ಯುವ ಒಲಿಂಪಿಕ್ಸ್ | ಹಾಕಿ ಫೈನಲ್‌ನಲ್ಲಿ ನಿರಾಸೆ ಅನುಭವಿಸಿದ ಭಾರತಕ್ಕೆ ಬೆಳ್ಳಿ

ಅರ್ಜೆಂಟೀನಾದ ಬ್ಯೂನಸ್ ಐರಿಸ್‌ನಲ್ಲಿ ನಡೆಯುತ್ತಿರುವ ಯುವ ಒಲಿಂಪಿಕ್ಸ್ ಕೂಟದ ಪುರುಷರ ಹಾಗೂ ವನಿತೆಯರ ಎರಡೂ ವಿಭಾಗಗಳಲ್ಲಿ ಫೈನಲ್ ತಲುಪಿದ್ದ ಭಾರತ ನಿರಾಸೆ ಅನುಭವಿಸಿತು. ಮಲೇಷ್ಯಾ ವಿರುದ್ಧ ಪುರುಷರ ತಂಡ ಸೋಲನುಭವಿಸಿದರೆ, ವನಿತೆಯರ ತಂಡ ಅರ್ಜೆಂಟೀನಾ ಎದುರು ಸೋತಿತು

ಆಕರ್ಷಕ ಆಟದೊಂದಿಗೆ ಫೈನಲ್ ತಲುಪಿದ್ದ ಭಾರತದ ಆಟಗಾರರು ಅಂತಿಮ ಸುತ್ತಿನಲ್ಲಿ ಸೋಲನುಭವಿಸಿದರು. ಆದಾಗ್ಯೂ, ಟೂರ್ನಿಯಲ್ಲಿ ಚಾರಿತ್ರಿಕ ಚಿನ್ನ ಗೆಲ್ಲಲಾಗದೆ ಹೋದರೂ, ಬೆಳ್ಳಿ ಪದಕ ಜಯಿಸುವುದರೊಂದಿಗೆ ಪುರುಷರು ಹಾಗೂ ವನಿತಾ ಹಾಕಿ ತಂಡವು ಯಶಸ್ವಿಯಾಯಿತು. ಯುವ ಒಲಿಂಪಿಕ್ಸ್‌ ಹಾಕಿ ವಿಭಾಗದಲ್ಲಿ ಭಾರತಕ್ಕೆ ಬಂದ ಮೊಟ್ಟಮೊದಲ ಪದಕ ಇದೆಂಬುದರ ಹಿನ್ನೆಲೆಯಲ್ಲಿ ಪುರುಷ ಮತ್ತು ಮಹಿಳಾ ಆಟಗಾರ್ತಿಯರ ಸಾಧನೆ ಐತಿಹಾಸಿಕ ಎನಿಸಿತು.

ಬಲಿಷ್ಠ ಮಲೇಷ್ಯಾ ಎದುರು ಭಾರತದ ಪುರುಷರ ತಂಡ ೨-೪ ಗೋಲುಗಳ ಅಂತರದಿಂದ ಸೋಲನುಭವಿಸಿತು. ಇತ್ತ, ವನಿತೆಯರ ವಿಭಾಗದಲ್ಲಿ ೧-೩ ಗೋಲುಗಳ ಸೋಲಿಗೆ ಭಾರತ ಹಾಕಿ ಮಹಿಳಾ ತಂಡ ಪಕ್ಕಾಯಿತು. ಫೈನಲ್‌ನಲ್ಲಿ ಗೆಲುವು ಸಾಧಿಸಿದ ಮಲೇಷ್ಯಾ ಹಾಗೂ ಅರ್ಜೆಂಟೀನಾ ತಂಡಗಳು ಯುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮೊಟ್ಟಮೊದಲ ಚಿನ್ನದ ಪದಕ ಗೆದ್ದು ಇತಿಹಾಸ ಬರೆದವು.

ಇನ್ನುಳಿದಂತೆ, ಆತಿಥೇಯ ಅರ್ಜೆಂಟೀನಾ ಪುರುಷರ ತಂಡ ಮತ್ತು ಚೀನಾ ವನಿತೆಯರ ಹಾಕಿ ತಂಡ ಕ್ರಮವಾಗಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿದವು. ಅರ್ಜೆಂಟೀನಾ, ೪-೦ ಗೋಲುಗಳಿಂದ ಜಾಂಬಾ ವಿರುದ್ಧ ಗೆಲುವು ಪಡೆದರೆ, ದಕ್ಷಿಣ ಆಫ್ರಿಕಾ ತಂಡವನ್ನು ಚೀನಾ ೬-೦ ಗೋಲುಗಳಿಂದ ಮಣಿಸಿತು.

ಇದನ್ನೂ ಓದಿ : ಯುವ ಒಲಿಂಪಿಕ್ಸ್ | ಬಂಗಾರದ ಸೌರಭ ಬೀರಿದ ಹದಿನಾರರ ಹರೆಯದ ಚೌಧರಿ

ಸ್ವರ್ಣ ಪದಕಕ್ಕಾಗಿ ನಡೆದ ಹೋರಾಟದಲ್ಲಿ ಭಾರತ ಮೊದಲಿಗೆ ಗೋಲು ಹೊಡೆಯಿತಾದರೂ, ಕ್ರಮೇಣ ಮಲೇಷ್ಯಾ ಚಾಣಾಕ್ಷ ಆಟಕ್ಕೆ ಕಂಗೆಟ್ಟಿತು. ಪಂದ್ಯ ಶುರುವಾದ ಎರಡೇ ನಿಮಿಷಗಳಲ್ಲಿ ವಿವೇಕ್ ಸಾಗರ್ ಪ್ರಸಾದ್ ಭಾರತಕ್ಕೆ ೧-೦ ಮುನ್ನಡೆ ತಂದುಕೊಟ್ಟರು. ಆದರೆ, ಸರಿಯಾಗಿ ಇನ್ನೆರಡು ನಿಮಿಷಗಳಲ್ಲೇ ಮಲೇಷ್ಯಾ ಫಿರಾದುಸ್ ರೊಸ್ದಿ ದಾಖಲಿಸಿದ ಗೋಲಿನಿಂದ ೧-೧ ಸಮಬಲ ಸಾಧಿಸಿತು. ಪಟ್ಟು ಬಿಡದ ಭಾರತ, ಐದನೇ ನಿಮಿಷದಲ್ಲಿ ಪ್ರಸಾದ್ ದಾಖಲಿಸಿದ ಎರಡನೇ ಗೋಲಿನೊಂದಿಗೆ ೨-೧ ಮುನ್ನಡೆ ಪಡೆಯಿತು.

ಪ್ರಥಮಾರ್ಧದ ಹೊತ್ತಿಗೆ ಭಾರತ ೨-೧ ಮುನ್ನಡೆ ಪಡೆಯಿತಾದರೂ, ವಿರಾಮದ ಬಳಿಕ ೧೩ನೇ ನಿಮಿಷದಲ್ಲಿ ಅಕಿಮುಲ್ಲಾ ಅನುವರ್ ಮತ್ತು ಅಮಿರುಲ್ ಅಜಾರ್ ಮೂರು ನಿಮಿಷಗಳ ನಂತರದಲ್ಲಿ ದಾಖಲಿಸಿದ ಗೋಲಿನಿಂದ ಮೇಲುಗೈ ಸಾಧಿಸಿತು. ಪಂದ್ಯ ಮುಗಿಯಲು ಕೇವಲ ಎರಡು ನಿಮಿಷಗಳಿವೆ ಎನ್ನುವಾಗ ಅನುರ್ ಗೋಲ್ಡನ್ ಗೋಲೊಂದನ್ನು ಬಾರಿಸಿ ಭಾರತಕ್ಕೆ ಆಘಾತ ನೀಡಿದರು.

ಬಳಿಕ ನಡೆದ ವನಿತೆಯರ ವಿಭಾಗದಲ್ಲೂ ಭಾರತ ನಿರಾಸೆ ಅನುಭವಿಸಿತು. ತವರು ಅಭಿಮಾನಿಗಳ ಭರಪೂರ ಬೆಂಬಲದೊಂದಿಗೆ ಆಕ್ರಮಣಕಾರಿ ಆಟವಾಡಿದ ಅರ್ಜೆಂಟೀನಾ ವನಿತೆಯರು, ಭಾರತದ ಎದುರು ಮಿಂಚಿದರು. ೪೯ ಸೆಕೆಂಡುಗಳಲ್ಲೇ ಮುಮ್ತಾಜ್ ಖಾನ್ ಅವರಿಂದ ಭಾರತ ೧-೦ಯಿಂದ ಮುನ್ನಡೆ ಪಡೆಯಿತು. ಆರು ನಿಮಿಷಗಳ ಅಂತರದಲ್ಲಿ ಗಿಯಾನೆಲ್ಲ ಪ್ಯಾಲೆಟ್ ಸಮಬಲದ ಗೋಲು ದಾಖಲಿಸಿದರೆ, ೯ನೇ ನಿಮಿಷದಲ್ಲಿ ಸೋಫಿಯಾ ರಾಮಲ್ಲೊ ಗೋಲು ಹೊಡೆದರು. ಹೀಗಾಗಿ, ವಿರಾಮದ ಹೊತ್ತಿಗೆ ಅರ್ಜೆಂಟೀನಾ ೨-೧ ಮುನ್ನಡೆ ಪಡೆಯಿತು. ದ್ವಿತೀಯಾರ್ಧದಲ್ಲಿ ಬ್ರಿಸಾ ಬ್ರುಗಾಸೆರ್ ಬಾರಿಸಿದ ಗೋಲಿನೊಂದಿಗೆ ೩-೧ ಮುನ್ನಡೆ ಪಡೆದ ಅರ್ಜೆಂಟೀನಾ, ಸ್ವರ್ಣ ಸಾಧನೆ ಮೆರೆಯಿತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More