ಕೊಹ್ಲಿ ಜೊತೆ ಸೆಲ್ಫಿಗೆ ಮುಗಿಬಿದ್ದ ಅಭಿಮಾನಿ; ಮರುಕಳಿಸಿದ ಭದ್ರತಾ ವೈಫಲ್ಯ

ಟೆಸ್ಟ್ ಕ್ರಿಕೆಟ್‌ನಲ್ಲಿ ಮತ್ತೊಮ್ಮೆ ಭದ್ರತಾ ವೈಫಲ್ಯ ಎದ್ದುಕಂಡಿದೆ. ವಿಂಡೀಸ್ ವಿರುದ್ಧದ ಸರಣಿಯಲ್ಲಿ ಇದು ಮತ್ತೆ ಪುನರಾವರ್ತನೆ ಆಗಿದೆ. ಏತನ್ಮಧ್ಯೆ, ಹೈದರಾಬಾದ್‌ ಟೆಸ್ಟ್ ಪಂದ್ಯದ ಮೊದಲ ದಿನದ ಮಧ್ಯಾಹ್ನದ ಚಹಾ ವಿರಾಮಕ್ಕೆ ವಿಂಡೀಸ್ ೬ ವಿಕೆಟ್ ನಷ್ಟಕ್ಕೆ ವಿಂಡೀಸ್ ೧೯೭ ರನ್ ಗಳಿಸಿದೆ

ಭಾರತ ಮತ್ತು ವೆಸ್ಟ್‌ ಇಂಡೀಸ್ ನಡುವಣದ ಟೆಸ್ಟ್ ಸರಣಿಯಲ್ಲಿ ಒಂದರ ಹಿಂದೊಂದರಂತೆ ಎರಡು ಬಾರಿ ಭದ್ರತಾ ವೈಫಲ್ಯ ಕಾಣಿಸಿಕೊಂಡಿದೆ. ರಾಜ್‌ಕೋಟ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭದ್ರತಾ ವೈಫಲ್ಯ ತಲೆದೋರಿತ್ತು. ಬೆನ್ನಲ್ಲೇ, ಹೈದರಾಬಾದ್ ಟೆಸ್ಟ್ ಪಂದ್ಯದ ಮೊದಲ ದಿನದಂದು ವ್ಯಕ್ತಿಯೊಬ್ಬ ಕ್ರೀಡಾಂಗಣಕ್ಕೇ ನುಸುಳಿ ವಿರಾಟ್ ಕೊಹ್ಲಿಯನ್ನು ಅಪ್ಪಿಕೊಳ್ಳಲು ಯತ್ನಿಸಿದ್ದಾನೆ. ಆದರೆ, ಕೊಹ್ಲಿ ಆತನಿಗೆ ಸ್ಪಂದಿಸಲಿಲ್ಲ. ಆದಾಗ್ಯೂ, ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅವರು ಅವಕಾಶ ಕಲ್ಪಿಸಿದರು.

ಅಷ್ಟರಲ್ಲಿ ಭದ್ರತಾ ಸಿಬ್ಬಂದಿ ಮೈದಾನಕ್ಕೆ ನುಸುಳಿದ್ದ ಅಭಿಮಾನಿಯನ್ನು ಕರೆದೊಯ್ದರು. ಶುಕ್ರವಾರ (ಅ.೧೨) ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶುರುವಾದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಬೆಳಗಿನ ಅವಧಿಯ ಒಂದು ಗಂಟೆಯ ಸುಮಾರಿಗೆ ವ್ಯಕ್ತಿಯೊಬ್ಬ ಬ್ಯಾರಿಕೇಡ್ ತಡೆಗೋಡೆಯನ್ನು ಜಿಗಿದು ಕೊಹ್ಲಿ ಫೀಲ್ಡಿಂಗ್‌ನಲ್ಲಿದ್ದ ಸ್ಥಳಕ್ಕೆ ಧಾವಿಸಿ ಬಂದ. ಬಂದದ್ದೇ ಕೊಹ್ಲಿಯನ್ನು ಅಪ್ಪಿಕೊಳ್ಳಲು ಮುಂದಾದಾಗ ಕೊಹ್ಲಿ ಆತನನ್ನು ತಡೆಯಲು ಯತ್ನಿಸಿದರು.

ಇದೇ ರೀತಿಯ ಘಟನೆ ರಾಜ್‌ಕೋಟ್‌ನಲ್ಲಿ ಮೊದಲ ಟೆಸ್ಟ್ ಪಂದ್ಯದ ವೇಳೆಯೂ ನಡೆದಿತ್ತು. ಕೊಹ್ಲಿ ಜೊತೆ ಸೆಲ್ಫಿಗಾಗಿ ಇಬ್ಬರು ಮುಗಿಬಿದ್ದಿದ್ದರು. ಸಾಮಾನ್ಯವಾಗಿ, ಟೆಸ್ಟ್ ಕ್ರಿಕೆಟ್‌ಗೆ ಹೆಚ್ಚಿನ ಜನ ಕ್ರೀಡಾಂಗಣಕ್ಕೆ ಬಾರದ ಹಿನ್ನೆಲೆಯಲ್ಲಿ ಭದ್ರತೆಯ ಕಡೆಗೆ ಹೆಚ್ಚಿನ ಲಕ್ಷ್ಯ ಇರಿಸದಿರುವುದು ಇಂತಹ ಪ್ರಕರಣಗಳಿಗೆ ಕಾರಣ. ಅದೂ ಸರಣಿಯೊಂದರಲ್ಲಿ ಎರಡು ಬಾರಿ ಭದ್ರತಾ ವೈಫಲ್ಯ ಆಗಿರುವುದು ಗಂಭೀರ ಚಿಂತನೆಗೆ ಹಚ್ಚಿದೆ.

ಇದನ್ನೂ ಓದಿ : ವೇಗವಾಗಿ ೨೪ ಟೆಸ್ಟ್ ಶತಕದ ದಾಖಲೆ ಬರೆದ ಟೀಂ ಇಂಡಿಯಾ ಕ್ಯಾಪ್ಟನ್ ಕೊಹ್ಲಿ

ಚೇಸ್ ಪ್ರತಿರೋಧ

ಇನ್ನು, ನಿರೀಕ್ಷೆಯಂತೆಯೇ ವಿಂಡೀಸ್ ಬ್ಯಾಟಿಂಗ್‌ನಲ್ಲಿ ತಡವರಿಸಿದೆ. ಭಾರತೀಯ ಬೌಲರ್‌ಗಳ ಪರಿಣಾಮಕಾರಿ ದಾಳಿಯಿಂದ ತತ್ತರಿಸಿದ ವಿಂಡೀಸ್, ಮಧ್ಯಾಹ್ನದ ಚಹಾ ವಿರಾಮದ ಹೊತ್ತಿಗೆ ೬೫ ಓವರ್‌ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೧೯೭ ರನ್ ಗಳಿಸಿತ್ತು. ರೋಸ್ಟನ್ ಚೇಸ್ ಪ್ರತಿರೋಧದ ಅರ್ಧಶತಕವು ಭಾರತದ ಆಟಗಾರರನ್ನು ಅಸಹನೆಗೊಳಿಸಿತು. ವೇಗಿ ಉಮೇಶ್ ಯಾದವ್ (೭೦ಕ್ಕೆ ೨) ಮತ್ತು ಸ್ಪಿನ್ನರ್ ಕುಲದೀಪ್ ಯಾದವ್ (೫೯ಕ್ಕೆ ೩) ಮತ್ತು ಆರ್ ಅಶ್ವಿನ್ (೨೫ಕ್ಕೆ ೧) ವಿಂಡೀಸ್ ಬ್ಯಾಟಿಂಗ್ ಅನ್ನು ಅಸ್ಥಿರಗೊಳಿಸಿದರು.

ಮೊದಲ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಸೋಲಿಗೆ ಪಕ್ಕಾಗಿರುವ ವಿಂಡೀಸ್, ಈ ಪಂದ್ಯದಲ್ಲಿ ತಿರುಗೇಟು ನೀಡಲು ಯತ್ನಿಸುತ್ತಿದ್ದು, ೭೦ ಓವರ್‌ಗಳಾಗುವ ಹೊತ್ತಿಗೆ ವಿಂಡೀಸ್ ೬ ವಿಕೆಟ್ ನಷ್ಟಕ್ಕೆ ೨೧೮ ರನ್ ಗಳಿಸಿತ್ತು. ರೋಸ್ಟನ್ ಚೇಸ್ ಮತ್ತು ಜೇಸನ್ ಹೋಲ್ಡರ್ ೬೩ ಮತ್ತು ೧೭ ರನ್ ಗಳಿಸಿ ಕ್ರೀಸ್‌ನಲ್ಲಿದ್ದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More