ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿ ದಾಖಲೆ ಪುಟ ಸೇರಿದ ಪೃಥ್ವಿ ಶಾ

ಭಾರತೀಯ ಕ್ರಿಕೆಟ್‌ನಲ್ಲಿ ಮತ್ತೊಬ್ಬ ಕ್ರಿಕೆಟ್ ತಾರೆ ಉದಯಿಸಿದೆ. ಹತ್ತೊಂಬತ್ತು ವರ್ಷದೊಳಗಿನ ಐಸಿಸಿ ವಿಶ್ವಕಪ್‌ನಲ್ಲಿ ಭಾರತಕ್ಕೆ ಟ್ರೋಫಿ ತಂದಿತ್ತ ಪೃಥ್ವಿ ಶಾ, ಮೊದಲ ಟೆಸ್ಟ್‌ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿದ್ದಾರೆ. ಹದಿನೆಂಟರ ಹರೆಯದ ಪೃಥ್ವಿ ಸಚಿನ್ ನಂತರ ಈ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ

ಮುಂಬೈನಿಂದ ಮತ್ತೊಂದು ಅದ್ಭುತ ಕ್ರಿಕೆಟ್ ಪ್ರತಿಭೆ ಪದಾರ್ಪಣೆ ಪಂದ್ಯದಲ್ಲೇ ಶತಕದ ದಾಖಲೆ ಬರೆದಿದೆ. ಆ ಮೂಲಕ ಮೊದಲ ಪಂದ್ಯದಲ್ಲೇ ಶತಕ ದಾಖಲೆ ಬರೆದ ಭಾರತದ ಹದಿನೈದನೇ ಆಟಗಾರನಾಗಿ ಪೃಥ್ವಿ ಶಾ ಹೊರಹೊಮ್ಮಿದರು. ಪಂದ್ಯದ ಮೊದಲ ದಿನದ ಭೋಜನ ವಿರಾಮದ ನಂತರದಲ್ಲಿ ಈ ಐತಿಹಾಸಿಕ ಸಾಧನೆ ಮೆರೆದ ಪೃಥ್ವಿ, ೧೫೦ರ ದಾಖಲೆ ಸಮೀಪ ಎಡವಿದರು.

ಗುರುವಾರ (ಅ ೪) ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನಿರ್ಭಿಡೆ ಬ್ಯಾಟಿಂಗ್ ಪ್ರದರ್ಶನ ನೀಡಿದ ಪೃಥ್ವಿ ಶಾ, ವಿಂಡೀಸ್ ಬೌಲರ್‌ಗಳ ಬೆವರಿಳಿಸಿದರು. ಕೇವಲ ೯೯ ಎಸೆತಗಳಲ್ಲೇ ಮೂರಂಕಿ ಮುಟ್ಟಿದ ಪೃಥ್ವಿ ಪದಾರ್ಪಣೆ ಪಂದ್ಯದಲ್ಲೇ ಶತಕ ಬಾರಿಸಿದ ಕಿರಿಯ ಆಟಗಾರ ಎನಿಸಿದರು.

೧೮ ವರ್ಷ ೩೨೯ ದಿನಗಳ ಪೃಥ್ವಿ ಶಾ, ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ದಾಖಲಿಸಿದ ಎರಡನೇ ಕಿರಿಯ ಆಟಗಾರನೆನಿಸಿದರು. ೧೯೯೦ರ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಶತಕ ದಾಖಲಿಸಿದ ಸಚಿನ್‌ಗೆ ೧೭ ವರ್ಷ ೧೦೭ ದಿನಗಳಾಗಿತ್ತು. ಸಚಿನ್ ಅಜೇಯ ೧೧೯ ರನ್‌ಗಳೊಂದಿಗೆ ಮಿಂಚು ಹರಿಸಿದ್ದರು. ಶತಕದ ಬಳಿಕ ಪೃಥ್ವಿ ಇನ್ನಿಂಗ್ಸ್‌ನ ೫೧ನೇ ಓವರ್‌ನ ಎರಡನೇ ಎಸೆತದಲ್ಲಿ ದೇವೇಂದ್ರ ಬಿಶೂ ಬೌಲಿಂಗ್‌ನಲ್ಲಿ ಅವರಿಗೇ ಕ್ಯಾಚಿತ್ತು ಕ್ರೀಸ್ ತೊರೆದರು. ೧೫೪ ಎಸೆತಗಳನ್ನು ಎದುರಿಸಿದ ಪೃಥ್ವಿ, ೧೯ ಬೌಂಡರಿ ಸೇರಿದ ೧೩೪ ರನ್‌ಗಳಿಗೆ ವಿಕೆಟ್ ಒಪ್ಪಿಸಿದರು.

ದಿಗ್ಗಜರ ಜತೆ ಸೇರಿದ ಕಿಶೋರ!

ಕನ್ನಡಿಗ ಕೆ ಎಲ್ ರಾಹುಲ್ ಜತೆಗೆ ಇನ್ನಿಂಗ್ಸ್ ಆರಂಭಿಸಿದ ಪೃಥ್ವಿ ಶಾ, ವಿಂಡೀಸ್ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ನಿರ್ವಹಿಸಿ ೯೯ ಎಸೆತಗಳಲ್ಲಿ ೧೫ ಆಕ‍ರ್ಷಕ ಬೌಂಡರಿಗಳೊಂದಿಗೆ ಶತಕ ದಾಖಲಿಸಿದರು. ಇದರೊಂದಿಗೆ ಭಾರತದ ಕ್ರಿಕೆಟ್ ದಿಗ್ಗಜರಾದ ಲಾಲ ಅಮರ್‌ನಾಥ್, ಮೊಹಮದ್ ಅಜರುದ್ದೀನ್ ಹಾಗೂ ಸೌರವ್ ಗಂಗೂಲಿ ಅವರೊಂದಿಗೆ ಪೃಥ್ವಿ ಸೇರ್ಪಡೆಯಾದರು.

ಅಮರ್‌ನಾಥ್ ಜತೆಗೆ ಅಜರುದ್ದೀನ್, ಗಂಗೂಲಿ, ದೀಪಕ್ ಶೋಧಾನ್, ಎ ಜಿ ಕೃಪಾಲ್ ಸಿಂಗ್, ಅಬ್ಬಾಸ್ ಅಲಿ ಬೇಗ್, ಹನುಕಾಂತ್ ಸಿಂಗ್, ಜಿ ವಿಶ್ವನಾಥ್, ಸುರೀಂದರ್ ಅಮರ್‌ನಾಥ್, ಮೊಹಮದ್ ಅಜರುದ್ದೀನ್, ಪ್ರವೀಣ್ ಅಮ್ರೆ, ಸೌರವ್ ಗಂಗೂಲಿ, ವಿರೇಂದ್ರ ಸೆಹ್ವಾಗ್, ಸುರೇಶ್ ರೈನಾ, ಶಿಖರ್ ಧವನ್, ರೋಹಿತ್ ಶರ್ಮಾ ಕೂಡ ತಮ್ಮ ಟೆಸ್ಟ್ ವೃತ್ತಿಬದುಕನ್ನು ಶತಕದೊಂದಿಗೆ ಆರಂಭಿಸಿದ್ದರು.

ಏತನ್ಮಧ್ಯೆ, ಟೆಸ್ಟ್ ಇತಿಹಾಸದಲ್ಲೇ ಕಿರಿಯ ವಯಸ್ಸಿನಲ್ಲಿಯೇ ಶತಕ ದಾಖಲಿಸಿದ ಜಗತ್ತಿನ ಏಳನೇ ಆಟಗಾರನೆನಿಸಿದರು. ಬಾಂಗ್ಲಾದೇಶದ ಮೊಹಮದ್ ಅಶ್ರಫುಲ್ ಅಗ್ರಸ್ಥಾನದಲ್ಲಿದ್ದು, ಮುಷ್ತಾಕ್ ಅಹಮದ್, ಸಚಿನ್ ತೆಂಡೂಲ್ಕರ್, ಹ್ಯಾಮಿಲ್ಟನ್ ಮಸಕಾಜ, ಇಮ್ರಾನ್ ನಾಜಿರ್, ಸಲೀಮ್ ಮಲಿಕ್ ಈ ಪಟ್ಟಿಯಲ್ಲಿದ್ದಾರೆ. ಇನ್ನು, ೧೦೦ ಎಸೆತಗಳ ಒಳಗೆ ಪದಾರ್ಪಣೆ ಪಂದ್ಯದಲ್ಲಿ ಶತಕ ಬಾರಿಸಿದ ಮೂರನೇ ಕಿರಿಯ ಆಟಗಾರ ಪೃಥ್ವಿ ಶಾ. ಶಿಖರ್ ಧವನ್ (೮೫ ಎಸೆತ), ಡ್ವೇನ್ ಸ್ಮಿತ್ ೯೩ ಎಸೆತಗಳಲ್ಲಿ ಶತಕ ಬಾರಿಸಿದ್ದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More