ಟೆಸ್ಟ್ ಕ್ರಿಕೆಟ್ | ಭಾರತದ ಇನ್ನಿಂಗ್ಸ್ ಮುನ್ನಡೆಗೆ ನೆರವಾದ ರಹಾನೆ-ಪಂತ್ ಆಟ

ವೆಸ್ಟ್‌ ಇಂಡೀಸ್ ವಿರುದ್ಧ ಹೈದರಾಬಾದ್‌ನಲ್ಲಿ ನಡೆಯುತ್ತಿರುವ ೨ನೇ ಹಾಗೂ ಕೊನೇ ಟೆಸ್ಟ್ ಪಂದ್ಯದ ೨ನೇ ದಿನದಾಟದಂದು ಆತಿಥೇಯ ಭಾರತ ಇನ್ನಿಂಗ್ಸ್ ಮುನ್ನಡೆಯತ್ತ ನಡೆದಿದೆ. ಉಮೇಶ್ ಯಾದವ್ (೮೮ಕ್ಕೆ ೬) ಬಳಿಕ ರಹಾನೆ (೭೫*) ಮತ್ತು ರಿಷಭ್ ಪಂತ್ (೮೫*) ಕೆರಿಬಿಯನ್ನರನ್ನು ಕಾಡಿದರು

ಆತಿಥೇಯ ಭಾರತ ತಂಡದ ವಿರುದ್ಧ ಕ್ಲೀನ್‌ಸ್ವೀಪ್ ತಪ್ಪಿಸಿಕೊಳ್ಳಬೇಕೆಂಬ ವಿಂಡೀಸ್‌ಗೆ ರಿಷಭ್ ಪಂತ್ ಮತ್ತು ಅಜಿಂಕ್ಯ ರಹಾನೆ ಹಾಗೂ ಉಮೇಶ್ ಯಾದವ್ ಕಂಟಕರಾಗಿ ಪರಿಣಮಿಸಿದರು. ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ತಂಡದ ಇನ್ನಿಂಗ್ಸ್ ಮುನ್ನಡೆಗೆ ಬೇಕಿರುವುದು ಕೇವಲ ೩ ರನ್‌ಗಳಷ್ಟೆ. ಮಧ್ಯಮ ಕ್ರಮಾಂಕಿದಲ್ಲಿನ ಭಾರತದ ಪ್ರತಿರೋಧ ಕೆರಿಬಿಯನ್ನರ ಪಾಲಿಗೆ ಮಹಾನ್ ಸವಾಲಾಗಿ ಪರಿಣಮಿಸಿದೆ.

ಹೈದರಾಬಾದ್‌ನ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ೮೧ ಓವರ್‌ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೩೦೮ ರನ್ ಕಲೆಹಾಕಿದೆ. ದಿನದಾಟ ನಿಂತಾಗ ಅಜಿಂಕ್ಯ ರಹಾನೆ (೭೫: ೧೭೪ ಎಸೆತ, ೬ ಬೌಂಡರಿ), ರಿಷಭ್ ಪಂತ್ (೮೫: ೧೨೦ ಎಸೆತ, ೧೦ ಬೌಂಡರಿ, ೨ ಸಿಕ್ಸರ್) ಐದನೇ ವಿಕೆಟ್‌ಗೆ ಕಲೆಹಾಕಿದ ಮುರಿಯದ ೧೪೬ ರನ್‌ಗಳು ಕೆರಿಬಿಯನ್ನರನ್ನು ಬಸವಳಿಯುವಂತೆ ಮಾಡಿತು.

ಸದ್ಯ, ಇನ್ನಿಂಗ್ಸ್ ಮುನ್ನಡೆಯ ಅಂಚಿನಲ್ಲಿರುವ ಭಾರತ ಮೂರನೇ ದಿನದಾಟದಂದು ಬೃಹತ್ ಮೊತ್ತದತ್ತ ಕಣ್ಣಿಟ್ಟಿದೆ. ಶತಕದ ಹೊಸ್ತಿಲಲ್ಲಿರುವ ರಹಾನೆ ಮತ್ತು ಪಂತ್ ಅದ್ಭುತ ಜತೆಯಾಟ ಭಾನುವಾರವೂ (ಅ.೧೪) ಮುಂದುವರೆದರೆ ಕೆರಿಬಿಯನ್ನರು ಪಂದ್ಯದಲ್ಲಿ ಹಿಡಿತ ಸಾಧಿಸುವುದು ಕಷ್ಟಸಾದ್ಯ. ಹೀಗಾಗಿ, ಮೂರನೇ ದಿನದಾಟದ ಭಾರತದ ಬ್ಯಾಟಿಂಗ್ ಕುತೂಹಲ ಮೂಡಿಸಿದೆ.

ಉಮೇಶ್ ಶ್ರೇಷ್ಠ ದಾಳಿ

ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ೭ವಿಕೆಟ್ ನಷ್ಟಕ್ಕೆ ೨೯೫ ರನ್ ಗಳಿಸಿದ್ದ ವೆಸ್ಟ್‌ಇಂಡೀಸ್ ತಂಡ, ಇನ್ನುಳಿದ ಮೂರು ವಿಕೆಟ್‌ಗಳನ್ನು ತ್ವರಿತಗತಿಯಲ್ಲೇ ಕಳೆದುಕೊಂಡಿತು. ೯೮ ರನ್ ಗಳಿಸಿದ್ದ ರೋಸ್ಟನ್ ಚೇಸ್ ಶತಕದ ನಂತರ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಾಗಲಿಲ್ಲ. ಏತನ್ಮಧ್ಯೆ, ೨ ರನ್ ಗಳಿಸಿದ್ದ ರಾತ್ರಿ ಕಾವಲುಗಾರ ದೇವೇಂದ್ರ ಬಿಶೂ ಯಾವುದೇ ರನ್ ಗಳಿಸದೆ ಉಮೇಶ್ ಯಾದವ್‌ಗೆ ಬೌಲ್ಡ್ ಆದರೆ, ಚೇಸ್ ಕೂಡ ಉಮೇಶ್ ಯಾದವ್ ಕರಾರುವಾಕ್ ಎಸೆತವೊಂದರಲ್ಲಿ ಬೌಲ್ಡ್ ಆಗಿ ಕ್ರೀಸ್ ತೊರೆದರು. ಇನ್ನು, ಶಾನಾನ್ ಗೇಬ್ರಿಯಲ್ (೦) ಕೂಡ ಉಮೇಶ್‌ಗೆ ವಿಕೆಟ್ ಒಪ್ಪಿಸಿದರು. ಉಮೇಶ್ ಯಾದವ್ ೨೦೧೧ರಲ್ಲಿ ವೆಸ್ಟ್ಇಂಡೀಸ್ ವಿರುದ್ಧ ದೆಹಲಿಯಲ್ಲಿ ನಡೆದ ಟೆಸ್ಟ್‌ನೊಂದಿಗೆ ಪದಾರ್ಪಣೆ ಮಾಡಿದ್ದಾಗ ಎರಡು ವಿಕೆಟ್ ಪಡೆದಿದ್ದರು.

ಇದನ್ನೂ ಓದಿ : ಟೆಸ್ಟ್ ಕ್ರಿಕೆಟ್ | ಭಾರತದ ಮೇಲುಗೈಗೆ ತಡೆಯಾದ ರೋಸ್ಟನ್ ಚೇಸ್ ಅಜೇಯ ಆಟ

ಮತ್ತೆ ಮಿಂಚಿದ ಪೃಥ್ವಿ ಶಾ

ವಿಂಡೀಸ್ ಮೊತ್ತವನ್ನು ೩೧೧ ರನ್‌ಗಳಿಗೆ ನಿಯಂತ್ರಿಸಿದ ಬಳಿಕ ಬ್ಯಾಟಿಂಗ್‌ಗಿಳಿದ ಭಾರತ ಉತ್ತಮ ಆರಂಭ ಕಂಡಿತಾದರೂ, ೯ನೇ ಓವರ್‌ನಲ್ಲಿ ಕನ್ನಡಿಗ ಕೆ ಎಲ್ ರಾಹುಲ್ (೪) ಅವರನ್ನು ಕಳೆದುಕೊಂಡಿತು. ಜೇಸನ್ ಹೋಲ್ಡರ್ ಕ್ಲೀನ್ ಬೌಲ್ಡ್‌ ಮಾಡುವುದರೊಂದಿಗೆ ಕರ್ನಾಟಕ ಬ್ಯಾಟ್ಸ್‌ಮನ್‌ನನ್ನು ಹೊರನಡೆಯುವಂತೆ ಮಾಡಿದರು. ಆದರೆ, ರಾಜ್‌ಕೋಟ್‌ನಲ್ಲಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಅಮೋಘ ಶತಕ ದಾಖಲಿಸಿದ್ದ ಪೃಥ್ವಿ ಶಾ (೭೦: ೫೩ ಎಸೆತ, ೧೧ ಬೌಂಡರಿ, ೧ ಸಿಕ್ಸರ್) ಹೈದರಾಬಾದ್‌ನಲ್ಲೂ ಮಿಂಚಿದರು. ಆಕ್ರಮಣಕಾರಿ ಆಟದೊಂದಿಗೆ ಅರ್ಧಶತಕ ದಾಖಲಿಸಿದ ಬಳಿಕ ಪೃಥ್ವಿ ವಿಕೆಟ್ ಕಳೆದುಕೊಂಡರು.

ಚೇತೇಶ್ವರ ಪೂಜಾರ (೧೦) ಹಾಗೂ ವಿರಾಟ್ ಕೊಹ್ಲಿ (೪೫) ಕ್ರಮವಾಗಿ ಶಾನಾನ್ ಗೇಬ್ರಿಯಲ್ ಮತ್ತು ಜೇಸನ್ ಹೋಲ್ಡರ್‌ ಬೌಲಿಂಗ್‌ನಲ್ಲಿ ವಿಕೆಟ್ ಕಳೆದುಕೊಂಡ ಬಳಿಕ ಭಾರತ ಸಂಕಷ್ಟಕ್ಕೆ ಸಿಲುಕಿಕೊಂಡಿತು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆ ಮತ್ತು ರಿಷಭ್ ಪಂತ್ ಅದ್ಭುತ ಜತೆಯಾಟದೊಂದಿಗೆ ಹಳಿ ತಪ್ಪಿದ್ದ ತಂಡವನ್ನು ಸರಿದಾರಿಗೆ ತಂದರು.

ಸಂಕ್ಷಿಪ್ತ ಸ್ಕೋರ್

ವೆಸ್ಟ್‌ಇಂಡೀಸ್ ಮೊದಲ ಇನ್ನಿಂಗ್ಸ್: ೧೦೧.೪ ಓವರ್‌ಗಳಲ್ಲಿ ೩೧೧ (ರೋಸ್ಟನ್ ಚೇಸ್ ೧೦೬, ಜೇಸನ್ ಹೋಲ್ಡರ್ ೫೨; ಉಮೇಶ್ ಯಾದವ್ ೮೮ಕ್ಕೆ ೬) ಭಾರತ ಮೊದಲ ಇನ್ನಿಂಗ್ಸ್: ೮೧ ಓವರ್‌ಗಳಲ್ಲಿ ೩೦೮/೪ (ಪೃಥ್ವಿ ಶಾ ೭೦, ಅಜಿಂಕ್ಯ ರಹಾನೆ ೭೫ ಬ್ಯಾಟಿಂಗ್, ರಿಷಭ್ ಪಂತ್ ೮೫ ಬ್ಯಾಟಿಂಗ್)

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More