ಯುವ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆಯೊಂದಿಗೆ ಸ್ವರ್ಣ ಗೆದ್ದ ಜೆರೆಮಿ

ಬ್ಯೂನಸ್ ಐರಿಸ್‌ನಲ್ಲಿ ನಡೆಯುತ್ತಿರುವ ಯುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಜೆರೆಮಿ ಲಾಲ್ರಿನ್ನುಂಗಾ ಚಾರಿತ್ರಿಕ ಸಾಧನೆ ಮೆರೆದಿದ್ದಾರೆ. ಪುರುಷರ ೬೨ ಕೆಜಿ ವಿಭಾಗದ ವೇಟ್‌ಲಿಫ್ಟ್ ವಿಭಾಗದಲ್ಲಿ ಹದಿನೈದರ ಹರೆಯದ ಜೆರೆಮಿ ಮೊದಲ ಸ್ಥಾನ ಪಡೆಯುವುದರೊಂದಿಗೆ ಚಿನ್ನದ ಪದಕ ಗೆದ್ದರು

ಐಜ್ವಾಲ್‌ ಮೂಲದ ಯುವ ವೇಟ್‌ಲಿಫ್ಟರ್ ಜೆರೆಮಿ, ಯೂತ್ ಒಲಿಂಪಿಕ್ಸ್‌ನಲ್ಲಿ ಭಾರತದ ಮೊಟ್ಟಮೊದಲ ಸ್ವರ್ಣ ಸಾಧನೆಗೆ ನೆರವಾದರು. ವಿಶ್ವ ಯೂತ್ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಜೆರೆಮಿ, ಒಟ್ಟಾರೆ ೨೭೪ ಕೆಜಿ ತೂಕ ಮೇಲೆತ್ತಿದರು. ಸ್ನ್ಯಾಚ್, ಕ್ಲೀನ್ ಹಾಗೂ ಜೆರ್ಕ್ ವಿಭಾಗದಲ್ಲಿ ೧೨೪ ಮತ್ತು ೧೫೦ ಕೆಜಿ ತೂಕ ಎತ್ತಿದ ಜೆರೆಮಿ ಸಾಮರ್ಥ್ಯ ಮೆರೆದರು.

ಸೋಮವಾರ (ಅ.೮) ರಾತ್ರಿ ನಡೆದ ಸ್ಪರ್ಧೆಯ ಎರಡನೇ ಸ್ಥಾನ ಟರ್ಕಿಯ ಟೊಪ್ಟಾಸ್ ಕ್ಯಾನರ್ ಪಾಲಾಯಿತು. ೨೬೩ ಕೆಜಿ (೧೨೨+೧೪೧ ಕೆಜಿ) ತೂಕ ಎತ್ತಿದ ಕ್ಯಾನರ್, ಬೆಳ್ಳಿ ಪದಕ ಜಯಿಸಿದರು. ಕೊಲಂಬಿಯಾದ ವಿಲ್ಲಾರ್ ಎಸ್ಟಿವೆನ್ ಜೋಸ್ (೧೧೫+೧೪೩ ಕೆಜಿ) ಕಂಚಿನ ಪದಕವನ್ನು ತನ್ನದಾಗಿಸಿಕೊಂಡರು. ಇದೇ ತಿಂಗಳು ೨೬ರಂದು ಹದಿನಾರನೇ ವಸಂತಕ್ಕೆ ಕಾಲಿರಿಸಲಿರುವ ಮಿಜೋರಾಂನ ಜೆರೆಮಿ ಭವಿಷ್ಯದ ತಾರೆ ಎನಿಸಿದ್ದಾರೆ.

“ಜೆರೆಮಿ ಅವರ ತಂದೆ ಲಾಲ್‌ನಿತುಂಗಾ ಮಾಜಿ ಬಾಕ್ಸರ್ ಆಗಿದ್ದು, ಏಳು ರಾಷ್ಟ್ರೀಯ ಸ್ವರ್ಣ ಪದಕ ಗೆದ್ದವರು. ಅವರ ಪುತ್ರ ಕೂಡ ಅಪ್ಪನಂತೆಯೇ ದೇಶಕ್ಕೆ ಕೀರ್ತಿ ತಂದುಕೊಟ್ಟಿದ್ದಾರೆ,’’ ಎಂದು ಮಿಜೋರಾಂ ವೇಟ್‌ಲಿಫ್ಟಿಂಗ್ ಸಂಸ್ಥೆ (ಎಂಡಬ್ಲ್ಯೂಎ) ಅಧ್ಯಕ್ಷ ಎನ್ ತಾಂಗ್‌ಚುಂಗ್‌ನುಂಗಾ ತಿಳಿಸಿದ್ದಾರೆ.

ಇದನ್ನೂ ಓದಿ : ವೇಟ್‌ಲಿಫ್ಟರ್ ಪೂನಮ್ ಯಾದವ್‌ ಮೊಗದಲ್ಲಿ ನಲಿದಾಡಿತು ಬಂಗಾರದ ಲಾಸ್ಯ

ಜೆರೆಮಿ ಲಾಲ್‌ರಿನ್ನುಂಗಾ ಕೂಡ ಮೂಲತಃ ಬಾಕ್ಸರ್ ಆಗಿದ್ದಾತ. ಆದರೆ, ಕ್ರಮೇಣ ಆತ ವೇಟ್‌ಲಿಫ್ಟಿಂಗ್‌ನತ್ತ ಆಸಕ್ತನಾದ. ತರಬೇತುದಾರರ ಸಲಹೆಯಿಂದ ಜೆರೆಮಿ ಬಾಕ್ಸಿಂಗ್‌ಗೆ ಬೆನ್ನು ತೋರಿದ ಎಂದು ಹೇಳಲಾಗಿದೆ. ಕೇವಲ ಎಂಟರ ಹರೆಯದಲ್ಲೇ ಆರ್ಮಿ ಸ್ಪೋರ್ಟ್ಸ್ ಇನ್ಸ್‌ಟಿಟ್ಯೂಟ್ ಸ್ಕೌಟ್ಸ್ ಜೆರೆಮಿಯನ್ನು ಗುರುತಿಸಿತ್ತು. ಜೆರೆಮಿ ತಂದೆ ಪ್ರಸಕ್ತ ಮಿಜೋರಾಂನ ಸಾರ್ವಜನಿಕ ಇಲಾಖೆಯಲ್ಲಿ ನೌಕರರಾಗಿದ್ದಾರೆ.

ಪ್ರಸ್ತುತ ಬ್ಯೂನಸ್ ಐರಿಸ್‌ನಲ್ಲಿ ನಡೆಯುತ್ತಿರುವ ಯುವ ಒಲಿಂಪಿಕ್ಸ್ ಕೂಟದಲ್ಲಿ ಭಾರತ ಈಗಾಗಲೇ ನಾಲ್ಕು ಪದಕ ಜಯಿಸಿದೆ. ತುಶಾರ್ ಮಾನೆ ಹಾಗೂ ಮೆಹುಲಿ ಘೋಶ್ ೧೦ ಮೀಟರ್ ರೈಫಲ್ ಶೂಟಿಂಗ್‌ನಲ್ಲಿ ಬೆಳ್ಳಿ ಗೆದ್ದರೆ, ತಾಂಗ್‌ಜಾಮ್ ತಬಾಬಿ ದೇವಿ ೪೪ ಕೆಜಿ ವಿಭಾಗದ ಜೂಡೋ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಗಳಿಸಿ ಭಾರತಕ್ಕೆ ಮೊದಲ ಪದಕ ತಂದಿತ್ತಿದ್ದರು.

೨೦೧೪ರ ಚೀನಾದ ನ್ಯಾನ್‌ಜಿಂಗ್‌ ಕೂಟದಲ್ಲಿ ಭಾರತ ಒಂದು ಬೆಳ್ಳಿ ಹಾಗೂ ಕಂಚು ಸೇರಿದ ಎರಡು ಪದಕಗಳನ್ನು ಮಾತ್ರ ಜಯಿಸಿತ್ತು. ಸಿಂಗಾಪುರದಲ್ಲಿ ನಡೆದ ೨೦೧೦ರ ಉದ್ಘಾಟನಾ ಕೂಟದಲ್ಲಿ ಭಾರತ ಆರು ಬೆಳ್ಳಿ ಹಾಗೂ ಎರಡು ಕಂಚಿನ ಪದಕ ಜಯಿಸಿತ್ತು.

ಏತನ್ಮಧ್ಯೆ, ಇದೇ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿದ್ದ ಸ್ನೇಹಾ ಸೊರೆನ್, ವನಿತೆಯರ ೪೮ ಕೆಜಿ ವಿಭಾಗದಲ್ಲಿ ಪದಕ ಗೆಲ್ಲಲು ವಿಫಲವಾದರು. ಇತ್ತ, ಕರ್ನಾಟಕದ ಶ್ರೀಹರಿ ನಟರಾಜ್, ೧೦೦ ಮೀಟರ್ ಬ್ಯಾಕ್‌ಸ್ಟ್ರೋಕ್ ಈಜಿನಲ್ಲಿ ಪದಕ ಗೆಲ್ಲಲಾಗದೆ ಆರನೇ ಸ್ಥಾನದೊಂದಿಗೆ ಹೋರಾಟ ಮುಗಿಸಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More