ಶಾಂಘೈ ಮಾಸ್ಟರ್ಸ್ | ಜೊಕೊವಿಚ್, ಫೆಡರರ್ ಸೆಮಿಫೈನಲ್‌ಗೆ ದಾಂಗುಡಿ

ವಿಶ್ವದ ಸ್ಟಾರ್ ಟೆನಿಸಿಗರಾದ ರೋಜರ್ ಫೆಡರರ್ ಮತ್ತು ಜೊಕೊವಿಚ್ ಶಾಂಘೈ ಮಾಸ್ಟರ್ಸ್ ಟೆನಿಸ್ ಪಂದ್ಯಾವಳಿಯಲ್ಲಿ ಸೆಮಿಫೈನಲ್ ತಲುಪಿದ್ದಾರೆ. ಶುಕ್ರವಾರ (ಅ.೧೨) ನಡೆದ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಜೊಕೊವಿಚ್, ಕೆವಿನ್ ಆಂಡರ್ಸನ್ ವಿರುದ್ಧ ಜಯಿಸಿದರೆ, ನಿಶಿಕೊರಿಯನ್ನು ಫೆಡರರ್ ಮಣಿಸಿದರು

ಹದಿನಾಲ್ಕು ಗ್ರಾಂಡ್‌ಸ್ಲಾಮ್ ಪ್ರಶಸ್ತಿಗಳ ವಿಜೇತ ನೊವಾಕ್ ಜೊಕೊವಿಚ್ ಹಾಗೂ ೨೦ ಗ್ರಾಂಡ್‌ಸ್ಲಾಮ್‌ಗಳ ಒಡೆಯ ರೋಜರ್ ಫೆಡರರ್ ಶಾಂಘೈ ಮಾಸ್ಟರ್ಸ್ ಪಂದ್ಯಾವಳಿಯಲ್ಲಿ ಗೆಲುವಿನ ಓಟ ಮುಂದುವರೆಸಿದ್ದು, ಬಹುತೇಕ ಫೈನಲ್‌ನಲ್ಲಿ ಮುಖಾಮುಖಿಯಾಗುವ ಸಂಭವವಿದೆ. ಶನಿವಾರ (ಅ. ೧೩) ನಡೆಯಲಿರುವ ಎರಡು ಪ್ರತ್ಯೇಕ ಸೆಮಿಫೈನಲ್ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, ಫೈನಲ್‌ನಲ್ಲಿ ಫೆಡರರ್ ಮತ್ತು ನೊವಾಕ್ ಎದುರುಬದುರಾಗುವುದು ಖಚಿತವಾಗಲಿದೆ.

ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್ ವಿರುದ್ಧ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಜೊಕೊವಿಚ್, ೭--೬ (೭/೧), ೬-೩ ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿ ನಾಲ್ಕರ ಘಟ್ಟಕ್ಕೆ ತಲುಪುತ್ತಿದ್ದಂತೆ, ಯುವ ಆಟಗಾರ ಅಲೆಕ್ಸಾಂಡರ್ ಜ್ವೆರೇವ್ ವಿರುದ್ಧದ ಸೆಮಿಫೈನಲ್‌ಗೆ ತಾನು ಕಾತರದಿಂದ ಎದುರುನೋಡುತ್ತಿರುವುದಾಗಿ ನೊವಾಕ್ ತಿಳಿಸಿದರು. ದಕ್ಷಿಣ ಆಫ್ರಿಕಾ ಆಟಗಾರ ಕೆವಿನ್ ಮೊದಲ ಸೆಟ್‌ನಲ್ಲೇ ಪ್ರಬಲ ಪೈಪೋಟಿ ನೀಡಿದರಾದರೂ, ಜೊಕೊವಿಚ್, ಟೈಬ್ರೇಕರ್‌ನಲ್ಲಿ ಸೆಟ್ ವಶಕ್ಕೆ ಪಡೆದರು. ಇನ್ನು, ಎರಡನೇ ಸೆಟ್ ಅಂತೂ ನೊವಾಕ್ ಆಕ್ರಮಣಕಾರಿ ಆಟದಲ್ಲಿ ಹೆಚ್ಚು ಹೊತ್ತು ಸಾಗಲಿಲ್ಲ.

ಅಂದಹಾಗೆ, ಜರ್ಮನ್ ಆಟಗಾರ ಜ್ವೆರೇವ್ ಮತ್ತು ನೊವಾಕ್ ಈ ಹಿಂದೆ ಒಂದು ಬಾರಿ ಮುಖಾಮುಖಿಯಾಗಿದ್ದು, ಜೊಕೊವಿಚ್ ಯುವ ಆಟಗಾರನ ಕೈಯಲ್ಲಿ ಸೋಲನುಭವಿಸಿದ್ದರು. ಕಳೆದ ವರ್ಷ ಮೇ ತಿಂಗಳಿನಲ್ಲಿ ನಡೆದಿದ್ದ ರೋಮ್ ಮಾಸ್ಟರ್ಸ್ ಟೂರ್ನಿಯಲ್ಲಿ ಜೊಕೊವಿಚ್ ಎದುರು ೬-೪, ೬-೩ ನೇರ ಸೆಟ್‌ಗಳಲ್ಲಿ ಗೆದ್ದಿದ್ದ ಜ್ವೆರೇವ್ ಚಾಂಪಿಯನ್ ಆಗಿದ್ದರು. ಜ್ವೆರೇವ್ ಇಂಗ್ಲೆಂಡ್ ಆಟಗಾರ ಕೈಲ್ ಎಡ್ಮುಂಡ್ ವಿರುದ್ಧ ೬-೪, ೬-೪ ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.

ನಿಶಿಕೊರಿ ಮಣಿಸಿದ ಫೆಡರರ್

ಇದನ್ನೂ ಓದಿ : ‘ನಡಾಲ್ ಮತ್ತು ನಾನು ಟೆನಿಸ್‌ನ ಮೆಸ್ಸಿ- ರೊನಾಲ್ಡೊ’ ಎಂದ ಫೆಡರರ್ ಶುಭಾರಂಭ

ಪುರುಷರ ಸಿಂಗಲ್ಸ್ ವಿಭಾಗದ ಮತ್ತೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಫೆಡರರ್ ಜಪಾನ್ ಆಟಗಾರ ಕೀ ನಿಶಿಕೊರಿ ವಿರುದ್ಧ ೬-೪, ೭-೬ (೭/೪) ನೇರ ಸೆಟ್‌ಗಳಲ್ಲಿ ಗೆಲುವು ಪಡೆದು ನಾಲ್ಕರ ಘಟ್ಟ ತಲುಪಿದರು. ಜೊಕೊವಿಚ್ ಮತ್ತು ಕೆವಿನ್ ನಡುವಣದ ಪಂದ್ಯದಂತೆಯೇ ಫೆಡರರ್ ಮತ್ತು ನಿಶಿಕೊರಿ ಪಂದ್ಯದ ಚಿತ್ರಣವೂ ಹೆಚ್ಚು ವ್ಯತ್ಯಾಸದಿಂದ ಕೂಡಿರಲಿಲ್ಲ.

ಆದರೆ, ಫೆಡರರ್ ಮೊದಲ ಸೆಟ್ ಅನ್ನು ಸುಲಭವಾಗಿ ಗೆಲುವು ಪಡೆದರೆ, ಎರಡನೇ ಸೆಟ್‌ ಅನ್ನು ಟೈಬ್ರೇಕರ್‌ನಲ್ಲಿ ವಶಕ್ಕೆ ಪಡೆದರು. ಮುಂದಿನ ಸುತ್ತಿನಲ್ಲಿ ಫೆಡರರ್, ಕ್ರೊವೇಷ್ಯಾ ಆಟಗಾರ ಬೊರ್ನಾ ಕೊರಿಕ್ ವಿರುದ್ಧ ಸೆಣಸಲಿದ್ದಾರೆ. ಕೊರಿಕ್, ಮ್ಯಾಥ್ಯೂ ಎಬ್ಡೆನ್ ವಿರುದ್ಧ ೭-೫, ೬-೪ ಸೆಟ್‌ಗಳಲ್ಲಿ ಗೆಲುವು ಪಡೆದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More