ಯುವ ಒಲಿಂಪಿಕ್ಸ್| ಭಾರತಕ್ಕೆ ಮೊದಲ ಚಿನ್ನದ ಪದಕ ತಂದಿತ್ತ ಮನು ಭಾಕರ್

ಬ್ಯೂನಸ್ ಐರಿಸ್‌ನಲ್ಲಿ ನಡೆಯುತ್ತಿರುವ ಯುವ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದೆ. ಏಷ್ಯಾಡ್‌ನಲ್ಲಿ ನಿರಾಸೆ ಅನುಭವಿಸಿದ್ದ ಯುವ ಗುರಿಕಾರ್ತಿ ಮನು ಭಾಕರ್ ವನಿತೆಯರ ೧೦ ಮೀಟರ್ ಏರ್ ಪಿಸ್ತೂಲ್ ಶೂಟಿಂಗ್‌ನಲ್ಲಿ ೨೩೬.೫ ಪಾಯಿಂಟ್ಸ್ ಗಳಿಸಿ ಸ್ವರ್ಣ ಪದಕ ಜಯಿಸಿದರು

ಇಂಡೋನೇಷ್ಯಾದಲ್ಲಿ ನಡೆದ ಹದಿನೆಂಟನೇ ಏಷ್ಯಾ ಕ್ರೀಡಾಕೂಟದಲ್ಲಿ ಪದಕ ಗೆಲ್ಲಲು ವಿಫಲವಾಗಿ ತೀವ್ರ ನಿರಾಸೆ ಅನುಭವಿಸಿದ್ದ ಮನು ಭಾಕರ್, ಅರ್ಜೆಂಟೀನಾದಲ್ಲಿ ನಡೆಯುತ್ತಿರುವ ಯುವ ಒಲಿಂಪಿಕ್ಸ್ ಕೂಟದಲ್ಲಿ ಚಿನ್ನದ ಪದಕ ಗೆದ್ದು ಸಂಭ್ರಮಿಸಿದ್ದಾರೆ. ಈ ಸಾಧನೆಯೊಂದಿಗೆ ಯುವ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಶೂಟರ್ ಎಂಬ ಗರಿಮೆಗೆ ಮನು ಭಾಕರ್ ಭಾಜನರಾದರು.

ಹದಿನಾರರ ಹರೆಯದ ಮನುಗೆ ಈ ಸ್ವರ್ಣ ಪದಕ ಆತ್ಮವಿಶ್ವಾಸವನ್ನು ತಂದಿತ್ತಿದೆ. ಏಷ್ಯಾಡ್‌ನಲ್ಲಿ ೨೫ ಮೀಟರ್ ಪಿಸ್ತೂಲ್ ಹಾಗೂ ೧೦ ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಕೂದಲೆಳೆಯ ಅಂತರದಿಂದ ಮನು ಪದಕ ತಪ್ಪಿಸಿಕೊಂಡಿದ್ದರು. ಅಂತೆಯೇ, ಇಂಚಾನ್‌ನಲ್ಲಿನ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿಯೂ ಮನು ಭಾಕರ್ ನಿರಾಸೆ ಅನುಭವಿಸಿದ್ದರು. ಹರ್ಯಾಣ ಮೂಲದ ಮನು ಎಂಟು ಮಂದಿ ಇದ್ದ ಫೈನಲ್ ಸ್ಪರ್ಧೆಯಲ್ಲಿ ನಿಖರ ಗುರಿ ಕಾಯ್ದುಕೊಂಡು ಮೊದಲ ಸ್ಥಾನ ಗಳಿಸಿದರು. ರಷ್ಯನ್ ಶೂಟರ್ ಲಾನ ಎನಿನಾ ಅವರನ್ನು ಹಿಂದಿಕ್ಕಿದ ಭಾರತದವರೇ ಆದ ಮಾನು ೦.೬ ಪಾಯಿಂಟ್ಸ್ ಹಿನ್ನಡೆಯಿಂದ ಬೆಳ್ಳಿ ಪದಕ ಪಡೆದರೆ, ಜಾರ್ಜಿಯಾದ ನಿನೊ ಖುಟ್ಸಿಬೆರಿಡ್ಜಿ (೨೧೪.೬ ಪಾಯಿಂಟ್ಸ್) ಕಂಚು ಗೆದ್ದರು.

ಇನ್ನು, ಪ್ರಸಕ್ತ ಕೂಟದಲ್ಲಿ ಶೂಟಿಂಗ್ ವಿಭಾಗದಲ್ಲಿ ಭಾರತಕ್ಕೆ ಒಲಿದ ಮೂರನೇ ಪದಕವಿದು. ಶಾಹು ಮಾನೆ ಹಾಗೂ ಮೆಹುಲಿ ಘೋಷ್ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ೧೦ ಮೀಟರ್ ಏರ್ ರೈಫಲ್‌ ವಿಭಾಗದಲ್ಲಿ ಎರಡನೇ ಸ್ಥಾನ ಗಳಿಸಿದ್ದರು. “ಏಷ್ಯಾಡ್ ಮತ್ತು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ವಂಚಿತವಾಗಿದ್ದ ಮನುಗೆ ಈ ಚಿನ್ನದ ಸಾಧನೆ ಮತ್ತೆ ಆತ್ಮವಿಶ್ವಾಸವನ್ನು ಮರುಕಳಿಸಿದೆ,’’ ಎಂದು ಮನು ಅವರ ತಂದೆ ರಾಮಕೃಷ್ಣ ಭಾಕರ್ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : ವಿಶ್ವ ಶೂಟಿಂಗ್: ಹೀನಾ, ಮನು ವೈಫಲ್ಯದಲ್ಲಿ ಚಿನ್ನಕ್ಕೆ ಗುರಿ ಇಟ್ಟ ಓಂಪ್ರಕಾಶ್ 

ಅಂದಹಾಗೆ, ದಿನದ ಹಿಂದಷ್ಟೇ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಮಿಜೋರಾಂ ಮೂಲದ ಜೆರೆಮಿ ಲಾಲ್‌ರಿನ್ನುಂಗಾ ಪುರುಷರ ೬೨ ಕೆಜಿ ವಿಭಾಗದಲ್ಲಿ ೨೭೪ ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ ಜಯಿಸಿದರು. ಸ್ನ್ಯಾಚ್ ವಿಭಾಗದಲ್ಲಿ ೧೨೪ ಕೆಜಿ ಮೇಲೆತ್ತಿದ ಜೆರೆಮಿ, ಕ್ಲೀನ್ ಮತ್ತು ಜೆರ್ಕ್ ವಿಭಾಗದಲ್ಲಿ ೧೫೦ ಕೆಜಿ ಮೇಲೆತ್ತಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More