ಪ್ಯಾರಾ ಏಷ್ಯಾಡ್ | ಎತ್ತರ ಜಿಗಿತದಲ್ಲಿ ಕ್ಲೀನ್‌ಸ್ವೀಪ್ ಸಾಧನೆ ಮೆರೆದ ಭಾರತ

ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ ಪ್ಯಾರಾ ಏಷ್ಯಾಡ್‌ನಲ್ಲಿ ಭಾರತ ಅಪರೂಪದ ಸಾಧನೆ ಮಾಡಿದೆ. ಗುರುವಾರ (ಅ.೧೧) ನಡೆದ ಪುರುಷರ ಎತ್ತರ ಜಿಗಿತದ ಮೂರೂ ಸ್ಥಾನಗಳು ಭಾರತದ ವಶವಾಯಿತು. ಶರದ್ ಚಿನ್ನ ಗೆದ್ದರೆ, ವರುಣ್ ಭಾಟಿ ಮತ್ತು ಮರಿಯಪ್ಪನ್ ಬೆಳ್ಳಿ-ಕಂಚು ಜಯಿಸಿದರು

ಟಿ೪೨/೬೩ ವಿಭಾಗದ ಎತ್ತರ ಜಿಗಿತದಲ್ಲಿ ಭಾರತ ಕ್ಲೀನ್‌ಸ್ವೀಪ್ ಸಾಧನೆ ಮಾಡಿ ಪದಕ ಬೇಟೆಯಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿತು. ಹಾಲಿ ಚಾಂಪಿಯನ್ ಶರದ್ ಕುಮಾರ್ ಎರಡು ಹೊಚ್ಚ ಹೊಸ ದಾಖಲೆ ಬರೆಯುವುದರೊಂದಿಗೆ ಮೊದಲ ಸ್ಥಾನ ಪಡೆದರು. ೨೬ರ ಹರೆಯದ ವಿಶ್ವ ಚಾಂಪಿಯನ್‌ಶಿಪ್ ರಜತ ಪದಕ ವಿಜೇತ ಶರದ್, ೧.೯೦ ಮೀಟರ್ ಎತ್ತರ ಜಿಗಿದು ದಾಖಲೆ ಬರೆದರು.

ಟಿ ೪೨/೬೩ ವಿಭಾಗದಲ್ಲಿನ ಅಥ್ಲೀಟ್‌ಗಳ ಕೆಳ ಭಾಗದ ಕಾಲುಗಳು ಅಂಗವೈಕಲ್ಯತೆಗೆ ಒಳಗಾಗಿರುತ್ತದೆ. ಅಂದಹಾಗೆ, ರಿಯೋ ಪ್ಯಾರಾಲಿಂಪಿಕ್ ಕಂಚು ಪದಕ ವಿಜೇತ ವರುಣ್ ಭಾಟಿ (೧.೮೨ ಮೀಟರ್) ಮತ್ತು ರಿಯೋ ಪ್ಯಾರಾಲಿಂಪಿಕ್ ಸ್ವರ್ಣ ಪದಕ ವಿಜೇತ ತಂಗವೇಲು ಮರಿಯಪ್ಪನ್ (೧.೬೭ ಮೀಟರ್) ಕ್ರಮವಾಗಿ ಕೊನೆಯ ಎರಡು ಸ್ಥಾನ ಗಳಿಸಿದರು. ಅಂದಹಾಗೆ, ಭಾಟಿ ಈ ಋತುವಿನಲ್ಲೇ ವೈಯಕ್ತಿಕ ಶ್ರೇಷ್ಠ ಜಿಗಿತದಿಂದ ಗಮನ ಸೆಳೆದರು.

ಬಿಹಾರ ಮೂಲದ ಶರದ್ ಎರಡನೇ ವಯಸ್ಸಿನಲ್ಲಿರುವಾಗಲೇ ತನ್ನ ಎಡಗಾಲಿನ ಪಾರ್ಶ್ವ ಸೆಳೆತಕ್ಕೆ ಗುರಿಯಾಗಿದ್ದರು. ಮಾಜಿ ವಿಶ್ವ ಚಾಂಪಿಯನ್ ಕೂಡ ಆಗಿರುವ ಶರದ್, ಜಕಾರ್ತ ಕೂಟದಲ್ಲಿ ಐತಿಹಾಸಿಕ ಸಾಧನೆಯೊಂದಿಗೆ ಸ್ವರ್ಣ ಸಾಧಕನೆನಿಸಿದರು. ದಿನದ ಆರಂಭದಲ್ಲಿ ಜಾವೆಲಿನ್ ಪಟು ಸುಂದರ್ ಸಿಂಗ್ ಗುರ್ಜಾರ್ ಎಫ್‌೪೬ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದರೆ, ಡಬಲ್ ಪ್ಯಾರಾಲಿಂಪಿಕ್ ಸ್ವರ್ಣ ವಿಜೇತ ದೇವೇಂದ್ರ ಜಜಾರಿಯಾ ಪದಕ ಗೆಲ್ಲಲಾಗದೆ ವೈಫಲ್ಯ ಅನುಭವಿಸಿದರು.

ಇದನ್ನೂ ಓದಿ : ಪ್ಯಾರಾ ಏಷ್ಯಾಡ್ | ಜಾವೆಲಿನ್ ಪಟು ಸುಂದರ್ ಸಿಂಗ್‌ಗೆ ರಜತ ಪದಕ

೩೭ರ ಹರೆಯದ ಜಜಾರಿಯಾ, ಪ್ರಸ್ತುತ ಕೂಟವೇ ತನ್ನ ವೃತ್ತಿಬದುಕಿನ ಕೊನೆಯ ಆಟ ಎಂದು ಹೇಳಿದ್ದರಾದರೂ, ಪದಕದೊಂದಿಗೆ ವೃತ್ತಿಬದುಕಿಗೆ ವಿದಾಯ ಹೇಳುವ ಅವರ ಆಸೆ ಕೈಗೂಡಲಿಲ್ಲ. ಈ ಮಧ್ಯೆ, ಕಳೆದ ಬಾರಿಯ ರಿಯೋ ಪ್ಯಾರಾಲಿಂಪಿಕ್ ಸ್ವರ್ಣ ವಿಜೇತ ಮರಿಯಪ್ಪನ್ ತಂಗವೇಲು ಕೂಡ ಏಷ್ಯಾಡ್‌ನಲ್ಲಿ ವೈಫಲ್ಯ ಅನುಭವಿಸಿದರು. ಕಂಚು ಪದಕ ಜಯಿಸಿದರಾದರೂ, ಅವರು ಕೊನೆಯ ಸ್ಥಾನಕ್ಕೆ ಕುಸಿದದ್ದು ಗಮನೀಯ. ಮುಂಬರುವ ದಿನಗಳಲ್ಲಿ ಅವರು ಕಠಿಣ ಅಭ್ಯಾಸ ನಡೆಸದ ಹೊರತು ಅವರ ಟೋಕಿಯೊ ಪ್ಯಾರಾಲಿಂಪಿಕ್‌ನ ಪದಕದ ಕನಸು ನನಸಾಗದು ಎಂಬುದನ್ನು ಪ್ರಸ್ತುತ ಕೂಟ ಎಚ್ಚರಿಸಿದೆ!

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More