ಶಾಂಘೈ ಮಾಸ್ಟರ್ಸ್ | ನೊವಾಕ್ ಜೊಕೊವಿಚ್ ತೃತೀಯ ಸುತ್ತಿಗೆ ದಾಪುಗಾಲು

ವಿಂಬಲ್ಡನ್ ಚಾಂಪಿಯನ್ ನೊವಾಕ್ ಜೊಕೊವಿಚ್ ಶಾಂಘೈ ಮಾಸ್ಟರ್ಸ್ ಟೆನಿಸ್ ಪಂದ್ಯಾವಳಿಯಲ್ಲಿ ಮೂರನೇ ಸುತ್ತಿಗೆ ಧಾವಿಸಿದ್ದಾರೆ. ಈ ಹಿಂದಿನ ಹನ್ನೊಂದು ಮುಖಾಮುಖಿಯಲ್ಲಿ ಜೆರೆಮಿ ಚಾರ್ಡಿಯನ್ನು ಮಣಿಸಿದ್ದ ನೊವಾಕ್, ಮತ್ತೊಮ್ಮೆ ಫ್ರಾನ್ಸ್ ಆಟಗಾರನಿಗೆ ಸೋಲುಣಿಸಿದರು

ಗಾಯದ ಸಮಸ್ಯೆಯಿಂದಾಗಿ ಕಳೆದ ಒಂದೂವರೆ ವರ್ಷದಿಂದ ಅಸ್ಥಿರ ಆಟದಿಂದ ಕಂಗೆಟ್ಟು ಹೋಗಿದ್ದ ನೊವಾಕ್ ಜೊಕೊವಿಚ್, ಈ ಋತುವಿನಲ್ಲಿ ಎರಡು ಗ್ರಾಂಡ್‌ಸ್ಲಾಮ್ ಗೆದ್ದು ಪ್ರಚಂಡ ಫಾರ್ಮ್‌ಗೆ ಮರಳಿದರು. ಇದೇ ಹುರುಪಿನಲ್ಲಿ ಸರ್ಬಿಯಾ ಆಟಗಾರ ಶಾಂಘೈ ಮಾಸ್ಟರ್ಸ್ ಪಂದ್ಯಾವಳಿಯಲ್ಲಿ ತೃತೀಯ ಸುತ್ತಿಗೆ ಧಾವಿಸಿದ್ದಾರೆ.

ಮಂಗಳವಾರ (ಅ. ೯) ನಡೆದ ಪಂದ್ಯದಲ್ಲಿ ಜೆರೆಮಿ ಚಾರ್ಡಿಯನ್ನು ೬-೩, -೭-೫ ಎರಡು ನೇರ ಸೆಟ್‌ಗಳಲ್ಲಿ ಜೊಕೊವಿಚ್ ಮಣಿಸಿದರು. ಮೊದಲ ಸೆಟ್‌ ಅನ್ನು ಸುಲಭವಾಗಿ ಜಯಿಸಿದ ಜೊಕೊವಿಚ್‌ಗೆ ಎರಡನೇ ಸೆಟ್‌ನಲ್ಲಿ ಚಾರ್ಡಿ ಪ್ರಬಲ ಸವಾಲೊಡ್ಡಿದರು. ೩೧ರ ಹರೆಯದ ನೊವಾಕ್, ಐದನೇ ಗೇಮ್‌ನಲ್ಲಿ ಚಾರ್ಡಿ ಸರ್ವ್ ಮುರಿದು ಅವರ ಹೋರಾಟಕ್ಕೆ ತೆರೆಎಳೆದರು.

೧೪ ಗ್ರಾಂಡ್‌ಸ್ಲಾಮ್‌ಗಳ ವಿಜೇತ ನೊವಾಕ್, ೨೦೧೭ರಲ್ಲಿ ಆರು ತಿಂಗಳು ಟೆನಿಸ್ ಅಂಗಣದಿಂದ ದೂರ ಉಳಿದಿದ್ದರು. ಮೊಣಕೈ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ನೊವಾಕ್, ಈ ಋತುವಿನ ಆರಂಭದಲ್ಲಿ ಫಿಟ್ನೆಸ್ ಸಮಸ್ಯೆ ಎದುರಿಸಿದ್ದರು. ಆದರೆ, ಋತುವಿನ ಕೊನೆಯ ಎರಡು ಗ್ರಾಂಡ್‌ಸ್ಲಾಮ್ ಟೂರ್ನಿಗಳಲ್ಲಿ ಅತ್ಯದ್ಭುತವಾಗಿ ಪುಟಿದೆದ್ದ ನೊವಾಕ್, ವಿಂಬಲ್ಡನ್ ಮತ್ತು ಯುಎಸ್ ಓಪನ್‌ನಲ್ಲಿ ಚಾಂಪಿಯನ್ ಆಗಿದ್ದರು.

ಕಿರ್ಗಿಯೋಸ್‌ ನಿರ್ಗಮನ

ಇದನ್ನೂ ಓದಿ : ಪೊಟ್ರೊ ಮಣಿಸಿದ ನೊವಾಕ್ ಜೊಕೊವಿಚ್‌ಗೆ ಯುಎಸ್ ಓಪನ್ ಕಿರೀಟ

ಪುರುಷರ ಸಿಂಗಲ್ಸ್ ವಿಭಾಗದ ಮತ್ತೊಂದು ಮೊದಲ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಟಗಾರ ನಿಕ್ ಕಿರ್ಗಿಯೋಸ್ ಮೂರು ಸೆಟ್‌ಗಳ ಆಟದಲ್ಲಿ ಸೋಲನುಭವಿಸಿದರು. ಅಮೆರಿಕ ಆಟಗಾರ ಬ್ರಾಡ್ಲೆ ಕ್ಲಾನ್ ಎದುರಿನ ಸೆಣಸಾಟದಲ್ಲಿ ಕಿರ್ಗಿಯೋಸ್ ೬-೪, ೪-೬, ೪-೩ ಸೆಟ್‌ಗಳಲ್ಲಿ ಸೋಲನುಭವಿಸಿದರು. ಮೊದಲ ಸೆಟ್‌ನಲ್ಲಿ ಗೆಲುವು ಪಡೆದ ಕಿರ್ಗಿಯೋಸ್ ಆನಂತರದ ಎರಡೂ ಸೆಟ್‌ಗಳಲ್ಲಿ ಅನನುಭವಿ ಆಟಗಾರನ ಎದುರು ಪರಾಭವಗೊಂಡರು.

ಅಂತೆಯೇ, ಇನ್ನೊಂದು ಪಂದ್ಯದಲ್ಲಿ ಕೈಲ್ ಎಡ್ಮುಂಡ್ ೭-೫, ೬-೩ ಸೆಟ್‌ಗಳಲ್ಲಿ ಸರ್ಬಿಯಾ ಆಟಗಾರ ಫಿಲಿಪ್ ಕ್ರಜಿನೊವಿಕ್ ವಿರುದ್ಧ ಗೆಲುವು ಪಡೆದರು. ಹನ್ನೊಂದನೇ ಶ್ರೇಯಾಂಕಿತ ಇಂಗ್ಲೆಂಡ್‌ನ ಯುವ ಆಟಗಾರ ಎಡ್ಮುಂಡ್ ಎದುರು ಮೊದಲ ಸೆಟ್‌ನಲ್ಲಿ ಕೊಂಚ ಪ್ರತಿರೋಧ ನೀಡಿದ ಫಿಲಿಪ್, ಎರಡನೇ ಸೆಟ್‌ನಲ್ಲಿ ಸಂಪೂರ್ಣ ಹಿನ್ನಡೆ ಅನುಭವಿಸಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More