ಪಿಬಿಎಲ್ ಹರಾಜು: ಕಿಡಾಂಬಿ, ಸೈನಾ ನೆಹ್ವಾಲ್ ಹಾಗೂ ಸಿಂಧುಗೆ ಬಂಪರ್

ಐದನೇ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್) ಹರಾಜಿನಲ್ಲಿ ಭಾರತದ ಸ್ಟಾರ್ ಆಟಗಾರರಾದ ಕಿಡಾಂಬಿ ಶ್ರೀಕಾಂತ್, ಸೈನಾ ನೆಹ್ವಾಲ್, ಪಿ ವಿ ಸಿಂಧು ತಲಾ ₹ ೮೦ ಲಕ್ಷಕ್ಕೆ ಬಿಕರಿಯಾದರು. ಇನ್ನು, ಸ್ಪೇನ್ ಆಟಗಾರ್ತಿ ಕರೋಲಿನ್ ಮರಿನ್, ವಿಕ್ಟರ್ ಅಕ್ಸೆಲ್ಸನ್ ಕೂಡ ₹ ೮೦ ಲಕ್ಷ ಮೊತ್ತ ಪಡೆದರು

ನಿರಿಕ್ಷೆಯಂತೆಯೇ ಭಾರತದ ಐಕಾನ್ ಆಟಗಾರರು ಪಿಬಿಎಲ್‌ ಹರಾಜಿನಲ್ಲಿ ಫ್ರಾಂಚೈಸಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾದರು. ಪಿಬಿಎಲ್‌ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಕಟವಾಗಿರುವಂತೆ ವಿಶ್ವದ ಮಾಜಿ ನಂ ೧ ಆಟಗಾರ ಕಿಡಾಂಬಿ ಶ್ರೀಕಾಂತ್ ಅವರನ್ನು ಬೆಂಗಳೂರು ಬ್ಲಾಸ್ಟರ್ಸ್ ಕೊಂಡುಕೊಂಡರೆ, ಸೈನಾ ನೆಹ್ವಾಲ್ ನಾರ್ತ್ ಈಸ್ಟರ್ನ್ ವಾರಿಯರ್ಸ್‌ ಪಾಲಾದರು.

ಸೋಮವಾರ ನವದೆಹಲಿಯಲ್ಲಿ ನಡೆದ ಹರಾಜಿನಲ್ಲಿ ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ ವಿ ಸಿಂಧು ಹಾಲಿ ಚಾಂಪಿಯನ್ ಹೈದರಾಬಾದ್ ಹಂಟರ್ಸ್ ಅನ್ನು ಪ್ರತಿನಿಧಿಸುವುದು ಸ್ಪಷ್ಟವಾಯಿತು. ಹರಾಜು ಪ್ರಕ್ರಿಯೆಯಲ್ಲಿ ನಾರ್ತ್ ಈಸ್ಟರ್ನ್‌ಗೆ ಬಿಕರಿಯಾಗುತ್ತಿದ್ದಂತೆ ಸೈನಾ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಫ್ರಾಂಚೈಸಿ ಪರ ಕಣಕ್ಕಿಳಿಯುವುದನ್ನು ಕಾತರದಿಂದ ನಿರೀಕ್ಷಿಸುತ್ತಿರುವುದಾಗಿ ಪ್ರಕಟಿಸಿದರು.

ಭಾರತದ ಆಟಗಾರರ ಪೈಕಿ ಹೆಚ್ಚು ಮೊತ್ತ ಪಡೆದದ್ದು ಈ ಮೂವರೇ. ಇನ್ನು, ವಿದೇಶಿ ಆಟಗಾರರಾದ ಸ್ಪೇನ್‌ನ ಕರೋಲಿನ್ ಮರಿನ್, ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸನ್, ದಕ್ಷಿಣ ಕೊರಿಯಾದ ಸುಂಗ್ ಜಿ ಹ್ಯುನ್ ಮತ್ತು ಲೀ ಯೊಂಗ್ ಡಾಯಿ ತಲಾ ₹ ೮೦ ಲಕ್ಷಕ್ಕೆ ವಿವಿಧ ಫ್ರಾಂಚೈಸಿಗಳ ಪಾಲಾದರು.

ಇದನ್ನೂ ಓದಿ : ಇದೇ ಡಿಸೆಂಬರ್ ತಿಂಗಳಲ್ಲಿ ಸೈನಾ ನೆಹ್ವಾಲ್, ಪರುಪಳ್ಳಿ ಕಶ್ಯಪ್ ಕಲ್ಯಾಣ 

ಯುವ ಆಟಗಾರ ಲಕ್ಷ್ಯ ಸೇನ್ ₹ ೧೧ ಲಕ್ಷಕ್ಕೆ ೭ ಏಸಸ್ ಪುಣೆ ಪರ ಬಿಕರಿಯಾದರೆ, ಸೌರಭ್ ವರ್ಮಾ ಅವರನ್ನು ₹ ೧೬ ಲಕ್ಷಗಳಿಗೆ ಅಹಮದಾಬಾದ್ ಸ್ಮ್ಯಾಶ್ ಮಾಸ್ಟರ್ಸ್ ಕೊಂಡುಕೊಂಡಿತು. “ಇದೇ ವರ್ಷಾಂತ್ಯದಲ್ಲಿ ಆರಂಭವಾಗಲಿರುವ ಪಿಬಿಎಲ್ ಪಂದ್ಯಾವಳಿಯು ಹಿಂದಿನ ಆವೃತ್ತಿಗಳಿಗಿಂತ ಇನ್ನಷ್ಟು ಉದ್ರೇಕಕಾರಿಯಾಗಿಯೂ ಹಾಗೂ ರೋಮಾಂಚಕಾರಿಯಾಗಿಯೂ ಇರಲಿದೆ,’’ ಎಂದು ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿಎಐ) ಮತ್ತು ಪಿಬಿಎಲ್ ಅಧ್ಯಕ್ಷ ಬಿಸ್ವಾ ಶರ್ಮಾ ವಿಶ್ವಾಸ ವ್ಯಕ್ತಪಡಿಸಿದರು.

ಇತ್ತ, ಕನ್ನಡತಿ ಹಾಗೂ ಡಬಲ್ಸ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ಅವಧಿ ವಾರಿಯರ್ಸ್ ಪರ ₹ ೩೨ ಲಕ್ಷಗಳಿಗೆ ಬಿಕರಿಯಾದರು. ಭಾರತ ಸೇರಿದಂತೆ ೨೩ ರಾಷ್ಟ್ರಗಳಿಂದ ೧೪೫ ಬ್ಯಾಡ್ಮಿಂಟನ್ ಆಟಗಾರರು ಹರಾಜು ಪ್ರಕ್ರಿಯೆಗೆ ಗುರಿಯಾಗಿದ್ದರು. ನಾಲ್ಕನೇ ಪಿಬಿಎಲ್ ಆವೃತ್ತಿಯು ಡಿಸೆಂಬರ್ ೨೨ರಿಂದ ಜನವರಿ ೧೩ರವರೆಗೆ ದೇಶದ ವಿವಿಧ ನಗರಗಳಲ್ಲಿ ಜರುಗಲಿದೆ.

ಅವಧ್ ವಾರಿಯರ್ಸ್ ಹಾಗೂ ಮುಂಬೈ ರಾಕೆಟ್ಸ್ ಫ್ರಾಂಚೈಸಿಗಳು ಪೂರ್ಣ ₹ ೨.೬ ಕೋಟಿಗಳನ್ನು ಹರಾಜಿಗೆ ವ್ಯಯಿಸಿದವು. ಪುಣೆ ೭ ಏಸಸ್ ₹ ೧೪ ಲಕ್ಷಗಳನ್ನು ಉಳಿಸುವಲ್ಲಿ ಯಶಸ್ವಿಯಾದರೆ, ನಾರ್ತ್ ಈಸ್ಟರ್ನ್ ವಾರಿಯರ್ಸ್ ಸೈನಾಗೆ ಗರಿಷ್ಠ ಮೊತ್ತವನ್ನು ತೆತ್ತ ಹೊರತಾಗಿಯೂ ₹ ೮ ಲಕ್ಷಗಳನ್ನು ಉಳಿಸಿಕೊಂಡಿತು.

ಭಾರತ ಪ್ರವಾಸಕ್ಕೂ ಮುನ್ನ ಕಾಂಗರೂ ಕಂಗೆಡಿಸಿದ ಪಾಕ್ ವಿರುದ್ಧದ ಸರಣಿ ಸೋಲು
ಏಷ್ಯನ್ ಚಾಂಪಿಯನ್ಸ್ ಟ್ರೋಫಿ | ಓಮನ್ ಹಣಿದ ಭಾರತಕ್ಕೆ ಈಗ ಪಾಕ್ ಗುರಿ
ಕ್ರಿಕೆಟ್ | ಭಾರತ ವಿರುದ್ಧದ ಸರಣಿಗೆ ಗಾಯಾಳು ಉಸ್ಮಾನ್ ಖವಾಜ ಅನುಮಾನ
Editor’s Pick More