ಯುವ ಒಲಿಂಪಿಕ್ಸ್ ಕ್ರೀಡಾಕೂಟ| ಉಪಾಂತ್ಯಕ್ಕೆ ಕಾಲಿರಿಸಿದ ಅರ್ಚನಾ ಕಾಮತ್

ಯುವ ಆಟಗಾರ್ತಿ ಅರ್ಚನಾ ಗಿರೀಶ್ ಕಾಮತ್ ಯೂತ್ ಒಲಿಂಪಿಕ್ಸ್ ಕ್ರೀಡಾಕೂಟದ ಟೇಬಲ್ ಟೆನಿಸ್ ವಿಭಾಗದಲ್ಲಿ ಸೆಮಿಫೈನಲ್ ತಲುಪಿದ್ದಾರೆ. ಅಜರ್‌ಬೈಜಾನ್‌ನ ನಿನ್ ಜಿಂಗ್ ವಿರುದ್ಧದ ರೋಚಕ ಸೆಣಸಾಟದಲ್ಲಿ ಅರ್ಚನಾ ಕಾಮತ್ ೪-೩ರಿಂದ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದರು

ಅರ್ಜೆಂಟೀನಾದ ಬ್ಯೂನಸ್ ಐರಿಸ್‌ನಲ್ಲಿ ನಡೆಯುತ್ತಿರುವ ಯೂತ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕ ಗಳಿಕೆಗೆ ಅರ್ಚನಾ ಮತ್ತೊಂದು ಪದಕ ಸೇರ್ಪಡೆಗೊಳಿಸುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಮಂಗಳವಾರ (ಅ. ೯) ರಾತ್ರಿ ನಡೆದ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ೧೩-೧೧, ೮-೧೧, ೬-೧೧, ೧೧-೩, ೬-೧೧, ೧೨-೧೦, ೧೧-೭ರಿಂದ ಅರ್ಚನಾ ಗೆಲುವು ಸಾಧಿಸಿದರು. ಇದರೊಂದಿಗೆ ಯುವ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್ ತಲುಪಿದಕ ಮೊಟ್ಟಮೊದಲ ಭಾರತೀಯ ಆಟಗಾರ್ತಿ ಎನಿಸಿದರು.

ಇದೀಗ ಉಪಾಂತ್ಯದಲ್ಲಿ ಅರ್ಚನಾ ಚೀನಾದ ಯಿಂಗ್ಶಾ ಸನ್ ವಿರುದ್ಧ ಕಾದಾಡಲಿದ್ದಾರೆ. ಚೀನಿ ಆಟಗಾರ್ತಿಯ ವಿರುದ್ಧ ಗೆಲುವು ಸಾಧಿಸಿದ್ದೇ ಆದಲ್ಲಿ ಅರ್ಚನಾ ನೇರವಾಗಿ ಪದಕ ಸುತ್ತಿಗೆ ಧಾವಿಸಲಿದ್ದಾರೆ. ಒಂದೊಮ್ಮೆ ಈ ಸುತ್ತಿನಲ್ಲಿ ಆಕೆ ವೈಫಲ್ಯ ಅನುಭವಿಸಿದರೆ, ಕಂಚು ಪದಕ್ಕಾಗಿನ ಪ್ಲೇ ಆಫ್ ವಿಭಾಗದಲ್ಲಿ ಸೆಣಸಲಿದ್ದಾರೆ. ಅಂದಹಾಗೆ, ಅಜರ್‌ಬೈಜಾನ್‌ ಅಟಗಾರ್ತಿಯ ವಿರುದ್ಧದ ಸೆಣಸಾಟದಲ್ಲಿ ಅರ್ಚನಾ ಪ್ರಚಂಡ ಹೋರಾಟ ನಡೆಸಿದ್ದು ಆಕೆಗೆ ಆತ್ಮವಿಶ್ವಾಸ ತಂದಿತ್ತಿದೆ.

ಮೊದಲ ಗೇಮ್‌ನಲ್ಲಿ ಮುನ್ನಡೆ ಸಾಧಿಸಿದ ಅರ್ಚನಾಗೆ ನಿನ್ ಜಿಂಗ್ ಪ್ರಬಲ ತಿರುಗೇಟು ನೀಡಿದರು. ಚೀನಾ ಮೂಲದ ಅಜರ್‌ಬೈಜಾನ್‌ನ ಜಿಂಗ್, ಸತತ ಎರಡು ಗೇಮ್‌ಗಳ ಗೆಲುವಿನೊಂದಿಗೆ ೨-೧ ಮುನ್ನಡೆ ಸಾಧಿಸಿದರು. ಅಪಾಯದ ಸುಳಿವರಿತ ಅರ್ಚನಾ, ಮತ್ತೆ ತಿರುಗೇಟು ನೀಡಿ ೩-೩ ಸಮಬಲ ಸಾಧಿಸಿ ಪಂದ್ಯವನ್ನು ರೋಚಕ ಹಾದಿಗೆ ಕೊಂಡೊಯ್ದರು.

ಇದನ್ನೂ ಓದಿ : ಸಿಂಗಲ್ಸ್‌ನಲ್ಲೂ ಭಾರತದ ಮುಡಿಗೆ ಚಿನ್ನದ ಕಿರೀಟ ತೊಡಿಸಿದ ಮಣಿಕಾ ಬಾತ್ರಾ

ಈ ಹಂತದಲ್ಲಿ ಹದಿನೆಂಟರ ಹರೆಯದ ಜಿಂಗ್, ಹೆಚ್ಚು ಒತ್ತಡಕ್ಕೆ ಒಳಗಾಗದೆ ಸಹನೆಯ ಆಟವಾಡಿದರು. ಅತ್ಯದ್ಭುತ ಪ್ರದರ್ಶನ ನೀಡಿದ ಅರ್ಚನಾ, ನಿರ್ಣಾಯಕವಾಗಿದ್ದ ಗೇಮ್‌ನಲ್ಲಂತೂ ಇನ್ನಷ್ಟು ಆಕರ್ಷಕ ಪ್ರದರ್ಶನ ನೀಡಿದರು. “ನಿಜವಾಗಿಯೂ ಇದೊಂದು ಕಠಿಣ ಪಂದ್ಯವಾಗಿತ್ತು. ಪ್ರಯಾಸದ ಗೆಲುವು ಕಂಡರೂ, ರೋಚಕವಾಗಿದ್ದ ಪಂದ್ಯದಲ್ಲಿ ಜಯ ಸಾಧಿಸಿದ್ದು ಸಂತಸ ತಂದಿದೆ. ಪಂದ್ಯದ ಕೊನೆಯವರೆಗೂ ಪ್ರಬಲ ಪೈಪೋಟಿ ನೀಡಿದ ಜಿಂಗ್ ಕೂಡ ಅಭಿನಂದನೆಗೆ ಅರ್ಹರು,’’ ಎಂದು ಪಂದ್ಯದ ಬಳಿಕ ಅರ್ಚನಾ ತಿಳಿಸಿದರು.

ಅರ್ಚನಾ ಪಂದ್ಯಕ್ಕೂ ಮುನ್ನ ನಡೆದ ಪುರುಷರ ವಿಭಾಗದ ಪ್ರೀಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮಾನವ್ ಠಕ್ಕರ್ ಜಪಾನ್‌ನ ಟೊಮೊಕಾಜು ಹರಿಮೊಟೊ ಎದುರು ೧-೪ರಿಂದ ಸೋಲನುಭವಿಸಿ ಪಂದ್ಯಾವಳಿಯಿಂದ ಹೊರಬಿದ್ದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More