ಜಜಾರಿಯಾ ನಿವೃತ್ತಿ ಮಧ್ಯೆ ಉದಯಿಸಿದ ಮತ್ತೋರ್ವ ಜಾವೆಲಿನ್ ಪಟು ಸಂದೀಪ್

ಜಕಾರ್ತದಲ್ಲಿ ನಡೆಯುತ್ತಿರುವ ಪ್ಯಾರಾ ಏಷ್ಯಾಡ್‌ನಲ್ಲಿ ಭಾರತದ ಜಾವೆಲಿನ್ ಎಸೆತಗಾರ ಸಂದೀಪ್ ಚೌಧರಿ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದರು. ಡಬಲ್ ಪ್ಯಾರಾಲಿಂಪಿಕ್ಸ್ ಪದಕ ವಿಜೇತ ದೇವೇಂದ್ರ ಜಜಾರಿಯಾ ನಿವೃತ್ತಿ ಘೋಷಣೆ ಮಧ್ಯೆ ಸಂದೀಪ್ ಸಾಧನೆ ಆಶಾಕಿರಣ ಎನಿಸಿದೆ

ಭಾರತೀಯ ವಿಕಲಚೇತನ ಕ್ರೀಡಾಪಟುಗಳಲ್ಲಿ ಸಂದೀಪ್ ಚೌಧರಿ ಹೊಸ ಭರವಸೆ ಮೂಡಿಸಿದ್ದಾರೆ. ಜಕಾರ್ತದ ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಮೂರನೇ ಏಷ್ಯನ್ ಪ್ಯಾರಾ ಕ್ರೀಡಾಕೂಟದ ಪುರುಷರ ಜಾವೆಲಿನ್ ಥ್ರೋ ಎಸೆತದಲ್ಲಿ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಗೆಲ್ಲುವುದರೊಂದಿಗೆ ಮಿಂಚು ಹರಿಸಿದರು. ಪ್ರಸಕ್ತ ಕೂಟದಲ್ಲಿ ಭಾರತಕ್ಕೆ ಸಿಕ್ಕ ಮೊಟ್ಟಮೊದಲ ಪದಕವಿದು ಎಂಬುದು ಗಮನಾರ್ಹ. ಸಂದೀಪ್ ಸಾಧನೆಯೊಂದಿಗೆ ಭಾರತ ಇಲ್ಲೀವರೆಗೆ ಮೂರು ಸ್ವರ್ಣ ಸೇರಿದ ಒಟ್ಟು ೧೧ ಪದಕಗಳನ್ನು ಜಯಿಸಿದಂತಾಗಿದೆ.

ಸೋಮವಾರ (ಅ.೮) ನಡೆದ ಪುರುಷರ ಎಫ್‌42/61–64 ವಿಭಾಗದಲ್ಲಿ ಸಂದೀಪ್ 60.01 ಮೀಟರ್ ದೂರ ಜಾವೆಲಿನ್ ಎಸೆದರು. ಈ ವಿಭಾಗದಲ್ಲಿ ಶ್ರೀಲಂಕಾದ ಚಮಿಂಡಾ ಸಂಪತ್ ಹೆತ್ತಿ (59.32 ಮೀ) ಹಾಗೂ ಇರಾನ್‌ನ ಒಮಿದಿ ಅಲಿ (58.97 ಮೀ) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿದರು. ಇತ್ತ, ರಮ್ಯಾ ಶಣ್ಮುಗಂ ಹಾಗೂ ರಾಧಾ ವೆಂಕಟೇಶ್ ಕ್ರಮವಾಗಿ ಮಹಿಳೆಯರ ಎಫ್‌ ೪೬ ಜಾವೆಲಿನ್ ಎಸೆತ ಮತ್ತು ಟಿ೧೨/೧೩ ೧೫೦೦ ಮೀಟರ್ ರೇಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದರು.

ದೆಹಲಿ ಮೂಲದ ಸಂದೀಪ್ ಬಾಲ್ಯದಿಂದಲೂ ಉತ್ತಮ ಕ್ರೀಡಾಪಟುವಾಗಿದ್ದರು. ಫುಟ್ಬಾಲ್ ಗೋಲ್‌ಕೀಪಿಂಗ್, ಬ್ಯಾಡ್ಮಿಂಟನ್ ಮತ್ತು ವಾಲಿಬಾಲ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದರು. ಅಂಗವೈಕಲ್ಯ ಕಾಡಿದ ನಂತರವೂ ಧೃತಿಗೆಡದೆ ಜಾವೆಲಿನ್ ಥ್ರೋನಲ್ಲಿ ಸಾಧನೆ ಮಾಡಿದರು. 2008ರಲ್ಲಿ ಸೊಂಟದ ಮುರಿತಕ್ಕೆ ಒಳಗಾಗಿದ್ದ ಸಂದೀಪ್ ಅವರ ಕಾಲುಗಳು ಊನಗೊಂಡು ಕಾಲಿನ ಶಕ್ತಿಯೂ ಕುಂದಿತ್ತು. 2017ರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿಯೂ ಸಂದೀಪ್ ಗಮನಾರ್ಹ ಪ್ರದರ್ಶನ ನೀಡಿದ್ದರು.

ಇದನ್ನೂ ಓದಿ : ವೇಗವಾಗಿ ೨೪ ಟೆಸ್ಟ್ ಶತಕದ ದಾಖಲೆ ಬರೆದ ಟೀಂ ಇಂಡಿಯಾ ಕ್ಯಾಪ್ಟನ್ ಕೊಹ್ಲಿ

ಈಜು, ರನ್ನಿಂಗ್‌ಲ್ಲಿ ಸ್ವರ್ಣ

ಈಜಿನಲ್ಲಿಯೂ ಭಾರತ ಚಿನ್ನದ ಪದಕ ಪಡೆಯಿತು. ನಾರಾಯಣ್ ಎಸ್ ೭ ೫೦ ಮೀಟರ್ ಬಟರ್‌ಫ್ಲೈನಲ್ಲಿ ೩೨.೭೨ ಸೆಕೆಂಡುಗಳಲ್ಲಿ ಕ್ರಮಿಸಿ ಚಿನ್ನ ಗೆದ್ದರೆ, ಮಹಿಳೆಯರ ಟಿ೧೧ ೧೫೦೦ ಮೀಟರ್ ರೇಸ್‌ನಲ್ಲಿ ರಕ್ಷಿತಾ ೫ ನಿಮಿಷ ೪೦.೬೪ ಸೆಕೆಂಡುಗಳಲ್ಲಿ ಗುರಿಮುಟ್ಟಿ ಸ್ವರ್ಣ ಸಾಧಕಿ ಎನಿಸಿದರು. ಮಹಿಳೆಯರ 100 ಮೀಟರ್ಸ್‌ ಬಟರ್‌ಫ್ಲೈನಲ್ಲಿ ಭಾರತದ ದೇವಾಂಶಿ ಸತಿಜಾ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಪುರುಷರ 200 ಮೀಟರ್ಸ್‌ನ ಎಸ್‌ಎಂ7 ವಿಭಾಗದಲ್ಲಿ ಸುಯಶ್ ಜಾಧವ್ ಕಂಚು ಗೆದ್ದರು. ಇನ್ನು, ಪುರುಷರ ಪವರ್‌ಲಿಫ್ಟಿಂಗ್‌ನ 49 ಕೆಜಿ ವಿಭಾಗದಲ್ಲಿ ಭಾರತದ ಫರ್ಮಾನ್ ಬಾಷಾ ಮತ್ತು ಪರಮಜೀತ್ ಕುಮಾರ್ ಅವರು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಜಯಿಸಿದರು.

ಬ್ಯಾಡ್ಮಿಂಟನ್‌ನಲ್ಲಿ ಕಂಚು

ಪುರುಷರ ಬ್ಯಾಡ್ಮಿಂಟನ್‌ ತಂಡ ವಿಭಾಗದಲ್ಲಿ ಭಾರತ ಕಂಚಿನ ಪದಕ ಗೆದ್ದ ಸಾಧನೆ ಮಾಡಿತು. ತಂಡ ವಿಭಾಗದ ಸೆಮಿಫೈನಲ್‌ನಲ್ಲಿ ಭಾರತ 1-2ರಿಂದ ಮಲೇಷ್ಯಾ ಎದುರು ಪರಾಭವಗೊಂಡಿತು. ಮೊದಲ ಸಿಂಗಲ್ಸ್‌ನಲ್ಲಿ ಸುಹಾಸ್‌ ಯತಿರಾಜ್‌ 21-8, 21-7ರಲ್ಲಿ ಓಮರ್‌ ಬಾಕ್ರಿ ವಿರುದ್ಧ ಜಯಿಸಿದರಾದರೂ, ಡಬಲ್ಸ್‌ನಲ್ಲಿ ರಾಜ್‌ಕುಮಾರ್‌ ಮತ್ತು ತರುಣ್‌ 9-21, 8-21ರಲ್ಲಿ ಚೆಹ್‌ ಹಾನ್‌ ಮತ್ತು ಸಾಬಾ ಹೈನುಲ್‌ ವಿರುದ್ಧ ಹಿನ್ನಡೆ ಅನುಭವಿಸಿದರು. ಇನ್ನು, ನಿರ್ಣಾಯಕ ಎನಿಸಿದ್ದ ಎರಡನೇ ಸಿಂಗಲ್ಸ್‌ನಲ್ಲಿ ಚಿರಾಗ್‌ ಭರತ್‌ 14-21, 15-21ರಲ್ಲಿ ಮೊಹಮ್ಮದ್‌ ಅಹ್ಮದ್‌ ಎದುರು ಪರಾಭವಗೊಂಡರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More