ಜಯದ ಹಳಿಗೆ ಮರಳುವ ಭಾರತದ ಯತ್ನಕ್ಕೆ ಕೆರಿಬಿಯನ್ನರು ಸವಾಲಾಗುವರೇ?

ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯ ಸರಣಿಯನ್ನು ೧-೪ರಿಂದ ಸೋತ ನಂತರದಲ್ಲಿ ನಡೆಯುತ್ತಿರುವ ವೆಸ್ಟ್‌ಇಂಡೀಸ್ ವಿರುದ್ಧದ ಎರಡು ಟೆಸ್ಟ್ ಪಂದ್ಯ ಸರಣಿಗೆ ಭಾರತ ತಂಡ ಸನ್ನದ್ಧವಾಗಿದೆ. ತವರಿನಲ್ಲಿ ಎಂದಿನ ಜಯದ ಅಭಿಯಾನ ಮುಂದುವರಿಸುವ ಕೊಹ್ಲಿ ಪಡೆಗೆ ಕೆರಿಬಿಯನ್ನರು ನಿಜಕ್ಕೂ ಸವಾಲಾಗುವರೇ?

ಒಂದು ಬಗೆಯಲ್ಲಿ ವೆಸ್ಟ್‌ಇಂಡೀಸ್ ವಿರುದ್ಧದ ಈ ಎರಡು ಟೆಸ್ಟ್ ಪಂದ್ಯ ಸರಣಿ ಮುಂಬರಲಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಪೂರ್ವ ತಾಲೀಮಿನಂತಿದೆ. ಇನ್ನೊಂದೆಡೆ ಪ್ರಸಕ್ತ ಋತುವಿನಲ್ಲಿ ಭಾರತ ತಂಡ ತನ್ನ ನೆಲದಲ್ಲಿ ಆಡುತ್ತಿರುವ ಕೊನೆಯ ಟೆಸ್ಟ್ ಸರಣಿ ಇದು. ಈ ಹಿನ್ನೆಲೆಯಲ್ಲಿ ಇಂಡೋ-ಕೆರಿಬಿಯನ್ ಟೆಸ್ಟ್ ಸರಣಿ ಕೌತುಕ ಕೆರಳಿಸಿದೆ.

ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಪಂದ್ಯದ ಮತ್ತೊಂದು ಆಕರ್ಷಣೆ ಮುಂಬೈ ಆಟಗಾರ ಪೃಥ್ವಿ ಶಾ. ಈಗಾಗಲೇ ಅಂತಿಮ ಹನ್ನೆರಡು ಆಟಗಾರರ ತಂಡದಲ್ಲಿ ಸ್ಥಾನ ಗಿಟ್ಟಿಸಿರುವ ಹದಿನೆಂಟರ ಹರೆಯದ ಈ ಯುವ ಆಟಗಾರನ ಮೇಲೆ ಎಲ್ಲರ ಗಮನ ಹರಿದಿದೆ. ಕರ್ನಾಟಕದ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್‌ ಅವರನ್ನು ಹಿಂದಿಕ್ಕಿ ಇನ್ನಿಂಗ್ಸ್ ಆರಂಭಿಸುವ ಅವಕಾಶ ಪಡೆದಿರುವ ಪೃಥ್ವಿ ಶಾ ತನ್ನ ಆಯ್ಕೆಯನ್ನು ಸಮರ್ಥಿಸಿಕೊಳ್ಳುವ ದಿಸೆಯಲ್ಲೂ ಮೊದಲ ಪಂದ್ಯ ಕುತೂಹಲ ಎಬ್ಬಿಸಿದೆ.

ಪೃಥ್ವಿ ಶಾ ಮೊದಲ ಪಂದ್ಯದಲ್ಲಿ ಆಡುವುದು ಖಚಿತವಾಗಿರುವ ಹಿನ್ನೆಲೆಯಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ಆಡುವುದು ಬಹುತೇಕ ಅನುಮಾನವಾಗಿದೆ. ಸದ್ಯ, ಭಾರತ ತಂಡ ತವರಿನಲ್ಲಿ ಅತ್ಯಂತ ಬಲಿಷ್ಠವಾಗಿದ್ದು, ಅದು ಮತ್ತೊಮ್ಮೆ ನಿರೂಪಿತವಾಗುವ ಬಗೆಗೆ ಯಾವುದೇ ಸಂದೇಹಗಳಿಲ್ಲ. ಇಷ್ಟಾಗಿಯೂ ವಿಂಡೀಸ್ ತಂಡ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದರೆ ಖಂಡಿತಾ ಭಾರತಕ್ಕೆ ಸವಾಲಾಗಿ ಪರಿಣಮಿಸಬಹುದು. ಈ ನಿಟ್ಟಿನಲ್ಲಿ ಕೆರಿಬಿಯನ್ನರ ಹೋರಾಟ ಕೂಡ ಆಸಕ್ತಿ ಕೆರಳಿಸಿದೆ.

ಇದನ್ನೂ ಓದಿ : ಆಯ್ಕೆ ನನಗೆ ಸಂಬಂಧಿಸಿದ್ದಲ್ಲ; ಕರುಣ್ ವಿಷಯದಲ್ಲಿ ಕೈತೊಳೆದುಕೊಂಡ ಕೊಹ್ಲಿ

ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ವಿರಾಟ್ ಪಡೆ ಸರಣಿ ಕೈಚೆಲ್ಲಿದರೂ, ಹೋರಾಟದಿಂದ ಹಿಂದೆ ಸರಿದಿರಲಿಲ್ಲ. ವಿರಾಟ್ ಅಂತೂ ಅಮೋಘ ಬ್ಯಾಟಿಂಗ್‌ನಿಂದ ಮಿಂಚು ಹರಿಸಿದರೆ, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ ಗಮನ ಸೆಳೆದಿದ್ದರು. ಇವರಿಬ್ಬರ ಅನುಪ ಸ್ಥಿತಿಯಲ್ಲಿ ಮೊಹಮದ್ ಶಮಿ, ಉಮೇಶ್ ಯಾದವ್ ಹಾಗೂ ಶಾರ್ದೂಲ್ ಠಾಕೂರ್ ಉತ್ತಮ ಪ್ರದರ್ಶನ ನೀಡುವ ಜವಾಬ್ದಾರಿ ಹೊತ್ತಿದ್ದಾರೆ. ಆದರೆ, ತಂಡದ ನಿಜವಾದ ಸಮಸ್ಯೆ ಎಂದರೆ, ಮಧ್ಯಮ ಕ್ರಮಾಂಕ. ಅಜಿಂಕ್ಯ ರಹಾನೆ, ರಿಷಭ್ ಪಂತ್ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ.

ರೋಚ್ ಅಲಭ್ಯ

ಆತಿಥೇಯರಿಗೆ ಆಘಾತ ನೀಡಲು ಉತ್ಸುಕವಾಗಿರುವ ವೆಸ್ಟ್‌ಇಂಡೀಸ್‌ಗೆ ಪ್ರಮುಖ ಸಮಸ್ಯೆ ವೇಗಿ ಕೆಮರ್ ರೋಚ್ ಮೊದಲ ಪಂದ್ಯಕ್ಕೆ ಅಲಭ್ಯವಾಗಿರುವುದು. ರೋಚ್ ಅನುಪಸ್ಥಿತಿ ತಂಡವನ್ನು ಬಾಧಿಸದಂತೆ ಯುವ ವೇಗಿಗಳಾದ ಕೀಮೊ ಪೌಲ್ ಹಾಗೂ ಶೆರ್ಮನ್ ಲೆವಿಸ್ ಉತ್ತಮ ಪ್ರದರ್ಶನ ನೀಡುತ್ತಾರೆ ಎಂಬ ವಿಶ್ವಾಸವನ್ನು ವಿಂಡೀಸ್ ಕೋಚ್ ಸ್ಟುವರ್ಟ್ ಲಾ ವ್ಯಕ್ತಪಡಿಸಿದ್ದಾರೆ.

ಇನ್ನು, ಭಾರತದ ಪಿಚ್‌ ಸ್ಪಿನ್ ಸ್ನೇಹಿಯಾಗಿರುವ ಹಿನ್ನೆಲೆಯಲ್ಲಿ ದೇವೇಂದ್ರ ಬಿಶೂ ಮೇಲೆ ಹೆಚ್ಚಿನ ಭರವಸೆಯನ್ನು ಇರಿಸಿಕೊಳ್ಳಲಾಗಿದೆ. ಇನ್ನು ಎಡಗೈ ಸ್ಪಿನ್ನರ್ ಜೊಮೆಲ್ ವಾರಿಕನ್ ಕೂಡ ಪರಿಣಾಮಕಾರಿ ಸ್ಪಿನ್‌ನಿಂದ ಆತಿಥೇಯ ತಂಡದ ಬ್ಯಾಟ್ಸ್‌ಮನ್‌ಗಳನ್ನು ಕಾಡುವ ಭರವಸೆ ವಿಂಡೀಸ್‌ನದ್ದು. ಕ್ರೆಗ್ ಬ್ರಾಥ್‌ವೇಟ್, ಕೀರನ್ ಪೊವೆಲ್ ಅನುಭವಿ ಬ್ಯಾಟ್ಸ್‌ಮನ್‌ಗಳಾಗಿದ್ದು, ಭಾರತದ ಬೌಲರ್‌ಗಳಿಗೆ ಎಷ್ಟರಮಟ್ಟಿಗೆ ಇವರು ಸವಾಲಾಗುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಸಂಭವನೀಯ ಇಲೆವೆನ್

ಭಾರತ: ಪೃಥ್ವಿ ಶಾ, ಕೆ ಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್‌ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್ / ಶಾರ್ದೂಲ್ ಠಾಕೂರ್, ಮೊಹಮದ್ ಶಮಿ ಮತ್ತು ಉಮೇಶ್ ಯಾದವ್.

ವೆಸ್ಟ್‌ಇಂಡೀಸ್: ಕ್ರೆಗ್ ಬ್ರಾಥ್‌ವೇಟ್, ಕೀರನ್ ಪೊವೆಲ್, ಶೈ ಹೋಪ್, ಶಿಮ್ರನ್ ಹೆಟ್ಮೆಯರ್, ರೋಸ್ಟನ್ ಚೇಸ್, ಶೇನ್ ಡಾವ್ರಿಚ್ (ವಿಕೆಟ್‌ಕೀಪರ್), ಜೇಸನ್ ಹೋಲ್ಡರ್ (ನಾಯಕ), ದೇವೇಂದ್ರ ಬಿಶೂ, ಕೀಮೊ ಪೌಲ್, ಶೆರ್ಮಾನ್ ಲೆವಿಸ್ / ಜೊಮೆಲ್ ವರ್ರಿಕಾನ್ ಹಾಗೂ ಶನೋನ್ ಗೇಬ್ರಿಯಲ್.

ಪಂದ್ಯ ಆರಂಭ: ಬೆಳಗ್ಗೆ ೯.೩೦ | ಸ್ಥಳ: ರಾಜ್‌ಕೋಟ್ | ನೇರಪ್ರಸಾರ: ಸ್ಟಾರ್ ನೆಟ್ವರ್ಕ್

ಇದು ನಿಮಗೆ ತಿಳಿದಿರಲಿ

  • ಕೆರಿಬಿಯನ್ನರು ಕೊನೆಯ ಬಾರಿಗೆ ಭಾರತದಲ್ಲಿ ಟೆಸ್ಟ್ ಪಂದ್ಯ ಗೆದ್ದದ್ದು ೧೯೯೪ರ ಮೊಹಾಲಿ ಪಂದ್ಯದಲ್ಲಿ. ಇನ್ನು, ಕೊನೆಯ ಬಾರಿಗೆ ಭಾರತವನ್ನು ಮಣಿಸಿದ್ದು ೨೦೦೨ರ ಕಿಂಗ್ಸ್‌ಟನ್ ಟೆಸ್ಟ್‌ನಲ್ಲಿ
  • ವಿಂಡೀಸ್ ವಿರುದ್ಧ ಬ್ಯಾಟಿಂಗ್‌ನಲ್ಲಿ ಆರ್ ಅಶ್ವಿನ್ ೫೬.೬೬ ಸರಾಸರಿ ಹೊಂದಿದ್ದು, ತಮಿಳುನಾಡಿನ ಈ ಆಲ್ರೌಂಡರ್ ದಾಖಲಿಸಿದ ನಾಲ್ಕು ಶತಕಗಳು ವಿಂಡೀಸ್ ವಿರುದ್ಧವೇ ದಾಖಲಾಗಿದೆ. ಇನ್ನು, ೨೨.೧೫ರ ಸರಾಸರಿಯಲ್ಲಿ ವಿಂಡೀಸ್ ವಿರುದ್ಧ ೯ ಟೆಸ್ಟ್‌ಗಳಲ್ಲಿ ಅಶ್ವಿನ್ ೫೧ ವಿಕೆಟ್ ಕಲೆಹಾಕಿದ್ದಾರೆ
  • ೧೯೮೯ರಲ್ಲಿ ಕರಾಚಿ ಟೆಸ್ಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ನಂತರದಲ್ಲಿ ಭಾರತದ ಪರ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡುತ್ತಿರುವ ಅತಿ ಕಿರಿಯ ಆಟಗಾರ
ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More