ಪ್ಯಾರಾ ಏಷ್ಯಾಡ್ ಕೂಟ: ಭಾರತದ ನಾಲ್ಕನೇ ಸ್ವರ್ಣಕ್ಕೆ ಏಕ್ತಾ ಭ್ಯಾನ್ ಕಾಣಿಕೆ

ಜಕಾರ್ತದಲ್ಲಿ ನಡೆಯುತ್ತಿರುವ ಪ್ಯಾರಾ ಏಷ್ಯಾಡ್ ಕ್ರೀಡಾಕೂಟದಲ್ಲಿ ಭಾರತ ನಾಲ್ಕನೇ ಸ್ವರ್ಣ ಪದಕ ಗೆದ್ದುಕೊಂಡಿತು. ಎಫ್‌೩೨/೫೧ ವಿಭಾಗದ ವನಿತೆಯರ ಕ್ಲಬ್ ಥ್ರೋ ಸ್ಪರ್ಧೆಯಲ್ಲಿ ೧೬.೦೨ ಮೀಟರ್ ಸಾಧನೆಯೊಂದಿಗೆ ಏಕ್ತಾ ಭ್ಯಾನ್ ಬಂಗಾರದ ಪದಕವನ್ನು ಗೆದ್ದು ಸಂಭ್ರಮಿಸಿದರು

ಜಕಾರ್ತದಲ್ಲಿನ ಪ್ಯಾರಾ ಏಷ್ಯಾಡ್‌ನಲ್ಲಿ ಭಾರತ ತನ್ನ ಪದಕ ಬೇಟೆಯನ್ನು ಮುಂದುವರಿಸಿದೆ. ಮಂಗಳವಾರ (ಅ.೯) ಏಕ್ತಾ ಭ್ಯಾನ್ ನಾಲ್ಕನೇ ಯತ್ನದಲ್ಲಿ ೧೬.೦೨ ಮೀಟರ್ ಸಾಧನೆಯೊಂದಿಗೆ ಸ್ವರ್ಣ ಪದಕ ತನ್ನದಾಗಿಸಿಕೊಂಡರು. ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಲ್ಕಾಬಿ ತೆಕ್ರಾ ೧೫.೭೫ ಮೀಟರ್ ಸಾಧನೆಯೊಂದಿಗೆ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಎಫ್‌೩೨/೫೧ರ ನಿಯಮವು ಅಥ್ಲೀಟ್‌ಗಳು ಕರಗಳಲ್ಲಿ ತಮ್ಮ ಕ್ರೀಡಾ ಕೌಶಲವನ್ನು ವ್ಯಕ್ತಪಡಿಸಲು ಅನುವು ಮಾಡಿಕೊಡುತ್ತದೆ. ಏಕ್ತಾ, ಈ ಕ್ರೀಡಾಕೂಟಕ್ಕೂ ಮುನ್ನ ಇಂಡಿಯನ್ ಓಪನ್ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಸ್ವರ್ಣ ಪದಕ ಜಯಿಸಿದ್ದರು. ಇನ್ನು, ಮಂಗಳವಾರ ಭಾರತ ಮತ್ತೂ ಮೂರು ಕಂಚಿನ ಪದಕ ಗೆದ್ದುಕೊಂಡಿತು. ಜಯಂತಿ ಬೆಹೆರಾ, ಆನಂದನ್ ಗುಣಶೇಖರನ್ ಹಾಗೂ ಮೋನು ಘಂಗಾಸ್ ತಮ್ಮದೇ ಪ್ರತ್ಯೇಕ ಕ್ರೀಡಾ ವಿಭಾಗದಲ್ಲಿ ಕಂಚಿನ ಪದಕಗಳನ್ನು ಗೆದ್ದುಕೊಂಡರು. ಪುರುಷರ ಶಾಟ್‌ಪುಟ್ ಎಸೆತದ ಎಫ್‌೧೧ ವಿಭಾಗದಲ್ಲಿ ದೃಷ್ಟಿದೋಷದ ಘಂಗಾಸ್ ಮೂರನೇ ಸ್ಥಾನ ಪಡೆದರು. ಇನ್ನು, ಪಾದ ಹಾಗೂ ಕಣಕಾಲಿನ ಊನತೆ ಹೊಂದಿರುವ ಗುಣಶೇಖರನ್ ಪುರುಷರ ೨೦೦ ಮೀಟರ್ ಟಿ ೪೪/೬೨/೬೪ ವಿಭಾಗದಲ್ಲಿ ಕಂಚಿನ ಪದಕ ಪಡೆದರು.

ಇದನ್ನೂ ಓದಿ : ಜಜಾರಿಯಾ ನಿವೃತ್ತಿ ಮಧ್ಯೆ ಉದಯಿಸಿದ ಮತ್ತೋರ್ವ ಜಾವೆಲಿನ್ ಪಟು ಸಂದೀಪ್

ಇನ್ನುಳಿದಂತೆ, ೨೦೦ ಮೀಟರ್ ಟಿ ೪೫/೪೬/೪೭ ವಿಭಾಗದಲ್ಲಿ ಬೆಹೆರಾ ಕಂಚಿನ ಪದಕ ಪಡೆದರು. ದಿನದ ಹಿಂದಷ್ಟೇ ಜಾವೆಲಿನ್ ಎಸೆತಗಾರ ಸಂದೀಪ್ ಚೌಧರಿ ವಿಶ್ವದಾಖಲೆಯೊಂದಿಗೆ ಸ್ಚರ್ಣ ಪದಕ ಗೆದ್ದುಕೊಂಡಿದ್ದರು. ಅವರ ಈ ಸಾಧನೆಯೊಂದಿಗೆ ಭಾರತ ಮೂರು ಬಂಗಾರದ ಪದಕ ಸೇರಿದಂತೆ ಒಟ್ಟಾರೆ ೧೧ ಪದಕ ಗೆದ್ದುಕೊಂಡಿತ್ತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More