ಉಮೇಶ್ ಯಾದವ್ ಮಾರಕ ದಾಳಿಗೆ ಸಿಲುಕಿದ ವೆಸ್ಟ್ ಇಂಡೀಸ್ ವೈಟ್‌ವಾಶ್

ರಾಜ್‌ಕೋಟ್ ಪಂದ್ಯಕ್ಕೆ ಹೋಲಿಸಿದರೆ, ಹೈದರಾಬಾದ್‌ನಲ್ಲಿ ಕೆರಿಬಿಯನ್ನರು ಪುಟಿದುನಿಂತಂತೆ ಕಂಡುಬಂದಿದ್ದರು. ಆದರೆ, ಉಮೇಶ್ ಯಾದವ್ ೧೦ ವಿಕೆಟ್‌ಗಳ ಮಾರಕ ದಾಳಿಗೆ ಸಿಕ್ಕ ವಿಂಡೀಸ್, ಕ್ಲೀನ್‌ಸ್ವೀಪ್‌ನಿಂದ ಪಾರಾಗಲಿಲ್ಲ. ವಿರಾಟ್ ಪಡೆ ತವರಿನಲ್ಲಿ ೧೦ನೇ ಸರಣಿ ಗೆಲುವಿನೊಂದಿಗೆ ನಸುನಕ್ಕಿತು

ಆಲ್ರೌಂಡ್ ಆಟವಾಡಿದ ಭಾರತ ತಂಡ, ತವರಿನಲ್ಲಿ ಮತ್ತೊಂದು ಸ್ಮರಣೀಯ ಗೆಲುವು ದಾಖಲಿಸಿತು. ವೆಸ್ಟ್‌ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿಯೂ ಆಕ್ರಮಣಕಾರಿ ಆಟವಾಡಿದ ವಿರಾಟ್ ಪಡೆ, ೧೦ ವಿಕೆಟ್‌ಗಳ ಭರ್ಜರಿ ಗೆಲುವಿನೊಂದಿಗೆ ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು ೨-೦ ಅಂತರದಿಂದ ಗೆದ್ದು ಬೀಗಿತು. ಭಾರತ ತಂಡದ ಈ ಗೆಲುವಿನಲ್ಲಿ ವೇಗಿ ಉಮೇಶ್ ಯಾದವ್ ಮಾರಕ ದಾಳಿ ಮಹತ್ವವೆನಿಸಿತು.

ಭಾನುವಾರ (ಅ.೧೪) ಹೈದರಾಬಾದ್‌ನ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮುಕ್ತಾಯ ಕಂಡ ಪಂದ್ಯದಲ್ಲಿ ಭಾರತ ಮತ್ತೊಮ್ಮೆ ಅಧಿಕಾರಯುತ ಗೆಲುವು ಪಡೆಯಿತು. ವಿಶೇಷವೆಂದರೆ, ರಾಜ್‌ಕೋಟ್‌ನಲ್ಲಿ ನಡೆದಿದ್ದ ಪಂದ್ಯ ಮೂರೇ ದಿನಕ್ಕೆ ಮುಕ್ತಾಯ ಕಂಡಂತೆ ಹೈದರಾಬಾದ್ ಪಂದ್ಯವೂ ಮೂರೇ ದಿನದಲ್ಲೇ ಪರಿಸಮಾಪ್ತಿ ಕಂಡದ್ದು. ವಿಂಡೀಸ್ ಗೆಲುವಿಗೆ ನೀಡಿದ್ದ ೭೨ ರನ್ ಗುರಿಯನ್ನು ಭಾರತ ೧೬.೧ ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಮುಟ್ಟಿತು. ಪೃಥ್ವಿ ಶಾ (೩೩) ಮತ್ತು ಕೆ ಎಲ್ ರಾಹುಲ್ (೩೩) ಅಜೇಯರಾಗಿ ಉಳಿದರು.

ಇದಕ್ಕೂ ಮುನ್ನ ವಿಂಡೀಸ್ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಉಮೇಶ್ ಯಾದವ್ (45ಕ್ಕೆ ೪) ಪ್ರಖರ ದಾಳಿಗೆ ಸಿಲುಕಿ, ೪೬.೧ ಓವರ್‌ಗಳಲ್ಲಿ ೧೨೭ ರನ್‌ಗೆ ಆಲೌಟ್ ಆಯಿತು. ಉಮೇಶ್ ಯಾದವ್ ಅಲ್ಲದೆ, ರವೀಂದ್ರ ಜಡೇಜಾ (೧೨ಕ್ಕೆ ೩), ಆರ್ ಅಶ್ವಿನ್ (೨೪ಕ್ಕೆ ೨) ಮತ್ತು ಕುಲದೀಪ್ ಯಾದವ್ (೪೫ಕ್ಕೆ ೧) ಕೂಡ ಕೆರಿಬಿಯನ್ನರ ಬ್ಯಾಟಿಂಗ್‌ಗೆ ಕಂಟಕರಾದರು.

ಶಾಯ್ ಹೋಪ್ (೨೮), ಶಿಮ್ರನ್ ಹೆಟ್ಮೇಯರ್ (೧೭), ಸುನಿಲ್ ಆಂಬ್ರಿಸ್ (೩೮), ಜೇಸನ್ ಹೋಲ್ಡರ್ (೧೯) ಮತ್ತು ದೇವೇಂದ್ರ ಬಿಶೂ (೧೦) ಬಿಟ್ಟರೆ ಮಿಕ್ಕವರಾರೂ ಎರಡಂಕಿ ದಾಟಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ ೧೦೬ ರನ್ ಗಳಿಸಿದ್ದ ರೋಸ್ಟನ್ ಚೇಸ್, ಎದುರಿಸಿದ ೨೨ ಎಸೆತಗಳಲ್ಲಿ ೬ ರನ್‌ನಷ್ಟೇ ಗಳಿಸಲು ಸಾಧ್ಯವಾಯಿತು. ಅವರನ್ನು ಉಮೇಶ್ ಯಾದವ್ ಕ್ಲೀನ್ ಬೌಲ್ಡ್ ಮಾಡಿ ಪೆಟ್ಟು ನೀಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಆರು ವಿಕೆಟ್ ಪಡೆದಿದ್ದ ಉಮೇಶ್ ಯಾದವ್, ಮೊದಲ ಬಾರಿಗೆ ಟೆಸ್ಟ್ ಪಂದ್ಯವೊಂದರಲ್ಲಿ ೧೦ ವಿಕೆಟ್ ಪಡೆದ ಸಾಧನೆ ಮಾಡಿದರು.

ಇದನ್ನೂ ಓದಿ : ಆಯ್ಕೆ ನನಗೆ ಸಂಬಂಧಿಸಿದ್ದಲ್ಲ; ಕರುಣ್ ವಿಷಯದಲ್ಲಿ ಕೈತೊಳೆದುಕೊಂಡ ಕೊಹ್ಲಿ

ಜೇಸನ್ ಹೋಲ್ಡರ್ ಹೋರಾಟ ವ್ಯರ್ಥ

ಫಿಟ್ನೆಸ್ ಸಮಸ್ಯೆಯಿಂದಾಗಿ ಮೊದಲ ಟೆಸ್ಟ್‌ಗೆ ಅಲಭ್ಯವಾಗಿದ್ದ ನಾಯಕ ಜೇಸನ್ ಹೋಲ್ಡರ್ ಹೈದರಾಬಾದ್ ಪಂದ್ಯದಲ್ಲಿ ಏಕಾಂಗಿ ಹೋರಾಟ ನಡೆಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ದಾಖಲಿಸಿ ತಂಡದ ಇನ್ನಿಂಗ್ಸ್‌ಗೆ ನೆರವಾಗಿದ್ದ ಹೋಲ್ಡರ್, ಬೌಲಿಂಗ್‌ನಲ್ಲೂ ಐದು ವಿಕೆಟ್ ಪಡೆದು ಗಮನ ಸೆಳೆದರು. ೫೬ ರನ್‌ಗಳಿಗೆ ೫ ವಿಕೆಟ್ ಪಡೆದ ಹೋಲ್ಡರ್, ಭಾರತದ ಇನ್ನಿಂಗ್ಸ್ ಅನ್ನು ಸಾಧ್ಯವಾದಷ್ಟೂ ನಿಯಂತ್ರಿಸಿದರು.

ಶಾನನ್ ಗೇಬ್ರಿಯಲ್ (೧೦೭ಕ್ಕೆ ೩) ಮತ್ತು ಜೊಮೆಲ್ ವಾರಿಕನ್ (೮೪ಕ್ಕೆ ೨) ಕೂಡ ಹೋಲ್ಡರ್‌ಗೆ ಸಾಥ್ ನೀಡಿದರು. ಇದರ ಫಲವಾಗಿ ಭಾರತ ತಂಡ, ೧೦೬.೪ ಓವರ್‌ಗಳಲ್ಲಿ ೩೬೭ ರನ್‌ಗಳಿಗೆ ಆಲೌಟ್ ಆಯಿತು. ಕೇವಲ ೫೬ ರನ್ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿದ ವಿಂಡೀಸ್, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸಿದ್ದರೆ ಖಂಡಿತ ವೈಟ್‌ವಾಶ್ ತಪ್ಪಿಸಿಕೊಳ್ಳಬಹುದಿತ್ತು. ಆದರೆ, ಕೆಲವು ಕೆಟ್ಟ ಹೊಡೆತಗಳಲ್ಲದೆ, ಫೀಲ್ಡಿಂಗ್‌ನಲ್ಲೂ ಉದಾಸೀನ ಮೆರೆದ ಕಾರಣ ಸೋಲಿನ ಸುಳಿಗೆ ಸಿಲುಕಿತು.

ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ೪ ವಿಕೆಟ್‌ಗೆ ೩೦೮ ರನ್ ಗಳಿಸಿದ್ದ ಭಾರತದ ಪರ ಅಜಿಂಕ್ಯ ರಹಾನೆ ಮತ್ತು ರಿಷಭ್ ಪಂತ್ ಕ್ರಮವಾಗಿ ೭೫ ಮತ್ತು ೮೫ ರನ್‌ಗಳೊಂದಿಗೆ ಮೂರನೇ ದಿನದಾಟ ಮುಂದುವರಿಸಿದರಾದರೂ, ಈರ್ವರ ಪೈಕಿ ಯಾರೊಬ್ಬರು ಶತಕ ಭಾಗ್ಯ ಕಾಣಲಿಲ್ಲ. ರಹಾನೆ (೮೦) ಜೇಸನ್ ಹೋಲ್ಡರ್‌ಗೆ ವಿಕೆಟ್ ಒಪ್ಪಿಸಿದರೆ, ಶಾನನ್ ಗೇಬ್ರಿಯಲ್, ೯೨ ರನ್ ಗಳಿಸಿದ್ದ ರಿಷಭ್ ಪಂತ್‌ಗೆ ಪೆವಿಲಿಯನ್ ದಾರಿ ತೋರಿದರು. ಇವರಿಬ್ಬರ ನಂತರದಲ್ಲಿ ಎರಡಂಕಿ ದಾಟಿದ್ದು ಆರ್ ಅಶ್ವಿನ್ (೩೫) ಮಾತ್ರ.

ಸಂಕ್ಷಿಪ್ತ ಸ್ಕೋರ್

ವೆಸ್ಟ್‌ಇಂಡೀಸ್ ಮೊದಲ ಇನ್ನಿಂಗ್ಸ್: ೩೧೧ ದ್ವಿತೀಯ ಇನ್ನಿಂಗ್ಸ್: ೧೨೭ (ಸುನಿಲ್ ಆಂಬ್ರಿಸ್ ೩೮; ಉಮೇಶ್ ಯಾದವ್ ೪೫ಕ್ಕೆ ೪) ಭಾರತ ಮೊದಲ ಇನ್ನಿಂಗ್ಸ್: ೩೫೬ ಎರಡನೇ ಇನ್ನಿಂಗ್ಸ್: ೧೬.೧ ಓವರ್‌ಗಳಲ್ಲಿ ೭೫/೦ (ಪೃಥ್ವಿ ಶಾ ಅಜೇಯ ೩೩, ಕೆ ಎಲ್ ರಾಹುಲ್ ಅಜೇಯ ೩೩) ಪಂದ್ಯಶ್ರೇಷ್ಠ: ಉಮೇಶ್ ಯಾದವ್ ಸರಣಿ ಶ್ರೇಷ್ಠ: ಪೃಥ್ವಿ ಶಾ

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More