ಯುವ ಒಲಿಂಪಿಕ್ಸ್ | ಲಕ್ಷ್ಯ ಸೇನ್‌ ಹಾಗೂ ಶೂಟರ್ ಮನು ಭಾಕರ್‌ಗೆ ರಜತ ಪದಕ

ಯುವ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಮತ್ತು ಶೂಟರ್ ಮನು ಭಾಕರ್ ಅರ್ಜೆಂಟೀನಾದ ಬ್ಯೂನಸ್ ಐರಿಸ್‌ನಲ್ಲಿ ನಡೆಯುತ್ತಿರುವ ಯುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಜಯಿಸಿದರು. ಫೈನಲ್‌ನಲ್ಲಿ ಚೀನಿ ಆಟಗಾರ ಲಿ ಶಿಫೆಂಗ್ ಎದುರು ೧೫-೨೧, ೧೯-೨೧ರಿಂದ ಲಕ್ಷ್ಯ ಸೇನ್ ಪರಾಭವಗೊಂಡರು

ಚಿನ್ನದ ಪದಕ ಗೆಲ್ಲುವ ಭರವಸೆ ಮೂಡಿಸಿದ್ದ ಲಕ್ಷ್ಯ ಸೇನ್ ಚೀನಿ ಆಟಗಾರನ ವಿರುದ್ಧ ನೇರ ಗೇಮ್‌ಗಳಲ್ಲಿ ಹಿನ್ನಡೆ ಅನುಭವಿಸಿದರು. ಹಾಲಿ ಜೂನಿಯರ್ ಏಷ್ಯಾ ಚಾಂಪಿಯನ್ ಲಕ್ಷ್ಯ ಸೇನ್, ೪೨ ನಿಮಿಷಗಳ ಕಾದಾಟದಲ್ಲಿ ಲೀ ಶಿಫೆಂಗ್ ಜಯಶಾಲಿಯಾದರು. ಮೊದಲ ಗೇಮ್‌ಗಿಂತಲೂ ಎರಡನೇ ಗೇಮ್‌ನಲ್ಲಿ ತೀವ್ರ ಪೈಪೋಟಿ ಒಡ್ಡಿದ ಲಕ್ಷ್ಯ ಸೇನ್, ಕೇವಲ ಮೂರು ಪಾಯಿಂಟ್ಸ್‌ಗಳ ಅಂತರದಲ್ಲಿ ಸೋತು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಇದರೊಂದಿಗೆ ಕೂಟದಲ್ಲಿ ಇಲ್ಲೀವರೆಗೆ ಭಾರತ ಮೂರು ಸ್ವರ್ಣ ಮತ್ತು ನಾಲ್ಕು ಬೆಳ್ಳಿ ಪದಕಗಳನ್ನು ಗೆದ್ದಂತಾಗಿದೆ.

ಜುಲೈನಲ್ಲಿ ನಡೆದ ಏಷ್ಯಾ ಚಾಂಪಿಯನ್‌ಶಿಪ್ ಪಂದ್ಯಾವಳಿಯ ಕ್ವಾರ್ಟರ್‌ಫೈನಲ್‌ನಲ್ಲಿ ಇದೇ ಶಿಫೆಂಗ್ ವಿರುದ್ಧ ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿದ್ದ ಲಕ್ಷ್ಯ ಸೇನ್‌ ಈ ಬಾರಿ ಚೀನಿ ಆಟಗಾರನ ಸವಾಲನ್ನು ಹತ್ತಿಕ್ಕಲು ವಿಫಲವಾದರು. ಎರಡೂ ಗೇಮ್‌ಗಳಲ್ಲಿ ಶಿಫೆಂಗ್ ಶುರುವಿನಿಂದಲೇ ಭಾರತೀಯ ಆಟಗಾರನ ಮೇಲೆ ಒತ್ತಡ ಹೇರಿದರು. ಆದಾಗ್ಯೂ, ಲಕ್ಷ್ಯ ಸೇನ್ ಪ್ರತಿರೋಧ ತೋರಿದರಾದರೂ, ಕೊನೆಯ ಹಂತದಲ್ಲಿ ಎಸಗಿದ ಕೆಲವೊಂದು ಪ್ರಮಾದಗಳು ಅವರಿಗೆ ಮುಳುವಾದವು.

ಮೊದಲ ಗೇಮ್‌ನಲ್ಲಿ ಶಿಫೆಂಗ್ ಆಕ್ರಮಣಕಾರಿ ಆಟದಿಂದಾಗಿ ೧೪-೫ ಮುನ್ನಡೆ ಕಂಡರು. ತೀವ್ರ ಹಿನ್ನಡೆಯ ಮಧ್ಯೆಯೂ ಲಕ್ಷ್ಯ ಸೇನ್ ಪುಟಿದೆದ್ದು ನಿಂತರಲ್ಲದೆ, ಅಂತರವನ್ನು ೧೩-೧೬ಕ್ಕೆ ತಂದು ನಿಲ್ಲಿಸಿದರು. ಲಕ್ಷ್ಯ ಸೇನ್, ಮೇಲುಗೈ ಸಾಧಿಸುವುದನ್ನು ಗ್ರಹಿಸಿದ ಶಿಫೆಂಗ್ ಜಾಗ್ರತೆಯ ಆಟದೊಂದಿಗೆ ೧೮-೧೩ರಿಂದ ಮುನ್ನಡೆ ಪಡೆದರು. ಆ ಬಳಿಕ ೨೦-೧೪ರಿಂದ ಅಂದರೆ ಆರು ಗೇಮ್ ಪಾಯಿಂಟ್ಸ್ ಪಡೆದರು. ಇತ್ತ ಲಕ್ಷ್ಯ ಸೇನ್ ಕೂಡ ಒಂದು ಗೇಮ್ ಪಾಯಿಂಟ್ಸ್ ಪಡೆದರಾದರೂ, ಒಂದು ಪಾಯಿಂಟ್ಸ್ ಅಂತರದಲ್ಲಿ ಶಿಫೆಂಗ್ ಗೇಮ್ ಅನ್ನು ವಶಕ್ಕೆ ಪಡೆದರು.

ಇದನ್ನೂ ಓದಿ : ಯುವ ಒಲಿಂಪಿಕ್ಸ್| ಭಾರತಕ್ಕೆ ಮೊದಲ ಚಿನ್ನದ ಪದಕ ತಂದಿತ್ತ ಮನು ಭಾಕರ್

ಇತ್ತ, ಎರಡನೇ ಗೇಮ್‌ನಲ್ಲಂತೂ ಇಬ್ಬರ ನಡುವೆ ಜಿದ್ದಾಜಿದ್ದಿನ ಕದನ ಏರ್ಪಟ್ಟಿತು. ಚೀನಿ ಆಟಗಾರ ಇಲ್ಲಿಯೂ ಲಕ್ಷ್ಯ ಸೇನ್‌ಗೆ ಸವಾಲಾಗಿ ಪರಿಣಮಿಸಿದರು. ೮-೭ ಮುನ್ನಡೆ ಪಡೆದ ಶಿಫೆಂಗ್ ಎದುರು ಲಕ್ಷ್ಯ ಸೇನ್ ಅಷ್ಟೇನೂ ಹಿಂದಿರಲಿಲ್ಲ. ಆದರೆ, ಮತ್ತೆ ನಾಲ್ಕು ಪಾಯಿಂಟ್ಸ್‌ಗಳನ್ನು ಶಿಫೆಂಗ್ ಗಳಿಸಿದಾಗ ಲಕ್ಷ್ಯ ಸೇನ್ ಹಿನ್ನಡೆ ಅನುಭವಿಸಿದರು. ಇಷ್ಟಾದರೂ, ೧೧-೧೪ರ ಅಂತರ ಕಾಯ್ದುಕೊಂಡ ಲಕ್ಷ್ಯ ಸೇನ್, ಮೂರು ಪಾಯಿಂಟ್ಸ್ ಹಿನ್ನಡೆಯನ್ನಷ್ಟೇ ಅನುಭವಿಸಿದರು.

ಹೆಜ್ಜೆ ಹೆಜ್ಜೆಗೂ ಕುತೂಹಲ ಮೂಡಿಸುತ್ತಾ ಸಾಗಿದ ಪಂದ್ಯದಲ್ಲಿ ಮತ್ತೆ ಶಿಫೆಂಗ್, ೧೮-೧೪, ೧೯-೧೪ರಿಂದ ಮೇಲುಗೈ ಸಾಧಿಸಿದಾಗ, ಪಟ್ಟುಬಿಡದ ಲಕ್ಷ್ಯ ಸೇನ್ ಒಂದರ ಹಿಂದೊಂದರಂತೆ ಮೂರು ಪಾಯಿಂಟ್ಸ್ ಕಲೆಹಾಕಿ ಪಂದ್ಯವನ್ನು ಜೀವಂತವಾಗಿಡಲು ಹೆಣಗಾಡಿದರು. ಆದರೆ, ಅಷ್ಟರಲ್ಲಾಗಲೇ, ೨೦-೧೭ರಿಂದ ಶಿಫೆಂಗ್ ಮುನ್ನಡೆ ಪಡೆದರು. ಇತ್ತ, ಲಕ್ಷ್ಯ ಸೇನ್ ಇನ್ನೆರಡು ಪಾಯಿಂಟ್ಸ್ ಗಳಿಸಿ ಪ್ರಬಲ ಪೈಪೋಟಿ ನೀಡಿದರು. ಆದರೆ, ಗೆಲುವಿಗೆ ಕೇವಲ ಒಂದು ಪಾಯಿಂಟ್ಸ್ ಮಾತ್ರ ಬೇಕಿದ್ದ ಶಿಫೆಂಗ್‌ ಅದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ.

ಇನ್ನು, ಶೂಟಿಂಗ್ ವಿಭಾಗದಲ್ಲಿ ಭಾರತ ಮತ್ತೊಂದು ಪದಕ ಪಡೆಯುವಲ್ಲಿ ಯಶಸ್ವಿಯಾಯಿತು. ವನಿತೆಯರ ೧೦ ಮೀಟರ್ ಏರ್ ಪಿಸ್ತೂಲ್ ಮಿಶ್ರ ವಿಭಾಗದಲ್ಲಿ ಮನು ಭಾಕರ್ ಚಿನ್ನದ ಪದಕಕ್ಕಾಗಿನ ಕಾದಾಟದಲ್ಲಿ ಜರ್ಮನಿಯ ವಾನೆಸ್ಸಾ ಸೀಗರ್ ಮತ್ತು ಬಲ್ಗೇರಿಯಾದ ಕಿರಿಲ್ ಕಿರೊವ್ ಎದುರು ಸೋತು ಬೆಳ್ಳಿ ಪದಕಕ್ಕೆ ತೃಪ್ತರಾದರು. ಈ ಮೂಲಕ ಮನು ಭಾಕರ್ ಯುವ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಪಡೆದ ಭಾರತದ ಎರಡನೇ ಅಥ್ಲೀಟ್ ಎನಿಸಿದರು. ಜೂಡೋ ಸ್ಪರ್ಧಿ ತಬಾಬಿ ದೇವಿ ಕೂಡ ಯುವ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಜಯಿಸಿದ್ದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More