ಭಾರತ ವಿರುದ್ಧದ ಸೀಮಿತ ಓವರ್‌ಗಳ ಸರಣಿಗೆ ಕ್ರಿಸ್ ಗೇಲ್ ಅಲಭ್ಯ!

ಇತ್ತೀಚೆಗಷ್ಟೇ ಎ ದರ್ಜೆ ಕ್ರಿಕೆಟ್‌ಗೆ ಭರ್ಜರಿ ಶತಕದೊಂದಿಗೆ ವಿದಾಯ ಹೇಳಿದ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್, ಮುಂಬರಲಿರುವ ಭಾರತ ವಿರುದ್ಧದ ಸೀಮಿತ ಓವರ್‌ಗಳ ಸರಣಿಗೆ ಅಲಭ್ಯವಾಗಿದ್ದಾರೆ. ೨ ಟೆಸ್ಟ್ ಪಂದ್ಯ ಸರಣಿಯಲ್ಲಿ ೦-೧ರಿಂದ ಹಿನ್ನಡೆ ಅನುಭವಿಸಿರುವ ಕೆರಿಬಿಯನ್ನರಿಗೆ ಇದು ಅಪ್ರಿಯ ಸಂಗತಿ

ವೈಯಕ್ತಿಕ ಕಾರಣಗಳಿಂದಾಗಿ ವಿಂಡೀಸ್ ಆಟಗಾರ ಕ್ರಿಸ್ ಗೇಲ್ ಭಾರತ ವಿರುದ್ಧದ ಏಕದಿನ ಮತ್ತು ಟಿ೨೦ ಪಂದ್ಯಗಳ ಸರಣಿಯಿಂದ ಹಿಂದೆ ಸರಿದಿದ್ದಾರೆ. ಇವರೊಂದಿಗೆ ಸುನೀಲ್ ನರೇನ್, ಡ್ವೇನ್ ಬ್ರಾವೊ ಕೂಡ ಸೋಮವಾರ (ಅ.೮) ಪ್ರಕಟವಾದ ವಿಂಡೀಸ್ ಸೀಮಿತ ಓವರ್‌ಗಳ ಸರಣಿಗೆ ಅಲಭ್ಯವಾಗಿರುವುದು ಕೆರಿಬಿಯನ್ನರಿಗೆ ಭಾರಿ ಹಿನ್ನಡೆ ತಂದಿತ್ತಿದೆ.

ಆತಿಥೇಯ ಭಾರತ ಮತ್ತು ವೆಸ್ಟ್‌ ಇಂಡೀಸ್ ನಡುವಣದ ಸೀಮಿತ ಓವರ್‌ಗಳ ಸರಣಿ ಇದೇ ತಿಂಗಳು ೨೧ರಿಂದ ಶುರುವಾಗಲಿದೆ. ಈ ಮಧ್ಯೆ, ಡರೆನ್ ಬ್ರಾವೊ, ಆಲ್ರೌಂಡರ್ ಕೀರನ್ ಪೊಲಾರ್ಡ್ ಟಿ೨೦ ತಂಡಕ್ಕೆ ವಾಪಸಾಗಿದ್ದಾರೆ. ಇತ್ತ, ಆಲ್ರೌಂಡರ್ ಆಂಡ್ರೆ ರಸೆಲ್ ಗಾಯದ ನಿಮಿತ್ತ ಒಂದು ದಿನದ ಕ್ರಿಕೆಟ್ ಸರಣಿಗೆ ಅಲಭ್ಯವಾಗಿದ್ದರೂ, ಟಿ೨೦ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಸ್ಪಿನ್ ಸ್ನೇಹಿ ಭಾರತದಲ್ಲಿ ಆತಿಥೇಯರಿಗೆ ಅಪಾಯಕಾರಿ ಆಗಬಲ್ಲ ಸುನೀಲ್ ನರೇನ್ ಅವರನ್ನು ವಿಂಡೀಸ್ ಕ್ರಿಕೆಟ್ ಆಯ್ಕೆಸಮಿತಿ ಪರಿಗಣಿಸದೆ ಇರುವುದು ಕೂಡ ಅಚ್ಚರಿ ತರಿಸಿದೆ. ಬೌಲಿಂಗ್‌ನಲ್ಲಿ ಮಾತ್ರವಲ್ಲದೆ, ಬ್ಯಾಟಿಂಗ್‌ನಲ್ಲಿಯೂ ವಿಜೃಂಭಿಸಬಲ್ಲ ನರೇನ್ ಅಲಭ್ಯತೆಯು ವಿಂಡೀಸ್‌ಗೆ ದುಬಾರಿಯಾಗುವ ಸಾಧ್ಯತೆಗಳನ್ನು ಸೃಷ್ಟಿಸಿದೆ ಎಂದೇ ವ್ಯಾಖ್ಯಾನಿಸಲಾಗಿದೆ.

ಇದನ್ನೂ ಓದಿ : ಅಫ್ರಿದಿ ಸಿಕ್ಸರ್ ದಾಖಲೆ ಸರಿಗಟ್ಟಿದ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್!

“ಸ್ಟಾರ್ ಆಟಗಾರ ಕ್ರಿಸ್ ಗೇಲ್ ಭಾರತ ಮತ್ತು ಬಾಂಗ್ಲಾದೇಶದ ಸರಣಿಗಳಿಗೆ ಅಲಭ್ಯವಾಗಿದ್ದಾರೆ. ಆದರೆ, ತವರಿನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಸರಣಿಗೆ ಹಾಗೂ ಮುಂದಿನ ವರ್ಷ ನಡೆಯಲಿರುವ ಪ್ರತಿಷ್ಠಿತ ೨೦೧೯ರ ಐಸಿಸಿ ವಿಶ್ವಕಪ್ ಪಂದ್ಯಾವಳಿಗೆ ಲಭ್ಯವಿರುವುದಾಗಿ ತಿಳಿಸಿದ್ದಾರೆ,’’ ಎಂದು ವಿಂಡೀಸ್ ಕ್ರಿಕೆಟ್ ಆಯ್ಕೆ ಸಮಿತಿಯ ಮುಖ್ಯಸ್ಥ ಕರ್ಟ್ನಿ ಬ್ರೌವ್ನಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಪ್ರಸಕ್ತ ಭಾರತ ಪ್ರವಾಸದಲ್ಲಿರುವ ವಿಂಡೀಸ್ ತಂಡ ಎರಡು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಹೀನಾಯ ಸೋಲನುಭವಿಸಿ ಸರಣಿ ಸೋಲಿನ ಭೀತಿಯಲ್ಲಿದೆ. ಸಾಂಪ್ರದಾಯಿಕ ಐದು ಪಂದ್ಯಗಳ ಸರಣಿ ಮುಕ್ತಾಯವಾದ ನಂತರ ನಡೆಯಲಿರುವ ಐದು ಏಕದಿನ ಮತ್ತು ಮೂರು ಟಿ೨೦ ಪಂದ್ಯ ಸರಣಿ ಮೇಲೆ ವಿಂಡೀಸ್ ಕಣ್ಣಿಟ್ಟಿದೆ. ಮೊದಲ ಏಕದಿನ ಪಂದ್ಯ ಗೌಹಾತಿಯಲ್ಲಿ ಅಕ್ಟೋಬರ್ ೨೧ರಂದು ನಡೆಯಲಿದೆ.

ಪ್ರಕಟಿತ ತಂಡ ಇಂತಿದೆ

ಏಕದಿನ ತಂಡ: ಜೇಸನ್ ಹೋಲ್ಡರ್ (ನಾಯಕ), ಫ್ಯಾಬಿಯನ್ ಅಲೆನ್, ಸುನಿಲ್ ಆ್ಯಂಬ್ರಿಸ್, ದೇವೇಂದ್ರ ಬಿಶೂ, ಚಂದ್ರಪಾಲ್ ಹೇಮ್‌ರಾಜ್, ಶಿಮ್ರೊನ್ ಹೆಟ್ಮೆಯರ್, ಶಾಯಿ ಹೋಪ್, ಅಲ್ಜಾರಿ ಜೋಸೆಫ್, ಎವಿನ್ ಲೆವಿಸ್, ಆ್ಯಶ್ಲೆ ನರ್ಸ್, ಕೀಮೊ ಪೌಲ್, ರೋವ್ಮನ್ ಪೊವೆಲ್, ಕೆಮರ್ ರೋಚ್, ಮರ್ಲಾನ್ ಸ್ಯಾಮುಯೆಲ್ಸ್ ಹಾಗೂ ಒಶಾನಿ ಥಾಮಸ್.

ಟಿ೨೦ ತಂಡ: ಕಾರ್ಲೋಸ್ ಬ್ರಾಥ್‌ವೇಟ್ (ನಾಯಕ), ಫ್ಯಾಬಿಯನ್ ಅಲೆನ್, ಡರೆನ್ ಬ್ರಾವೊ, ಶಿಮ್ರೊನ್ ಹೆಟ್ಮೆಯರ್, ಎವಿನ್ ಲೆಇವಸ್, ಒಬೆದ್ ಮೆಕಾಯ್, ಆ್ಯಶ್ಲೆ ನರ್ಸ್, ಕೀಮೊ ಪೌಲ್, ಖೆರಿ ಪಿಯೆರಿ, ಕೀರನ್ ಪೊಲಾರ್ಡ್, ರೊವ್ಮನ್ ಪೊವೆಲ್, ದಿನೇಶ್ ರಾಮ್ದಿನ್, ಆ್ಯಂಡ್ರೆ ರಸೆಲ್, ಶೆರ್ಫಾನಿ ರುದರ್ಫೋರ್ಡ್ ಹಾಗೂ ಒಶಾನಿ ಥಾಮಸ್.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More