ಬಜರಂಗ್ ಪುನಿಯಾ, ವಿನೇಶ್ ಫೋಗಟ್ ಹೆಸರು ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು

ಭಾರತದ ಸ್ಟಾರ್ ಕುಸ್ತಿಪಟುಗಳಾದ ಬಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ಹೆಸರನ್ನು ಕೇಂದ್ರ ಕ್ರೀಡಾ ಸಚಿವಾಲಯ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು ಮಾಡಿದೆ. ಇತ್ತೀಚೆಗಷ್ಟೇ ಪ್ರದಾನ ಮಾಡಲಾದ ಖೇಲ್‌ರತ್ನ ಪ್ರಶಸ್ತಿಗೆ ತನ್ನನ್ನು ಕಡೆಗಣಿಸಲಾಗಿದೆ ಎಂದು ಬಜರಂಗ್ ಪುನಿಯಾ ಆಕ್ಷೇಪಿಸಿದ್ದರು

ಕಾಮನ್ವೆಲ್ತ್ ಸ್ವರ್ಣ ಪದಕ ವಿಜೇತ ಕುಸ್ತಿಪಟು ಬಜರಂಗ್ ಪುನಿಯಾ ಅವರನ್ನು ಸಾಂತ್ವನಗೊಳಿಸಲು ಕ್ರೀಡಾಸಚಿವಾಲಯ ಮುಂದಾದಂತಿದೆ. ಪ್ರತಿಷ್ಠಿತ ರಾಜೀವ್‌ಗಾಂಧಿ ಖೇಲ್ ರತ್ನ ಪ್ರಶಸ್ತಿಯಿಂದ ತನ್ನನ್ನು ವಂಚಿಸಿರುವ ಕ್ರೀಡಾ ಸಚಿವಾಲಯದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವುದಾಗಿ ಹೇಳಿ ಕಡೆಗೆ ತನ್ನ ನಿರ್ಧಾರದಿಂದ ಹಿಂದೆ ಸರಿದಿದ್ದರು. ಕ್ರೀಡಾ ಸಚಿವಾಲಯ ಅವರ ಹೆಸರನ್ನು ಪ್ರತಿಷ್ಠಿತ ಪದ್ಮಶ್ರೀಗೆ ಶಿಫಾರಸು ಮಾಡುವುದರೊಂದಿಗೆ ಅವರನ್ನು ಸಂಪ್ರೀತಗೊಳಿಸಿದೆ.

ಗೋಲ್ಡ್ ಕೋಸ್ಟ್ ಕೂಟದಲ್ಲಿ ಮಾತ್ರವಲ್ಲದೆ, ಜಕಾರ್ತದಲ್ಲಿನ ಏಷ್ಯಾ ಕ್ರೀಡಾಕೂಟದಲ್ಲಿ ಕೂಡ ಸ್ವರ್ಣ ಪದಕ ಗೆದ್ದ ಬಜರಂಗ್ ಪುನಿಯಾ ತಾನು ಖೇಲ್ ರತ್ನ ಪ್ರಶಸ್ತಿಗೆ ಮಿಕ್ಕೆಲ್ಲ ಕ್ರೀಡಾಪಟುಗಳಿಗಿಂತಲೂ ಯೋಗ್ಯ ವ್ಯಕ್ತಿ ಎಂದಿದ್ದರು. ಪುನಿಯಾ ಜತೆಗೆ ಏಷ್ಯಾಡ್ ಸ್ವರ್ಣ ವಿಜೇತೆ ವಿನೇಶ್ ಫೋಗಟ್ ಕೂಡ ದೇಶದ ನಾಲ್ಕನೇ ಅತ್ಯುನ್ನತ ಕ್ರೀಡಾ ಪ್ರಶಸ್ತಿಗೆ ಶಿಫಾರಸುಗೊಂಡಿದ್ದಾರೆ.

ಸಾಮಾನ್ಯವಾಗಿ ಕೇಂದ್ರದ ಪ್ರತಿಷ್ಠಿತ ಪ್ರಶಸ್ತಿಗೆ ಶಿಫಾರಸು ಮಾಡುವುದು ಆಯಾ ಕ್ರೀಡಾಪಟುಗಳು ಪ್ರತಿನಿಧಿಸುವ ಕ್ರೀಡಾ ಸಂಸ್ಥೆಗಳಿಂದ. ಯಾವುದೇ ಕ್ರೀಡಾಪಟುಗಳ ಹೆಸರುಗಳನ್ನು ಸಂಬಂಧಪಟ್ಟ ಸಂಸ್ಥೆಗಳು ಶಿಫಾರಸು ಮಾಡುವುದು ಸಂಪ್ರದಾಯ. ಹಾಗೆ ನೋಡಿದರೆ, ರೆಸ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ (ಡಬ್ಲ್ಯೂಎಫ್‌ಐ) ಪುನಿಯಾ ಮತ್ತು ವಿನೇಶ್ ಹೆಸರುಗಳನ್ನು ಶಿಫಾರಸುಮಾಡಿಲ್ಲ. ಆದರೆ, ಕ್ರೀಡಾ ಸಚಿವಾಲಯವೇ ಈ ಇಬ್ಬರು ಕುಸ್ತಿಪಟುಗಳ ಹೆಸರನ್ನು ಕೇಂದ್ರದ ಗೃಹ ಇಲಾಖೆಗೆ ಶಿಫಾರಸು ಮಾಡಿರುವುದು ವಿಶೇಷ.

ಇನ್ನು, ಖೇಲ್ ರತ್ನ ಪ್ರಶಸ್ತಿಗೂ ಮುಂಚೆ ಪದ್ಮ ಪ್ರಶಸ್ತಿಯನ್ನು ಅಥ್ಲೀಟ್‌ಗಳು ಪಡೆದ ನಿದರ್ಶನಗಳಿವೆ. ಹಾಲಿ ವಿಶ್ವ ಚಾಂಪಿಯನ್ ಹಾಗೂ ಮಹಿಳಾ ವೇಟ್‌ಲಿಫ್ಟರ್ ಸೈಕೋಮ್ ಮೀರಾಬಾಯಿ ಚಾನು ಕೂಡ ಈ ಋತುವಿನಲ್ಲಿ ವಿರಾಟ್ ಕೊಹ್ಲಿ ಜತೆಗೆ ಖೇಲ್ ರತ್ನ ಪಡೆದರೂ, ಇದಕ್ಕೂ ಮುನ್ನವೇ ಅವರು ಪದ್ಮ ಪ್ರಶಸ್ತಿ ಗಳಿಸಿದ್ದಾರೆ.

ಇದನ್ನೂ ಓದಿ : ಕುಸ್ತಿಯಲ್ಲಿ ಭಾರತದ ಹ್ಯಾಟ್ರಿಕ್‌ ಸ್ವರ್ಣಕ್ಕೆ ನೆರವಾದ ಬಜರಂಗ್ ಪುನಿಯಾ

ಖೇಲ್ ರತ್ನ ಪ್ರಶಸ್ತಿಗೆ ತನ್ನನ್ನು ಪರಿಗಣಿಸಲಿಲ್ಲ ಎಂದು ಕ್ರುದ್ಧಗೊಂಡಿದ್ದ ಬಜರಂಗ್ ಪುನಿಯಾ ನ್ಯಾಯಾಲಯದ ಮೆಟ್ಟಿಲೇರುವುದಾಗಿ ಬೆದರಿಕೆ ಹಾಕಿದ್ದರು. ವಾಸ್ತವವಾಗಿ, ಬಜರಂಗ್ ಮತ್ತು ವಿನೇಶ್‌ಗೆ ರಾಜೀವ್‌ಗಾಂಧಿ ಖೇಲ್‌ರತ್ನ ನೀಡಲು ಆಯ್ಕೆಸಮಿತಿ ಶೇ. ೮೦ರಷ್ಟು ಪಾಯಿಂಟ್ಸ್‌ಗಳನ್ನು ನೀಡಿತ್ತು. ಆದಾಗ್ಯೂ, ಕುಸ್ತಿಪಟುಗಳನ್ನು ಈ ಪ್ರಶಸ್ತಿಯಿಂದ ದೂರ ಇಡಲಾಯಿತು.

ಮೊದಲಿಗೆ, ಈ ಬೆಳವಣಿಗೆ ಕುರಿತು ಅಸಮಾಧಾನಗೊಂಡಿದ್ದ ಪುನಿಯಾ ಕಡೆಗೆ ಸೆ. ೨೦ರಂದು ಕ್ರೀಡಾ ಸಚಿವ ಹಾಗೂ ಮಾಜಿ ಒಲಿಂಪಿಯನ್ ರಾಜ್ಯವರ್ಧನ್ ಸಿಂಗ್ ರಾಠೋಡ್ ಅವರನ್ನು ಸಂಧಿಸಿ ಮಾತುಕತೆ ನಡೆಸಿದ್ದರು. ಈ ಮಾತುಕತೆಯ ವೇಳೆ ರಾಠೋಡ್, ಬಜರಂಗ್ ಅವರಿಗೆ ನೀಡಿದ ಆಶ್ವಾಸನೆಯಂತೆ ಅವರ ಹೆಸರನ್ನು ಪದ್ಮ ಪ್ರಶಸ್ತಿಗೆ ಶಿಫಾರಸು ಮಾಡಿದ್ದಾರೆ.

ಕ್ರೀಡಾ ಸಚಿವರು ನೀಡಿದ ಭರವಸೆಯ ನಂತರ ನ್ಯಾಯಾಲಯದ ಮೊರೆ ಹೋಗುವ ನಿರ್ಧಾರ ಕೈಬಿಟ್ಟ ರಾಠೋಡ್, ಬುಡಾಫೆಸ್ಟ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ನತ್ತ ಗಮನ ಹರಿಸಿದ್ದಾರೆ. ಒಟ್ಟಾರೆ, ಪದ್ಮಶ್ರೀ ಪ್ರಶಸ್ತಿ ರೇಸ್‌ನಲ್ಲಿರುವ ಸಂಗತಿ ಬಜರಂಗ್ ಪುನಿಯಾ ಅವರ ವಿಶ್ವ ಚಾಂಪಿಯನ್‌ಶಿಪ್ ಸ್ಪರ್ಧೆಗಾಗಿ ಇನ್ನಷ್ಟು ತಯಾರಿ ನಡೆಸಲು ಹೊಸ ಹುರುಪು ತುಂಬಿದಂತಾಗಿದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More