ಶಾಂಘೈ ಮಾಸ್ಟರ್ಸ್ | ರೋಜರ್ ಫೆಡರರ್, ಜೊಕೊವಿಚ್ ಕ್ವಾರ್ಟರ್‌ಫೈನಲ್‌ಗೆ

ಇಪ್ಪತ್ತು ಗ್ರಾಂಡ್‌ಸ್ಲಾಮ್ ಪ್ರಶಸ್ತಿಗಳ ಒಡೆಯ ರೋಜರ್ ಫೆಡರರ್ ಶಾಂಘೈ ಮಾಸ್ಟರ್ಸ್ ಟೂರ್ನಿಯಲ್ಲಿ ಅಂತಿಮ ಎಂಟರ ಘಟ್ಟಕ್ಕೆ ಕಾಲಿರಿಸಿದ್ದಾರೆ. ಅಂತೆಯೇ, ಸರ್ಬಿಯಾ ಆಟಗಾರ ನೊವಾಕ್ ಜೊಕೊವಿಚ್ ಕೂಡ ಕ್ವಾರ್ಟರ್‌ಫೈನಲ್‌ ಪ್ರವೇಶಿಸುವಲ್ಲಿ ಸಫಲವಾದರು

ಶಾಂಘೈನಲ್ಲಿ ಪ್ರಶಸ್ತಿ ಉಳಿಸಿಕೊಳ್ಳಲು ರೋಜರ್ ಫೆಡರರ್ ಹೋರಾಟ ನಡೆಸಿದ್ದಾರೆ. ಸ್ಪೇನ್‌ನ ರಾಬೆರ್ಟೊ ಬೌಟಿಸ್ಟಾ ಆಗುಟ್ ವಿರುದ್ದದ ಹಣಾಹಣಿಯಲ್ಲಿ ಸ್ವಿಸ್ ಮಾಸ್ಟರ್‌ ಫೆಡರರ್ ೬-೩, ೨-೬, ೬-೪ ಸೆಟ್‌ಗಳಲ್ಲಿ ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಧಾವಿಸಿದರು. ಮುಂದಿನ ಸುತ್ತಿನಲ್ಲಿ ಅವರು ಜಪಾನ್‌ನ ಎಂಟನೇ ಶ್ರೇಯಾಂಕಿತ ಆಟಗಾರ ಕೀ ನಿಶಿಕೊರಿ ವಿರುದ್ಧ ಸೆಣಸಲಿದ್ದಾರೆ.

ಮೊದಲ ಸುತ್ತಿನಲ್ಲಿ ರಷ್ಯನ್ ಆಟಗಾರ ಡ್ಯಾನಿಲ್ ಮೆಡ್ವದೆವ್ ಎದುರು ಪ್ರಯಾಸದ ಗೆಲುವು ಸಾಧಿಸಿದ್ದ, ೩೭ರ ಹರೆಯದ ಫೆಡರರ್ ಸ್ಪೇನ್ ಆಟಗಾರನ ವಿರುದ್ದವೂ ಮೂರು ಸೆಟ್‌ಗಳ ಆಟದಲ್ಲಿ ಗೆಲುವು ಪಡೆದರು. ಮೊದಲ ಸೆಟ್ ಅನ್ನು ನಿರೀಕ್ಷೆಯಂತೆಯೇ ಸುಲಭವಾಗಿಯೇ ವಶಕ್ಕೆ ಪಡೆದ ಫೆಡರರ್, ಎರಡನೇ ಸೆಟ್‌ನಲ್ಲಿ ೩೦ರ ಹರೆಯದ ಆಗುಟ್ ಪ್ರತಿರೋಧದಿಂದ ಹಿನ್ನಡೆ ಅನುಭವಿಸಿದರು.

ಸ್ವಿಸ್ ಮಾಸ್ಟರ್ ವಿರುದ್ಧದ ಈ ಗೆಲುವು ಆಗುಟ್ ಪಾಲಿಗೆ ಅತ್ಯಂತ ಮಹತ್ವವಾಗಿತ್ತು. ಈ ಹಿಂದಿನ ಏಳು ಮುಖಾಮುಖಿಯಲ್ಲಿ ಒಂದು ಬಾರಿಯೂ ಪೆಡರರ್ ವಿರುದ್ಧ ಗೆಲುವು ಸಾಧಿಸಲು ವಿಫಲವಾಗಿದ್ದ ಆಗುಟ್, ಮೊದಲ ಬಾರಿಗೆ ಜಯದ ನಗೆಬೀರಿದರು. ಆದರೆ, ಫೆಡರರ್ ವಿರುದ್ಧದ ಈ ಗೆಲುವು ಪೂರ್ಣ ಪ್ರಮಾಣದಲ್ಲಿ ಅವರದ್ದಾಗಲಿಲ್ಲ. ಏಕೆಂದರೆ, ನಿರ್ಣಾಯಕವಾದ ಮೂರನೇ ಸೆಟ್‌ನಲ್ಲಿ ಪ್ರಬಲವಾಗಿ ತಿರುಗಿಬಿದ್ದ ಫೆಡರರ್, ಒಂಬತ್ತನೇ ಗೇಮ್‌ನಲ್ಲಿ ಕ್ವಾರ್ಟರ್‌ಫೈನಲ್ ಹಾದಿಯನ್ನು ಸುಗಮ ಮಾಡಿಕೊಂಡರು.

ಜೊಕೊ-ಜ್ವೆರೇವ್ ಹಣಾಹಣಿ

ಇದನ್ನೂ ಓದಿ : ವಿಮಾನ ನಿಲ್ದಾಣದ ರನ್‌ ವೇನಲ್ಲಿ ಕುಣಿದು ಕುಪ್ಪಳಿಸಿದ ಕೃಷ್ಣಸುಂದರಿ ಸೆರೆನಾ! 

ಪುರುಷರ ಸಿಂಗಲ್ಸ್ ವಿಭಾಗದ ಮತ್ತೊಂದು ಪ್ರೀಕ್ವಾರ್ಟರ್‌ಫೈನಲ್ ಸೆಣಸಾಟದಲ್ಲಿ ಹದಿನಾಲ್ಕು ಗ್ರಾಂಡ್‌ಸ್ಲಾಮ್‌ ಪ್ರಶಸ್ತಿಗಳ ಒಡೆಯ ನೊವಾಕ್ ಜೊಕೊವಿಚ್ ಜಯಭೇರಿ ಬಾರಿಸಿದರು. ಇಟಲಿ ಆಟಗಾರ ಮಾರ್ಕೊ ಸೆಚಿನಾಟೊ ಎದುರು ೬-೪, ೬-೦ ಎರಡು ನೇರ ಸೆಟ್‌ಗಳಲ್ಲಿ ಸರ್ಬಿಯಾ ಆಟಗಾರ ಜೊಕೊವಿಚ್ ಜಯಭೇರಿ ಬಾರಿಸಿದರು.

ವಿಶ್ವದ ಎರಡನೇ ಶ್ರೇಯಾಂಕಿತ ಆಟಗಾರ ಜೊಕೊವಿಚ್, ವಿಶ್ವದ ೭೨ನೇ ಶ್ರೇಯಾಂಕಿತ ಸೆಚಿನಾಟೊ ವಿರುದ್ಧ ಮೊದಲ ಸೆಟ್‌ನಲ್ಲಿ ಕೊಂಚ ಹೋರಾಟ ನಡೆಸಿ ಗೆಲುವು ಪಡೆದರು. ಆದರೆ, ಎರಡನೇ ಸೆಟ್‌ನಲ್ಲಿ ಸಂಪೂರ್ಣ ಆಕ್ರಮಣಕಾರಿಯಾದ ಜೊಕೊವಿಚ್, ಒಂದೇ ಒಂದು ಗೇಮ್ ಅನ್ನೂ ಬಿಟ್ಟುಕೊಡದೆ ಜಯಶಾಲಿಯಾದರು. ಇದೇ ಸೆಚಿನಾಟೊ ವಿರುದ್ಧ ಜೊಕೊವಿಚ್, ಈ ಋತುವಿನ ಫ್ರೆಂಚ್ ಓಪನ್ ಪಂದ್ಯಾವಳಿಯ ಕ್ವಾರ್ಟರ್‌ಫೈನಲ್‌ನಲ್ಲಿ ಮುಗ್ಗರಿಸಿದ್ದರು.

ಉದಯೋನ್ಮುಖ ತಾರೆ ಜರ್ಮನಿಯ ಅಲೆಕ್ಸಾಂಡರ್ ಜ್ವರೇವ್ ಆಸ್ಟ್ರೇಲಿಯಾದ ಯುವ ಆಟಗಾರ ಅಲೆಕ್ಸ್ ಡಿ ಮಿನುರ್ ವಿರುದ್ಧ ೬-೧, ೬-೪ ನೇರ ಸೆಟ್‌ಗಳಲ್ಲಿ ಗೆಲುವು ಪಡೆದರು. ೨೧ರ ಹರೆಯದ ಜ್ವರೇವ್, ಮೊದಲ ಸೆಟ್ ಅನ್ನು ಕೇವಲ ೨೯ ನಿಮಿಷಳಲ್ಲೇ ವಶಕ್ಕೆ ಪಡೆದರು. ೧೯ರ ಹರೆಯದ ಅಲೆಕ್ಸ್ ಎರಡನೇ ಸೆಟ್‌ನಲ್ಲಿ ತುಸು ಪ್ರತಿರೋಧ ನೀಡಿದರೂ, ಜ್ವರೇವ್‌ ಗೆಲುವಿಗೆ ಅದು ಬಾಧಕವಾಗಲಿಲ್ಲ. ಮುಂದಿನ ಸುತ್ತಿನಲ್ಲೀಗ ಜರ್ಮನ್ ಆಟಗಾರ ಇಂಗ್ಲೆಂಡ್‌ನ ಕೈಲ್ ಎಡ್ಮುಂಡ್ ವಿರುದ್ಧ ಕಾದಾಡಲಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More