ಆಯ್ಕೆ ನನಗೆ ಸಂಬಂಧಿಸಿದ್ದಲ್ಲ; ಕರುಣ್ ವಿಷಯದಲ್ಲಿ ಕೈತೊಳೆದುಕೊಂಡ ಕೊಹ್ಲಿ

ಕರುಣ್ ನಾಯರ್ ಆಯ್ಕೆ ವಿವಾದಕ್ಕೆ ಪ್ರತಿಕ್ರಿಯಿಸಿರುವ ವಿರಾಟ್ ಕೊಹ್ಲಿ, ಆಯ್ಕೆಗೂ ತನಗೂ ಸಂಬಂಧಿಸಿಲ್ಲ ಎಂದು ಕೈತೊಳೆದುಕೊಂಡಿದ್ದಾರೆ. ಆದರೆ, ನಾಯಕನಾದವನು ತನಗೆ ಮೆಚ್ಚುಗೆಯಾದವರಿಗಾಗಿ ಲಾಬಿ ನಡೆಸುವುದು ಭಾರತೀಯ ಕ್ರಿಕೆಟ್‌ನಲ್ಲಿ ಲಾಗಾಯ್ತಿನಿಂದ ನಡೆದುಬಂದದ್ದೇ!

ಮೊದಲಿಗೆ, ರವೀಂದ್ರ ಜಡೇಜಾ ತದನಂತರದಲ್ಲಿ ಹರ್ಭಜನ್ ಸಿಂಗ್ ಹೀಗೆ ಒಬ್ಬರಾದ ಮೇಲೊಬ್ಬರು ಭಾರತೀಯ ಕ್ರಿಕೆಟ್ ಆಯ್ಕೆಸಮಿತಿಯ ಆಟಗಾರರ ಮಾನದಂಡದ ಬಗೆಗೆ ಎತ್ತುತ್ತಿರುವ ಪ್ರಶ್ನೆಗೆ ಸಮರ್ಪಕ ಉತ್ತರ ನೀಡದೆ ಎಲ್ಲರೂ ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಆ ಪೈಕಿಗೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯೂ ಸೇರಿದ್ದಾರೆ.

ಪ್ರವಾಸಿ ವೆಸ್ಟ್‌ಇಂಡೀಸ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಸರಣಿಯ ಮುನ್ನಾ ದಿನವಾದ ಬುಧವಾರದಂದು (ಅ. ೩) ಮಾಧ್ಯಮದವರ ಜತೆಗೆ ಮಾತನಾಡಿದ ಕೊಹ್ಲಿಗೆ ನಿರೀಕ್ಷೆಯಂತೆಯೇ ಕರುಣ್ ನಾಯರ್ ಆಯ್ಕೆ ವಿವಾದದ ಪ್ರಶ್ನೆ ಎದುರಾಯಿತು. ಉತ್ತರ ಸಿದ್ದವಾಗಿರಿಸಿಕೊಂಡಂತಿದ್ದ ಕೊಹ್ಲಿ, “ಪ್ರತಿಯೊಬ್ಬರೂ ತಮ್ಮದೇ ಜವಾಬ್ದಾರಿಯುತ ಕಾರ್ಯವನ್ನು ನಿರ್ವಹಿಸುತ್ತಿದ್ದು, ಆಯ್ಕೆಸಮಿತಿಯೂ ಅದರದೇ ಹೊಣೆಗಾರಿಕೆಯಲ್ಲಿದೆ. ಹೀಗಾಗಿ, ಆಟಗಾರರ ಆಯ್ಕೆ ವಿಷಯದಲ್ಲಿ ನನ್ನ ಪಾತ್ರವೇನೂ ಇಲ್ಲ,’’ ಎಂದು ಕೊಹ್ಲಿ ನುಡಿದರು.

ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಗೆ ಆಯ್ಕೆಯಾಗಿದ್ದ ಕರುಣ್ ನಾಯರ್, ಕೇವಲ ಬೆಂಚ್ ಕಾಯಿಸಿದ್ದರೇ ಹೊರತು ಅವರನ್ನು ಆಡುವ ಅಂತಿಮ ಹನ್ನೊಂದರ ಬಳಗದಲ್ಲಿ ಕಾಣಿಸಿರಲಿಲ್ಲ. ಕನಿಷ್ಠ ಕೊನೆಯ ಎರಡು ಟೆಸ್ಟ್‌ಗಳಲ್ಲಾದರೂ ಕರುಣ್‌ಗೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯೂ ಹುಸಿಯಾಗಿ, ಹೈದರಾಬಾದ್ ಆಟಗಾರ ಹನುಮ ವಿಹಾರಿ ಸ್ಥಾನ ಪಡೆದಿದ್ದರು. ಆಯ್ಕೆಸಮಿತಿ ಮುಖ್ಯಸ್ಥ ಎಂ ಎಸ್ ಕೆ ಪ್ರಸಾದ್, ತಮ್ಮ ರಾಜ್ಯದ ಆಟಗಾರನಿಗೆ ಮನ್ನಣೆ ನೀಡಿದ್ದುದು ವಿಹಾರಿ ಆಯ್ಕೆಯಲ್ಲಿ ನಿಚ್ಚಳವಾಗಿತ್ತು.

ಇದನ್ನೂ ಓದಿ : ಕರುಣ್‌ಗೆ ಮಾತ್ರವಲ್ಲ, ಮಯಾಂಕ್‌ಗೂ ಪ್ರಸಾದ್ ಹೀಗೆಯೇ ಹೇಳಿದ್ದರು!
ಮುಖ್ಯ ಆಯ್ಕೆಗಾರ ಈಗಾಗಲೇ ಕರುಣ್ ಆಯ್ಕೆ ಕುರಿತು ಸ್ಪಷ್ಟನೆ ನೀಡಿದ ನಂತರ ಮತ್ತೊಮ್ಮೆ ನನ್ನನ್ನು ಆ ಕುರಿತು ಪ್ರಶ್ನಿಸುವುದು ಉಚಿತವಲ್ಲ
ವಿರಾಟ್ ಕೊಹ್ಲಿ, ಭಾರತ ತಂಡದ ನಾಯಕ

“ಕರುಣ್ ನಾಯರ್ ಆಯ್ಕೆ ವಿಷಯದಲ್ಲಿ ಈಗಾಗಲೇ ಆಯ್ಕೆಸಮಿತಿಯ ಸದಸ್ಯರು ಮಾತನಾಡಿ ಆಗಿದೆ. ಹೀಗಿರುವಾಗ, ಈ ವಿಷಯದಲ್ಲಿ ನಾನು ಏನನ್ನೂ ಹೇಳಲು ಬಯಸುವುದಿಲ್ಲ. ಹಾಗೆ ಏನನ್ನಾದರೂ ಹೇಳುವುದು ಕೂಡ ಸರಿಯಲ್ಲ. ಪ್ರತಿಯೊಂದನ್ನೂ ನೀವು ಸುನಾಯಾಸವಾಗಿ ಒಂದನ್ನೊಂದು ಬೆಸೆಯಬಲ್ಲಿರಿ. ಮತ್ತು ಒಂದು ವೃತ್ತ ವನ್ನು ಕೂಡ ಎಳೆಯಬಲ್ಲಿರಿ. ಪ್ರತಿಯೊಬ್ಬರೂ ತಮ್ಮಗಳ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಿದರೆ, ಹೊರಗಿನವರು ಆಡುವ ಮಾತಿಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ,’’ ಎಂದು ಕೊಹ್ಲಿ ನುಡಿದರು.

“ಇಂಥ ಆಟಗಾರನನ್ನು ಆರಿಸಬೇಕು, ಇಂಥ ಆಟಗಾರನ ಅಗತ್ಯವಿಲ್ಲ ಎಂಬಿತ್ಯಾದಿ ವಿಷಯಗಳು ನನಗೆ ಸಂಬಂಧಿಸಿದ್ದಲ್ಲ. ಒಂದು ತಂಡವಾಗಿ ನಾವು ಏನನ್ನು ನೀಡಬಲ್ಲೆವೊ ಅದರತ್ತ ಹೆಚ್ಚು ಗಮನ ವಹಿಸುತ್ತೇವೆ. ಇಷ್ಟಕ್ಕೂ ಆಯ್ಕೆವಿಷಯದಲ್ಲಿ ಜಂಟಿ ತೀರ್ಮಾನವೇನೂ ಇಲ್ಲ. ಈ ಕೆಲಸದಲ್ಲಿರುವವರು ಅದನ್ನು ಗಮನಿಸುತ್ತಾರೆ. ಜನತೆ ಕೂಡ ಪ್ರತಿಯೊಂದನ್ನು ಒಂದೊಂದಕ್ಕೆ ಬೆಸೆಯುವುದನ್ನು ನಿಲ್ಲಿಸಬೇಕು. ಏಕೆಂದರೆ, ಸತ್ಯ ಸಂಗತಿ ಜನತೆಗೆ ಗೊತ್ತಿರುವುದಿಲ್ಲ,’’ ಎಂದು ಹೇಳಿದ ಕೊಹ್ಲಿ, ಆ ಮೂಲಕ ಆಯ್ಕೆ ವಿಷಯದಲ್ಲಿ ತಂಡದ ನಾಯಕನಾಗಲೀ, ತಂಡದ ಮ್ಯಾನೇಜ್‌ಮೆಂಟ್ ಆಗಲೀ ಹಸ್ತಕ್ಷೇಪ ಮಾಡುವುದಿಲ್ಲ ಎಂದೆನ್ನಲು ಪ್ರಯತ್ನಿಸಿದರು.

ಅಂದಹಾಗೆ, ತಂಡದ ನಾಯಕನಾದವನು ಕೆಲವು ಆಟಗಾರರತ್ತ ಒಲವು ತಳೆದರೆ ಅವರ ಪರ ಲಾಬಿ ನಡೆಸುವ ಸಂಪ್ರದಾಯ ಭಾರತೀಯ ಕ್ರಿಕೆಟ್‌ನಲ್ಲಿ ಹೊಸತಲ್ಲ. ಧೋನಿ ನಾಯಕನಾಗಿದ್ದಾಗಲೂ, ರವೀಂದರ ಜಡೇಜಾ, ಆರ್ ಅಶ್ವಿನ್ ಮುಂತಾದವರ ಪರ ಲಾಬಿ ನಡೆಸಿದರೆ, ಗೌತಮ್ ಗಂಭೀರ್, ವಿರೇಂದ್ರ ಸೆಹ್ವಾಗ್ ವಿರುದ್ಧ ಧೋನಿ ಕೆಲಸ ಮಾಡಿದ್ದರು ಎಂಬ ಆರೋಪಕ್ಕೆ ಸಿಲುಕಿದ್ದರು. ಅಷ್ಟೇಕೆ, ಸ್ವತಃ ಕೊಹ್ಲಿ ಕೂಡ ಕರ್ನಾಟಕದ ಮತ್ತೋರ್ವ ಬ್ಯಾಟ್ಸ್‌ಮನ್ ಕೆ ಎಲ್ ರಾಹುಲ್ ಅವರ ಪರ ಇದ್ದಾರೆ ಎಂಬ ಮಾತುಗಳೂ ಚಾಲ್ತಿಯಲ್ಲಿವೆ. ಏನೇ ಆಗಲಿ, ಓರ್ವ ಆಟಗಾರನನ್ನು ಅದೂ ಭಾರತದ ಪರ ತ್ರಿಶತಕ ಬಾರಿಸಿದ ಎರಡನೇ ಏಕೈಕ ಆಟಗಾರನೆನಿಸಿದ ಕರುಣ್ ಅವರನ್ನು ಆಯ್ಕೆಸಮಿತಿ ನಡೆಸಿಕೊಂಡ ಬಗೆನ ಆಕ್ಷೇಪದಲ್ಲಿ ತಥ್ಯವಿದೆ ಎಂದೇ ಹೇಳಲಾಗುತ್ತಿದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More