ವುಹಾನ್ ಓಪನ್‌ ಟೆನಿಸ್ | ಕೊಂಟಾವೀಟ್ ಮಣಿಸಿದ ಸಬಲೆಂಕಾಗೆ ಕಿರೀಟ

ಆಕ್ರಮಣಕಾರಿ ಆಟವಾಡಿದ ಬೆಲಾರಸ್ ಆಟಗಾರ್ತಿ ಅರಿನಾ ಸಬಲೆಂಕಾ ವುಹಾನ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆದರು. ಶನಿವಾರ (ಸೆ.೨೯) ನಡೆದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಅನೆಟ್ ಕೊಂಟಾವೀಟ್ ವಿರುದ್ಧ ೬-೩, ೬-೩ ನೇರ ಸೆಟ್‌ಗಳಲ್ಲಿ ಸಬಲೆಂಕಾ ಗೆಲುವು ಪಡೆದರು

ಪಂದ್ಯಾವಳಿಯುದ್ದಕ್ಕೂ ಆಕರ್ಷಕ ಆಟವಾಡಿದ ಅರಿನಾ ಸಬಲೆಂಕಾ, ವೃತ್ತಿಬದುಕಿನಲ್ಲಿ ಎರಡನೇ ಡಬ್ಲ್ಯೂಟಿಎ ಪ್ರಶಸ್ತಿ ಪಡೆದರು. ಇಸ್ಟೋನಿಯಾ ಆಟಗಾರ್ತಿ ಕೊಂಟಾವೀಟ್ ಕೂಡ ಪ್ರಸಕ್ತ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದರಾದರೂ, ಫೈನಲ್‌ನಲ್ಲಿ ಸಬಲೆಂಕಾ ಎದುರು ಎಡವಿದರು. ಫೈನಲ್‌ವರೆಗೂ ಸಾಗಿಬಂದ ಆಕೆ, ಪ್ರಶಸ್ತಿ ಸುತ್ತಿನಲ್ಲಿ ಮಾತ್ರ ಹಿನ್ನಡೆ ಅನುಭವಿಸಿದರು.

೨೦ನೇ ಶ್ರೇಯಾಂಕಿತೆ ಸಬಲೆಂಕಾ, ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಮತ್ತದೇ ಆಕ್ರಮಣಕಾರಿ ಮತ್ತು ಕರಾರುವಾಕ್ ಹೊಡೆತಗಳಿಂದ ಕೊಂಟಾವೀಟ್‌ ಎದುರು ಮೇಲುಗೈ ಸಾಧಿಸಿದರು. ಮೊದಲ ಸೆಟ್‌ನಲ್ಲಿ ಸುನಾಯಾಸವಾಗಿ ಗೆಲುವು ಸಾಧಿಸಿದ ಸಬಲೆಂಕಾ, ವಿಜಯದ ಹಾದಿಯಲ್ಲಿ ಸಾಗಿದ್ದನ್ನು ಸ್ಪಷ್ಟಪಡಿಸಿದರು. ಆದರೆ, ಸೋಲು ಒಪ್ಪಿಕೊಳ್ಳಲು ಸಿದ್ಧವಿಲ್ಲದ ಕೊಂಟಾವೀಟ್ ಕೂಡ ಎರಡನೇ ಸೆಟ್‌ನಲ್ಲಿ ಪ್ರಬಲ ಪೈಪೋಟಿ ನೀಡಲು ಮುಂದಾದರು.

ವಿಶ್ವದ ೨೭ನೇ ಶ್ರೇಯಾಂಕಿತೆ ಕೊಂಟಾವೀಟ್, ಗೇಮ್‌ಗೆ ಪ್ರತಿ ಗೇಮ್ ಎಂಬಂತೆ ಸಬಲೆಂಕಾ ವಿರುದ್ಧ ಸಮಬಲ ಹೋರಾಟ ನಡೆಸಿ ೩-೩ರಿಂದ ದಿಟ್ಟ ಹೋರಾಟ ನಡೆಸಿದರು. ಇಲ್ಲಿಂದಾಚೆಗೆ ಸಬಲೆಂಕಾ ಎಚ್ಚರಿಕೆ ವಹಿಸಿದರು. ಮೊದಲಿಗೆ, ಸರ್ವ್ ಮುರಿದ ಬೆಲಾರಸ್ ಅಟಗಾರ್ತಿ ಒಂದೇ ಸಮನೆ ಮೂರು ಗೇಮ್‌ಗಳಲ್ಲಿ ಗೆಲುವು ಸಾಧಿಸುವುದರೊಂದಿಗೆ ಪ್ರಶಸ್ತಿ ಎತ್ತಿಹಿಡಿದರು.

ಇದನ್ನೂ ಓದಿ : ಯುಎಸ್ ಓಪನ್‌ಗೂ ಸೆರೆನಾ ಅಸಹನೆಗೂ ಇದೆ ಅವಿನಾಭಾವ ನಂಟು!

ಈ ಋತುವಿನಲ್ಲಿ ಸಬಲೆಂಕಾ ಜಯಿಸಿದ ಎರಡನೇ ಡಬ್ಲ್ಯೂಟಿಎ ಪ್ರಶಸ್ತಿ ಇದು. ಮೊದಲು ಕನೆಕ್ಟಿ ಕಪ್ ಪಂದ್ಯಾವಳಿಯಲ್ಲಿ ಜಯಭೇರಿ ಬಾರಿಸಿದ್ದ ಸಬಲೆಂಕಾ, ಇದೀಗ ವುಹಾನ್ ಓಪನ್‌ ಗೆಲುವಿನೊಂದಿಗೆ ಡಬ್ಲ್ಯೂಟಿಎ ರ್ಯಾಂಕಿಂಗ್‌ನಲ್ಲಿ ೧೬ನೇ ಸ್ಥಾನಕ್ಕೆ ಜಿಗಿಯಲಿದ್ದು, ಇದು ಆಕೆಯ ವೃತ್ತಿಬದುಕಿನ ಶ್ರೇಷ್ಠ ಸಾಧನೆ ಎನಿಸಿದೆ. ಪ್ರೀಮಿಯರ್ ೫ರ ಈ ಪಂದ್ಯಾವಳಿಯು ಆಕೆಗೆ ೯೦೦ ರೇಟಿಂಗ್ ಪಾಯಿಂಟ್ಸ್‌ಗಳನ್ನು ತಂದಿತ್ತಿದೆ.

ಇದಕ್ಕೂ ಮುನ್ನ ನಡೆದ ವನಿತೆಯರ ಡಬಲ್ಸ್ ವಿಭಾಗದಲ್ಲಿ ಬೆಲ್ಜಿಯಂನ ಎಲಿಸಿ ಮೆರ್ಟೆನ್ಸ್ ಮತ್ತು ಹಾಲೆಂಡ್‌ನ ಡೆಮಿ ಶುರ್ಸ್ ಜೋಡಿ ಜೆಕ್ ಗಣರಾಜ್ಯದ ಆಂಡ್ರಿಯಾ ಹವಕೋವಾ ಮತ್ತು ಬಾರ್ಬೊರಾ ಸ್ಟ್ರೈಕೋವಾ ವಿರುದ್ಧ ೬-೩, ೬-೩ ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿ ಚಾಂಪಿಯನ್ ಆಯಿತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More