ಚೀನಾ ಓಪನ್ ಟೆನಿಸ್ | ತೃತೀಯ ಸುತ್ತಿಗೆ ಲಗ್ಗೆ ಹಾಕಿದ ನವೊಮಿ ಒಸಾಕ

ವಿಶ್ವ ಟೆನಿಸ್‌ನ ನವತಾರೆ ನವೊಮಿ ಒಸಾಕ ಚೀನಾ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ತೃತೀಯ ಸುತ್ತಿಗೆ ಲಗ್ಗೆ ಹಾಕಿದ್ದಾರೆ. ಆದರೆ, ಸ್ಪೇನ್ ಆಟಗಾರ್ತಿ ಗಾರ್ಬೈನ್ ಮುಗುರುಜಾ ಮೊದಲ ಸುತ್ತಲ್ಲೇ ನಿರ್ಗಮಿಸಿದರೆ, ಜರ್ಮನ್ ಆಟಗಾರ್ತಿ ಏಂಜಲಿಕ್ ಕೆರ್ಬರ್ ಕೂಡ ತೃತೀಯ ಸುತ್ತಿಗೆ ಧಾವಿಸಿದರು  

ಪ್ರಸಕ್ತ ಋತುವಿನ ಕೊನೆಯ ಗ್ರಾಂಡ್‌ಸ್ಲಾಮ್ ಟೂರ್ನಿಯಾದ ಯುಎಸ್ ಓಪನ್‌ನಲ್ಲಿ ೨೩ ಗ್ರಾಂಡ್‌ಸ್ಲಾಮ್ ಒಡತಿ ಸೆರೆನಾ ವಿಲಿಯಮ್ಸ್‌ಗೆ ಸೋಲುಣಿಸಿ ವಿಶ್ವ ಟೆನಿಸ್‌ನಲ್ಲಿ ಸಂಚಲನ ಸೃಷ್ಟಿಸಿದ ಒಸಾಕ, ಚೀನಾ ಓಪನ್‌ನಲ್ಲಿ ಮುನ್ನಡೆದಿದ್ದಾರೆ. ಶ್ರೇಯಾಂಕ ರಹಿತ ಆಟಗಾರ್ತಿ ಅಮೆರಿಕದ ಡೇನಿಲೆ ಕಾಲಿನ್ಸ್ ವಿರುದ್ಧ ೬-೧, ೬-೦ ಎರಡು ನೇರ ಹಾಗೂ ಸುಲಭ ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದ ಒಸಾಕ ಮುಂದಿನ ಸುತ್ತಿಗೆ ಧಾವಿಸಿದರು.

ಕೇವಲ ೫೩ ನಿಮಿಷಗಳ ಕಾಲ ನಡೆದ ಹಣಾಹಣಿಯಲ್ಲಿ ಯುವ ಆಟಗಾರ್ತಿ ಒಸಾಕ, ಏಕಪಕ್ಷೀಯ ಆಟದೊಂದಿಗೆ ಕಾಲಿನ್ಸ್ ಎದುರು ಜಯ ಪಡೆದರು. ಮೊದಲ ಸೆಟ್‌ನಲ್ಲಿ ಒಂದು ಗೇಮ್ ಮಾತ್ರ ಬಿಟ್ಟುಕೊಟ್ಟ ಒಸಾಕ, ಎರಡನೇ ಸೆಟ್‌ನಲ್ಲಿ ಸಂಪೂರ್ಣ ಆಕ್ರಮಣಕಾರಿಯಾದರು. ಒಸಾಕ ಆಕ್ರಮಣಕಾರಿ ಆಟದಲ್ಲಿ ಕಳೆದುಹೋದ ಕಾಲಿನ್ಸ್ ಒಂದೇ ಒಂದು ಗೇಮ್ ಅನ್ನೂ ಗೆಲ್ಲಲಾಗದೆ ಸುಲಭವಾಗಿಯೇ ಸೋಲೊಪ್ಪಿಕೊಂಡರು.

ಇನ್ನು, ವನಿತೆಯರ ಸಿಂಗಲ್ಸ್ ವಿಭಾಗದ ಮತ್ತೊಂದು ದ್ವಿತೀಯ ಸುತ್ತಿನ ಪಂದ್ಯದಲ್ಲಿ ಗಾರ್ಬೈನ್ ಮುಗುರುಜಾ, ಅರಿನಾ ಸಬಲೆಂಕಾ ವಿರುದ್ಧ ಎರಡು ನೇರ ಸೆಟ್‌ಗಳಲ್ಲಿ ಪರಾಭವಗೊಂಡರು. ಎರಡು ದಿನಗಳ ಹಿಂದಷ್ಟೇ ನಡೆದ ವುಹಾನ್ ಓಪನ್‌ನಲ್ಲಿ ಚಾಂಪಿಯನ್ ಆಗುವುದರೊಂದಿಗೆ ವೃತ್ತಿಬದುಕಿನ ಎರಡನೇ ಡಬ್ಲ್ಯೂಟಿಎ ಪ್ರಶಸ್ತಿ ಜಯಿಸಿದ ಸಬಲೆಂಕಾ, ೭-೫, ೬-೪ ಸೆಟ್‌ಗಳಲ್ಲಿ ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಧಾವಿಸಿದರು.

ಇದನ್ನೂ ಓದಿ : ಸೆರೆನಾ ಮಹದಾಸೆ ಹೊಸಕಿ ಹಾಕಿದ ಒಸಾಕಗೆ ಚೊಚ್ಚಲ ಗ್ರಾಂಡ್‌ಸ್ಲಾಮ್ ಸಿರಿ

ಕೆರ್ಬರ್, ಸಿಬುಲ್ಕೋವಾ ಮುನ್ನಡೆ

ವಿಂಬಲ್ಡನ್ ಚಾಂಪಿಯನ್ ಏಂಜಲಿಕ್ ಕೆರ್ಬರ್ ಮತ್ತು ಡೊಮಿನಿಕಾ ಸಿಬುಲ್ಕೋವಾ ಅಮೆರಿಕದ ಸ್ಲೊವಾನಿ ಸ್ಟೀಫನ್ಸ್ ಕೂಡ ಎರಡನೇ ಸುತ್ತಿನ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಮುನ್ನಡೆ ಪಡೆದರು. ಸ್ಪೇನ್ ಆಟಗಾರ್ತಿ ಕಾರ್ಲಾ ಸುವಾರೆಜ್ ನವಾರೊ ವಿರುದ್ಧದ ಪಂದ್ಯದಲ್ಲಿ ೭-೬ (೭/೪), ೬-೧ ನೇರ ಸೆಟ್‌ಗಳ ಗೆಲುವಿನೊಂದಿಗೆ ಮುನ್ನಡೆ ಪಡೆದರೆ, ಸಿಬುಲ್ಕೋವಾ, ರಷ್ಯಾದ ಡರಿಯಾ ಗಾವ್ರಿಲೋವಾ ವಿರುದ್ಧ ೬-೩, ೬-೩ ನೇರ ಸೆಟ್‌ಗಳಲ್ಲಿ ಗೆಲುವು ಪಡೆದರು.

ವನಿತೆಯರ ಮತ್ತೊಂದು ದ್ವಿತೀಯ ಸುತ್ತಿನ ಪಂದ್ಯದಲ್ಲಿ ಕಳೆದ ಬಾರಿಯ ಯುಎಸ್ ಓಪನ್ ಚಾಂಪಿಯನ್ ಸ್ಟೀಫನ್ಸ್, ಚೀನಿ ಆಟಗಾರ್ತಿ ಝೆಂಗ್ ಸೈ ಸೈ ವಿರುದ್ಧ ೬-೧, ೬-೩ ಸೆಟ್ ಗೆಲುವಿನೊಂದಿಗೆ ತೃತೀಯ ಸುತ್ತಿಗೆ ಧಾವಿಸಿದರು. ಇನ್ನು, ವುಹಾನ್ ಓಪನ್‌ನ ರನ್ನರ್‌ಅಪ್ ಅನಿಟಾ ಕೊಂಟಾವೀಟ್ ಜರ್ಮನಿಯ ಲೌರಾ ಸಿಗ್ಮಂಡ್ ವಿರುದ್ಧ ೨-೬, ೬-೩, ೬-೨ ಸೆಟ್‌ಗಳಲ್ಲಿ ಗೆಲುವು ಪಡೆದು ಮುಂದಿನ ಹಂತಕ್ಕೆ ನಡೆದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More