ಭಾರತಕ್ಕೆ ಮತ್ತೊಂದು ಮುಕುಟ ಮುಡಿಸಿದ ದ್ರಾವಿಡ್‌ಗೆ ಬಲಿಷ್ಠ ಭಾರತದ್ದೇ ಕನಸು

ಪೃಥ್ವಿ ಶಾ ಎಂಬ ಮುಂಬೈ ಯುವ ಆಟಗಾರನನ್ನು ಸಮರ್ಥವಾಗಿ ರೂಪಿಸಿ ಭಾರತಕ್ಕೆ ಐಸಿಸಿ ಕಿರಿಯರ ವಿಶ್ವಕಪ್ ಗೆದ್ದುಕೊಟ್ಟ ಕಿರಿಯರ ಕೋಚ್ ರಾಹುಲ್ ದ್ರಾವಿಡ್ ಇದೀಗ ಏಷ್ಯಾ ಕಪ್ ಅನ್ನೂ ಗೆದ್ದುಕೊಟ್ಟಿದ್ದಾರೆ. ಭವಿಷ್ಯದ ಭಾರತ ಕ್ರಿಕೆಟ್ ಅನ್ನು ಸದೃಢಗೊಳಿಸುವ ಕಾಯಕದಲ್ಲಿ ದ್ರಾವಿಡ್ ನಿರತರಾಗಿದ್ದಾರೆ

ಯುವ ಶಕ್ತಿಶಾಲಿ ಕ್ರಿಕೆಟ್ ತಂಡವನ್ನು ರೂಪಿಸುವ ಕಾಯಕದಲ್ಲಿ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದ್ದಾರೆ. ಭಾರತದ ಕ್ರಿಕೆಟ್ ತಂಡ ಭವಿಷ್ಯದಲ್ಲಿ ಇನ್ನಷ್ಟು ಶಕ್ತಿಶಾಲಿ ಹಾಗೂ ಪ್ರತಿಭಾ ಸಂಗಮವಾಗಿರುವಂತೆ ಮಾಡುವ ಸಂಕಲ್ಪ ತೊಟ್ಟಿರುವ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಯುವ ಭಾರತ ಕ್ರಿಕೆಟ್ ತಂಡ ಮತ್ತೊಂದು ಮಹತ್ಸಾಧನೆ ಮೆರೆದಿದೆ.

ಭಾನುವಾರ (ಅ.೭) ಮುಕ್ತಾಯ ಕಂಡ ಕಿರಿಯರ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಜಯಶಾಲಿಯಾಗಿದ್ದರ ಹಿಂದೆ ದ್ರಾವಿಡ್ ಅವರ ಬೆವರಿನ ಶ್ರಮ ಅಡಗಿದೆ. ಶೇರ್‌ ಎ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಹರ್ಷ ತ್ಯಾಗಿ (38ಕ್ಕೆ6) ಹೆಣೆದ ಸ್ಪಿನ್‌ ಬಲೆಯೊಳಗೆ ಸಿಲುಕಿದ ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳು ತಂಡದ ಹೀನಾಯ ಸೋಲಿಗೆ ಕಾರಣರಾದರು.

ಭಾರತ ವಿರುದ್ಧದ ಪ್ರಶಸ್ತಿ ಸುತ್ತಿನ ಸೆಣಸಾಟದಲ್ಲಿ ಪ್ರಭ್‌ ಸಿಮ್ರನ್‌ ಸಿಂಗ್‌ ಸಾರಥ್ಯದ ಯುವ ಭಾರತ ತಂಡ, 144ರನ್‌ಗಳಿಂದ ಶ್ರೀಲಂಕಾವನ್ನು ಸೋಲಿಸಿತು. ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡ, 50 ಓವರ್‌ಗಳಲ್ಲಿ 3 ವಿಕೆಟ್‌ಗೆ 304 ರನ್‌ ಕಲೆಹಾಕಿ ಒಡ್ಡಿದ ಕಠಿಣ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ 160 ರನ್‌ಗಳಿಗೆ ಆಲೌಟ್‌ ಆಯಿತು.

ಇದನ್ನೂ ಓದಿ : ನಿಜ, ಭವಿಷ್ಯದ ಭಾರತೀಯ ಕ್ರಿಕೆಟ್ ರಾಹುಲ್ ದ್ರಾವಿಡ್ ಕೈಯಲ್ಲಿ ಭದ್ರವಾಗಿದೆ!

ಇನಿಂಗ್ಸ್‌ ಆರಂಭಿಸಿದ ಭಾರತಕ್ಕೆ ಯಶಸ್ವಿ ಜೈಸ್ವಾಲ್‌ (85: 113 ಎಸೆತ, 8 ಬೌಂಡರಿ, 1 ಸಿಕ್ಸರ್) ಮತ್ತು ಅನುಜ್‌ ರಾವತ್‌ (೫೭: ೭೯ ಎಸೆತ, ೪ ಬೌಂಡರಿ, ೩ ಸಿಕ್ಸರ್) ತಂಡಕ್ಕೆ ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 151 ಎಸೆತಗಳಲ್ಲಿ 121ರನ್‌ ದಾಖಲಿಸಿ ತಂಡದ ಬೃಹತ್ ಮೊತ್ತಕ್ಕೆ ವೇದಿಕೆ ಹಾಕಿತು. ಯಶಸ್ವಿ ಅರ್ಧಶತಕದ ನಂತರ ರಾವತ್‌, 26ನೇ ಓವರ್‌ನ ಮೊದಲ ಎಸೆತದಲ್ಲಿ ದುಲಿತ್‌ ವೆಲ್ಲಾಲಾಗೆಗೆ ವಿಕೆಟ್‌ ನೀಡಿದರು.

ಬಳಿಕ ಬಂದ ಕರ್ನಾಟಕದ ದೇವದತ್ತ ಪಡಿಕ್ಕಲ್ (31: 43 ಎಸೆತ, 1 ಬೌಂಡರಿ, 1 ಸಿಕ್ಸರ್) ಜೈಸ್ವಾಲ್‌ಗೆ ಇನ್ನಷ್ಟು ಸ್ಫೂರ್ತಿಯ ಜೊತೆಯಾಟವಾಡಿದರು. ಎರಡನೇ ವಿಕೆಟ್‌ಗೆ 59 ರನ್ ಪೇರಿಸಿದ ಈ ಜೋಡಿ ತದನಂತರದಲ್ಲಿ ಮೂರು ಓವರ್‌ಗಳ ಅಂತರದಲ್ಲಿ ಪೆವಿಲಿಯನ್ ಸೇರಿತು.

ತರುವಾಯ, ನಾಯಕ ಪ್ರಭ್‌ ಸಿಮ್ರನ್ ಸಿಂಗ್ (ಔಟಾಗದೆ 65; 37ಎ, 4ಸಿ, 3 ಬೌಂ) ಮತ್ತು ಆಲ್ರೌಂಡರ್ ಆಯುಷ್ ಬದೋನಿ (52*: 28 ಎಸೆತ, 5 ಸಿಕ್ಸರ್ 2 ಬೌಂಡರಿ) ಎದುರಾಳಿ ತಂಡದ ಬೌಲರ್‌ಗಳ ಬೆವರಿಳಿಸಿದರು. ಈ ಜೋಡಿ ನಾಲ್ಕನೇ ವಿಕೆಟ್‌ಗೆ 55 ಎಸೆತಗಳಲ್ಲಿ 110 ರನ್‌ ಸೇರಿಸಿ ತಂಡದ ಮೊತ್ತವನ್ನು 300 ರನ್‌ಗಳ ಗಡಿ ದಾಟಿಸಿತು.

ಕಠಿಣ ಗುರಿ ಬೆನ್ನಟ್ಟಿದ ಲಂಕಾ ತಂಡ ಆರಂಭದಿಂದಲೇ ವಿಕೆಟ್‌ ಕಳೆದುಕೊಂಡು ಸಾಗಿತು. ನಿಶಾನ್‌ ಮದುಷ್ಕಾ (49: 67 ಎಸೆತ, 1 ಬೌಂಡರಿ, 2 ಸಿಕ್ಸರ್) ಮತ್ತು ನವೋದ್‌ ಪರಣವಿತರಣಾ (48; 61 ಎಸೆತ, 2 ಬೌಂಡರಿ, 2 ಸಿಕ್ಸರ್) ಪೈಪೋಟಿಯ ಹೋರಾಟ ನಡೆಸಿದರು. ಆದರೆ, ಮಧ್ಯಮ ಮತ್ತು ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ತಂಡದ ಪ್ರಶಸ್ತಿ ಕನಸು ಕಮರಿಹೋಯಿತು.

ಸಂಕ್ಷಿಪ್ತ ಸ್ಕೋರ್

ಭಾರತ-೧೯: ೫೦ ಓವರ್‌ಗಳಲ್ಲಿ ೩೦೪/೩ (ಯಶಸ್ವಿ ಜೈಸ್ವಾಲ್ ೮೫, ಪ್ರಭ್ ಸಿಮ್ರನ್ ಸಿಂಗ್ ೬೫*; ದುಲಿತ್ ವೆಲ್ಲಾಲಗೆ ೨೪ಕ್ಕೆ ೧, ಕಲ್ಹಾರ ಸೇನಾರತ್ನೆ ೪೫ಕ್ಕೆ ೧) ಶ್ರೀಲಂಕಾ-೧೯: ೩೮.೪ ಓವರ್‌ಗಳಲ್ಲಿ ೧೬೦ (ನಿಶಾನ್ ಮದುಶ್ಕಾ ೪೯, ನವೋದ್ ಪರಣವಿತನ ೪೮; ಹ‍ರ್ಷ್ ತ್ಯಾಗಿ ೩೮ಕ್ಕೆ ೬, ಸಿದ್ಧಾರ್ಥ್ ದೇಸಾಯಿ ೩೭ಕ್ಕೆ ೨) ಫಲಿತಾಂಶ: ಭಾರತ ಕಿರಿಯರ ತಂಡಕ್ಕೆ ೧೪೪ ರನ್ ಗೆಲುವು ಪಂದ್ಯಶ್ರೇಷ್ಠ: ಹರ್ಷ್ ತ್ಯಾಗಿ

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More