ಚೀನಾ ಓಪನ್ ಟೆನಿಸ್ | ರೋಚಕ ಗೆಲುವಿನೊಂದಿಗೆ ಸೆಮಿಫೈನಲ್‌ಗೆ ಒಸಾಕ

ಪ್ರಬಲ ಪೈಪೋಟಿ ಒಡ್ಡಿದ ಸ್ಥಳೀಯ ಆಟಗಾರ್ತಿ ಶುವಾಯಿ ಝಾಂಗ್ ವಿರುದ್ಧ ಆತ್ಮವಿಶ್ವಾಸದಿಂದ ಸೆಣಸಿದ ಜಪಾನ್‌ನ ನವೊಮಿ ಒಸಾಕ, ಚೀನಾ ಓಪನ್‌ ಟೆನಿಸ್ ಪಂದ್ಯಾವಳಿಯಲ್ಲಿ ಸೆಮಿಫೈನಲ್ ತಲುಪಿದರು. ಮತ್ತೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಸಿಬುಲ್ಕೋವಾ ಸೋಲನುಭವಿಸಿ ಹೊರಬಿದ್ದರು

ಭಾವೋದ್ವೇಗವನ್ನು ಅದುಮಿಟ್ಟು ಸೆಣಸಾಡಿದ ಒಸಾಕ, ಈ ಋತುವಿನಲ್ಲಿ ಮತ್ತೊಂದು ಪ್ರಶಸ್ತಿ ಗೆಲ್ಲುವತ್ತ ದಾಪುಗಾಲಿಟ್ಟರು. ೨೪ನೇ ಗ್ರಾಂಡ್‌ಸ್ಲಾಮ್ ಗೆಲುವಿನ ಕನಸು ಕಂಡಿದ್ದ ಕೃಷ್ಣಸುಂದರಿ ಸೆರೆನಾ ವಿಲಿಯಮ್ಸ್‌ಗೆ ಆಘಾತ ನೀಡಿದ ಯುಎಸ್ ಓಪನ್ ಚಾಂಪಿಯನ್ ಒಸಾಕ ಚೀನಾ ಓಪನ್‌ ಗೆಲ್ಲಲು ಇನ್ನೆರಡು ಹೆಜ್ಜೆಗಳಷ್ಟೇ ಬಾಕಿ ಇದೆ. ಆಕರ್ಷಕ ಪ್ರದರ್ಶನ ನೀಡುತ್ತಾ ಸಾಗಿರುವ ಆಕೆ ಪ್ರಶಸ್ತಿ ಎತ್ತಿಹಿಡಿಯುವ ವಿಶ್ವಾಸದಲ್ಲಿದ್ದಾರೆ.

ಶುಕ್ರವಾರ (ಅ.೫) ನಡೆದ ವನಿತೆಯರ ಸಿಂಗಲ್ಸ್ ವಿಭಾಗದ ಮೊದಲ ಕ್ವಾರ್ಟರ್‌ಫೈನಲ್ ಸೆಣಸಾಟದಲ್ಲಿ ಒಸಾಕ, ಶ್ರೇಯಾಂಕ ರಹಿತ ಆಟಗಾರ್ತಿ ಚೀನಾದ ಝಾಂಗ್ ಶುವಾಯಿ ವಿರುದ್ಧ ೩-೬, ೬-೪, ೭-೫ ಸೆಟ್‌ಗಳಲ್ಲಿ ಗೆಲುವು ಸಾಧಿಸಿ ಮುನ್ನಡೆ ಪಡೆದರು. ೨೦ರ ಹರೆಯದ ಒಸಾಕ ಮೊದಲ ಸೆಟ್‌ನಲ್ಲಿ ಸೋಲನುಭವಿಸಿದರೂ, ಚೀನಿ ಆಟಗಾರ್ತಿಗೆ ತಿರುಗೇಟು ನೀಡುವಲ್ಲಿ ಸಫಲರಾದರು.

ಎರಡನೇ ಸೆಟ್‌ನಲ್ಲಿಯೂ ಝಾಂಗ್ ಆಕ್ರಮಣಕಾರಿ ಆಟದೊಂದಿಗೆ ಮುನ್ನುಗ್ಗಿದರು. ಎರಡು ಬಾರಿ ಸರ್ವೀಸ್ ತುಂಡರಿಸಿದ ಝಾಂಗ್, ಒಸಾಕಗೆ ಆಘಾತ ತರಿಸಿದರು. ೦-೩ ಹಿನ್ನಡೆ ಅನುಭವಿಸುತ್ತಿದ್ದಂತೆ ಜಪಾನ್ ಆಟಗಾರ್ತಿ ದುಃಖ ತಡೆದುಕೊಳ್ಳಲಾರದೆ ವಿಚಲಿತರಾದರು. ಆದರೆ, ವಿಶ್ವದ ಆರನೇ ಶ್ರೆಯಾಂಕಿತೆ ಒಸಾಕ, ಆತ್ಮವಿಶ್ವಾಸ ಕಳೆದುಕೊಳ್ಳದೆ ಮರು ಹೋರಾಟ ನಡೆಸಿ, ಕೊನೆಯ ಎರಡೂ ಸೆಟ್‌ ಗೆಲ್ಲುವುದರೊಂದಿಗೆ ನಿಟ್ಟುಸಿರುಬಿಟ್ಟರು.

ಇದನ್ನೂ ಓದಿ : ಚೀನಾ ಓಪನ್ ಟೆನಿಸ್| ವೋಜ್ನಿಯಾಕಿ, ಒಸಾಕ ಕ್ವಾರ್ಟರ್‌ಗೆ, ಕೆರ್ಬರ್‌ಗೆ ಆಘಾತ

ಸಿಬುಲ್ಕೋವಾಗೆ ಆಘಾತ

ಇನ್ನು, ಮಹಿಳೆಯರ ಸಿಂಗಲ್ಸ್ ವಿಭಾಗದ ಎರಡನೇ ಕ್ವಾರ್ಟರ್‌ಫೈನಲ್‌ನಲ್ಲಿ ಸ್ಲೊವೇಕಿಯಾ ಆಟಗಾರ್ತಿ ಡೊಮಿನಿಕಾ ಸಿಬುಲ್ಕೋವಾ ಸೋಲನುಭವಿಸಿದರು.. ಅನಸ್ಟಾಸಿಯಾ ಸೆವಾಸ್ಟೋವಾ ಎದುರು ಪರಾಭವಗೊಂಡರು. ಸಿಬುಲ್ಕೋವಾ ಎದುರು ದಿಟ್ಟ ಆಟವಾಡಿದ ಸೆವಾಸ್ಟೋವಾ ೬-೩, ೭-೬ (೫) ಸೆಟ್‌ಗಳಿಂದ ಗೆಲುವು ಪಡೆದರು. ಲಾಟ್ವಿಯಾ ಆಟಗಾರ್ತಿಯ ವಿರುದ್ಧ ಮೊದಲ ಸೆಟ್‌ನಲ್ಲಿ ಸೋಲನುಭವಿಸಿದರೂ, ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಲು ಯತ್ನಿಸಿದರು. ಆದರೆ, ಸೆವಾಸ್ಟೋವಾ ಟೈಬ್ರೇಕರ್‌ನಲ್ಲಿ ಸೆಟ್ ವಶಕ್ಕೆ ಪಡೆದು ಸಿಬುಲ್ಕೋವಾ ಹೋರಾಟಕ್ಕೆ ತೆರೆ ಎಳೆದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More