ಟೆಸ್ಟ್ ಕ್ರಿಕೆಟ್ | ಕ್ಲೀನ್ ಸ್ವೀಪ್ ತಪ್ಪಿಸಿಕೊಳ್ಳುವುದೇ ವೆಸ್ಟ್‌ ಇಂಡೀಸ್?

ಆತಿಥೇಯ ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲುಂಡ ವಿಂಡೀಸ್, ಎರಡನೇ ಟೆಸ್ಟ್‌ಗೆ ಸಜ್ಜಾಗಿದೆ. ಟಾಸ್ ಗೆದ್ದ ನಾಯಕ ಜೇಸನ್ ಹೋಲ್ಡರ್ ಬ್ಯಾಟಿಂಗ್ ಆಯ್ದುಕೊಂಡಿದ್ದು, ಅವರ ಮತ್ತು ವೇಗಿ ಕೆಮರ್ ರೋಚ್ ವಾಪಸಾತಿ ತಂಡದ ತಿರುಗುಬೀಳುವಿಕೆಗೆ ನೆರವಾದೀತೇ?

೨೦೧೩ರ ಆರಂಭದಿಂದ ಹಿಡಿದು ಇಲ್ಲೀವರೆಗೆ ತವರಿನಲ್ಲಿ ಒಂಬತ್ತು ಸರಣಿಯನ್ನು ಜಯಿಸಿರುವ ಭಾರತ ತಂಡ, ಇದೀಗ ಹತ್ತನೇ ಸರಣಿ ಮೇಲೆ ಕಣ್ಣಿಟ್ಟಿದೆ. ಬ್ಯಾಟಿಂಗ್ ಜೊತೆಗೆ ಬೌಲಿಂಗ್‌ನಲ್ಲೂ ದುರ್ಬಲವಾಗಿರುವ ವೆಸ್ಟ್‌ ಇಂಡೀಸ್ ತಂಡವನ್ನು ಮಣಿಸುವುದರೊಂದಿಗೆ ೧೦ನೇ ಸರಣಿ ಗೆಲುವಿನ ನಿರೀಕ್ಷೆಯಲ್ಲಿದೆ ಭಾರತ ತಂಡ. ಒಂದೊಮ್ಮೆ ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಈ ಪಂದ್ಯವನ್ನು ಗೆಲ್ಲಲಾಗದೆ ಕನಿಷ್ಠ ಡ್ರಾ ಮಾಡಿಕೊಂಡರೂ, ಎರಡು ಪಂದ್ಯ ಸರಣಿಯನ್ನು ೧-೦ ಅಂತರದಿಂದ ಭಾರತ ಕೈವಶ ಮಾಡಿಕೊಳ್ಳುವುದರಿಂದ ಅದರ ಹತ್ತನೇ ಸರಣಿ ಗೆಲುವು ನಿಶ್ಚಿತ.

ಏತನ್ಮಧ್ಯೆ, ಪಂದ್ಯದ ಮುನ್ನಾದಿನವಾದ ಗುರುವಾರ (ಅ.೧೧) ಪ್ರಕಟಿಸಲಾದ ಭಾರತ ತಂಡದ 12 ಆಟಗಾರರ ಪೈಕಿ ಕನ್ನಡಿಗ ಕೆ ಎಲ್ ರಾಹುಲ್ ತಂಡದಲ್ಲಿ ಮುಂದುವರಿದಿದ್ದಾರೆ. ಆದರೆ, ಸುದೀರ್ಘ ಸಮಯದ ನಂತರ ಕಾದು ಭಾರತ ತಂಡಕ್ಕೆ ಆಯ್ಕೆಯಾಗಿದ್ದ ಕರ್ನಾಟಕದ ಮತ್ತೋರ್ವ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ ತಂಡದಲ್ಲಿ ಸೇರ್ಪಡೆಗೊಂಡಿಲ್ಲ. ರಾಜ್‌ಕೋಟ್ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಪೃಥ್ವಿ ಶಾ ಶತಕ ಬಾರಿಸಿ ದಾಖಲೆ ಬರೆದಿದ್ದರು. ಈ ಪಂದ್ಯದಲ್ಲಿಯೂ ರಾಹುಲ್ ಮತ್ತು ಪೃಥ್ವಿ ಇನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತವಾಗಿದೆ.

ಇನ್ನು, ಮೊದಲ ಪಂದ್ಯದಲ್ಲಿ ಇನಿಂಗ್ಸ್‌ ಹಾಗೂ 272 ರನ್‌ಗಳ ಅಂತರದಿಂದ ಗೆಲುವು ಸಾಧಿಸಿದ್ದ ಭಾರತ ತಂಡವು ಈ ಪಂದ್ಯದಲ್ಲಿಯೂ ಗೆಲುವು ಸಾಧಿಸುವ ವಿಶ್ವಾಸದಲ್ಲಿದೆ. ರಾಜ್‌ಕೋಟ್‌ನಲ್ಲಿ ಪೃಥ್ವಿ ಶಾ, ನಾಯಕ ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜ ಶತಕ ಗಳಿಸಿದ್ದರು. ಚೇತೇಶ್ವರ ಪೂಜಾರ ಹಾಗೂ ರಿಷಭ್ ಪಂತ್ ಕೆಲವೇ ರನ್‌ಗಳ ಅಂತರದಲ್ಲಿ ಶತಕ ವಂಚಿತರಾಗಿದ್ದರು.

ಇದನ್ನೂ ಓದಿ : ಭಾರತದ ಆಕ್ರಮಣಕಾರಿ ಆಟಕ್ಕೆ ಸಿಲುಕಿದ ವಿಂಡೀಸ್‌ಗೆ ಇನ್ನಿಂಗ್ಸ್ ಸೋಲು

ಇನ್ನು, ಬೌಲಿಂಗ್‌ನಲ್ಲಿ ಮೂವರು ಸ್ಪಿನ್ನರ್‌ಗಳು ಮತ್ತು ಇಬ್ಬರು ಮಧ್ಯಮ ವೇಗಿಗಳು ವಿಂಡೀಸ್‌ ಬ್ಯಾಟಿಂಗ್‌ಗೆ ಕಂಟಕರಾಗಿದ್ದರು. ಭಾರತದ ಈ ಆಲ್ರೌಂಡ್ ಆಟದಿಂದ ಪಂದ್ಯದ ಮೂರನೇ ದಿನದ ಮಧ್ಯಾಹ್ನವೇ ಫಲಿತಾಂಶ ಹೊರಹೊಮ್ಮಿತ್ತು. ಅದೇ ಲಯವನ್ನು ಮುಂದುವರಿಸುವ ಸಲುವಾಗಿ ತಂಡದಲ್ಲಿ ಯಾವುದೇ ಬದಲಾವಣೆ ಮಾಡದಿರಲು ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ನಿರ್ಧರಿಸಿದೆ.

ವಿಂಡೀಸ್‌ಗೆ ಚಿಂತೆ

ಪ್ರಮುಖ ಆಟಗಾರರ ಗಾಯದ ಸಮಸ್ಯೆಯಿಂದಾಗಿ ವಿಂಡೀಸ್ ತಂಡವು ದುರ್ಬಲವಾಗಿದೆ. ವೇಗಿ ಶಾನನ್ ಗೇಬ್ರಿಯಲ್ ಕೂಡ ಗಾಯದಿಂದ ಚೇತರಿಸಿಕೊಂಡಿಲ್ಲ. ಇತ್ತ, ಅನುಭವಿ ಕ್ರೆಗ್ ಬ್ರಾಥ್‌ವೈಟ್, ಕೀರನ್ ಪೊವೆಲ್, ಶೇನ್ ಡೋರಿಚ್‌ ತಂಡದ ಬ್ಯಾಟಿಂಗ್‌ಗೆ ಆಧಾರವಾಗಿದ್ದರೂ, ಅಸ್ಥಿರ ಆಟದಿಂದಾಗಿ ಅವರಿಂದ ತಂಡಕ್ಕೆ ಹೆಚ್ಚು ಒತ್ತಾಸೆ ಸಿಗುತ್ತಿಲ್ಲ. ಸದ್ಯ, ಜೇಸನ್ ಹೋಲ್ಡರ್ ಮತ್ತು ಕೆಮರ್ ರೋಚ್ ತಂಡಕ್ಕೆ ಮರಳಿರುವುದರಿಂದ ತುಸು ಆತ್ಮವಿಶ್ವಾಸ ಬಂದಂತಾಗಿದ್ದು, ಈ ಇಬ್ಬರ ವಾಪಸಾತಿ ಎಷ್ಟರಮಟ್ಟಿಗೆ ತಂಡಕ್ಕೆ ವರವಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.

ಹೈದರಾಬಾದ್‌ನ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ತಂಡ ಇದುವರೆಗೆ ನಾಲ್ಕು ಟೆಸ್ಟ್‌ ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಒಂದು ಡ್ರಾ ಮತ್ತು ಮೂರು ಜಯ ಸಾಧಿಸಿದೆ. 2017ರಲ್ಲಿ ಬಾಂಗ್ಲಾ ಎದುರಿನ ಪಂದ್ಯ ಇಲ್ಲಿ ನಡೆದಿತ್ತು. ಅದರ ನಂತರ ಯಾವುದೇ ಟೆಸ್ಟ್ ಪಂದ್ಯ  ಇಲ್ಲಿ ಆಗಿಲ್ಲ.

ಸಂಭವನೀಯ ಇಲೆವೆನ್

ಭಾರತ: ಪೃಥ್ವಿ ಶಾ, ಕೆ ಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್‌ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮದ್ ಶಮಿ, ಉಮೇಶ್ ಯಾದವ್.

ವೆಸ್ಟ್‌ಇಂಡೀಸ್: ಕ್ರೆಗ್ ಬ್ರಾಥ್‌ವೇಟ್, ಕೀರನ್ ಪೊವೆಲ್, ಶಾಯ್ ಹೋಪ್, ಸುನೀಲ್ ಆಂಬ್ರಿಸ್, ಶಿಮ್ರನ್ ಹೆಟ್ಮೇಯರ್, ರೋಸ್ಟನ್ ಚೇಸ್, ಶೇನ್ ಡೌವ್ರಿಚ್ (ವಿಕೆಟ್‌ ಕೀಪರ್), ಜೇಸನ್ ಹೋಲ್ಡರ್ (ನಾಯಕ), ಕೆಮರ್ ರೋಚ್, ದೇವೇಂದ್ರ ಬಿಶೂ, ಶಾನನ್ ಗೇಬ್ರಿಯಲ್.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More