ವೇಗವಾಗಿ ೨೪ ಟೆಸ್ಟ್ ಶತಕದ ದಾಖಲೆ ಬರೆದ ಟೀಂ ಇಂಡಿಯಾ ಕ್ಯಾಪ್ಟನ್ ಕೊಹ್ಲಿ

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ನಿರೀಕ್ಷೆಯಂತೆಯೇ ವೆಸ್ಟ್‌ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ದಾಖಲಿಸಿದ್ದಾರೆ. ರಾಜ್‌ಕೋಟ್‌ನಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಶುಕ್ರವಾರ (ಅ.೫) ಕೊಹ್ಲಿ ವೃತ್ತಿಬದುಕಿನ ೨೪ನೇ ಶತಕ ಸಿಡಿಸಿ ದಾಖಲೆ ಬರೆದರು

ಇಂಗ್ಲೆಂಡ್ ಪ್ರವಾಸದಲ್ಲಿನ ಅದ್ಭುತ ಫಾರ್ಮ್‌ ಅನ್ನು ಮುಂದುವರಿಸಿರುವ ವಿರಾಟ್ ಕೊಹ್ಲಿ, ವಿಂಡೀಸ್ ವಿರುದ್ಧದ ಬೃಹತ್ ಮೊತ್ತಕ್ಕೆ ಶತಕದ ಮುದ್ರೆ ಒತ್ತಿದರು. ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತದ ರನ್ ಮಷಿನ್ ಎಂದೇ ಕರೆಸಿಕೊಳ್ಳುವ ಕೊಹ್ಲಿ, ೧೮೪ ಎಸೆತ ಎದುರಿಸಿ ಮೂರಂಕಿ ದಾಟಿದರು. ವಿಂಡೀಸ್ ವಿರುದ್ಧದ ಈ ಶತಕ ಸಾಧನೆಯೊಂದಿಗೆ ಕೊಹ್ಲಿ, ಸಚಿನ್ ತೆಂಡೂಲ್ಕರ್ ಸಾಧನೆಯನ್ನೂ ಹಿಂದಿಕ್ಕಿದರು.

ಟೆಸ್ಟ್ ಕ್ರಿಕೆಟ್‌ನಲ್ಲಿ ತ್ವರಿತಗತಿಯಲ್ಲಿ ೨೪ ಶತಕಗಳ ಗಡಿ ಮುಟ್ಟಿದ ಭಾರತದ ಮೊದಲ ಹಾಗೂ ವಿಶ್ವದಲ್ಲೇ ಎರಡನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಕೊಹ್ಲಿ ಭಾಜನವಾದರು. ಕೊಹ್ಲಿಗೂ ಮುನ್ನ ಈ ಸಾಧನೆ ಮೆರೆದವರು ಆಸ್ಟ್ರೇಲಿಯಾದ ಕ್ರಿಕೆಟ್ ದಂತಕತೆ ಡಾನ್ ಬ್ರಾಡ್ಮನ್. ಬ್ರಾಡ್ಮನ್ ೬೬ ಇನ್ನಿಂಗ್ಸ್‌ಗಳಲ್ಲಿ ೨೪ ಶತಕ ಪೂರೈಸಿದರೆ, ಕೊಹ್ಲಿ ಈ ಸಾಧನೆ ಮಾಡಲು ತೆಗೆದುಕೊಂಡದ್ದು ೧೨೩ ಇನ್ನಿಂಗ್ಸ್‌ಗಳನ್ನು.

ಇನ್ನು, ಶೀಘ್ರಗತಿಯಲ್ಲಿ ೨೪ ಶತಕ ಪೂರೈಸಿದ ಆಟಗಾರರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಮೂರನೇ ಸ್ಥಾನದಲ್ಲಿದ್ದಾರೆ. ಸಚಿನ್ ೧೨೫ ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು. ಅಂತೆಯೇ, ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ೧೨೮ ಇನ್ನಿಂಗ್ಸ್‌ಗಳಲ್ಲಿ ೨೪ ಶತಕ ದಾಖಲಿಸಿದ್ದರು. ಅಂದಹಾಗೆ, ವಿರಾಟ್ ಬಳಿಕ ರವೀಂದ್ರ ಜಡೇಜಾ ಕೂಡ ಶತಕ ಸಾಧನೆ ಮೆರೆಯುವುದರೊಂದಿಗೆ ವಿಂಡೀಸ್ ವಿರುದ್ಧ ಭಾರತ ನಿರೀಕ್ಷೆಯಂತೆಯೇ ಬೃಹತ್ ಮೊತ್ತ ಕಲೆಹಾಕಿತು. ೧೪೯.೫ ಓವರ್‌ಗಳಲ್ಲಿ ೯ ವಿಕೆಟ್‌ಗೆ ೬೪೯ ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ವಿಂಡೀಸ್ ಪರ ಸ್ಪಿನ್ನರ್ ದೇವೇಂದ್ರ ಬಿಶೂ ೨೧೭ ರನ್ ನೀಡಿ ೪ ವಿಕೆಟ್ ಗಳಿಸಿದರು.

ಇದನ್ನೂ ಓದಿ : ಪೃಥ್ವಿ ಶತಕದ ಜತೆಗೆ ಕೆರಿಬಿಯನ್ನರ ಸಂಕಷ್ಟ ಹೆಚ್ಚಿಸಿದ ಪೂಜಾರ ಹಾಗೂ ಕೊಹ್ಲಿ ಆಟ

ರಿಚರ್ಡ್ಸ್ ದಾಖಲೆ ಸರಿಗಟ್ಟಿದ ಕೊಹ್ಲಿ

ಕೆರಿಬಿಯನ್ನರ ವಿರುದ್ಧದ ಈ ಶತಕ ದಾಖಲೆಯೊಂದಿಗೆ ವಿರಾಟ್ ಕೊಹ್ಲಿ ವೆಸ್ಟ್‌ ಇಂಡೀಸ್ ತಂಡದ ಮಾಜಿ ಆಟಗಾರ ವಿವ್ ರಿಚರ್ಡ್ಸ್ ದಾಖಲೆ ಸರಿಗಟ್ಟಿದರು. ಅಂತೆಯೇ, ಪಾಕಿಸ್ತಾನದ ಮೊಹಮದ್ ಯೂಸುಫ್ ಮತ್ತು ಆಸ್ಟ್ರೇಲಿಯಾದ ಗ್ರೆಗ್ ಚಾಪೆಲ್ ಅವರ ಶತಕ ದಾಖಲೆಯನ್ನೂ ಸರಿಗಟ್ಟಿದರು. ಅಂದಹಾಗೆ, ಕೊಹ್ಲಿಯ ಈ ಶತಕ ಈ ಋತುವಿನ ನಾಲ್ಕನೆಯದ್ದಾಗಿದ್ದರೆ, ಒಟ್ಟಾರೆ ತವರಿನಲ್ಲಿ ಮೂಡಿಬಂದ ೧೧ನೇ ಶತಕವೂ ಹೌದು.

೨೦೧೮ರ ಈ ಋತುವಿನಲ್ಲಿ ಕೊಹ್ಲಿ ರನ್‌ಗಳ ದಾಖಲೆಯನ್ನೇ ಬರೆದಿದ್ದಾರೆ. ವಿಂಡೀಸ್ ಸರಣಿಗೂ ಮುನ್ನ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ೫೯೩ ರನ್ ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಕೊಹ್ಲಿ, ಎರಡು ಶತಕ ಮತ್ತು ೩ ಅರ್ಧಶತಕ ದಾಖಲಿಸಿದ್ದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More