ಪೃಥ್ವಿ ಶತಕದ ಜತೆಗೆ ಕೆರಿಬಿಯನ್ನರ ಸಂಕಷ್ಟ ಹೆಚ್ಚಿಸಿದ ಪೂಜಾರ ಹಾಗೂ ಕೊಹ್ಲಿ ಆಟ

ಪ್ರವಾಸಿ ವೆಸ್ಟ್ಇಂಡೀಸ್ ತಂಡದ ವಿರುದ್ಧ ನಿರೀಕ್ಷೆಯಂತೆಯೇ ಆತಿಥೇಯ ಭಾರತ ತಂಡ ಮೇಲುಗೈ ಸಾಧಿಸಿದೆ. ರಾಜ್‌ಕೋಟ್‌ನಲ್ಲಿ ಗುರುವಾರ (ಅ. ೪) ಶುರುವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಸಂಪೂರ್ಣ ಪ್ರಭುತ್ವ ಮೆರೆದ ಭಾರತ ತಂಡ, ದಿನಾಂತ್ಯಕ್ಕೆ ೮೯ ಓವರ್‌ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೩೬೪ ರನ್ ಕಲೆಹಾಕಿತು

ಯುವ ಆಟಗಾರನ ಮನಮೋಹಕ ಆಟಕ್ಕೆ ಟೆಸ್ಟ್ ತಜ್ಞನೆಂದೇ ಹೆಸರಾದ ಚೇತೇಶ್ವರ ಪೂಜಾರ ಭರ್ಜರಿ ಬೆಂಬಲ ನೀಡಿದರೆ, ಇವರಿಬ್ಬರ ಬಳಿಕ ಕೆರಿಬಿಯನ್ನರ ಸಂಕಷ್ಟ ಹೆಚ್ಚಿಸಿದ್ದು ನಾಯಕ ವಿರಾಟ್ ಕೊಹ್ಲಿ. ಪೃಥ್ವಿ ಶಾ (೧೩೪) ಶತಕದ ನಂತರ ಚೇತೇಶ್ವರ ಪೂಜಾರ (೮೬) ಮತ್ತು ಕೊಹ್ಲಿ (ಔಟಾಗದೆ ೭೨) ದಾಖಲಿಸಿದ ಅರ್ಧಶತಕಗಳಿಂದ ಭಾರತ ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ದಿನವೇ ಬೃಹತ್ ಮೊತ್ತದ ಸುಳಿವು ನೀಡಿತು. ಮೊದಲ ದಿನಾಂತ್ಯಕ್ಕೆ ನಾಯಕ ವಿರಾಟ್ ಜತೆಗೆ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ (೧೭) ಕ್ರೀಸ್‌ನಲ್ಲಿ ಉಳಿದಿದ್ದು, ಭಾರತ ಸಂಪೂರ್ಣ ಪ್ರಾಬಲ್ಯ ಮೆರೆಯಿತು.

ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಬೆಳಿಗ್ಗೆ ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆದರೆ, ಭಾರತದ ಆರಂಭ ಅತ್ಯಂತ ದಯನೀಯವಾಗಿತ್ತು. ಯುವ ಆಟಗಾರ ಪೃಥ್ವಿ ಜತೆಗೂಡಿ ಕ್ರೀಸ್‌ಗಿಳಿದ ಕರ್ನಾಟಕದ ಕೆ ಎಲ್ ರಾಹುಲ್ (೦) ಮೊದಲ ಓವರ್‌ನಲ್ಲೇ ವಿಕೆಟ್ ಒಪ್ಪಿಸಿ ಹೊರನಡೆದರು. ವೇಗಿ ಶಾನಾನ್ ಗೇಬ್ರಿಯಲ್ ಅವರನ್ನು ಎಲ್‌ಬಿ ಬಲೆಗೆ ಕೆಡವಿದರು.

ಆದರೆ, ಕೆರಿಬಿಯನ್ನರ ಈ ಆರಂಭಿಕ ಆರ್ಭಟ ಹೆಚ್ಚು ಕಾಲ ಉಳಿಯಲು ಪೃಥ್ವಿ ಶಾ ಮತ್ತು ಪೂಜಾರ ಬಿಡಲಿಲ್ಲ. ಅದ್ಭುತ ಸಂಯೋಜನೆಯಲ್ಲಿ ಸಾಗಿದ ಈ ಜೋಡಿ ವಿಂಡೀಸ್ ಬೌಲರ್‌ಗಳ ಪಾಲಿಗೆ ಕಂಟಕವಾಯಿತು. ನಿಷ್ಕ್ರಿಯ ಬೌಲಿಂಗ್‌ನ ಲಾಭ ಪಡೆದ ಈ ಜೋಡಿ ಮಧ್ಯಾಹ್ನದ ಭೋಜನ ವಿರಾಮದ ಹೊತ್ತಿಗೆ ಕೇವಲ ಒಂದು ವಿಕೆಟ್ ನಷ್ಟಕ್ಕೆ ೧೩೩ ರನ್ ಗಳಿಸಿ ರಾಹುಲ್ ವಿಕೆಟ್ ಪತನ ತಂಡವನ್ನು ಬಾಧಿಸದಂತೆ ನೋಡಿಕೊಂಡಿತು.

ಇದನ್ನೂ ಓದಿ : ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿ ದಾಖಲೆ ಪುಟ ಸೇರಿದ ಪೃಥ್ವಿ ಶಾ

ಭೋಜನ ವಿರಾಮದ ನಂತರದಲ್ಲಿಯೂ ಪೃಥ್ವಿ ಶಾ ಮತ್ತು ಪೂಜಾರ ವಿಂಡೀಸಿಗರನ್ನು ಕಾಡಿದರು. ಅಂತಿಮವಾಗಿ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಶೆರ್ಮಾನ್ ಲೆವಿಸ್ ಯಶಸ್ವಿಯಾದರು. ಶತಕದತ್ತ ಮುನ್ನಡೆದಿದ್ದ ಪೂಜಾರ ಇನ್ನಿಂಗ್ಸ್‌ನ ೪೩ನೇ ಓವರ್‌ನ ಕೊನೇ ಎಸೆತದಲ್ಲಿ ಡೌವ್ರಿಚ್‌ಗೆ ಕ್ಯಾಚಿತ್ತು ಹೊರಬಿದ್ದರು. ಎರಡನೇ ವಿಕೆಟ್‌ಗೆ ಈ ಜೋಡಿ ೨೦೬ ರನ್‌ಗಳ ಅದ್ಭುತ ಜತೆಯಾಟವಾಡಿ ಭಾರತದ ಆಕ್ರಮಣಕಾರಿ ಆಟಕ್ಕೆ ಭದ್ರ ಬುನಾದಿ ಹಾಕಿತು.

ಇತ್ತ ಪೃಥ್ವಿ ಅಂತೂ ಅಮೋಘ ಬ್ಯಾಟಿಂಗ್‌ನೊಂದಿಗೆ ಮುನ್ನಡೆದರು. ಇನ್ನು, ಪೂಜಾರ ನಿರ್ಗಮನದ ನಂತರ ಆಡಲಿಳಿದ ವಿರಾಟ್ ಕೊಹ್ಲಿ ಕೂಡ ವಿಂಡೀಸ್ ಬೌಲರ್‌ಗಳನ್ನು ದಂಡಿಸಿದರು. ಚೊಚ್ಚಲ ಟೆಸ್ಟ್ ಶತಕದೊಂದಿಗೆ ೧೫೦ರ ಸಮೀಪ ಸಾಗಿದ್ದ ಪೃಥ್ವಿ ಅವರೊಂದಿಗೆ ಕೊಹ್ಲಿ ಹೆಚ್ಚು ಕಾಲ ಆಡಲಾಗಲಿಲ್ಲ. ೫೧ನೇ ಓವರ್‌ನಲ್ಲಿ ದೇವೇಂದ್ರ ಬಿಶೂ ಪೃಥ್ವಿಯನ್ನು ಬಲಿಪಡೆದು ಕ್ರೀಸ್ ತೊರೆಯುವಂತೆ ಮಾಡಿದರು.

ಪೃಥ್ವಿ ಕ್ರೀಸ್ ತೊರೆದ ನಂತರದಲ್ಲಿ ಕ್ರೀಸ್‌ಗಿಳಿದ ಅಜಿಂಕ್ಯ ರೆಹಾನೆ (೪೧: ೯೨ ಎಸೆತ, ೫ ಬೌಂಡರಿ) ೧೦೫ ರನ್‌ಗಳ ಶತಕದ ಜತೆಯಾಟದಲ್ಲಿ ವಿಂಡೀಸ್‌ಗೆ ಉರುಳಾದರು. ಮತ್ತೊಂದು ಸೊಗಸಾದ ಜತೆಯಾಟ ಕಂಡ ಭಾರತ ದಿನಾಂತ್ಯದ ಹೊತ್ತಿಗೆ ರಹಾನೆ ಅವರನ್ನು ಕಳೆದುಕೊಂಡಿತಾದರೂ, ದಿನದ ಗೌರವಕ್ಕೆ ಭಾಜನವಾಯಿತು. ಇಂಗ್ಲೆಂಡ್‌ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಏಷ್ಯಾ ಕಪ್‌ ಪಂದ್ಯಾವಳಿಯಿಂದ ವಿಶ್ರಾಂತಿ ಪಡೆದರೂ, ಅದೇ ಫಾರ್ಮ್‌ನಲ್ಲಿರುವುದು ಗಮನಾರ್ಹ.

ಶಕ್ತಿಮೀರಿ ಹೋರಾಟ ನಡೆಸಿದ ವೆಸ್ಟ್‌ಇಂಡೀಸ್ ಪರ ಶಾನನ್ ಗೇಬ್ರಿಯಲ್, ಶೆರ್ಮಾನ್ ಲೆವಿಸ್, ದೇವೇಂದ್ರ ಬಿಶೂ ಹಾಗೂ ರೋಸ್ಟನ್ ಚೇಸ್ ತಲಾ ಒಂದೊಂದು ವಿಕೆಟ್ ಗಳಿಸಿದರು. ಸ್ಪಿನ್ನರ್ ಬಿಶೂ ಅಂತೂ ೧೧೩ ರನ್‌ಗಳಿಗೆ ಕೇವಲ ೧ ವಿಕೆಟ್ ಪಡೆದು ದುಬಾರಿಯಾದರು.

ಸಂಕ್ಷಿಪ್ತ ಸ್ಕೋರ್

ಭಾರತ ಮೊದಲ ಇನ್ನಿಂಗ್ಸ್: ೮೯ ಓವರ್‌ಗಳಲ್ಲಿ ೩೬೪/೪ (ಪೃಥ್ವಿ ಶಾ ೧೩೪, ಚೇತೇಶ್ವರ ಪೂಜಾರ ೮೬, ವಿರಾಟ್ ಕೊಹ್ಲಿ ೭೨*, ಅಜಿಂಕ್ಯ ರಹಾನೆ ೪೧, ರಿಷಭ್ ಪಂತ್ ೧೭*; ಶಾನಾನ್ ಗೇಬ್ರಿಯಲ್ ೬೬ಕ್ಕೆ ೧, ದೇವೇಂದ್ರ ಬಿಶೂ ೧೧೩ಕ್ಕೆ ೧)

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More