ಪ್ಯಾರಾ ಏಷ್ಯಾಡ್‌ನಲ್ಲಿ ಶ್ರೇಷ್ಠ ಸಾಧನೆ ಮೆರೆದ ಭಾರತೀಯ ಅಥ್ಲೀಟ್‌ಗಳು

ಇಂಡೋನೇಷ್ಯಾದಲ್ಲಿ ನಡೆದ ಈ ಬಾರಿಯ ಏಷ್ಯಾಡ್ ಕೂಟ ಭಾರತದ ಪಾಲಿಗೆ ಸ್ಮರಣೀಯ ಎನಿಸಿಕೊಂಡಿತು. ಮೊದಲ ಹಂತದಲ್ಲಿ ಮಾತ್ರವಲ್ಲದೆ, ಪ್ಯಾರಾ ಏಷ್ಯಾಡ್‌ನಲ್ಲೂ ಭಾರತ ೧೫ ಸ್ವರ್ಣ ಸೇರಿದ ಒಟ್ಟು ೭೨ ಪದಕಗಳನ್ನು ಗೆದ್ದುಕೊಂಡಿತು. ದೀಪಾ ಮಲಿಕ್ ಎರಡು ಪದಕಗಳನ್ನು ಗೆದ್ದದ್ದು ವಿಶೇಷ

ಜಕಾರ್ತ ಮತ್ತು ಪಾಲೆಂಬಾಂಗ್‌ನಲ್ಲಿ ನಡೆದ ಹದಿನೆಂಟನೇ ಏಷ್ಯಾ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್‌ಗಳು ಅಮೋಘ ಸಾಧನೆಯೊಂದಿಗೆ ನಾಡಿಗೆ ಗರಿಷ್ಠ ಮಟ್ಟದ ಪದಕ ತಂದುಕೊಟ್ಟರು. ಶನಿವಾರ (ಅ.೧೩) ಮುಕ್ತಾಯ ಕಂಡ ಪ್ಯಾರಾ ಏಷ್ಯಾಡ್‌ನ ಕೊನೇ ದಿನ ಕೂಡ ಭಾರತ ಎರಡು ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕದೊಂದಿಗೆ ಮಿಂಚು ಹರಿಸಿತು. ಒಟ್ಟು, ೧೫ ಸ್ವರ್ಣ, ೨೪ ಬೆಳ್ಳಿ ಹಾಗೂ ೩೩ ಕಂಚಿನ ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನ ಗಳಿಸಿದ ಭಾರತದ ಅಥ್ಲೀಟ್‌ಗಳು ಸಾರ್ಥಕ ಪ್ರವಾಸದೊಂದಿಗೆ ಇಂಡೋನೇಷ್ಯಾಗೆ ವಿದಾಯ ಹೇಳಿದ್ದಾರೆ.

ಕಳೆದ ಬಾರಿಯ ಇಂಚಾನ್ ಪ್ಯಾರಾ ಏಷ್ಯಾಡ್‌ನಲ್ಲಿ ಭಾರತ ಕೇವಲ ೩ ಸ್ವರ್ಣ, ೧೪ ಬೆಳ್ಳಿ ಹಾಗೂ ೧೬ ಕಂಚಿನ ಪದಕಗಳನ್ನು ಸೇರಿದ ಒಟ್ಟು ೩೩ ಪದಕಗಳಿಗೆ ಹೋರಾಟ ಮುಗಿಸಿತ್ತು. ಕೂಟದ ಕೊನೆಯ ದಿನದಂದು ಎಸ್‌ಎಲ್‌೩ ಬ್ಯಾಡ್ಮಿಂಟನ್ ವಿಭಾಗದಲ್ಲಿ ಭಾರತದ ಪ್ರಮೋದ್ ಭಗತ್ ಸ್ಥಳೀಯ ಆಟಗಾರ ಉಕುನ್ ರುಕೇಂಡಿ ಎದುರು ೨೧-೧೯, ೧೫-೨೧, ೨೧-೧೪ರ ಮೂರು ಗೇಮ್‌ಗಳ ಆಟದಲ್ಲಿ ಗೆಲುವು ಪಡೆದು ಚಿನ್ನದ ಪದಕ ಜಯಿಸಿದರು.

ಎಸ್ಎಲ್‌೩ ವಿಭಾಗದಲ್ಲಿ ಬರುವ ವಿಕಲಾಂಗ ಅಥ್ಲೀಟ್‌ಗಳು ಒಂದು ಇಲ್ಲವೇ ಎರಡೂ ಮೊಣಕಾಲ ಕೆಳಗಿನ ದುರ್ಬಲತೆಗೆ ಒಳಗಾಗಿರುವುದಲ್ಲದೆ, ಸರಿಯಾಗಿ ನಡೆಯಲು ಹಾಗೂ ಓಡಲು ಆಗದ ಸ್ಥಿತಿಯಲ್ಲಿರುತ್ತಾರೆ. ಇನ್ನು, ಪ್ಯಾರಾ ಶಟ್ಲರ್ ತರುಣ್ ಕೂಡ ಪುರುಷರ ಸಿಂಗಲ್ಸ್ ಎಸ್‌ಎಲ್೪ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದರು. ಚೀನಿ ಆಟಗಾರ ಯುಯಾಂಗ್ ಗಾವೊ ಎದುರು ನಡೆದ ಅಂತಿಮ ಸುತ್ತಿನ ಹಣಾಹಣಿಯಲ್ಲಿ ೨೧-೧೬, ೨೧-೬ರಿಂದ ತರುಣ್ ಜಯಭೇರಿ ಬಾರಿಸಿದರು.

ಇದನ್ನೂ ಓದಿ : ಚಹಾ ಮಾರಿ ಹೊಟ್ಟೆ ಹೊರೆಯುತ್ತಿರುವ ಏಷ್ಯಾಡ್ ಪದಕ ವಿಜೇತ ಹರೀಶ್!

ಇದಕ್ಕೂ ಮುನ್ನ ಶುಕ್ರವಾರದಂದು (ಅ. ೧೨) ಪ್ಯಾರಾಲಿಂಪಿಕ್ ಪದಕ ವಿಜೇತೆ ದೀಪಾ ಮಲಿಕ್ ಎರಡನೇ ಕಂಚಿನ ಪದಕವನ್ನು ಜಯಿಸಿದರು. ಇನ್ನು, ಕೆ ಜೆನ್ನಿತಾ ಆಂಟೊ ವನಿತೆಯರ ವೈಯಕ್ತಿಕ ರ್ಯಾಪಿಡ್ ಪಿ೧ ಚೆಸ್ ವಿಭಾಗದ ಸ್ಪರ್ಧೆಯಲ್ಲಿ ಇಂಡೋನೇಷ್ಯಾದ ಮನುರಂಗ್ ರೊಸ್ಲಿಂಡಾ ವಿರುದ್ಧ ೧-೦ ಅಂತರದಿಂದ ಜಯಿಸಿದರೆ, ಕಿಶನ್ ಗಂಗೊಳ್ಳಿ ಪುರುಷರ ವೈಯಕ್ತಿಕ ರ್ಯಾಪಿಡ್ ವಿ೧-ಬಿ೨/ಬಿ೩ ವಿಭಾಗದಲ್ಲಿ ಗೆಲುವು ಸಾಧಿಸಿದರು. ರ್ಯಾಪಿಡ್ ಪಿ೧ ವಿಭಾಗದಲ್ಲಿನ ಸ್ಪರ್ಧಿಗಳು ದೈಹಿಕವಾಗಿ ವೈಕಲ್ಯ ಹೊಂದಿದ್ದರೆ, ವಿ೧-ಬಿ೨-ಬಿ೩ಯಲ್ಲಿ ಬರುವ ಅಥ್ಲೀಟ್‌ಗಳು ಭಾಗಶಃ ದೃಷ್ಟಿಹೀನರಾಗಿರುತ್ತಾರೆ.

ಪ್ಯಾರಾ ಬ್ಯಾಡ್ಮಿಂಟನ್ ವಿಭಾಗದ ವನಿತೆಯರ ವಿಭಾಗದಲ್ಲಿ ಪರುಲ್ ಪರ್ಮಾರ್ ೨೧-೯, ೨೧-೫ರಿಂದ ಥಾಯ್ಲೆಂಡ್‌ನ ವಾಂಡೀ ಕಾಮ್ಟಮ್ ವಿರುದ್ಧ ಎಸ್‌ಎಲ್‌೩ ವಿಭಾಗದಲ್ಲಿ ಗೆಲುವು ಸಾಧಿಸಿ ಚಿನ್ನ ಗೆದ್ದರು. ಈ ವಿಭಾಗದಲ್ಲಿನ ಅಥ್ಲೀಟ್‌ಗಳು ತಮ್ಮ ಮೊಣಕಾಲಿನ ಕೆಳಭಾಗದ ಅಂಗವೈಕಲ್ಯಕ್ಕೆ ಗುರಿಯಾಗಿರುವುದಲ್ಲದೆ, ಸರಿಯಾಗಿ ನಡೆಯಲು ಹಾಗೂ ಓಡಲೂ ಆಗದ ಸ್ಥಿತಿಯಲ್ಲಿರುತ್ತಾರೆ.

ಚೀನಾಗೆ ಚಾಂಪಿಯನ್ ಪಟ್ಟ

ಅಂದಹಾಗೆ, ನಿರೀಕ್ಷೆಯಂತೆಯೇ ಚೀನಾ ಕೂಟದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಚೀನಾ ೧೭೨ ಚಿನ್ನ, ೮೮ ಬೆಳ್ಳಿ ಹಾಗೂ ೫೯ ಕಂಚಿನ ಪದಕಗಳನ್ನು ಗೆದ್ದು ಅಗ್ರಸ್ಥಾನ ಪಡೆದರೆ, ದಕ್ಷಿಣ ಕೊರಿಯಾ ೫೩ ಚಿನ್ನ, ೨೫ ಬೆಳ್ಳಿ ಹಾಗೂ ೪೭ ಕಂಚಿನ ಪದಕಗಳನ್ನು ಜಯಿಸಿತು. ಇತ್ತ, ಇರಾನ್ ೫೧ ಚಿನ್ನ, ೪೨ ಬೆಳ್ಳಿ ಹಾಗೂ ೪೩ ಕಂಚಿನ ಪದಕಗಳೊಂದಿಗೆ ಮೂರನೇ ಸ್ಥಾನ ಗಳಿಸಿತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More