ಪ್ಯಾರಾ ಏಷ್ಯಾಡ್ | ಚಿನ್ನಕ್ಕೆ ಗುರಿ ಇಟ್ಟ ಬಿಲ್ಲುಗಾರ ಹರ್ವೀಂದರ್ ಸಿಂಗ್

ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ ಪ್ಯಾರಾ ಏಷ್ಯಾಡ್‌ನಲ್ಲಿ ಭಾರತ ಮತ್ತೊಂದು ಸ್ವರ್ಣ ಪದಕ ಗೆದ್ದುಕೊಂಡಿತು. ಪುರುಷರ ವೈಯಕ್ತಿಕ ರಿಕರ್ವ್ ವಿಭಾಗದಲ್ಲಿ ಹರ್ವೀಂದರ್ ಸಿಂಗ್ ಮೊದಲ ಸ್ಥಾನ ಪಡೆದರು. ಆ ಮೂಲಕ ಕೂಟದಲ್ಲಿ ಭಾರತ ೭ನೇ ಸ್ವರ್ಣವನ್ನು ತನ್ನದಾಗಿಸಿಕೊಂಡಿತು

ಏಷ್ಯಾಡ್ ಚರಿತ್ರೆಯಲ್ಲೇ ಗರಿಷ್ಠ ಮಟ್ಟದ ಸಾಧನೆಯೊಂದಿಗೆ ಇಂಡೋನೇಷ್ಯಾದಲ್ಲಿ ಇತಿಹಾಸ ಬರೆದ ಭಾರತದ ಅಥ್ಲೀಟ್‌ಗಳು ಇದೀಗ ಪ್ಯಾರಾ ಕೂಟದಲ್ಲಿಯೂ ಪದಕ ಬೇಟೆ ಮುಂದುವರೆಸಿದ್ದಾರೆ. ಬುಧವಾರದಂದು (ಅ. ೧೦) ಹರ್ವೀಂದರ್ ಸ್ವರ್ಣ ಪದಕ ಜಯಿಸಿದ ಬಳಿಕ ಟ್ರ್ಯಾಕ್ ಹಾಗೂ ಫೀಲ್ಡ್ ಸ್ಪರ್ಧೆಯಲ್ಲಿ ಭಾರತ ಬೆಳ್ಳಿ ಹಾಗೂ ಕಂಚಿನ ಪದಕವನ್ನು ಗೆದ್ದುಕೊಂಡಿತು.

ಮೋನು ಘಂಗಾಸ್ ಪುರುಷರ ಡಿಸ್ಕಸ್ ಎಸೆತದ ಎಫ್‌೧೧ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದರು. ಅಂತೆಯೇ ಮೊಹಮದ್ ಯಾಸರ್ ಪುರುಷರ ಎಫ್‌೪೬ ಶಾಟ್ ಪುಟ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡರು. ಆರ್ಚರಿ ಇಲ್ಲವೇ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಹರ್ವೀಂದರ್ ಚೀನಾದ ಝಾವೊ ಲಿಕ್ಸುಯಿ ವಿರುದ್ಧ ೬-೦ ಅಂತರದಲ್ಲಿ ಗೆಲುವು ಪಡೆದರು. ಡಬ್ಲ್ಯೂ೨/ಎಸ್‌ಟಿ ವಿಭಾಗದ ಫೈನಲ್‌ನಲ್ಲಿ ಹರ್ವೀಂದರ್ ಮೊದಲಿಗರಾಗಿ ಹೊರಹೊಮ್ಮಿದರು.

ಡಬ್ಲ್ಯೂ೨ ವಿಭಾಗದಲ್ಲಿ ಬರುವ ಅಥ್ಲೀಟ್‌ಗಳ ಎರಡೂ ಮೊಣಕಾಲುಗಳು ಸತ್ವ ಕಳೆದುಕೊಂಡಿದ್ದು, ಗಾಲಿಕುರ್ಚಿಯ ಅಗತ್ಯವಿರುತ್ತದೆ. ಇನ್ನು, ಎಸ್‌ಟಿ ವಿಭಾಗವು ಬಿಲ್ಲುಗಾರರಿಗೆ ಸೀಮಿತವಾಗಿರುತ್ತದೆ. ಈ ವಿಭಾಗದಲ್ಲಿನ ಅಥ್ಲೀಟ್‌ಗಳು ಗಾಲಿಕುರ್ಚಿಯ ಅಗತ್ಯವಿಲ್ಲದೆಯೇ ಗುರಿ ಇಡಬಹುದಾಗಿರುತ್ತದೆ.

ಇದನ್ನೂ ಓದಿ : ಪ್ಯಾರಾ ಏಷ್ಯಾಡ್ ಕೂಟ: ಭಾರತದ ನಾಲ್ಕನೇ ಸ್ವರ್ಣಕ್ಕೆ ಏಕ್ತಾ ಭ್ಯಾನ್ ಕಾಣಿಕೆ

ಇನ್ನು, ಟ್ರ್ಯಾಕ್ ಹಾಗೂ ಫೀಲ್ಡ್ ವಿಭಾಗದಲ್ಲಿ ಘಂಗಾಸ್ ೩೫.೮೯ ಮೀಟರ್ ಸಾಧನೆಯೊಂದಿಗೆ ರಜತ ಪದಕ ಜಯಿಸಿದರು. ಮೂರನೇ ಯತ್ನದಲ್ಲಿ ಫಂಗಾಸ್ ಈ ಸಾಧನೆ ಮಾಡಿದರು. ಇರಾನ್‌ನ ಒಲಾದ್ ಮೆಹ್ದಿ ಹೊಸ ಏಷ್ಯಾಡ್ ದಾಖಲೆಯೊಂದಿಗೆ ೪೨.೩೭ ಮೀಟರ್ ಸಾಧನೆಯೊಂದಿಗೆ ಚಿನ್ನ ಗೆದ್ದರು. ಎಫ್‌೧೧ ವಿಭಾಗದಲ್ಲಿ ಬರುವ ಅಥ್ಲೀಟ್‌ಗಳು ದೃಷ್ಟಿ ಸಮಸ್ಯೆಯಿಂದ ಕೂಡಿರುತ್ತಾರೆ.

ಶಾಟ್ ಪುಟ್ ಎಸೆತದಲ್ಲಿ ಯಾಸೆರ್ ೧೪.೨೨ ಮೀಟರ್ ದೂರ ಸಾಧನೆಯೊಂದಿಗೆ ಕಂಚಿನ ಪದಕ ಜಯಿಸಿದರು. ಕಜಕ್‌ಸ್ತಾನದ ಮನ್ಸುರ್‌ಬಯೆವ್ ರವಿಲ್ (೧೪.೬೬ ಮೀ.) ಬೆಳ್ಳಿ ಪದಕ ಜಯಿಸಿದರು. ಚೀನಾದ ವೀ ಎನ್ಲಾಂಗ್ ಏಷ್ಯಾಡ್ ದಾಖಲೆಯೊಂದಿಗೆ ೧೫.೬೭ ಮೀಟರ್ ಸಾಧನೆಯೊಂದಿಗೆ ಚಿನ್ನದ ಪದಕ ಪಡೆದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More