ಕನ್ನಡಿಗ ಕೆ ಎಲ್ ರಾಹುಲ್ ಆತ್ಮವಿಶ್ವಾಸ ಘಾಸಿಗೊಳಿಸಿರುವ ಅಸ್ಥಿರ ಆಟ

ವಿಂಡೀಸ್ ವಿರುದ್ಧದ ಎರಡು ಟೆಸ್ಟ್ ಪಂದ್ಯ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡುವುದರೊಂದಿಗೆ ತವರಿನಲ್ಲಿ ೧೦ನೇ ಸರಣಿ ಗೆಲುವು ಸಾಧಿಸಿದ ಟೀಂ ಇಂಡಿಯಾದ ಗಮನವೆಲ್ಲ ಸದ್ಯ ಈಗ ಆಸೀಸ್‌ನತ್ತ ನಾಟಿದೆ. ಇದೇ ವೇಳೆ, ಪ್ರಸಕ್ತ ಸಾಲಿನ ಟೆಸ್ಟ್‌ ಪಂದ್ಯಗಳಲ್ಲಿ ರಾಹುಲ್ ಅಸ್ಥಿರ ಆಟ ಅವರನ್ನು ಘಾಸಿಗೊಳಿಸಿದೆ

ಕರ್ನಾಟಕದ ಪ್ರತಿಭಾನ್ವಿತ ಆಟಗಾರ ಕೆ ಎಲ್ ರಾಹುಲ್ ಮೂರೂ ಪ್ರಕಾರದ ಆಟದಲ್ಲಿ ಛಾಪು ಮೂಡಿಸಿದ್ದರೂ, ಅವರಲ್ಲಿನ ಕ್ರಿಕೆಟ್ ಪ್ರತಿಭೆಯನ್ನು ಅನಾವರಣಗೊಳಿಸಿದ್ದು ಸಾಂಪ್ರದಾಯಿಕವಾದ ಐದು ದಿನಗಳ ಟೆಸ್ಟ್ ಆಟ. ರಾಷ್ಟ್ರೀಯ ತಂಡಕ್ಕೆ ಕಾಲಿರಿಸಿದ ನಂತರದಲ್ಲಿ ಕೆ ಎಲ್ ರಾಹುಲ್ ಗಮನಾರ್ಹ ಪ್ರದರ್ಶನ ನೀಡುತ್ತ ಸಾಗಿದ್ದು, ಪ್ರಸ್ತುತ ಟೀಂ ಇಂಡಿಯಾದ ಅವಿಭಾಜ್ಯ ಅಂಗವೇ ಆಗಿದ್ದಾರೆ. ಆದರೆ, ಈ ಋತುವಿನಲ್ಲಿನ ಅವರ ಟೆಸ್ಟ್ ಸಾಧನೆ ನಿರಾಶಾದಾಯಕವಾಗಿದೆ. ಹೀಗಾಗಿ, ಸದ್ಯ, ಭಾರತ ತಂಡದಲ್ಲಿ, ಅದೂ ಟೆಸ್ಟ್ ತಂಡದಲ್ಲಿನ ಸ್ಥಾನವನ್ನು ರಾಹುಲ್ ಸುಭದ್ರಪಡಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ಸಹ ಆಟಗಾರರಾದ ಆರ್ ವಿನಯ್ ಕುಮಾರ್, ಮನೀಶ್ ಪಾಂಡೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದರೂ, ಮನೀಶ್ ಆಗಲೀ ಇಲ್ಲವೇ ವಿನಯ್ ಆಗಲೀ ಟೆಸ್ಟ್ ತಂಡದಲ್ಲಿ ರಾಹುಲ್ ಅವರಂತೆ ಕಾಯಂ ಸ್ಥಾನ ಗಳಿಸುವಲ್ಲಿ ವಿಫಲವಾಗಿದ್ದಾರೆ. ಮನೀಶ್ ಅಂತೂ ಇನ್ನಷ್ಟೇ ಟೆಸ್ಟ್ ಕ್ರಿಕೆಟ್‌ಗೆ ರಾಷ್ಟ್ರೀಯ ತಂಡದ ಪರ ಪದಾರ್ಪಣೆ ಮಾಡಬೇಕಿದೆ. ವಿನಯ್ ಕುಮಾರ್ ತಮಗೆ ಸಿಕ್ಕ ವಿರಳ ಅವಕಾಶವನ್ನು ಗಟ್ಟಿಗೊಳಿಸಲು ಸಾಧ್ಯವಾಗಲಿಲ್ಲ. ವಿನಯ್ ಟೆಸ್ಟ್ ಜೀವಿತ ಸದ್ಯ ಒಂದೇ ಒಂದು ಪಂದ್ಯಕ್ಕೇ ಸೀಮಿತವಾಗಿಹೋಗಿದೆ.

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯ ಆಪ್ತ ವಲಯದಲ್ಲಿರುವ ರಾಹುಲ್ ಸ್ಥಾನ ಸದ್ಯಕ್ಕೆ ಅಭದ್ರತೆಯಿಂದೇನೂ ಕೂಡಿಲ್ಲ. ಆದಾಗ್ಯೂ, ಮುಂಬರಲಿರುವ ಆಸ್ಟ್ರೇಲಿಯಾ ಪ್ರವಾಸ ಭಾರತದ ಪಾಲಿಗೆ ಅತ್ಯಂತ ನಿರ್ಣಾಯಕ ಎನಿಸಿದೆ. ಆಸೀಸ್ ಸರಣಿಗೆ ರಾಹುಲ್ ಅವರನ್ನು ಆಯ್ಕೆ ಸಮಿತಿ ಕಡೆಗಣಿಸುವ ಸಾಧ್ಯತೆ ಇಲ್ಲವಾದರೂ, ಕಾಂಗರೂ ನಾಡಿನಲ್ಲಿ ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ಹಾಗೂ ಹ್ಯಾಜ್ಲೆವುಡ್‌ರಂಥ ಪ್ರಚಂಡ ಬೌಲರ್‌ಗಳ ದಾಳಿಯನ್ನು ರಾಹುಲ್ ಹೇಗೆ ನಿಭಾಯಿಸುತ್ತಾರೆ ಎಂಬುದರ ಮೇಲೆಯೂ ಅವರ ಭವಿಷ್ಯ ಆಧರಿಸಿದೆ.

ಹತ್ತು ಪಂದ್ಯಗಳಲ್ಲಿ ಒಂದೇ ಶತಕ!

ಇದನ್ನೂ ಓದಿ : ಕೆ ಎಲ್ ರಾಹುಲ್ ಇನ್ನಿಂಗ್ಸ್‌ಗೆ ಪಾಕ್ ಆ್ಯಂಕರ್ ಜೈನಾಬ್ ಅಬ್ಬಾಸ್ ಫಿದಾ

ಪ್ರಸ್ತುತ ಋತುವಿನ ಟೆಸ್ಟ್ ಪಂದ್ಯಗಳಲ್ಲಿ ರಾಹುಲ್ ಇನ್ನಿಂಗ್ಸ್ ಹೇಳಿಕೊಳ್ಳುವಂತಿಲ್ಲ. ೨೪.೭ರ ಸರಾಸರಿಯಲ್ಲಿ ಅವರು ಕಲೆಹಾಕಿರುವುದು ಕೇವಲ ೪೨೦ ರನ್‌. ಈ ಋತುವಿನಲ್ಲಿ ಇಲ್ಲಿವರೆಗೆ ೧೦ ಪಂದ್ಯಗಳನ್ನು ರಾಹುಲ್ ಆಡಿದ್ದಾರೆ. 18 ಇನ್ನಿಂಗ್ಸ್‌ಗಳಲ್ಲಿ ಒಂದು ಶತಕ ಹಾಗೂ ಇನ್ನೊಂದರ್ಧ ಶತಕವಷ್ಟೇ ರಾಹುಲ್ ಬ್ಯಾಟಿಂಗ್‌ನಿಂದ ಮೂಡಿಬಂದಿರುವುದು.

ಭಾರತದ ಪರ ಇನ್ನಿಂಗ್ಸ್ ಆರಂಭಿಸುವ ರಾಹುಲ್‌ಗೆ ಈಗ ಮುಂಬೈ ಆಟಗಾರ ಪೃಥ್ವಿ ಶಾ ಪ್ರಬಲ ಪ್ರತಿಸ್ಪರ್ಧಿಯಾಗಿದ್ದಾರೆ. ಈ ಯುವ ಆಟಗಾರ ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನಲ್ಲೇ ಭರ್ಜರಿ ಶತಕ ಬಾರಿಸಿದ್ದಲ್ಲದೆ, ಎರಡನೇ ಟೆಸ್ಟ್‌ನಲ್ಲೂ ಅರ್ಧಶತಕ ದಾಖಲಿಸಿದರು. ಮಾತ್ರವಲ್ಲ, ಚೊಚ್ಚಲ ಸರಣಿಯಲ್ಲೇ ಸರಣಿಶ್ರೇಷ್ಠ ಪ್ರಶಸ್ತಿ ಪಡೆದ ಪೃಥ್ವಿ, ಭಾರತದ ಇನ್ನಿಂಗ್ಸ್ ಆರಂಭಿಸುವ ಪರ್ಯಾಯ ಆಟಗಾರರ ಪೈಕಿ ಉದಯಿಸಿರುವ ನವತಾರೆ. ಈ ಮಧ್ಯೆ ರಾಹುಲ್, ೧೮ ಇನ್ನಿಂಗ್ಸ್‌ಗಳಲ್ಲಿ ಶೇ.೬೧ರಷ್ಟು ಬ್ಯಾಟಿಂಗ್ ವೈಫಲ್ಯ ಕಂಡಿದ್ದಾರೆ. ಒಂದೋ ಎಲ್‌ಬಿ ಇಲ್ಲವೇ ಕ್ಲೀನ್ ಬೌಲ್ಡ್‌ಗೆ ಗುರಿಯಾಗಿದ್ದಾರೆ.

ವಿದೇಶದಲ್ಲೂ ಶತಕದಾಟ

ರಾಹುಲ್ ಭಾರತದ ಪರ ೩೧ ಟೆಸ್ಟ್‌ಗಳನ್ನಾಡಿದ್ದು, ೫೧ ಇನ್ನಿಂಗ್ಸ್‌ಗಳಲ್ಲಿ ಐದು ಶತಕ ಮತ್ತು ೧೧ ಅರ್ಧಶತಕ ದಾಖಲಿಸಿದ್ದಾರೆ. ತವರಿನಲ್ಲಿ ಕೇವಲ ಒಂದು ರನ್ ಅಂತರದಿಂದ ದ್ವಿಶತಕದಿಂದ ವಂಚಿತವಾದ ರಾಹುಲ್, ಆಸ್ಟ್ರೇಲಿಯಾ, ವಿಂಡೀಸ್, ಶ್ರೀಲಂಕಾ ಮತ್ತು ಇಂಗ್ಲೆಂಡ್‌ಗಳಲ್ಲಿ ತಲಾ ಒಂದೊಂದು ಶತಕವನ್ನು ದಾಖಲಿಸಿರುವುದು ಗಮನಾರ್ಹ. ಅಂದಹಾಗೆ, ಅವರ ಕೊನೆಯ ಶತಕ ಈ ಬಾರಿಯ ಇಂಗ್ಲೆಂಡ್ ವಿರುದ್ಧದ ಐದು ಸರಣಿಯ ಕೊನೆಯ ಟೆಸ್ಟ್‌ನಲ್ಲಿ ದಾಖಲಾಯಿತು. ವಿಶೇಷವೆಂದರೆ, ಇದೇ ಇಂಗ್ಲೆಂಡ್ ವಿರುದ್ಧ ೨೦೧೬ರ ಚೆನ್ನೈ ಟೆಸ್ಟ್‌ನಲ್ಲಿ ರಾಹುಲ್ ಕೇವಲ ಒಂದು ರನ್ ಅಂತರದಿಂದ ದ್ವಿಶತಕ ವಂಚಿತವಾಗಿದ್ದರು!

ಏಳು ಬಾರಿ ಬೌಲ್ಡ್!

ಈ ಋತುವಿನಲ್ಲಿ ರಾಹುಲ್ ಏಳು ಬಾರಿ ಬೌಲ್ಡ್ ಆಗಿದ್ದರೆ, ನಾಲ್ಕು ಬಾರಿ ಲೆಗ್ ಬಿಫೋರ್ ಅಂದರೆ, ಎಲ್‌ಬಿ ಬಲೆಗೆ ಬಿದ್ದಿದ್ದಾರೆ. ದಿನದ ಹಿಂದಷ್ಟೇ ಮುಗಿದ ಹೈದರಾಬಾದ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಜೇಸನ್ ಹೋಲ್ಡರ್, ರಾಹುಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ್ದರು. ಕೇವಲ ೪ ರನ್‌ಗೆ ರಾಹುಲ್ ನಿರ್ಗಮಿಸಿದ್ದರು. ಇನ್ನು, ರಾಜ್‌ಕೋಟ್ ಟೆಸ್ಟ್‌ನಲ್ಲಿ ಶಾನಾನ್ ಗೇಬ್ರಿಯಲ್ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲೇ ಶೂನ್ಯಕ್ಕೆ ಕನ್ನಡಿಗ ವಿಕೆಟ್ ಕಳೆದುಕೊಳ್ಳುವಂತೆ ಮಾಡಿದ್ದರು.

ವಿಂಡೀಸ್ ವಿರುದ್ಧದ ಸರಣಿಗೂ ಮುಂಚಿನ ಇಂಗ್ಲೆಂಡ್ ಸರಣಿಯಂತೂ ರಾಹುಲ್ ಪಾಲಿಗೆ ದುಃಸ್ವಪ್ನದಂತಿತ್ತು. ಕೊನೆಯ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ರಾಹುಲ್ ಬೌಲ್ಡ್ ಆಗಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ಸ್ಯಾಮ್ ಕರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಆದಿಲ್ ರಶೀದ್‌ಗೆ ರಾಹುಲ್ ಬೌಲ್ಡ್ ಆಗಿದ್ದರು. ಆದಾಗ್ಯೂ, ಈ ಪಂದ್ಯದಲ್ಲಿ ರಾಹುಲ್ ಎರಡನೇ ಇನ್ನಿಂಗ್ಸ್‌ನಲ್ಲಿ ೧೪೯ ರನ್ ಗಳಿಸಿ ಮಿಂಚಿದ್ದರು.

ನಾಲ್ಕನೇ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ರಾಹುಲ್ ಪಾಲಿಗೆ ಸ್ಟುವರ್ಟ್ ಬ್ರಾಡ್ ಕಂಟಕರಾದರು. ಮೊದಲ ಇನ್ನಿಂಗ್ಸ್‌ನಲ್ಲಿ ೧೯ ರನ್ ಗಳಿಸಿದ್ದಾಗ ಎಲ್‌ಬಿ ಬಲೆಗೆ ಬಿದ್ದ ರಾಹುಲ್, ಎರಡನೇ ಇನ್ನಿಂಗ್ಸ್‌ನಲ್ಲಿ ಬ್ರಾಡ್ ಅವರ ಕೆಳಹಂತದ ಎಸೆತವನ್ನು ದಂಡಿಸಲು ಹೋಗಿ ಬೌಲ್ಡ್ ಆಗಿದ್ದರು. ಇತ್ತ, ನಾಟಿಂಗ್‌ಹ್ಯಾಮ್‌ನಲ್ಲಿನ ಮೂರನೇ ಟೆಸ್ಟ್‌ನಲ್ಲಿ ಕ್ರಿಸ್ ವೋಕ್ಸ್ ಮತ್ತು ಬೆನ್ ಸ್ಟೋಕ್ಸ್‌ಗೆ ರಾಹುಲ್ ವಿಕೆಟ್ ಒಪ್ಪಿಸಿದ್ದರು. ವೋಕ್ಸ್ ಎಲ್‌ಬಿ ಬಲೆಗೆ ಬೀಳಿಸಿದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಸ್ಟೋಕ್ಸ್, ರಾಹುಲ್ ರಕ್ಷಣಾತ್ಮಕ ಆಟವನ್ನು ಕ್ಲೀನ್ ಬೌಲ್ಡ್‌ನೊಂದಿಗೆ ಹೊಸಕಿಹಾಕಿದ್ದರು.

ಇನ್ನು, ರಾಹುಲ್ ಈ ಋತುವಿನಲ್ಲಿ ದಾಖಲಿಸಿದ ಏಕೈಕ ಅರ್ಧಶತಕ ಬೆಂಗಳೂರಿನಲ್ಲಿ ನಡೆದ ಆಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌ನಲ್ಲಿ ಮೂಡಿಬಂದಿತ್ತು. ಯಾಮಿನ್ ಅಹಮದ್‌ಜಾಯ್ ಅವರ ಎಸೆತವೊಂದನ್ನು ಕಟ್ ಮಾಡಲು ಮುನ್ನುಗ್ಗಿದ ರಾಹುಲ್, ಈ ಋತುವಿನಲ್ಲಿ ಮೊದಲ ಬಾರಿಗೆ ಬೌಲ್ಡ್ ಆಗಿದ್ದರು. ಇಂಗ್ಲೆಂಡ್ ಸರಣಿಯ ವೇಳೆ ಅವರ ಅಸ್ಥಿರ ಆಟ ಟೀಕಾಕಾರರಿಗೆ ಆಡಿಕೊಳ್ಳುವಂತಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ಟ್ರಾಲ್‌ಗೂ ಒಳಗಾಗಿದ್ದರು. ಸದ್ಯ, ರಾಹುಲ್ ಗಮನ ಆಸೀಸ್ ಪ್ರವಾಸದತ್ತ ನಾಟಿದ್ದು, ಅಸ್ಥಿರ ಆಟದಿಂದ ಪುಟಿದೇಳುವ ಸಂಕಲ್ಪದಲ್ಲಿನ ಅವರ ಯಶಸ್ಸು ಕಾಂಗರೂ ನಾಡಿನಲ್ಲಿನ ಭಾರತದ ಐತಿಹಾಸಿಕ ಸರಣಿ ಗೆಲುವಿಗೆ ಪೂರಕವಾಗಬೇಕಿದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More