ಟೆಸ್ಟ್ ಕ್ರಿಕೆಟ್ | ಭಾರತದ ಮೇಲುಗೈಗೆ ತಡೆಯಾದ ರೋಸ್ಟನ್ ಚೇಸ್ ಅಜೇಯ ಆಟ

ಮಧ್ಯಮ ಕ್ರಮಾಂಕದಲ್ಲಿ ರೋಸ್ಟನ್ ಚೇಸ್ (೯೮*) ತೋರಿದ ಪ್ರತಿರೋಧದಿಂದಾಗಿ ಹೈದರಾಬಾದ್‌ನಲ್ಲಿ ಶುಕ್ರವಾರ (ಅ.೧೨) ಶುರುವಾದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಭಾರತದ ಮೇಲುಗೈ ಸಾಧ್ಯವಾಗಲಿಲ್ಲ. ಮೊದಲ ದಿನಾಂತ್ಯಕ್ಕೆ ವಿಂಡೀಸ್ ೭ ವಿಕೆಟ್ ನಷ್ಟಕ್ಕೆ ೨೯೫ ರನ್ ಗಳಿಸಿತ್ತು

ಮತ್ತೊಂದು ಶತಕದತ್ತ ರೋಸ್ಟನ್ ಚೇಸ್ ಮುನ್ನಡೆದಿದ್ದಾರೆ. ಅವರ ಪ್ರಚಂಡ ಬ್ಯಾಟಿಂಗ್ ನೆರವಿನಿಂದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ಕೊಂಚ ಪ್ರತಿರೋಧ ತೋರುವುದರೊಂದಿಗೆ ವಿಂಡೀಸ್ ಪುಟಿದೆದ್ದು ನಿಂತಂತೆ ಭಾಸವಾಗಿದೆ. ರಾಜ್‌ಕೋಟ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 272 ರನ್‌ಗಳ ಹೀನಾಯ ಸೋಲಿಗೆ ಗುರಿಯಾದ ಪ್ರವಾಸಿ ವೆಸ್ಟ್‌ ಇಂಡೀಸ್, ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದ್ದು, ಮೊದಲ ದಿನವಂತೂ ಅದು ಮಹಾನ್ ಕುಸಿತದಿಂದ ಚೇತರಿಸಿಕೊಂಡಿತು.

ಹೈದರಾಬಾದ್‌ನ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ವಿಂಡೀಸ್ ವಿರುದ್ಧ ಭಾರತ ತಂಡ ದಿನದ ಗೌರವಕ್ಕೆ ಭಾಜನವಾದರೂ, ರೋಸ್ಟನ್ ಚೇಸ್ (೯೮: ೧೭೪ ಎಸೆತ, ೭ ಬೌಂಡರಿ, ೧ ಸಿಕ್ಸರ್) ಅವರ ಅಜೇಯ ಬ್ಯಾಟಿಂಗ್‌ ಹಾಗೂ ಅವರೊಂದಿಗೆ ನಾಯಕ ಜೇಸನ್ ಹೋಲ್ಡರ್ (೫೨: ೯೨ ಎಸೆತ, ೬ ಬೌಂಡರಿ) ಹೋರಾಟದಿಂದ ವಿಂಡೀಸ್ ಕೂಡ ಭಾರತದಷ್ಟೇ ಗೌರವಕ್ಕೆ ಭಾಜನವಾಯಿತು. ಮೊದಲ ದಿನಾಂತ್ಯಕ್ಕೆ ರೋಸ್ಟನ್ ಚೇಸ್ ಜೊತೆಗೆ ದೇವೇಂದ್ರ ಬಿಶೂ ೨ ರನ್‌ಗಳೊಂದಿಗೆ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡರು.

ಒಂದು ಹಂತದಲ್ಲಿ ೧೧೩ ರನ್‌ಗಳಿಗೆ ವಿಂಡೀಸ್‌ನ ಮೇಲಿನ ಕ್ರಮಾಂಕದ ಅರ್ಧದಷ್ಟು ಆಟಗಾರರನ್ನು ಪೆವಿಲಿಯನ್‌ಗೆ ಅಟ್ಟಿದ್ದ ಭಾರತದ ಬೌಲರ್‌ಗಳು ಆನಂತರ ಮೊನಚು ಕಳೆದುಕೊಂಡರು. ರೋಸ್ಟನ್ ಚೇಸ್ ಮತ್ತು ಜೇಸನ್ ಹೋಲ್ಡರ್ ಸೊಗಸಾದ ಆಟಕ್ಕೆ ಭಾರತದ ಬೌಲರ್‌ಗಳು ಕೂಡ ಮಾರುಹೋದರು.

ಚೇಸ್ ಔಟ್ ಮಾಡಲಾಗದ ಬೇಗುದಿ

ಇದನ್ನೂ ಓದಿ : ಕೊಹ್ಲಿ ಜೊತೆ ಸೆಲ್ಫಿಗೆ ಮುಗಿಬಿದ್ದ ಅಭಿಮಾನಿ; ಮರುಕಳಿಸಿದ ಭದ್ರತಾ ವೈಫಲ್ಯ

೨೦೧೬ರ ಜಮೈಕಾ ಟೆಸ್ಟ್ ಪಂದ್ಯದಲ್ಲಿ ಅಮೋಘ ಶತಕದೊಂದಿಗೆ ಭಾರತದ ಗೆಲುವಿನ ಆಸೆಯನ್ನು ಚಿವುಟಿಹಾಕಿದ್ದ ರೋಸ್ಟನ್ ಚೇಸ್, ನಿರ್ಣಾಯಕವಾಗಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಮತ್ತೆ ಎರವಾದರು. ೧೩೭ ರನ್‌ಗಳೊಂದಿಗೆ ಆಗ ಮಿಂಚು ಹರಿಸಿದ್ದ ಚೇಸ್, ತಂಡವನ್ನು ಸೋಲಿನಿಂದ ಪಾರು ಮಾಡಿದ್ದರು.

ಹೈದರಾಬಾದಿನ ಈ ಬ್ಯಾಟಿಂಗ್‌ ಸ್ನೇಹಿ ಪಿಚ್‌ನಲ್ಲಿ ಭಾರತದ ಪರ ಉಮೇಶ್ ಯಾದವ್ (೮೩ಕ್ಕೆ ೩) ಉತ್ತಮ ಬೌಲಿಂಗ್ ನಡೆಸಿದರೆ, ಸ್ಪಿನ್ ಮಾಂತ್ರಿಕ ಕುಲದೀಪ್ ಯಾದವ್ (೭೪ಕ್ಕೆ ೩) ಅವರಿಗೆ ಬೆಂಬಲ ನೀಡಿದರು. ಇನ್ನು, ಟೆಸ್ಟ್ ಪಂದ್ಯಕ್ಕೆ ಪದಾರ್ಪಣೆ ಮಾಡಿದ ಶಾರ್ದೂಲ್ ಠಾಕೂರ್, ಗಾಯದ ಸಮಸ್ಯೆಯಿಂದ ಮೈದಾನವನ್ನು ತೊರೆದರು. ೧೦ ಎಸೆತ ಮಾತ್ರ ನಿಭಾಯಿಸಿದ ಠಾಕೂರ್, ಆನಂತರ ಪಾರ್ಶ್ವ ಸೆಳೆತಕ್ಕೆ ಈಡಾದರು. ಆದರೆ, ಆನಂತರದಲ್ಲಿ ನಾಲ್ವರು ಬೌಲರ್‌ಗಳೊಂದಿಗೆ ಭಾರತ ಹೋರಾಟ ಮುಂದುವರಿಸಿತು. ಆದರೆ, ದಿನದಾಟದ ಕಡೆಯ ಅವಧಿಯಲ್ಲೂ ರೋಸ್ಟನ್ ಚೇಸ್ ಅವರನ್ನು ಔಟ್ ಮಾಡಲಾಗದ ಬೇಗುದಿಯಲ್ಲಿ ಭಾರತ ತಂಡ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿತು.

ಆರಂಭಿಕ ಆರ್ಭಟ

ಬೆಳಗ್ಗೆ ಟಾಸ್ ಗೆದ್ದ ನಾಯಕ ಜೇಸನ್ ಹೋಲ್ಡರ್, ಮೊದಲು ಬ್ಯಾಟಿಂಗ್‌ಗೆ ಮುಂದಾದರು. ೩೨ ರನ್ ಗಳಿಸುವಷ್ಟರಲ್ಲೇ ವಿಂಡೀಸ್ ವಿಕೆಟ್ ಕಳೆದುಕೊಂಡಿತು. ಆರಂಭಿಕ ಕೀರನ್ ಪೊವೆಲ್ (೨೨) ಆರ್ ಅಶ್ವಿನ್ ಬೌಲಿಂಗ್‌ನಲ್ಲಿ ರವೀಂದ್ರ ಜಡೇಜಾಗೆ ಕ್ಯಾಚಿತ್ತು ಕ್ರೀಸ್ ತೊರೆದರು. ಇತ್ತ, ಕ್ರೀಸ್‌ಗೆ ಕಚ್ಚಿನಿಲ್ಲಲು ತಿಣುಕಾಡಿದ ಕ್ರೆಗ್ ಬ್ರಾಥ್‌ವೇಟ್ (೧೪) ಇನ್ನಿಂಗ್ಸ್‌ನ ೨೩ನೇ ಓವರ್‌ನ ಐದನೇ ಎಸೆತದಲ್ಲಿ ಕುಲದೀಪ್ ಯಾದವ್ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದು ಕ್ರೀಸ್ ತೊರೆದರು.

ಭೋಜನ ವಿರಾಮದ ನಂತರದಲ್ಲಿ ಶಾಯ್ ಹೋಪ್ (೩೬), ಶಿಮ್ರನ್ ಹೆಟ್ಮೇಯರ್ (೧೨), ಸುನಿಲ್ ಆಂಬ್ರಿಸ್ (೧೮) ವಿಕೆಟ್ ಎಗರಿಸಿದ ಭಾರತ, ಕೇವಲ ೧೧೩ ರನ್‌ಗಳಿಗೆ ೫ ವಿಕೆಟ್ ಗಳಿಸಿ ಆರ್ಭಟಿಸಿತು. ಈ ಹಂತದಲ್ಲಿ ರೋಸ್ಟನ್ ಚೇಸ್ ಮತ್ತು ಶೇನ್ ಡೋವ್ರಿಚ್ (೩೦) ಆರನೇ ವಿಕೆಟ್‌ಗೆ ೬೯ ರನ್ ಜೊತೆಯಾಟದೊಂದಿಗೆ ತಂಡದ ಇನ್ನಿಂಗ್ಸ್‌ಗೆ ಕೊಂಚ ಜೀವ ತುಂಬಿದರು. ಆದರೆ, ಈ ಜೋಡಿಯನ್ನು ಉಮೇಶ್ ಯಾದವ್ ಬೇರ್ಪಡಿಸಿದರು. ಡೋವ್ರಿಚ್ ಅವರನ್ನು ಉಮೇಶ್ ಯಾದವ್ ಎಲ್‌ಬಿ ಬಲೆಗೆ ಕೆಡವಿದರೂ, ಅಂಪೈರ್ ನಾಟೌಟ್ ಎಂದರು. ಆದರೆ, ನಾಯಕ ವಿರಾಟ್ ಕೊಹ್ಲಿ ಡಿಆರ್‌ಎಸ್‌ಗೆ ಮನವಿ ಸಲ್ಲಿಸಿ ವಿಂಡೀಸ್‌ನ ೬ನೇ ವಿಕೆಟ್ ಪತನಗೊಳ್ಳುವಂತೆ ಮಾಡಿದರು.

ಶತಕದಾಟದಿಂದ ಭಾರತವನ್ನು ಕಾಡಿದ ಜೋಡಿ

ದೈಹಿಕ ಫಿಟ್ನೆಸ್ ಸಮಸ್ಯೆಯಿಂದ ಮೊದಲ ಪಂದ್ಯಕ್ಕೆ ಅಲಭ್ಯವಾಗಿದ್ದ ಜೇಸನ್ ಹೋಲ್ಡರ್, ಎರಡನೇ ಟೆಸ್ಟ್‌ನಲ್ಲಿ ಆಡುವುದರೊಂದಿಗೆ ತಂಡಕ್ಕೆ ಆಸರೆಯಾದರು. ನಿರ್ಣಾಯಕ ಘಟ್ಟದಲ್ಲಿ ಆಡಲಿಳಿದ ಹೋಲ್ಡರ್, ನಿಜ ನಾಯಕನ ಆಟದೊಂದಿಗೆ ಕುಸಿತ ಕಂಡಿದ್ದ ತಂಡಕ್ಕೆ ಪುನಶ್ಚೇತನ ನೀಡಿದರು. ರೋಸ್ಟನ್ ಚೇಸ್ ಅವರೊಂದಿಗೆ ಸಾರ್ಥಕ ಹೋರಾಟ ನಡೆಸಿದ ಜೇಸನ್ ಹೋಲ್ಡರ್, ೧೦೪ ರನ್‌ಗಳ ಅದ್ಭುತ ಜೊತೆಯಾಟದೊಂದಿಗೆ ಭಾರತವನ್ನು ಕಾಡಿದರು.

ಸಂಕ್ಷಿಪ್ತ ಸ್ಕೋರ್

ವೆಸ್ಟ್‌ ಇಂಡೀಸ್ ಮೊದಲ ಇನ್ನಿಂಗ್ಸ್: ೯೫ ಓವರ್‌ಗಳಲ್ಲಿ ೭ ವಿಕೆಟ್‌ಗೆ ೨೯೫ (ಶಾಯ್ ಹೋಪ್, ರೋಸ್ಟನ್ ಚೇಸ್ ೯೮*, ಶೇನ್ ಡೋವ್ರಿಚ್ ೩೦, ಜೇಸನ್ ಹೋಲ್ಡರ್ ೫೨; ಉಮೇಶ್ ಯಾದವ್ ೮೩ಕ್ಕೆ ೩, ಕುಲದೀಪ್ ಯಾದವ್ ೭೪ಕ್ಕೆ ೩).

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More