ಕರುಣ್ ಬಳಿಕ ಆಯ್ಕೆಸಮಿತಿ ವಿರುದ್ಧ ಮುರಳಿ ವಿಜಯ್ ಅಸಮಾಧಾನ

ಎಂಎಸ್‌ಕೆ ಪ್ರಸಾದ್ ಸಾರಥ್ಯದ ಭಾರತೀಯ ಕ್ರಿಕೆಟ್ ಆಯ್ಕೆಸಮಿತಿ ವಿರುದ್ಧ ತಮಿಳುನಾಡು ಬ್ಯಾಟ್ಸ್‌ಮನ್ ಮುರಳಿ ವಿಜಯ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಟಗಾರರ ಜತೆಗಿನ ಸಂವಹನದ ಕೊರತೆ ಎದ್ದುಕಾಣುತ್ತಿದೆ ಎಂದು ಕರುಣ್ ನಾಯರ್ ಆಕ್ಷೇಪಿಸಿದ ಬೆನ್ನಿಗೇ ಮುರಳಿ ಕೂಡ ದೂರಿದ್ದಾರೆ

ಭಾರತ ಟೆಸ್ಟ್ ತಂಡದ ಆರಂಭಿಕ ಆಟಗಾರ ಮುರಳಿ ವಿಜಯ್ ಆಯ್ಕೆಸಮಿತಿಯ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಬಳಿಕ ಮುರಳಿ ವಿಜಯ್ ಅವರನ್ನು ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಕೈಬಿಟ್ಟಿತ್ತು. ಇದೀಗ ತವರಿನಲ್ಲಿ ನಡೆಯುತ್ತಿರುವ ವೆಸ್ಟ್‌ಇಂಡೀಸ್ ವಿರುದ್ಧದ ಎರಡು ಟೆಸ್ಟ್ ಪಂದ್ಯ ಸರಣಿಯಿಂದಲೂ ಅವರನ್ನು ಕೈಬಿಡಲಾಗಿದೆ.

ತನ್ನನ್ನು ತಂಡದಿಂದ ಕೈಬಿಟ್ಟಿರುವ ಕುರಿತು ಗುರುವಾರ (ಅ. ೪) ಪ್ರತಿಕ್ರಿಯಿಸಿರುವ ಮುರಳಿ ವಿಜಯ್, “ತಂಡದಿಂದ ಯಾವುದೇ ಆಟಗಾರನನ್ನು ಕೈಬಿಟ್ಟಾಗ ಅದರ ಕಾರಣ ತಿಳಿಯುವುದು ಪ್ರತಿಯೊಬ್ಬ ಆಟಗಾರನ ಹಕ್ಕು. ಆಯ್ಕೆಸಮಿತಿಯ ಮುಖ್ಯಸ್ಥರಾಗಲೀ ಇಲ್ಲವೇ ಸಮಿತಿಯ ಬೇರಾವ ಸದಸ್ಯರೇ ಆಗಲೀ ನನ್ನನ್ನು ಏಕೆ ತಂಡದಿಂದ ಕೈಬಿಡಲಾಯಿತು ಎಂಬುದನ್ನು ತಿಳಿಸಿಲ್ಲ. ಆಟಗಾರರು ಮತ್ತು ಆಯ್ಕೆಸಮಿತಿಯ ಮಧ್ಯೆ ಖಂಡಿತವಾಗಿಯೂ ಸಂವನಹದ ಕೊರತೆ ಇದೆ,’’ ಎಂದು ‘ಮುಂಬೈ ಮಿರರ್‌’ಗೆ ತಿಳಿಸಿದ್ದಾರೆ.

“ಇಂಗ್ಲೆಂಡ್ ಸರಣಿಯ ವೇಳೆ ನಾನು ಟೀಂ ಮ್ಯಾನೇಜ್‌ಮೆಂಟ್ ಜತೆಗೆ ಚರ್ಚಿಸಿದ್ದು ಬಿಟ್ಟರೆ, ಆಯ್ಕೆಸಮಿತಿಯ ಯಾರೊಬ್ಬರೂ ನನ್ನ ಜತೆಗೆ ಮಾತನಾಡಿಲ್ಲ. ಹಿರಿಯ ಆಟಗಾರ ಹರ್ಭಜನ್ ಸಿಂಗ್ ಹೇಳಿದಂತೆ ಆಯ್ಕೆಸಮಿತಿಯ ಮಾನದಂಡಗಳ ಬಗ್ಗೆ ನನಗೆ ಸಂಶಯವಿದೆ,’’ ಎಂತಲೂ ಮುರಳಿ ಹೇಳಿಕೊಂಡಿದ್ದಾರೆ. ಅಂದಹಾಗೆ, ಬಲಗೈ ಬ್ಯಾಟ್ಸ್‌ಮನ್ ಮುರಳಿ ವಿಜಯ್ ಪ್ರಸಕ್ತ, ವಿಜಯ್ ಹಜಾರೆ ಟ್ರೋಫಿಯಲ್ಲಿ ತಮಿಳುನಾಡು ಪರ ಆಡುತ್ತಿದ್ದಾರೆ.

ಇದನ್ನೂ ಓದಿ : ಆಯ್ಕೆ ನನಗೆ ಸಂಬಂಧಿಸಿದ್ದಲ್ಲ; ಕರುಣ್ ವಿಷಯದಲ್ಲಿ ಕೈತೊಳೆದುಕೊಂಡ ಕೊಹ್ಲಿ

ಕಳೆದ ವಾರ ಮಾಜಿ ಆಫ್‌ಸ್ಪಿನ್ನರ್ ಹರ್ಭಜನ್ ಸಿಂಗ್, ಆಯ್ಕೆಸಮಿತಿಯ ವಿರುದ್ಧ ಹರಿಹಾಯ್ದಿದ್ದರು. ಕರ್ನಾಟಕದ ಕರುಣ್ ನಾಯರ್ ಅವರನ್ನು ಇಂಗ್ಲೆಂಡ್ ಸರಣಿಗೆ ಆರಿಸಿದರೂ, ಯಾವುದೇ ಪಂದ್ಯಕ್ಕೂ ಅವರಿಗೆ ಅವಕಾಶ ನೀಡದೆಹೋದದ್ದರ ಔಚಿತ್ಯವನ್ನು ಪ್ರಶ್ನಿಸಿದ್ದ ಅವರು, ಆಯ್ಕೆಯ ಮಾನದಂಡಗಳಾದರೂ ಯಾವುದು ಎಂದು ಆಯ್ಕೆಸಮಿತಿಯನ್ನು ಪ್ರಶ್ನಿಸಿದ್ದರು.

ಇನ್ನು, ಭಾರತ ತಂಡದ ಆಲ್ರೌಂಡ್ ಆಟಗಾರ ರವೀಂದ್ರ ಜಡೇಜಾ ಕೂಡ ಕರುಣ್ ನಾಯರ್ ಅವರನ್ನು ಆಯ್ಕೆಸಮಿತಿ ನಡೆಸಿಕೊಂಡದ್ದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಅವರು, ಎಂಎಸ್‌ಕೆ ಪ್ರಸಾದ್ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು, ‘ಈ ಮನುಷ್ಯ ಕರುಣ್ ವೃತ್ತಿಬದುಕನ್ನು ಹಾಳುಗೆಡವುತ್ತಿದ್ದಾರೆ,’ ಎಂದು ದೂರಿದ್ದರು.

ಡಬ್ಲ್ಯೂಟಿಎ ಫೈನಲ್ಸ್ | ಕ್ವಿಟೋವಾ ವಿರುದ್ಧ ಜಯ ಸಾಧಿಸಿದ ವೋಜ್ನಿಯಾಕಿ
ಫೇವರಿಟ್ ಭಾರತಕ್ಕೆ ವಿಶಾಖಪಟ್ಟಣದಲ್ಲೂ ಕೆರಿಬಿಯನ್ನರನ್ನು ಗೆಲ್ಲುವ ಧಾವಂತ
ವಿಶ್ವ ಕುಸ್ತಿಯಲ್ಲಿ ಎರಡು ಪದಕ ಗೆದ್ದ ಬಜರಂಗ್ ಪುನಿಯಾ ಚಾರಿತ್ರಿಕ ಸಾಧನೆ
Editor’s Pick More