ಆರ್‌ಟಿಐ ಅಂಕುಶ ಕಳಚಲು ನ್ಯಾಯಾಲಯದ ಮೆಟ್ಟಿಲೇರಲು ಬಿಸಿಸಿಐ ಚಿಂತನೆ!

ತಾನು ಸ್ವಾಯತ್ತ ಸಂಸ್ಥೆಯಾಗಿದ್ದು, ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ವ್ಯಾಪ್ತಿಗೆ ಬರಲಾಗದು ಎಂದು ಹಠ ಹಿಡಿದಿದ್ದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಕಡೆಗೂ ಆರ್‌ಟಿಐ ಅಂಕುಶ ಬಿದ್ದಿದೆ. ಮುಂದಿನ ಹದಿನೈದು ದಿನಗಳ ಒಳಗಾಗಿ ಕಡ್ಡಾಯವಾಗಿ ಜಾರಿಗೆ ತರಲು ಬಿಸಿಸಿಐಗೆ ಸೂಚನೆ ನೀಡಲಾಗಿದೆ

ಕೇಂದ್ರ ಮಾಹಿತಿ ಆಯೋಗದ ನಿರ್ಧಾರ ದೇಶದ ಬಹುಪಾಲು ಜನತೆಯ ಅಚ್ಚುಮೆಚ್ಚಿನ ಕ್ರಿಕೆಟ್ ಮಂಡಳಿ ಪಾಲಿಗೆ ಇದು ಅಕ್ಷರಶಃ ಬಿಸಿತುಪ್ಪವಾಗಿದೆ. ಭ್ರಷ್ಟಾಚಾರ, ಪಾರದರ್ಶಕತೆ ಇಲ್ಲದ ಆಡಳಿತದಿಂದ ತನಗಿಷ್ಟ ಬಂದಂತೆ ಆಡಳಿತ ನಡೆಸುತ್ತಿದ್ದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇನ್ನುಮುಂದೆ ಸಾರ್ವಜನಿಕರ ಪ್ರಶ್ನೆಗಳಿಗೆ, ಅವರು ಕೇಳುವ ಮಾಹಿತಿಗಳಿಗೆ ಉತ್ತರ ನೀಡದೆ ತಪ್ಪಿಸಿಕೊಳ್ಳುವಂತಿಲ್ಲ.

ವಾಸ್ತವವಾಗಿ, ಬಿಸಿಸಿಐ ಸಾರ್ವಜನಿಕ ಸಂಸ್ಥೆಯಾಗಿದ್ದು, ಅದು ಸ್ವಾಯತ್ತತೆ ಹೆಸರಿನಲ್ಲಿ ಆರ್‌ಟಿಐ ವ್ಯಾಪ್ತಿಗೆ ಒಳಪಡದಿರಲು ಹಠ ಹಿಡಿಯುವುದು ಸರಿಯಲ್ಲ. ಈ ನೆಲದ ಕಾನೂನಿನ ಚೌಕಟ್ಟಿನಲ್ಲಿರುವ ಅದು ಆರ್‌ಟಿಐ ವ್ಯಾಪ್ತಿಗೆ ಬರಲೇಬೇಕು ಎಂದು ನಿವೃತ್ತ ನ್ಯಾ. ಆರ್ ಎಂ ಲೋಧಾ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಬಿಸಿಸಿಐ ಆಡಳಿತ ಸುಧಾರಣೆಯ ಶಿಫಾರಸುಗಳ ಅಂಶಗಳಲ್ಲಿ ಸೇರಿಸಿದ್ದರು.

ಅಂತಿಮವಾಗಿ, ಅವರ ವಾದಕ್ಕೆ ಕೇಂದ್ರ ಮಾಹಿತಿ ಆಯೋಗ ಈಗ ಮನ್ನಣೆ ನೀಡಿದಂತಾಗಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇನ್ನು ಮುಂದೆ ತನ್ನ ಎಲ್ಲ ವ್ಯವಹಾರಗಳ ಮಾಹಿತಿಯನ್ನೂ ಸಾರ್ವಜನಿಕರಿಗೆ ನೀಡಲು ಬದ್ಧವಾಗಿದೆ. ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾದ ಬಿಸಿಸಿಐ ಅನ್ನು ಆರ್‌ಟಿಐ ವ್ಯಾಪ್ತಿಗೆ ತರಬೇಕು ಎಂದು ಹೋರಾಡುತ್ತಿದ್ದವರಿಗೆ ಕಡೆಗೂ ಜಯ ಸಿಕ್ಕಂತಾಗಿದೆ. ಏತನ್ಮಧ್ಯೆ, ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಬಿಸಿಸಿಐ ಆರ್‌ಟಿಐ ವ್ಯಾಪ್ತಿಗೆ ಬಂದಿರುವುದಕ್ಕೆ ಜನತೆಯಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಬಿಸಿಸಿಐ ಅಪಸ್ವರ

ಇದನ್ನೂ ಓದಿ : ಬಿಸಿಸಿಐ ನಿಯಂತ್ರಣಕ್ಕೆ ಕಠಿಣ ನಿಯಮಗಳು ಮೂಗುದಾರವೇ ಹೊರತು ಸಡಿಲ ಸೂತ್ರವಲ್ಲ!

ಸಾಕಷ್ಟು ಕಾನೂನು ತಜ್ಞರ ಜೊತೆ ಚರ್ಚೆ ನಡೆಸಿದ ಬಳಿಕ, ಸುಪ್ರಿಂ ಕೋರ್ಟ್‌ ನೀಡಿರುವ ತೀರ್ಪು ಗಳ ಪರಿಶೀಲನೆ ಹಾಗೂ ಕೇಂದ್ರದ ಮಾಹಿತಿ ಆಯೋಗದ (ಸಿಐಸಿ) ಅಧಿಕಾರಿಗಳ ಜತೆಗಿನ ಸಂವಾದದ ನಂತರ ಕೇಂದ್ರ ಮಾಹಿತಿ ಆಯೋಗ ಅಂತಿಮವಾಗಿ ಬಿಸಿಸಿಐ ಅನ್ನು ಆರ್‌ಟಿಐ ವ್ಯಾಪ್ತಿಗೆ ತಂದಿರುವುದನ್ನು ನಿರೀಕ್ಷೆಯಂತೆಯೇ ಬಿಸಿಸಿಐ ಪಾಲಿಗೆ ಅಪಥ್ಯವಾಗಿದ್ದು, ಅದನ್ನು ಪ್ರಶ್ನಿಸಲು ನಿರ್ಧರಿಸಿದೆ.

“ಜುಲೈ ೧೦ರಂದು ನಡೆದ ಸಿಐಸಿ ವಿಚಾರಣೆ ಸಂದರ್ಭದಲ್ಲಿ ಬಿಸಿಸಿಐ ಆರ್‌ಟಿಐ ಕಾಯ್ದೆಯಡಿ ಬರಲು ಅಡ್ಡಿಯೇನು? ಎಂದು ಕೇಳಲಾಗಿತ್ತು. ಸಿಐಸಿಯ ಪ್ರಶ್ನೆಗೆ ಕನಿಷ್ಠ ಉತ್ತರ ನೀಡುವ ಕಾಯಕಕ್ಕೂ ಬಿಸಿಸಿಐ ಹೋಗಲಿಲ್ಲ. ಇದಕ್ಕೆಲ್ಲಾ ಕಾರಣ ಸರ್ವೋಚ್ಚ ನ್ಯಾಯಾಲಯ ನೇಮಿತ ಬಿಸಿಸಿಐ ಆಡಳಿತ ಸಮಿತಿ (ಸಿಒಎ) ನಿರ್ಲಕ್ಷ್ಯತನ. ಹೀಗಾಗಿ, ಸದ್ಯ, ಸಿಐಸಿಯ ಆದೇಶವನ್ನು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿ ಕಾನೂನು ಹೋರಾಟ ನಡೆಸದೆ ಬೇರೆ ಮಾರ್ಗವಿಲ್ಲ,’’ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.

ಮಾಹಿತಿ ಹಕ್ಕು ಕಾಯ್ದೆಯಡಿ ಬಿಸಿಸಿಐ ಕಾರ್ಯಾಚರಿಸುವುದು ಅದರ ಪಾರದರ್ಶಕ ಆಡಳಿತಕ್ಕೆ ಸಹಕಾರಿಯಾಗಿರಲಿದೆ. ಆದರೆ, ಕೋಟ್ಯಾಂತರ ರು. ವಹಿವಾಟು ನಡೆಸುವ ಬಿಸಿಸಿಐ ಸದ್ಯ ಯಾವುದೇ ರೀತಿಯಲ್ಲೂ ಆರ್‌ಟಿಐ ವ್ಯಾಪ್ತಿಗೆ ಬರಲು ಸುತರಾಂ ಸಿದ್ಧವಿಲ್ಲ. ಬಿಸಿಸಿಐ ಒಂದೊಮ್ಮೆ ಪಟ್ಟು ಹಿಡಿದರೆ, ಅದರಡಿ ಬರುವ ಎಲ್ಲ ರಾಜ್ಯ ಸಂಸ್ಥೆಗಳೂ ಇದೇ ಹಠ ಹಿಡಿಯಬಹುದು. ಬಹುತೇಕ ಮತ್ತೊಂದು ಸುತ್ತಿನ ಕಾನೂನು ಸಮರ ನಡೆಯುವ ಸಾಧ್ಯತೆಗಳನ್ನೂ ಸೃಷ್ಟಿಸಿದೆ.

ಸಿಐಸಿ ಕಾಲಮಿತಿ

ಕೇಂದ್ರ ಮಾಹಿತಿ ಆಯೋಗದ ಸೂಚನೆಯಂತೆ, ಬಿಸಿಸಿಐ ಮುಂದಿನ ಹದಿನೈದು ದಿನಗಳ ಒಳಗೆ ಸಾರ್ವಜನಿಕರ ಅರ್ಜಿಗಳ ಪರಿಶೀಲನೆ ನಡೆಸಿ ಅವುಗಳ ವಿಲೇವಾರಿಗೆ ಸೂಕ್ತ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ. ಜತೆಗೆ, ಆರ್‌ಟಿಐ ಕಾಯ್ದೆಯ 2 (ಎಚ್‌) ನಿಯಮದಡಿ ಇದು ರೂಪುಗೊಳ್ಳಬೇಕಿದೆ. 37 ಪುಟಗಳ ಸುದೀರ್ಘ ಆದೇಶದಲ್ಲಿ ಮಾಹಿತಿ ಆಯುಕ್ತ ಶ್ರೀಧರ್‌ ಆಚಾರ್ಯುಲು ಅವರು “ಬಿಸಿಸಿಐ ಮಾನ್ಯತೆ ಪಡೆದ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಾಗಿದ್ದು ಮಾಹಿತಿ ನೀಡಲು ನಿರಾಕರಿಸುವಂತಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಅದು ಜನತೆಗೆ ಉತ್ತರದಾಯಿಯಾಗಿರಬೇಕಾದ ಬದ್ಧತೆಯಲ್ಲಿದೆ ಎಂಬುದನ್ನು ಸುಪ್ರೀಂ ಕೋರ್ಟ್ ಕೂಡ ಹೇಳಿದೆ’’ ಎಂದು ಅಭಿಪ್ರಾಯಿಸಿದ್ದಾರೆ.

ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ, ಕೇಂದ್ರ ಸಹಾಯಕ ಸಾರ್ವಜನಿಕ ಅಧಿಕಾರಿ ಹುದ್ದೆಗೆ ಸರಿಸಮನಾದ ಅಧಿಕಾರಿಯನ್ನು ನೇಮಿಸುವಂತೆ ಆಚಾರ್ಯುಲು ಬಿಸಿಸಿಐ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಆಡಳಿತಾಧಿಕಾರಿಗಳ ಸಮಿತಿಗೆ ಸೂಚಿಸಿದ್ದಾರೆ.

ಛಲಗಾತಿ ಗೀತಾ

ಬಿಸಿಸಿಐ ಅನ್ನು ಆರ್‌ಟಿಐ ವ್ಯಾಪ್ತಿಗೆ ತರಬೇಕೆಂಬ ಕೂಗು ಹಲವಾರು ದಿನಗಳಿಂದಲೂ ಇದ್ದಿತಾದರೂ, ಅಂತಿಮವಾಗಿ ಗೀತಾ ರಾಣಿ ಎಂಬುವರ ಛಲದಿಂದಾಗಿ ಕಡೆಗೂ ಬಿಸಿಸಿಗೆ ಆರ್‌ಟಿಐ ಅಂಕುಶ ಬಿದ್ದಿದೆ. ಬಿಸಿಸಿಐ ಅನ್ನು ಆರ್‌ಟಿಐ ವ್ಯಾಪ್ತಿಗೆ ತರಬೇಕು ಎಂದು ಗೀತಾ ರಾಣಿ ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾಸಚಿವಾಲಯವನ್ನು ಕೋರಿದ್ದರು. ರಾಷ್ಟ್ರೀಯ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡುವಾಗ ಅನುಸರಿಸುವ ವಿಧಾನವನ್ನು ತಿಳಿದುಕೊಳ್ಳುವುದು ಆಕೆಯ ಉದ್ದೇಶವಾಗಿತ್ತು. ಆದರೆ ಗೀತಾ ಸಲ್ಲಿಸಿದ ಅರ್ಜಿಯನ್ನು ಬಿಸಿಸಿಐ ಉಪೇಕ್ಷಿಸಿದ ಫಲವಾಗಿ ಗೀತಾ ಮಾಹಿತಿ ಆಯೋಗವನ್ನು ಸಂಪರ್ಕಿಸಿದ್ದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More