ಐಎಸ್‌ಎಲ್ | ಮಿಕು ಮೋಡಿಯಲ್ಲಿ ಚೆನ್ನೈ ಮಣಿಸಿದ ಬಿಎಫ್‌ಸಿ ಶುಭಾರಂಭ

ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಪಂದ್ಯಾವಳಿಯಲ್ಲಿ ಸುನೀಲ್ ಛೆಟ್ರಿ ಸಾರಥ್ಯದ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್‌ಸಿ) ಶುಭಾರಂಭ ಮಾಡಿದೆ. ಮಿಕು ದಾಖಲಿಸಿದ ಏಕೈಕ ಗೋಲಿನ ನೆರವಿನಿಂದ ಬಿಎಫ್‌ಸಿ, ಚೆನ್ನೈಯಿನ್ ಫುಟ್‌ಬಾಲ್ ತಂಡವನ್ನು ಮಣಿಸುವಲ್ಲಿ ಸಫಲವಾಯಿತು

ಬಹುತೇಕ ಭರ್ತಿಯಾಗಿದ್ದ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಬೆಂಗಳೂರು ಫುಟ್ಬಾಲ್ ಕ್ಲಬ್ ಅಮೋಘ ಆಟದೊಂದಿಗೆ ಈ ಋತುವಿನ ಐಎಸ್‌ಎಲ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಇದೇ ಕ್ರೀಡಾಂಗಣದಲ್ಲಿ ನಡೆದಿದ್ದ ಕಳೆದ ಋತುವಿನ ಫೈನಲ್‌ನಲ್ಲಿ ಇದೇ ಚೆನ್ನೈಯಿನ್ ಎಫ್‌ಸಿ ತಂಡದ ವಿರುದ್ಧ ನಿರಾಸೆ ಅನುಭವಿಸಿದ್ದ ಬಿಎಫ್‌ಸಿ, ಹಾಲಿ ಚಾಂಪಿಯನ್ನರಿಗೆ ಸೋಲುಣಿಸಿತು.

ಇಡೀ ಪಂದ್ಯದಲ್ಲಿ ಏಕೈಕ ಗೋಲು ದಾಖಲಿಸಿದ ಬಿಎಫ್‌ಸಿಯ ಪಾರ್ವರ್ಡ್ ಆಟಗಾರ ಮಿಕು ಬಿಎಫ್‌ಸಿ ಪಾಲಿಗೆ ಹೀರೋ ಆದರು. ಪ್ರಥಮಾರ್ಧದ ಆಟ ಮುಗಿಯಲು ಕೆಲವೇ ನಿಮಿಷಗಳಿವೆ ಎನ್ನುವಾಗ ಅಂದರೆ, ೪೧ನೇ ನಿಮಿಷದಲ್ಲಿ ಮಿಕು ಬಿಎಫ್‌ಸಿ ಪಾಳೆಯದಲ್ಲಿ ಹರ್ಷದ ಅಲೆ ಎಬ್ಬಿಸಿದರು. ಭಾನುವಾರ (ಸೆ ೩೦) ರಾತ್ರಿ ನಡೆದ ಪಂದ್ಯದಲ್ಲಿ ತವರು ಅಭಿಮಾನಿಗಳ ಸಮ್ಮುಖದಲ್ಲಿ ಬಿಎಫ್‌ಸಿ ಅದ್ಭುತ ಪ್ರದರ್ಶನ ನೀಡಿತು. ಆರಂಭದಿಂದಲೇ ಚುರುಕಿನ ಆಟವಾಡಿದ ಬಿಎಫ್‌ಸಿಗೆ ಎರಡನೇ ನಿಮಿಷದಲ್ಲೇ ಖಾತೆ ತೆರೆಯುವ ಅವಕಾಶ ದೊರಕಿತು.

ಆದರೆ, ಮಿಡ್‌ಫೀಲ್ಡರ್ ಎರಿಕ್ ಪಾರ್ಟಲು ನಡೆಸಿದ ಗೋಲಿನ ಯತ್ನವನ್ನು ಚೆನ್ನೈಯಿನ್ ಗೋಲಿ ಕರಣ್‌ಜಿತ್ ಸಿಂಗ್ ವಿಫಲಗೊಳಿಸಿದರು. ಮೂರು ನಿಮಿಷಗಳ ಬಳಿಕ ಆಕರ್ಷಕ ಡ್ರಿಬಲ್‌ನೊಂದಿಗೆ ಚೆಂಡನ್ನು ಮುಂದೂಡುತ್ತಾ ಬಂದ ಮಿಕು ಅವರನ್ನು ಚೆನ್ನೈಯಿನ್ ಆಟಗಾರರು ರಕ್ಷಣಾ ಗೋಡೆ ದಾಟದಂತೆ ತಡೆಬೇಲಿ ಹಾಕಿದರು. ವಾಸ್ತವವಾಗಿ, ಬಿಎಫ್‌ಸಿ ಶುರುವಿನಲ್ಲಿ ತೋರಿದ ಬಿರುಸು ಇದಷ್ಟೇ ಆಗಿತ್ತು.

ಆ ಬಳಿಕ ಚೆನ್ನೈಯಿನ್ ಆಟಗಾರರು ಆಕ್ರಮಣಕಾರಿಯಾದರು. ಇದೇ ವೇಳೆ ೧೫ನೇ ನಿಮಿಷದಲ್ಲಿ ಸಿಕ್ಕ ಗೋಲಿನ ಅವಕಾಶವನ್ನು ಚೆನ್ನೈ ಕೈಚೆಲ್ಲಿದರೆ, ಮರು ನಿಮಿಷದಲ್ಲಿ ಲಾಲ್‌ಪೆಕ್ಲುವಾ ಚೆಂಡಿನೊಂದಿಗೆ ಬಿಎಫ್‌ಸಿ ರಕ್ಷಣಾ ಆವರಣದೊಳಗೆ ಲಗ್ಗೆ ಇಟ್ಟು ಆತಂಕ ಮೂಡಿಸಿದರು. ಇತ್ತ, ೩೦ ಗಜಗಳ ಅಂತರದಿಂದ ಜೆಜೆ ಜಾಡಿಸಿ ಒದ್ದ ಚೆಂಡು ಗೋಲು ಪೆಟ್ಟಿಗೆ ನುಸುಳದಂತೆ ಬಿಎಫ್‌ಸಿ ಗೋಲಿ ಗುರುಪ್ರೀತ್ ಸಿಂಗ್ ಸಂಧು ತಡೆದರು.

ಇನ್ನು, ಹದಿನೆಂಟನೇ ನಿಮಿಷದಲ್ಲಿ ಲಭಿಸಿದ ಮತ್ತೊಂದು ಅಪೂರ್ವ ಅವಕಾಶವನ್ನೂ ಜೆಜೆ ಗೋಲಾಗಿ ಪರಿವರ್ತಿಸಲು ವಿಫಲವಾದರು. ಇದೇ ಗೋಲು ಗಳಿಸುವ ಹಾದಿಯಲ್ಲಿ ಸಾಗಿದ ಚೆನ್ನೈಯಿನ್‌ಗೆ, ಪಂದ್ಯದ ೩೨ನೇ ನಿಮಿಷದಲ್ಲಿ ಮಿಡ್‌ಫೀಲ್ಡರ್ ಗ್ರೆಗೊರಿ ನೆಲ್ಸನ್ ಪ್ರಮಾದದಿಂದ ಮತ್ತೊಂದು ಗೋಲಿನ ಯತ್ನ ವಿಫಲವಾಯಿತು. ಏತನ್ಮಧ್ಯೆ, ೩೪ನೇ ನಿಮಿಷದಲ್ಲಿ ಹರ್ಮನ್‌ ಜ್ಯೋತ್ ಸಿಂಗ್ ಖಾಬ್ರಾ, ಚೆನ್ನೈಯಿನ್ ತಂಡದ ಐಸಾಕ್ ಅವರನ್ನು ಎಡಗೈಯಿಂದ ತಳ್ಳಿ ಕೆಳಬೀಳಿಸಿ ಹಸಿರು ಕಾರ್ಡ್ ಪಡೆದರು.

ಮೊದಲಾರ್ಧದ ಆಟಕ್ಕೆ ಐದು ನಿಮಿಷಗಳು ಬಾಕಿ ಇದೆ ಎನ್ನುವಾಗ ೪೦ನೇ ನಿಮಿಷದಲ್ಲಿ ಮಿಕು ಕಾಲ್ಚಳಕ ತಂಡಕ್ಕೆ ಗೆಲುವು ತಂದಿತ್ತಿತು. ಚೆನ್ನೈಯಿನ್ ಆಟಗಾರನೋರ್ವ ೬೦ ಗಜಗಳ ಅಂತರದಿಂದ ದೂಡಿದ ಚೆಂಡನ್ನು ನಿಯಂತ್ರಣಕ್ಕೆ ಪಡೆದ ಮಿಕು, ಕ್ಷಣಾರ್ಧದಲ್ಲೇ ಚೆಂಡನ್ನು ಚೆನ್ನೈಯಿನ್ ಗೋಲಿಯನ್ನು ವಂಚಿಸಿ ಗೋಲು ದಾಖಲಿಸುತ್ತಿದ್ದಂತೆ ಬಿಎಫ್‌ಸಿ ಕೇಕೆ ಮುಗಿಲುಮುಟ್ಟಿತು. ವಿರಾಮದ ನಂತರದಲ್ಲೂ ಇತ್ತಂಡಗಳೂ ಗೋಲಿಗಾಗಿ ಪ್ರಬಲ ಹೋರಾಟ ನಡೆಸಿದರೂ, ಯಾವುದೇ ಗೋಲು ದಾಖಲಾಗದೆ ಅಂತಿಮವಾಗಿ ಬಿಎಫ್‌ಸಿ ಗೆಲುವಿನ ನಗೆಬೀರಿತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More