ಶಾಂಘೈ ಮಾಸ್ಟರ್ಸ್‌ನಲ್ಲೂ ಚಾಂಪಿಯನ್ ಎನಿಸಿದ ನೊವಾಕ್ ಜೊಕೊವಿಚ್

ವರ್ಷದ ಕೊನೆಯ ಎರಡು ಗ್ರಾಂಡ್‌ಸ್ಲಾಮ್‌ಗಳಾದ ವಿಂಬಲ್ಡನ್ ಮತ್ತು ಯುಎಸ್ ಓಪನ್‌ನಲ್ಲಿ ಜಯಭೇರಿ ಬಾರಿಸಿದ್ದ ನೊವಾಕ್ ಜೊಕೊವಿಚ್, ಪ್ರಸಕ್ತ ಋತುವಿನಲ್ಲಿ ಸರ್ಬಿಯಾ ಆಟಗಾರ ಇನ್ನೊಂದು ಪ್ರಶಸ್ತಿಗೆ ಮುದ್ದಿಟ್ಟಿದ್ದಾರೆ. ಭಾನುವಾರ (ಅ.೧೪) ಶಾಂಘೈನಲ್ಲೂ ಚಾಂಪಿಯನ್ ಎನಿಸಿದರು

ಅಂತಿಮ ನಾಲ್ಕರ ಘಟ್ಟದಲ್ಲಿ ೨೦ ಗ್ರಾಂಡ್‌ಸ್ಲಾಮ್ ಪ್ರಶಸ್ತಿಗಳ ಒಡೆಯ ರೋಜರ್ ಫೆಡರರ್ ಸೋತು ಹೊರಬಿದ್ದಾಗಲೇ, ನೊವಾಕ್ ಜೊಕೊವಿಚ್ ಶಾಂಘೈನಲ್ಲೂ ಚಾಂಪಿಯನ್ ಆಗುವುದು ನಿಶ್ಚಿತವಾಗಿತ್ತು. ಕ್ರೊವೇಷ್ಯಾ ಆಟಗಾರ ಬೊರ್ನಾ ಕೊರಿಕ್, ಸ್ವಿಸ್ ಮಾಸ್ಟರ್ ವಿರುದ್ದ ೬-೪, ೬-೪ ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿ ಫೈನಲ್‌ಗೆ ಅರ್ಹತೆ ಪಡೆದಿದ್ದರು. ಆದರೆ, ಪ್ರಚಂಡ ಫಾರ್ಮ್‌ನಲ್ಲಿರುವ ನೊವಾಕ್ ಜೊಕೊವಿಚ್ ಅವರ ಪ್ರಶಸ್ತಿ ಕನಸನ್ನು ಹೊಸಕಿಹಾಕಿದರು.

ಭಾನುವಾರ (ಅ.೧೪) ನಡೆದ ಶಾಂಘೈ ಮಾಸ್ಟರ್ಸ್ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಬೊರ್ನಾ ಕೊರಿಕ್ ಜೊಕೊವಿಚ್ ಆಕ್ರಮಣಕಾರಿ ಆಟಕ್ಕೆ ಪ್ರತಿ ಹೇಳಲಾಗದೆ, ೩-೬, ೪-೬ ಎರಡು ನೇರ ಸೆಟ್‌ಗಳಲ್ಲಿ ಹಿನ್ನಡೆ ಅನುಭವಿಸಿ ಸೋಲನುಭವಿಸಿ ರನ್ನರ್‌ಅಪ್ ಪ್ರಶಸ್ತಿಗೆ ತೃಪ್ತರಾದರು. ಹದಿನಾಲ್ಕು ಗ್ರಾಂಡ್‌ಸ್ಲಾಮ್ ಪ್ರಶಸ್ತಿಗಳ ವಿಜೇತ ನೊವಾಕ್, ಕೆಲವು ಕಾಲ ತನ್ನೊಂದಿಗೆ ತರಬೇತಿ ಗೆಳೆಯನಾಗಿದ್ದ, ೧೯ನೇ ಶ್ರೇಯಾಂಕಿತ ಆಟಗಾರ ಕೊರಿಕ್ ವಿರುದ್ಧ ಸುಲಭ ಗೆಲುವು ದಾಖಲಿಸಿದರು.

೩೧ರ ಹರೆಯದ ಜೊಕೊವಿಚ್, ಶಾಂಘೈ ಮಾಸ್ಟರ್ಸ್ ಗೆಲುವಿನೊಂದಿಗೆ ಸತತ ೧೮ನೇ ಎಟಿಪಿ ಪಂದ್ಯಗಳನ್ನು ಗೆದ್ದುಕೊಂಡರು. ಈ ಋತುವಿನಲ್ಲಿ ವಿಂಬಲ್ಡನ್, ಸಿನ್ಸಿನ್ನಾಟಿ ಮಾಸ್ಟರ್ಸ್, ಯುಎಸ್ ಓಪನ್ ಹಾಗೂ ಇದೀಗ ಶಾಂಘೈನಲ್ಲಿ ಚಾಂಪಿಯನ್ ಆಗುವಲ್ಲಿ ನೊವಾಕ್ ಸಫಲರಾದರು. ಫೆಬ್ರವರಿ ತಿಂಗಳಿನಲ್ಲಿ ಮೊಣಕೈ ಶಸ್ತ್ರಚಿಕಿತ್ಸೆಗೆ ಗುರಿಯಾದ ಜೊಕೊವಿಚ್, ಫಾರ್ಮ್‌ ಕಳೆದುಕೊಂಡಿದ್ದಲ್ಲದೆ, ವಿಶ್ವ ಎಟಿಪಿ ಶ್ರೇಯಾಂಕದಲ್ಲಿ ೨೨ನೇ ಸ್ಥಾನದಲ್ಲಿದ್ದರು.

ಫೆಡರರ್ ಸ್ಥಾನಕ್ಕೆ ಲಗ್ಗೆ

ಈ ಗೆಲುವಿನೊಂದಿಗೆ ನೊವಾಕ್ ಜೊಕೊವಿಚ್, ಎಟಿಪಿ ರ್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಫೆಡರರ್ ಸ್ಥಾನವನ್ನು ಆಕ್ರಮಿಸಿದರು. ಸೋಮವಾರ (ಅ.೧೫) ಪ್ರಕಟವಾಗಲಿರುವ ನೂತನ ಶ್ರೇಯಾಂಕ ಪಟ್ಟಿಯಲ್ಲಿ ಇದು ಅಧಿಕೃತವಾಗಲಿದೆ. ಮೊಣಕಾಲು ನೋವಿನಿಂದಾಗಿ ಶಾಂಘೈ ಮಾಸ್ಟರ್ಸ್ ಟೆನಿಸ್ ಪಂದ್ಯಾವಳಿಯಿಂದ ವಂಚಿತವಾದ ಸ್ಪೇನ್ ಆಟಗಾರ ರಾಫೆಲ್ ನಡಾಲ್, ಜೊಕೊವಿಚ್ ಅವರನ್ನು ೨೧೫ ಪಾಯಿಂಟ್ಸ್‌ಗಳಿಂದ ಹಿಂದಿಕ್ಕಿದ್ದು ನಂ ೧ ಸ್ಥಾನದಲ್ಲಿಯೇ ಮುಂದುವರೆದಿದ್ದಾರೆ. ಹೆಚ್ಚೇನೂ ಅಂತರವಿಲ್ಲದ ಹಿನ್ನೆಲೆಯಲ್ಲಿ ಜೊಕೊವಿಚ್ ನಂ ೧ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ಕೊರಿಕ್‌ಗೆ ನಿರಾಸೆ

ವೃತ್ತಿಬದುಕಿನಲ್ಲಿ ಮೂರನೇ ಪ್ರಶಸ್ತಿ ಕನಸು ಕಂಡಿದ್ದ ೧೩ನೇ ಶ್ರೇಯಾಂಕಿತ ಕೊರಿಕ್ ನಿರಾಸೆ ಅನುಭವಿಸಿದರು. ಫೆಡರರ್ ವಿರುದ್ಧದ ಗೆಲುವಿನೊಂದಿಗೆ ಆತ್ಮವಿಶ್ವಾಸದಲ್ಲಿದ್ದ ಕೊರಿಕ್‌, ನೊವಾಕ್ ಆಟದೆದುರು ಮಂಕಾದರು. ಫೆಡರರ್ ಮಾತ್ರವಲ್ಲದೆ, ಮೂರು ಬಾರಿಯ ಗ್ರಾಂಡ್‌ಸ್ಲಾಮ್ ವಿಜೇತ ಹಾಗೂ ಸ್ವಿಡ್ಸರ್ಲೆಂಡ್‌ನ ಮತ್ತೋರ್ವ ಆಟಗಾರ ಸ್ಟಾನಿಸ್ಲಾಸ್ ವಾವ್ರಿಂಕಾ ವಿರುದ್ಧ ಆರಂಭಿಕ ಪಂದ್ಯದಲ್ಲಿ ಕೊರಿಕ್ ಗೆಲುವು ಸಾಧಿಸಿದ್ದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More