ತಾಯಿ ಆಗುತ್ತಿರುವ ಸಂಭ್ರಮ ಹಂಚಿಕೊಂಡ ಸ್ವಿಸ್ ಮಿಸ್ ಮಾರ್ಟಿನಾ ಹಿಂಗಿಸ್

ವಿಶ್ವದ ಮಾಜಿ ನಂ.೧ ಟೆನಿಸ್ ಆಟಗಾರ್ತಿ ಮಾರ್ಟಿನಾ ಹಿಂಗಿಸ್ ತಾಯಿ ಆಗುವ ಸಂಭ್ರಮದಲ್ಲಿದ್ದಾರೆ. ಭಾನುವಾರವಷ್ಟೇ (ಸೆ.೩೦) ೩೮ನೇ ವಸಂತಕ್ಕೆ ಕಾಲಿರಿಸಿದ ಹಿಂಗಿಸ್, ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರುವುದಾಗಿ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಅಭಿಮಾನಿಗಳಿಗೆ ತಿಳಿಸಿದ್ದಾರೆ

ಟೆನಿಸ್ ಜಗತ್ತಿನಲ್ಲಿ ‘ಸ್ವಿಸ್ ಮಿಸ್’ ಎಂತಲೇ ಹೆಸರಾದ ಮಾರ್ಟಿನಾ ಹಿಂಗಿಸ್ ಸದ್ಯದಲ್ಲೇ ತಾಯಿಯಾಗುತ್ತಿದ್ದಾರೆ. ಸಾನಿಯಾ ಮಿರ್ಜಾ ಜೊತೆಗೆ ಯಶಸ್ವಿ ಹಾಗೂ ದಾಖಲೆಯ ಜೊತೆಯಾಟವಾಡಿದ ಮಾರ್ಟಿನಾ ಹಿಂಗಿಸ್, ಸದ್ಯ ಅಂತಾರಾಷ್ಟ್ರೀಯ ಟೆನಿಸ್‌ಗೆ ನಿವೃತ್ತಿ ಹೇಳಿದ್ದಾರೆ. ಐದು ಗ್ರಾಂಡ್‌ಸ್ಲಾಮ್‌ಗಳ ಒಡತಿ ಹಿಂಗಿಸ್, ಟೆನಿಸ್ ತಾರೆ ರೋಜರ್ ಫೆಡರರ್ ನಂತರದಲ್ಲಿ ಸ್ವಿಡ್ಸರ್ಲೆಂಡ್‌ನ ಅಪೂರ್ವ ಟೆನಿಸ್ ಪ್ರತಿಭೆ. ೧೯೯೭ರಲ್ಲಿ ಕೇವಲ ಹದಿನಾರರ ಹರೆಯದಲ್ಲೇ ಆಸ್ಟ್ರೇಲಿಯಾ ಓಪನ್, ವಿಂಬಲ್ಡನ್ ಮತ್ತು ಯುಎಸ್ ಓಪನ್ ಜಯಿಸಿದ ಹಿರಿಮೆ ಹಿಂಗಿಸ್‌ರದ್ದು.

“ಹುಟ್ಟುಹಬ್ಬದ ದಿನಕ್ಕೆ ಶುಭಾಶಯ ಕೋರಿದ ಪ್ರತಿಯೊಬ್ಬರಿಗೂ ನನ್ನ ವಂದನೆಗಳು. ಸದ್ಯದಲ್ಲೇ ನಾವು ದಂಪತಿ ಮೂರನೇ ವ್ಯಕ್ತಿಯ ನಿರೀಕ್ಷೆಯಲ್ಲಿದ್ದೇವೆ. ಇಂಥದ್ದೊಂದು ಸಂತಸವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವುದು ನಮ್ಮಲ್ಲಿ ಇನ್ನಷ್ಟು ರೋಮಾಂಚನ ತರಿಸಿದೆ,’’ ಎಂದು ಮಾರ್ಟಿನಾ ಹಿಂಗಿಸ್ ತಿಳಿಸಿದ್ದಾರೆ.

ಮಾರ್ಟಿನಾ ಹಿಂಗಿಸ್ ಕಿರಿಯ ವಯಸ್ಸಿನಲ್ಲೇ ಗ್ರಾಂಡ್‌ಸ್ಲಾಮ್ ಚಾಂಪಿಯನ್ ಎನಿಸಿದ್ದಲ್ಲದೆ, ವಿಶ್ವದ ನಂ.೧ ಆಟಗಾರ್ತಿ ಎಂತಲೂ ಕರೆಸಿಕೊಂಡರು. ೨೦೯ ವಾರಗಳ ಕಾಲ ನಂ.೧ ಸ್ಥಾನ ಕಾಯ್ದುಕೊಂಡಿದ್ದ ಹಿಂಗಿಸ್, ೨೦೧೭ರಲ್ಲಿ ಸ್ವಿಸ್ ತಂಡದ ಮಾಜಿ ವೈದ್ಯ ಹರಾಲ್ಡ್ ಲೀಮನ್ ಅವರೊಂದಿಗೆ ಮದುವೆಯಾಗಿದ್ದರು.

ಇದನ್ನೂ ಓದಿ : ತಾಯ್ತನದ ಸವಿಗೂ ಮುನ್ನ ಸತ್ತು ಬದುಕಿದ್ದನ್ನು ಮತ್ತೆ ಸ್ಮರಿಸಿದ ಸೆರೆನಾ ವಿಲಿಯಮ್ಸ್

ಮಾರ್ಟಿನಾ ಹಿಂಗಿಸ್ ವಿಶ್ವ ಮಹಿಳಾ ಟೆನಿಸ್‌ ಕಂಡ ಹತ್ತು ಮಂದಿ ಸಾರ್ವಕಾಲಿಕ ಯಶಸ್ವಿ ಶ್ರೇಷ್ಠ ಆಟಗಾರ್ತಿಯರಲ್ಲಿ ಒಬ್ಬರೆನಿಸಿದ್ದಾರೆ. ಗ್ರಾಂಡ್‌ಸ್ಲಾಮ್ ಪಂದ್ಯಾವಳಿಯಲ್ಲಿ ಸಿಂಗಲ್ಸ್, ಮಹಿಳೆಯರ ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ಸೇರಿದಂತೆ ಒಟ್ಟು ೨೫ ಗ್ರಾಂಡ್‌ಸ್ಲಾಮ್ ಗೆದ್ದ ಸಾಧಕಿ. ಮೂರು ಬಾರಿ ಟೆನಿಸ್‌ಗೆ ವಿದಾಯ ಹೇಳಿದ್ದ ಹಿಂಗಿಸ್, ೨೦೧೩ರಲ್ಲಿ ಟೆನಿಸ್ ಅಂಗಣಕ್ಕೆ ವಾಪಸಾಗಿದ್ದರು.

೧೯೯೮ರಲ್ಲಿ ಪ್ರತಿಷ್ಠಿತ ವಿಂಬಲ್ಡನ್ ಟೆನಿಸ್ ಚಾಂಪಿಯನ್‌ಶಿಪ್ ಗೆದ್ದ ಮಾರ್ಟಿನಾ, ವನಿತೆಯರ ಡಬಲ್ಸ್ ವಿಭಾಗದಲ್ಲಿ ಸಾನಿಯಾ ಮಿರ್ಜಾ ಜೊತೆ ಅತ್ಯಂತ ಯಶಸ್ವಿ ಪ್ರದರ್ಶನ ನೀಡಿದ್ದರು. ವಿದಾಯದ ನಂತರದಲ್ಲಿ ಟೆನಿಸ್ ಅಂಗಣಕ್ಕೆ ಮರಳಿ ಈ ಪರಿ ಯಶಸ್ಸು ಕಂಡ ಆಟಗಾರ್ತಿ ಮತ್ತೊಬ್ಬರಿಲ್ಲ ಎನ್ನಲಾಗಿದೆ.

ಟೆನಿಸ್ ಲೋಕದ ೧೦ ಯಶಸ್ವಿ ಆಟಗಾರ್ತಿಯರ ಸಾಧನೆ

  • ಮಾರ್ಗರೆಟ್ ಕೋರ್ಟ್: ೬೪ (೨೪ ಸಿಂಗಲ್ಸ್, ೧೯ ಮಹಿಳಾ ಡಬಲ್ಸ್ , ೨೧ ಮಿಶ್ರ ಡಬಲ್ಸ್ ಪ್ರಶಸ್ತಿ)
  • ಮಾರ್ಟಿನಾ ನವ್ರಾಟಿಲೋವಾ: ೫೯ (೧೮, ೩೧, ೧೦)
  • ಬಿಲ್ಲಿ ಜೀನ್ ಕಿಂಗ್: ೩೯ (೧೨, ೧೬, ೧೧)
  • ಸೆರೆನಾ ವಿಲಿಯಮ್ಸ್: ೩೯ (೨೩, ೧೪, ೨)
  • ಮಾರ್ಗರೆಟ್ ಒಸ್ಬಾರ್ನ್ ಡುಪಾಂಟ್: ೩೭ (೬, ೨೧, ೧೦)
  • ಡೊರಿಸ್ ಹಾರ್ಟ್: ೩೫ (೬, ೧೪, ೧೫)
  • ಲೌಸಿ ಬ್ರೌ: ೩೫ (೬, ೨೧, ೮)
  • ಹೆಲೆನ್ ವಿಲ್ಸ್: ೩೧ (೧೯, ೯, ೩)
  • ಎಲಿಜಬೆತ್ ರಿಯಾನ್: ೩೦ (೦, ೧೯, ೧೧)
  • ಮಾರ್ಟಿನಾ ಹಿಂಗಿಸ್: ೨೫ (೫, ೧೩, ೭)
ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More