ಭಾರತದ ತ್ರಿವಳಿ ಶತಕದ ಜೊತೆಗೆ ಶಿಸ್ತುಬದ್ಧ ಬೌಲಿಂಗ್‌ಗೆ ಬೆದರಿದ ವಿಂಡೀಸ್

ಯುವ ಆಟಗಾರ ಪೃಥ್ವಿ ಶಾ (೧೩೪), ನಾಯಕ ಕೊಹ್ಲಿ (೧೩೯) ಮತ್ತು ಜಡೇಜಾ (೧೦೦*) ಶತಕದ ನಂತರ, ಭಾರತೀಯ ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ವಿಂಡೀಸ್ ನಲುಗಿತು. 2ನೇ ದಿನಾಂತ್ಯಕ್ಕೆ ವಿಂಡೀಸ್ ೬ ವಿಕೆಟ್ ನಷ್ಟಕ್ಕೆ ೯೪ ರನ್ ಗಳಿಸಿ ಸೋಲಿನತ್ತ ಮುಖ ಮಾಡಿದೆ

ಭಾರತ ವಿರುದ್ಧದ ಎರಡು ಟೆಸ್ಟ್ ಪಂದ್ಯ ಸರಣಿಯಲ್ಲಿ ವಿಂಡೀಸ್ ತಂಡ ೦-೨ ಅಂತರದಿಂದ ಕ್ಲೀನ್‌ಸ್ವೀಪ್‌ಗೆ ಒಳಗಾಗಲಿದೆ ಎಂಬ ಕಾರ್ಲ್ ಹೂಪರ್ ಮಾತನ್ನು ಕ್ರೆಗ್ ಬ್ರಾಥ್‌ವೇಟ್ ಸಾರಥ್ಯದ ವಿಂಡೀಸ್ ತಂಡ ನಿಜವಾಗಿಸುವತ್ತ ಸಾಗಿದೆ. ಆತಿಥೇಯ ಭಾರತದ ಕೈಯಲ್ಲಿ ಸಿಲುಕಿರುವ ವಿಂಡೀಸ್ ತೀವ್ರ ಸಂಕಷ್ಟದಲ್ಲಿದ್ದು, ಇನ್ನಿಂಗ್ಸ್ ಸೋಲಿನ ಸುಳಿಗೆ ಸಿಲುಕಿರುವುದು ಸ್ಪಷ್ಟವಾಗಿದೆ.

ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕೊಹ್ಲಿ ಪಡೆ ಸಂಪೂರ್ಣ ಪ್ರಭುತ್ವ ಸಾಧಿಸಿದೆ. ಎರಡನೇ ದಿನದಾಟ ನಿಂತಾಗ ವಿಂಡೀಸ್ ಪರ ರೋಸ್ಟನ್ ಚೇಸ್ (೨೭) ಮತ್ತು ಕೀಮೊ ಪೌಲ್ ೧೩ ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಇನ್ನೂ ೫೫೫ ರನ್ ಹಿನ್ನಡೆಯಲ್ಲಿರುವ ವೆಸ್ಟ್‌ಇಂಡೀಸ್, ಪಂದ್ಯದಲ್ಲಿ ಹಿಡಿತ ಸಾಧಿಸಲು ಪವಾಡವನ್ನೇ ಎದುರುನೋಡಬೇಕಿದೆಯೇ ಹೊರತು, ಮತ್ತಾವ ದಾರಿಯೂ ಅದರ ಮುಂದೆ ಉಳಿದಿಲ್ಲ.

ಇದನ್ನೂ ಓದಿ : ವೇಗವಾಗಿ ೨೪ ಟೆಸ್ಟ್ ಶತಕದ ದಾಖಲೆ ಬರೆದ ಟೀಂ ಇಂಡಿಯಾ ಕ್ಯಾಪ್ಟನ್ ಕೊಹ್ಲಿ

೯ ವಿಕೆಟ್‌ಗಳಿಗೆ ೬೪೯ ರನ್‌ಗಳಿಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡ ಭಾರತದ ವಿರುದ್ಧ ಇನ್ನಿಂಗ್ಸ್ ಆರಂಭಿಸಿದ ವಿಂಡೀಸ್, ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳುತ್ತ ಸಾಗಿತಲ್ಲದೆ, ಚೇತರಿಸಿಕೊಳ್ಳಲಿಲ್ಲ. ಆರಂಭಿಕರಾದ ಬ್ರಾಥ್‌ವೇಟ್ (೨) ಮತ್ತು ಕೀರನ್ ಪೊವೆಲ್ (೧) ಎರಡಂಕಿ ದಾಟದೆ ಕ್ರೀಸ್ ತೊರೆದರು. ಇನ್ನಿಂಗ್ಸ್‌ನ ಮೂರನೇ ಓವರ್‌ನ ಎರಡನೇ ಎಸೆತದಲ್ಲಿ ಬ್ರಾಥ್‌ವೇಟ್ ಅವರನ್ನು ಮೊಹಮದ್ ಶಮಿ ಕ್ಲೀನ್ ಬೌಲ್ಡ್ ಮಾಡಿದರೆ, ಐದನೇ ಓವರ್‌ನ ಮೊದಲ ಎಸೆತದಲ್ಲಿ ಪೊವೆಲ್ ಅವರನ್ನು ಎಲ್‌ಬಿ ಬಲೆಗೆ ಕೆಡವಿದರು.

ಕೇವಲ ೭ ರನ್‌ಗೆ ಎರಡು ವಿಕೆಟ್ ಕಳೆದುಕೊಂಡ ವಿಂಡೀಸ್, ಆನಂತರದಲ್ಲಿಯೂ ಚೇತರಿಸಿಕೊಳ್ಳಲಿಲ್ಲ. ಶಾಯ್ ಹೋಪ್ (೧೦), ಶಿಮ್ರೊನ್ ಹೆಟ್ಮೆಯರ್ (೧೦), ಸುನೀಲ್ ಆಂಬ್ರಿಸ್ (೧೨) ತ್ವರಿತಗತಿಯಲ್ಲಿ ಕ್ರೀಸ್ ತೊರೆದರೆ, ವಿಕೆಟ್‌ಕೀಪರ್ ಶೇನ್ ಡೌವ್ರಿಚ್ (೧೦) ಕುಲದೀಪ್‌ ಯಾದವ್‌ಗೆ ಬೌಲ್ಡ್ ಆಗಿ ಪೆವಿಲಿಯನ್ ಸೇರಿಕೊಂಡರು. ನಿಯಮಿತವಾಗಿ ವಿಕೆಟ್ ಕಳೆದುಕೊಂಡ ವಿಂಡೀಸ್‌ ೧೦೦ ರನ್‌ಗಳ ಗಡಿಯನ್ನೂ ದಾಟಲಾಗದೆ ಆರು ವಿಕೆಟ್ ಕಳೆದುಕೊಂಡು ತತ್ತರಿಸಿತು.

ವಿರಾಟ್ ಆಟ

ಇದಕ್ಕೂ ಮುನ್ನ, ವಿಂಡೀಸ್‌ಗೆ ವಿರಾಟ್ ಆಟ ಕಂಟಕವಾಗಿ ಪರಿಣಮಿಸಿತು. ೭೨ ರನ್‌ಗಳೊಂದಿಗೆ ಎರಡನೇ ದಿನದಾಟ ಮುಂದುವರೆಸಿದ ಕೊಹ್ಲಿ, ೨೪ನೇ ಶತಕಕ್ಕೆ ಕೇವಲ ೨೮ ರನ್ ಹಿನ್ನಡೆಯಲ್ಲಿದ್ದರು. ನಿರೀಕ್ಷೆಯಂತೆಯೇ ಅವರು ಶತಕ ದಾಖಲಿಸುವುದರೊಂದಿಗೆ ಶೀಘ್ರಗತಿಯಲ್ಲಿ ೨೪ ಶತಕ ಪೂರೈಸಿದ ವಿಶ್ವದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಇನ್ನು, ಕೊಹ್ಲಿಯೊಂದಿಗೆ ೧೭ ರನ್ ಗಳಿಸಿ ಔಟಾಗದೆ ಉಳಿದಿದ್ದ ರಿಷಭ್ ಪಂತ್ (೯೨: ೮೪ ಎಸೆತ, ೮ ಬೌಂಡರಿ, ೪ ಸಿಕ್ಸರ್) ಅಂತೂ ವಿಂಡೀಸ್ ಬೌಲರ್‌ಗಳನ್ನು ಚೆಂಡಾಡಿದರು. ಆಕ್ರಮಣಕಾರಿ ಆಟವಾಡುತ್ತಾ ಕೊಹ್ಲಿಗೆ ಇನ್ನಷ್ಟು ಹುರುಪು ತುಂಬಿದ ಪಂತ್, ಕೇವಲ ೮ ರನ್‌ ಅಂತರದಿಂದ ಬಿಶೂ ಬೌಲಿಂಗ್‌ನಲ್ಲಿ ಕೀಮೊ ಪೌಲ್‌ಗೆ ಕ್ಯಾಚಿತ್ತು ಕ್ರೀಸ್ ತೊರೆದರು.

ಜಡೇಜಾ ಚೊಚ್ಚಲ ಶತಕ

ಕೊಹ್ಲಿ ಮತ್ತು ರಿಷಭ್ ಪಂತ್ ವಿರಾಟ್ ಆಟಕ್ಕೆ ಬಸವಳಿದ ವಿಂಡೀಸ್, ನಂತರದಲ್ಲಿ ರವೀಂದ್ರ ಜಡೇಜಾ ಆಟದಲ್ಲಿ ಇನ್ನಷ್ಟು ನಲುಗಿಹೋಯಿತು. ೧೩೨ ಎಸೆತ ಎದುರಿಸಿದ ಜಡೇಜಾ, ೫ ಬೌಂಡರಿ, ೫ ಸಿಕ್ಸರ್ ಸೇರಿದ ಬರೋಬ್ಬರಿ ೧೦೦ ರನ್ ಗಳಿಸಿ, ಆ ಮೂಲಕ ಟೆಸ್ಟ್ ಬದುಕಿನಲ್ಲಿ ಚೊಚ್ಚಲ ಶತಕ ದಾಖಲಿಸಿದರು. ೨೦೧೨ರ ಡಿಸೆಂಬರ್‌ನಲ್ಲಿ ಟೆಸ್ಟ್ ಬದುಕಿಗೆ ಕಾಲಿಟ್ಟಿದ್ದ ಜಡೇಜಾ, ಶತಕ ದಾಖಲಿಸಲು ೩೮ ಟೆಸ್ಟ್ ಪಂದ್ಯಗಳನ್ನು ತೆಗೆದುಕೊಂಡದ್ದು ವಿಶೇಷ.

ಭಾರತದ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಲು ಇನ್ನಿಲ್ಲದಂತೆ ಪರದಾಡಿದ ವಿಂಡೀಸ್ ಬೌಲರ್‌ಗಳ ಪೈಕಿ ಸ್ಪಿನ್ನರ್ ದೇವೇಂದ್ರ ಬಿಶೂ ೨೧೭ ರನ್‌ಗಳಿಗೆ ೪ ವಿಕೆಟ್ ಗಳಿಸಿದರು. ಇನ್ನುಳಿದಂತೆ ಶೆರ್ಮಾನ್ ಲೆವಿಸ್ ೯೩ ರನ್‌ಗಳಿಗೆ ೨ ವಿಕೆಟ್ ಗಳಿಸಿದರೆ, ಶನೋನ್ ಗೇಬ್ರಿಯಲ್, ರೋಸ್ಟನ್ ಚೇಸ್ ಮತ್ತು ಕ್ರೆಗ್ ಬ್ರಾಥ್‌ವೇಟ್ ತಲಾ ಒಂದೊಂದು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್

ಭಾರತ ಮೊದಲ ಇನ್ನಿಂಗ್ಸ್: ೧೪೯.೫ ಓವರ್‌ಗಳಲ್ಲಿ ೬೪೯/೯ (ಡಿಕ್ಲೇರ್) (ಪೃಥ್ವಿ ಶಾ ೧೩೪, ಚೇತೇಶ್ವರ ಪೂಜಾರ ೮೬, ವಿರಾಟ್ ಕೊಹ್ಲಿ ೧೩೯, ರಿಷಭ್ ಪಂತ್ ೯೨, ರವೀಂದ್ರ ಜಡೇಜಾ ೧೦೦; ದೇವೇಂದ್ರ ಬಿಶೂ ೨೧೭ಕ್ಕೆ ೪, ಶೇರ್ಮಾನ್ ಲೆವಿಸ್ ೯೩ಕ್ಕೆ ೨) ವೆಸ್ಟ್‌ಇಂಡೀಸ್ ಮೊದಲ ಇನ್ನಿಂಗ್ಸ್: ೨೯ ಓವರ್‌ಗಳಲ್ಲಿ ೯೪/೬ (ರೋಸ್ಟನ್ ಚೇಸ್ ಔಟಾಗದೆ ೨೭, ಕೀಮೊ ಪೌಲ್ ಔಟಾಗದೆ ೧೩; ಮೊಹಮದ್ ಶಮಿ ೧೧ಕ್ಕೆ ೨)

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More