ವಿಶ್ವ ಚಾಂಪಿಯನ್‌ಶಿಪ್‌ನತ್ತ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟ ಹ್ಯಾಮಿಲ್ಟನ್

ಫಾರ್ಮುಲಾ ಒನ್ ಚಾಲಕ ಲೂಯಿಸ್ ಹ್ಯಾಮಿಲ್ಟನ್ ರಷ್ಯನ್ ಗ್ರ್ಯಾನ್ ಪ್ರೀ ರೇಸ್‌ ಗೆಲ್ಲುವ ಮೂಲಕ ವಿಶ್ವ ಚಾಂಪಿಯನ್‌ಶಿಪ್‌ನತ್ತ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ಈ ಋತುವಿನಲ್ಲಿ ಐದು ರೇಸ್‌ಗಳಷ್ಟೇ ಬಾಕಿ ಉಳಿದಿದ್ದು, ಮತ್ತೊಂದು ವಿಶ್ವ ಕಿರೀಟ ತೊಡುವುದನ್ನು ಹ್ಯಾಮಿಲ್ಟನ್ ಖಚಿತಪಡಿಸಿದ್ದಾರೆ

ವಿಶ್ವ ಫಾರ್ಮುಲಾ ಒನ್ ಚಾಂಪಿಯನ್‌ಶಿಪ್‌ಗಾಗಿನ ರೇಸ್‌ನಲ್ಲಿ ಬ್ರಿಟನ್ ಚಾಲಕ ಹ್ಯಾಮಿಲ್ಟನ್ ೫೦ ಪಾಯಿಂಟ್ಸ್ ಮುನ್ನಡೆ ಗಳಿಸುವಲ್ಲಿ ಸಫಲವಾಗಿದ್ದಾರೆ. ಮರ್ಸಿಡೆಸ್‌ನ ಈ ಚಾಲಕ ಭಾನುವಾರ (ಸೆ ೩೦) ಮುಕ್ತಾಯ ಕಂಡ ರಷ್ಯನ್ ಗ್ರ್ಯಾನ್ ಪ್ರೀ ರೇಸ್‌ನಲ್ಲಿ ಎರಡನೇ ಗ್ರಿಡ್‌ನೊಂದಿಗೆ ಚಾಲನೆ ಆರಂಭಿಸಿದರೂ, ನಿಗದಿತ ಗುರಿಯನ್ನು ಎಲ್ಲರಿಗಿಂತ ಮುಂದಾಗಿ ಮುಟ್ಟುವುದರೊಂದಿಗೆ ಜಯಭೇರಿ ಬಾರಿಸಿದರು.

ಹಾಲಿ ಹಾಗೂ ನಾಲ್ಕು ಬಾರಿಯ ವಿಶ್ವ ಚಾಂಪಿಯನ್ ಹ್ಯಾಮಿಲ್ಟನ್, ಮರ್ಸಿಡೆಸ್‌ನ ಸಹ ಚಾಲಕ ವಾಲ್ಟೆರಿ ಬೊಟ್ಟಾಸ್ ಅವರನ್ನೂ ಹಿಂದಿಕ್ಕಿದರು. ರೇಸ್‌ಗೂ ಮುಂಚಿನ ದಿನವಾದ ಶನಿವಾರದಂದು ನಡೆದ ಅಭ್ಯಾಸದಲ್ಲಿ ಪೋಲ್ ಪೊಸಿಷನ್ ಪಡೆದಿದ್ದ ವಾಲ್ಟೆರಿ, ಹ್ಯಾಮಿಲ್ಟನ್‌ ಮುನ್ನುಗ್ಗಲು ನೆರವು ನೀಡಿದ್ದು, ಸಮೀಪ ಸ್ಪರ್ಧಿ ಹಾಗೂ ಫೆರಾರಿ ಚಾಲಕ ಸೆಬಾಸ್ಟಿನ್ ವೆಟಲ್‌ ಅವರನ್ನು ಹಿಂದಿಕ್ಕಲು ಹ್ಯಾಮಿಲ್ಟನ್‌ಗೆ ಸಹಾಯವಾಯಿತು.

ಫಾರ್ಮುಲಾ ಒನ್ ಸಂಸ್ಥಾಪಕ ಬೆರ್ನಿ ಎಕ್ಲೆಸ್ಟೋನ್ ಅವರ ಪಕ್ಕದಲ್ಲಿ ಕುಳಿತಿದ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಸೋಚಿ ಆಟೋಡ್ರಮ್‌ನಲ್ಲಿ ನಡೆದ ಈ ರೋಚಕ ರೇಸ್‌ ಅನ್ನು ಕಣ್ತುಂಬಿಕೊಂಡರಲ್ಲದೆ, ವಿಜೇತ ಹ್ಯಾಮಿಲ್ಟನ್‌ಗೆ ಟ್ರೋಫಿ ಇತ್ತು ಅಭಿನಂದಿಸಿದರು. ಅಂದಹಾಗೆ, ವಾಲ್ಟೆರಿ ಪೋಲ್ ಪೊಸಿಷನ್‌ನಿಂದ ರೇಸ್ ಆರಂಭಿಸಿದ್ದರಿಂದ ಹ್ಯಾಮಿಲ್ಟ್‌ನ್‌ಗಿಂತಲೂ ಅವರು ಮುನ್ನಡೆ ಕಾಯ್ದುಕೊಳ್ಳುವ ಸಾಧ್ಯತೆ ಇತ್ತು. ಮೇಲಾಗಿ, ಕಳೆದ ಸಾಲಿನಲ್ಲಿ ರಷ್ಯನ್ ಜಿಪಿ ಗೆದ್ದಿದ್ದ ವಾಲ್ಟೆರಿ, ಸತತ ಎರಡನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದರು. ಆದರೆ, ತಂಡದ ಅನುಜ್ಞೆಗೆ ಕಟ್ಟುಬಿದ್ದಿದ್ದರಿಂದ ಅವರು ಹ್ಯಾಮಿಲ್ಟನ್‌ ತನ್ನ ಕಾರನ್ನು ಓವರ್‌ಟೇಕ್ ಮಾಡಲು ಅನುವು ಮಾಡಿಕೊಡಬೇಕಾಯಿತು. ಹೀಗಾಗಿ, ಕೇವಲ ೨.೫ ಸೆ.ಗಳಲ್ಲಿ ಹ್ಯಾಮಿಲ್ಟನ್ ಜಯಶಾಲಿಯಾದರು.

ಇದನ್ನೂ ಓದಿ : ಫಾರ್ಮುಲಾ ಪ್ರಶಸ್ತಿ ರೇಸ್‌ನಲ್ಲಿ ವೆಟಲ್ ಹಿಂದಿಕ್ಕಿ ಮುನ್ನಡೆ ಸಾಧಿಸಿದ ಹ್ಯಾಮಿಲ್ಟನ್

ಇನ್ನು, ಮರ್ಸಿಡೆಸ್‌ನ ಈ ಇಬ್ಬರಿಗೂ ಪ್ರಬಲ ಪೈಪೋಟಿ ನೀಡಿದ ವೆಟಲ್ ತೃತೀಯ ಸ್ಥಾನಕ್ಕೆ ತೃಪ್ತರಾದರು. ಈ ಮಧ್ಯೆ ರಷ್ಯನ್ ಜಿಪಿ ಗೆಲ್ಲುವುದರೊಂದಿಗೆ ಹ್ಯಾಮಿಲ್ಟನ್, ಮೂರನೇ ಬಾರಿಗೆ ರಷ್ಯಾ ಚಾಂಪಿಯನ್ ಆದರು. ಜತೆಗೆ ಕಳೆದ ಆರು ರೇಸ್‌ಗಳಲ್ಲಿ ಹ್ಯಾಮಿಲ್ಟನ್‌ಗೆ ಒಲಿದ ಐದನೇ ಗೆಲುವು ಇದಾದರೆ, ವೃತ್ತಿಬದುಕಿನ ಒಟ್ಟಾರೆ ೭೦ನೇ ಪ್ರಶಸ್ತಿಯನ್ನು ಬ್ರಿಟನ್ ಚಾಲಕ ತನ್ನದಾಗಿಸಿಕೊಂಡರು. ಇನ್ನುಳಿದಂತೆ, ಫೆರಾರಿ ಚಾಲಕ ಕಿಮಿ ರೈಕೊನೆನ್ ನಾಲ್ಕನೇ ಸ್ಥಾನ ಗಳಿಸಿದರೆ, ರೆಡ್‌ಬುಲ್‌ನ ಮ್ಯಾಕ್ಸ್ ವೆರ್ಸ್ಟಾಪ್ಪೆನ್ ನಂತರದ ಸ್ಥಾನ ಗಳಿಸಿದರು.

ನಿಗದಿತ ದೂರವನ್ನು ೧:೨೭:೨೫.೧೮೧ ಸೆ.ಗಳಲ್ಲಿ ಕ್ರಮಿಸಿದ ಹ್ಯಾಮಿಲ್ಟನ್ ೨೫ ಪಾಯಿಂಟ್ಸ್ ಗಳಿಸಿದರು. ರಷ್ಯನ್ ಜಿಪಿಯ ಮುಕ್ತಾಯದ ಹಂತಕ್ಕೆ ವಿಶ್ವ ಫಾರ್ಮುಲಾ ಒನ್ ಚಾಂಪಿಯನ್‌ಶಿಪ್‌ಗಾಗಿನ ಪ್ರಶಸ್ತಿ ರೇಸ್ ಪಟ್ಟಿಯಲ್ಲಿ ಹ್ಯಾಮಿಲ್ಟನ್ (೩೦೬ ಪಾಯಿಂಟ್ಸ್) ಅಗ್ರಸ್ಥಾನದಲ್ಲಿದ್ದರೆ, ಸೆಬಾಸ್ಟಿಯನ್ ವೆಟಲ್ (೨೫೬), ಕಿಮಿ ರೈಕೊನೆನ್ (೨೫೬), ವಾಲ್ಟೆರಿ ಬೊಟ್ಟಾಸ್ (೧೮೬) ಮತ್ತು ಮ್ಯಾಕ್ಸ್ ವೆರ್ಸ್ಟಾಪ್ಪೆನ್ ೧೫೮ ಪಾಯಿಂಟ್ಸ್ ಗಳಿಸಿ ಐದನೇ ಸ್ಥಾನದಲ್ಲಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More