿ (ನಾಯಕ), ಕೆ ಎಲ್ ರಾಹುಲ್, ಪೃಥ್ವಿ ಶಾ, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ (ಉಪನಾಯಕ), ಹನುಮಾ ವಿಹಾರಿ, ರಿಷಭ್ ಪಂತ್ (ವಿಕೆಟ್‌ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮದ್ ಶಮಿ, ಉಮೇಶ್ ಯಾದವ್, ಮೊಹಮದ್ ಸಿರಾಜ್, ಶಾರ್ದೂಲ್ ಠಾಕೂರ್.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More