ಚೀನಾ ಓಪನ್ ಟೆನಿಸ್| ವೋಜ್ನಿಯಾಕಿ, ಒಸಾಕ ಕ್ವಾರ್ಟರ್‌ಗೆ, ಕೆರ್ಬರ್‌ಗೆ ಆಘಾತ

ಚೀನಾ ಓಪನ್ ಟೆನಿಸ್ ಟೂರ್ನಿಯಲ್ಲಿ ವಿಂಬಲ್ಡನ್ ಚಾಂಪಿಯನ್ ಏಂಜಲಿಕ್ ಕೆರ್ಬರ್‌ ಹೋರಾಟಕ್ಕೆ ತೆರೆಬಿದ್ದಿದೆ. ಆದರೆ, ಕೆರೋಲಿನ್ ವೋಜ್ನಿಯಾಕಿ ಕ್ವಾರ್ಟರ್‌ಫೈನಲ್ ತಲುಪುವುದರೊಂದಿಗೆ ಡಬ್ಲ್ಯೂಟಿಎ ಫೈನಲ್ಸ್‌ಗೆ ಅರ್ಹತೆ ಪಡೆದರು. ಇನ್ನು, ನವೊಮಿ ಒಸಾಕ ಕೂಡ ಎಂಟರ ಘಟ್ಟಕ್ಕೆ ಧಾವಿಸಿದರು

ವಿಶ್ವದ ಎರಡನೇ ಶ್ರೆಯಾಂಕಿತ ಆಟಗಾರ್ತಿ ವೋಜ್ನಿಯಾಕಿ ಗೆಲುವಿನ ಓಟ ಸಾಗಿದೆ. ಚೀನಾ ಓಪನ್ ಪಂದ್ಯಾವಳಿಯಲ್ಲಿ ಅಂತಿಮ ಎಂಟರ ಘಟ್ಟಕ್ಕೆ ಧಾವಿಸಿರುವ ವೋಜ್ನಿಯಾಕಿ ಸಿಂಗಪುರದಲ್ಲಿ ನಡೆಯಲಿರುವ ಎಸ್‌ಸಿ ಗ್ಲೋಬಲ್ ಪ್ರಾಯೋಜಿತ ಬಿಎನ್‌ಪಿ ಪರಿಬಾಸ್ ಡಬ್ಲ್ಯೂಟಿಎ ಫೈನಲ್ಸ್ ಪಂದ್ಯಾವಳಿಗೆ ಅರ್ಹತೆ ಗಳಿಸಿದರು.

ಬೀಜಿಂಗ್‌ನಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಗುರುವಾರ (ಅ. ೪) ವನಿತೆಯರ ಸಿಂಗಲ್ಸ್ ವಿಭಾಗದ ಪ್ರೀಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ವೋಜ್ನಿಯಾಕಿ ೭-೫, ೬-೪ ನೇರ ಸೆಟ್‌ಗಳಲ್ಲಿ ಅನೆಟ್ ಕೊಂಟಾವೀಟ್ ವಿರುದ್ಧ ಗೆಲುವು ಪಡೆದರು. ಸ್ಥಿರ ಪ್ರದರ್ಶನ ನೀಡಿದ ವೋಜ್ನಿಯಾಕಿ, ವುಹಾನ್ ಓಪನ್‌ನಲ್ಲಿ ರನ್ನರ್‌ಅಪ್ ಆಗಿದ್ದ ಕೊಂಟಾವೀಟ್ ಅವರನ್ನು ಮಣಿಸುವಲ್ಲಿ ಯಶಸ್ವಿಯಾದರು.

ಪಂದ್ಯದಾದ್ಯಂತ ೫೫ ಅನಗತ್ಯ ತಪ್ಪುಗಳಿಂದ ಕೊಂಟಾವೀಟ್ ವೋಜ್ನಿಯಾಕಿ ಗೆಲುವಿಗೆ ತಾವೇ ರಹದಾರಿ ನಿರ್ಮಿಸಿಕೊಟ್ಟರು. ಕೇವಲ ೩೪ ವಿನ್ನರ್‌ಗಳಿಂದ ಕೊಂಟಾವೀಟ್ ವೋಜ್ನಿಯಾಕಿ ಸವಾಲನ್ನು ಹತ್ತಿಕ್ಕುವಲ್ಲಿ ವಿಫಲವಾದರು. ಡೆನ್ಮಾರ್ಕ್ ಆಟಗಾರ್ತಿ ವೋಜ್ನಿಯಾಕಿ ಆರು ಬಾರಿ ಇಸ್ಟೋನಿಯಾದ ಕೊಂಟಾವೀಟ್ ಸರ್ವ್ ಮುರಿಯುವಲ್ಲಿ ಸಫಲವಾದರು.

ಪ್ಲಿಸ್ಕೋವಾಗೆ ಸೋಲು

ಇದನ್ನೂ ಓದಿ : ಚೀನಾ ಓಪನ್ ಟೆನಿಸ್ | ತೃತೀಯ ಸುತ್ತಿಗೆ ಲಗ್ಗೆ ಹಾಕಿದ ನವೊಮಿ ಒಸಾಕ

ಚೀನಾ ಓಪನ್ ಪಂದ್ಯಾವಳಿಯಲ್ಲಿ ಸ್ಥಳಿಯ ಆಟಗಾರ್ತಿ ವಾಂಗ್ ಕಿಯಾಂಗ್ ಆಕರ್ಷಕ ಆಟದೊಂದಿಗೆ ಮುನ್ನಡೆ ಸಾಧಿಸಿದರು. ತೃತೀಯ ಸುತ್ತಿನ ಪಂದ್ಯದಲ್ಲಿ ಕರೊಲಿನಾ ಪ್ಲಿಸ್ಕೋವಾ ವಿರುದ್ಧ ೬-೪, ೬-೪ ಎರಡು ನೇರ ಸೆಟ್‌ಗಳಲ್ಲಿ ಗೆಲುವು ಪಡೆದ ವಾಂಗ್, ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಗಿಟ್ಟಿಸಿದರು.

ಮೊದಲ ಸೆಟ್‌ನಿಂದಲೂ ಪ್ಲಿಸ್ಕೋವಾ ವಿರುದ್ಧ ದಿಟ್ಟ ಆಟವಾಡಿದ ವಾಂಗ್, ಕೇವಲ ಒಂದೇ ಒಂದು ಬ್ರೇಕ್ ಪಾಯಿಂಟ್ಸ್ ನೀಡಿದ್ದು ಬಿಟ್ಟರೆ, ತನಗಿಂತಲೂ ಅಗ್ರ ಶ್ರೇಯಾಂಕಿತ ಆಟಗಾರ್ತಿಯ ಎದುರು ತಡವರಿಸಲಿಲ್ಲ. ಸರ್ವೀಸ್‌ನಲ್ಲಿಯೂ ಗಮನ ಸೆಳೆದ ವಾಂಗ್, ಆತ್ಮವಿಶ್ವಾಸದೊಂದಿಗೆ ಮೊದಲ ಸೆಟ್ ಗೆದ್ದು ೧-೦ ಮುನ್ನಡೆ ಪಡೆದರು. ಎರಡನೇ ಸೆಟ್‌ನಲ್ಲಿ ಪ್ಲಿಸ್ಕೋವಾ ತಿರುಗಿಬೀಳುವ ಸುಳಿವು ನೀಡುತ್ತಿದ್ದಂತೆ ಎಚ್ಚೆತ್ತ, ವಾಂಗ್ ಎರಡು ಗೇಮ್‌ಗಳ ಅಂತರದಿಂದ ಜಯಭೇರಿ ಬಾರಿಸಿದರು.

ಕೆರ್ಬರ್‌ಗೆ ಆಘಾತ

ವಿಶ್ವದ ಮಾಜಿ ನಂ ೧ ಆಟಗಾರ್ತಿ, ಜಪಾನ್‌ನ ಏಂಜಲಿಕ್ ಕೆರ್ಬರ್ ಚೀನಾ ಓಪನ್‌ನಲ್ಲಿ ಆಘಾತಕಾರಿ ಸೋಲನುಭವಿಸಿದರು. ವಿಂಬಲ್ಡನ್ ಚಾಂಪಿಯನ್ ಕೆರ್ಬರ್, ಮೂರು ಸೆಟ್‌ಗಳ ರೋಚಕ ಸೆಣಸಾಟದಲ್ಲಿ ಚೀನಾ ಆಟಗಾರ್ತಿ ಝಾಂಗ್ ಶುವಾಯಿ ವಿರುದ್ಧ ೧-೬, ೬-೨, ೦-೬ ಸೆಟ್‌ಗಳಲ್ಲಿ ಹಿನ್ನಡೆ ಅನುಭವಿಸಿದರು. ವಿಶ್ವದ ೪೫ನೇ ಶ್ರೇಯಾಂಕಿತೆ ಶುವಾಯಿಯ ಪ್ರಬಲ ಪ್ರತಿರೋಧವನ್ನು ಹತ್ತಿಕ್ಕುವಲ್ಲಿ ಕೆರ್ಬರ್ ಎಡವಿದರು. ನಿರ್ಣಾಯಕವಾದ ಮೂರನೇ ಸೆಟ್‌ನಲ್ಲಿ ಕೇವಲ ಏಳು ಪಾಯಿಂಟ್ಸ್‌ಗಳನ್ನಷ್ಟೇ ಕಲೆಹಾಕಿದ ಕೆರ್ಬರ್ ಆಘಾತಕಾರಿ ಸೋಲಿನೊಂದಿಗೆ ಟೂರ್ನಿಯಿಂದ ಹೊರಬಿದ್ದರು.

ಏತನ್ಮಧ್ಯೆ, ಜೆಕ್ ಆಟಗಾರ್ತಿ ಪೆಟ್ರಾ ಕ್ವಿಟೋವಾ ಪ್ರಸಕ್ತ ಟೂರ್ನಿಯಲ್ಲಿ ಮೊದಲ ಸುತ್ತಿಗೇ ನಿರ್ಗಮಿಸಿದರೂ, ಋತುವಿನ ಡಬ್ಲ್ಯೂಟಿಎ ಫೈನಲ್ಸ್‌ಗೆ ಅರ್ಹತೆ ಗಳಿಸುವಲ್ಲಿ ಸಫಲವಾದರು. ಜೆಕ್ ಆಟಗಾರ್ತಿ ಕಟರಿನಾ ಸಿನಿಯಕೋವಾ ವಿಶ್ವದ ೧೧ನೇ ಶ್ರಯಾಂಕಿತೆ ಹಾಗೂ ಹಾಲೆಂಡ್‌ನ ಕಿಕಿ ಬೆರ್ಟೆನ್ಸ್ ವಿರುದ್ಧ ೬-೪, ೬-೩ ಸೆಟ್‌ಗಳ ಗೆಲುವು ಸಾಧಿಸುತ್ತಿದ್ದಂತೆ ಕ್ವಿಟೋವಾ, ಡಬ್ಲ್ಯೂಟಿಎ ಫೈನಲ್ಸ್ ಹಾದಿ ಸುಗಮವಾಯಿತು.

ಇನ್ನು, ವನಿತೆಯರ ಇನ್ನೊಂದು ಸಿಂಗಲ್ಸ್ ವಿಭಾಗದ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಜಪಾನ್‌ನ ನವೊಮಿ ಒಸಾಕ ಮುನ್ನಡೆ ಸಾಧಿಸಿದರು. ಯುಎಸ್ ಓಪನ್ ಚಾಂಪಿಯನ್ ಒಸಾಕ, ಜರ್ಮನಿಯ ಜುಲಿಯಾ ಜಾರ್ಜರ್ಸ್ ವಿರುದ್ಧ ೬-೧, ೬-೨ ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದ್ದು, ಇದೀಗ ಮುಂದಿನ ಸುತ್ತಿನಲ್ಲಿ ಝಾಂಗ್ ವಿರುದ್ಧ ಸೆಣಸಲಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More