ಕರುಣ್‌ಗೆ ಮಾತ್ರವಲ್ಲ, ಮಯಾಂಕ್‌ಗೂ ಪ್ರಸಾದ್ ಹೀಗೆಯೇ ಹೇಳಿದ್ದರು!

ಕರ್ನಾಟಕದ ಕರುಣ್ ನಾಯರ್‌ಗೆ ವಿಂಡೀಸ್ ವಿರುದ್ಧದ ಸರಣಿಯಿಂದ ಹೊರಗಿಟ್ಟ ಕಾರಣಗಳನ್ನು ಸ್ವತಃ ಕರುಣ್‌ಗೆ ತಿಳಿಸಿರುವುದಾಗಿ ಭಾರತ ಕ್ರಿಕೆಟ್ ಆಯ್ಕೆ ಸಮಿತಿ ಅಧ್ಯಕ್ಷ ಎಂ ಎಸ್ ಕೆ ಪ್ರಸಾದ್ ಹೇಳಿದ್ದಾರೆ. ವಾಸ್ತವವಾಗಿ, ಕರ್ನಾಟಕದ ಮಯಾಂಕ್‌ಗೂ ಪ್ರಸಾದ್ ಇದೇ ರೀತಿ ಹೇಳಿದ್ದರು!

ರವೀಂದ್ರ ಜಡೇಜಾರಂಥ ಆಟಗಾರರು, ಆಯ್ಕೆ ಸಮಿತಿ ಮುಖ್ಯಸ್ಥ ಎಂ ಎಸ್‌ಕೆ ಪ್ರಸಾದ್ ವಿರುದ್ಧ ಹರಿಹಾಯ್ದಿದ್ದು, “ಕರುಣ್ ವೃತ್ತಿಬದುಕನ್ನು ಈತ ಹಾಳುಗೆಡವುತ್ತಿದ್ದಾನೆ,” ಎಂದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಗೆ ಆಯ್ಕೆಯಾದ ತಂಡದಲ್ಲಿ ಸ್ಥಾನ ಪಡೆದರೂ, ಆಡುವ ಹನ್ನೊಂದರ ಬಳಗದಲ್ಲಿ ಕರುಣ್ ನಾಯರ್ ಸೇರ್ಪಡೆಗೆ ಅವಕಾಶವನ್ನೇ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ನೀಡಿರಲಿಲ್ಲ. ಇದೀಗ ವೆಸ್ಟ್‌ಇಂಡೀಸ್ ವಿರುದ್ಧದ ಸರಣಿಗೆ ಆರಿಸಲಾದ ತಂಡದ ಪೈಕಿಯೂ ಸ್ಥಾನ ಕಲ್ಪಿಸದೆ ಹೋದದ್ದಕ್ಕೆ ಕರುಣ್‌ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ವೆಸ್ಟ್‌ ಇಂಡೀಸ್ ವಿರುದ್ಧದ ಸರಣಿಗೆ ತಂಡವನ್ನು ಆರಿಸಿದ ಬಳಿಕ ನಾನು ವೈಯಕ್ತಿಕವಾಗಿ ಕರುಣ್ ನಾಯರ್ ಜೊತೆ ಮಾತನಾಡಿದೆ. ಮತ್ತೆ ತಂಡದಲ್ಲಿ ಸ್ಥಾನ ಪಡೆಯುವ ಹಾದಿಗಳೇನು ಎಂಬುದನ್ನು ಕೂಡ ಮನದಟ್ಟು ಮಾಡಿಕೊಟ್ಟಿದ್ದೇನೆ. ಆಯ್ಕೆ ಸಮಿತಿ ಮತ್ತು ಆಟಗಾರರ ನಡುವೆ ಯಾವುದೇ ಸಂವಹನದ ಕೊರತೆ ಇಲ್ಲ,’’ ಎಂದು ಕರುಣ್ ಸಂಗತಿ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಸ್ವತಃ ಎಂ ಎಸ್ ಕೆ ಪ್ರಸಾದ್ ಸ್ಪಷ್ಟನೆಯನ್ನೂ ನೀಡಿದ್ದಾರೆ.

ವಾಸ್ತವವಾಗಿ, ಕರ್ನಾಟಕದ ಪ್ರತಿಭಾನ್ವಿತ ಆಟಗಾರನ್ನು ರಾಷ್ಟ್ರೀಯ ತಂಡದಲ್ಲಿ ಅಷ್ಟು ಸುಲಭವಾಗಿ ಬಿಟ್ಟುಕೊಳ್ಳಲು ಭಾರತೀಯ ಕ್ರಿಕೆಟ್ ಆಯ್ಕೆ ಸಮಿತಿ ಮುಖ್ಯಸ್ಥ ಎಂ ಎಸ್ ಕೆ ಪ್ರಸಾದ್‌ಗೆ ಇಷ್ಟವಿದ್ದಂತಿಲ್ಲ ಎಂಬುದಕ್ಕೆ ಇದು ಎರಡನೇ ನಿದರ್ಶನ. ಸದ್ಯ, ಈಗ ವೆಸ್ಟ್‌ ಇಂಡೀಸ್ ವಿರುದ್ಧದ ಸರಣಿಗೆ ಅವಕಾಶ ಪಡೆದಿರುವ ಕರ್ನಾಟಕದ ಮತ್ತೋರ್ವ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್‌ ಅವರನ್ನೂ ಹೈದರಾಬಾದ್ ಮೂಲದ ಪ್ರಸಾದ್ ಕಾಯಿಸಿದ್ದರು.

ಜಡೇಜಾ ಟ್ವಿಟರ್ ಕಿಡಿ!

ಕಳೆದ ದೇಶೀಯ ಕ್ರಿಕೆಟ್ ಋತುವಿನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ, ಸಹಸ್ರ ರನ್‌ಗೂ ಅಧಿಕ ಮೊತ್ತ ಕಲೆಹಾಕಿದ್ದ ಮಯಾಂಕ್ ಅಗರ್ವಾಲ್‌ಗೆ ಭಾರತೀಯ ತಂಡದಲ್ಲಿ ಸ್ಥಾನ ಕಲ್ಪಿಸಲು ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಮೀನಮೇಷ ಎಣಿಸಿತ್ತು. ಆ ಸಂದರ್ಭದಲ್ಲೂ ಮಯಾಂಕ್‌ ಇನ್ನಷ್ಟು ದಿನ ಕಾಯುವುದುಚಿತ ಎಂದು ಪ್ರಸಾದ್ ಬಹಿರಂಗವಾಗಿಯೇ ಹೇಳಿದ್ದರು. ಇದೀಗ ಕರುಣ್ ನಾಯರ್ ವಿಷಯದಲ್ಲಿಯೂ ಅವರು ಇದೇ ತಂತ್ರ ಅನುಸರಿಸುತ್ತಿದ್ದಾರೋ ಎಂಬ ಅನುಮಾನವೂ ಕೆಲವು ಆಟಗಾರರಲ್ಲಿ ಮೂಡಿದೆ.

ಅಂದಹಾಗೆ, ವಿರೇಂದ್ರ ಸೆಹ್ವಾಗ್ ಬಳಿಕ ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಎರಡನೇ ಏಕೈಕ ಆಟಗಾರ ಎನಿಸಿರುವ ಕರುಣ್ ನಾಯರ್, ಇಂಗ್ಲೆಂಡ್ ಸರಣಿಗೆ ಆಯ್ಕೆಯಾದ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ, ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ತಂಡವನ್ನು ಬದಲಿಸಿದಾಗಲೂ ಕರುಣ್ ನಾಯರ್‌ಗೆ ಸ್ಥಾನ ಸಿಕ್ಕಿರಲಿಲ್ಲ. ಬದಲಿಗೆ, ಹೈದರಾಬಾದ್ ಮೂಲದ ಹನುಮ ವಿಹಾರಿಗೆ ಅವಕಾಶ ನೀಡಲಾಗಿತ್ತು. ಆಲ್ರೌಂಡ್ ಆಟಗಾರ ಹನುಮ ವಿಹಾರಿ ಅರ್ಧಶತಕದೊಂದಿಗೆ ಬೌಲಿಂಗ್‌ನಲ್ಲೂ ಗಮನಾರ್ಹ ಪ್ರದರ್ಶನ ನೀಡಿ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದರು.

ಇದನ್ನೂ ಓದಿ : ಮಯಾಂಕ್ ಮತ್ತಷ್ಟು ಕಾಲ ಕಾಯುವುದು ಅನಿವಾರ್ಯ ಎಂದ ಎಂಎಸ್‌ಕೆ ಪ್ರಸಾದ್‌

ಏತನ್ಮಧ್ಯೆ, ಟೆಸ್ಟ್ ತಂಡಕ್ಕೆ ಕರುಣ್ ಅವರನ್ನು ಆಯ್ಕೆ ಮಾಡಿದ್ದು ಸ್ವತಃ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್‌ಗೆ ಸಹ್ಯವಾಗಿರಲಿಲ್ಲ ಎನ್ನಲಾಗಿದೆ. ಇನ್ನು, ಸಂದರ್ಶನವವೊಂದರಲ್ಲಿ ಕರುಣ್ ನಾಯರ್ ಕೂಡ ಟೀಂ ಮ್ಯಾನೇಜ್‌ಮೆಂಟ್ ಆಗಲೀ ಇಲ್ಲವೇ ಆಯ್ಕೆ ಸಮಿತಿಯಾಗಲಿ ತನ್ನೊಂದಿಗೆ ಯಾವ ಚರ್ಚೆಯನ್ನೂ ಮಾಡಿಲ್ಲ ಎಂದು ಹೇಳಿದ್ದರು.

“ಇಂಗ್ಲೆಂಡ್ ಪ್ರವಾಸದ ಸಂದರ್ಭದಲ್ಲಿ ಆಯ್ಕೆ ಸಮಿತಿ ಸದಸ್ಯ ದೇವಾಂಗ್ ಗಾಂಧಿ ಅವರು ಕರುಣ್ ಜೊತೆ ಮಾತನಾಡಿದ್ದರು. ಅಂತಿಮ ಇಲೆವೆನ್‌ನಲ್ಲಿ ಸ್ಥಾನ ಸಿಗಲಿಲ್ಲ ಎಂಬ ಮಾತ್ರಕ್ಕೆ ಬೇಸರಿಸಿಕೊಳ್ಳುವುದು ಬೇಡ. ಖಂಡಿತವಾಗಿಯೂ ಮುಂದೆ ಅವಕಾಶ ಸಿಗುತ್ತದೆ. ಆಗ ಸಾಮರ್ಥ್ಯ ನಿರೂಪಿಸಬಹುದು ಎಂದು ತಿಳಿಹೇಳಿದ್ದರು. ಇಷ್ಟಕ್ಕೂ ಸರಣಿಯೊಂದರಲ್ಲಿ ಆಡಲು ಅವಕಾಶ ಸಿಗದ ಮಾತ್ರಕ್ಕೆ ಆಟಗಾರನ ಕ್ರೀಡಾ ಬದುಕೇ ಮುಗಿದುಹೋದಂತಾಗುವುದಿಲ್ಲ. ರಣಜಿ ಸೇರಿದಂತೆ ದೇಶೀಯ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೆ ರಾಷ್ಟ್ರೀಯ ತಂಡದ ಅವಕಾಶದ ಬಾಗಿಲು ತನ್ನಿಂತಾನೇ ತೆರೆಯುತ್ತದೆ,’’ ಎಂತಲೂ ಪ್ರಸಾದ್ ಸ್ಪಷ್ಟನೆ ನೀಡಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More