ಉದ್ದೀಪನಾ ಮದ್ದು ಪರೀಕ್ಷೆ ನೋಟಿಸ್‌ಗೆ ವಿಶ್ವ ಶರವೇಗಿ ಉಸೇನ್ ಬೋಲ್ಟ್ ಅಸಮಾಧಾನ

ಅಥ್ಲೆಟಿಕ್ಸ್‌ನಿಂದ ನಿವೃತ್ತಿಯಾದ ನಂತರ ನಿಷೇಧಿತ ಉದ್ದೀಪನಾ ಮದ್ದು ಪರೀಕ್ಷೆಗೆ ನೋಟಿಸ್ ನೀಡಿರುವುದಕ್ಕೆ ಜಮೈಕಾ ಸ್ಪ್ರಿಂಟರ್ ಉಸೇನ್ ಬೋಲ್ಟ್ ಬೇಸರಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಈಚೆಗಷ್ಟೇ ಫುಟ್ಬಾಲ್ ವೃತ್ತಿಬದುಕಿಗೆ ಕಾಲಿರಿಸಿದ ಬೋಲ್ಟ್, ಈ ಬೆಳವಣಿಗೆ ಕಸಿವಿಸಿ ಉಂಟುಮಾಡಿದೆ ಎಂದಿದ್ದಾರೆ

100 ಮೀಟರ್ ಓಟದ ಸ್ಪರ್ಧೆಯ ವಿಶ್ವದಾಖಲೆ ವೀರ ಉಸೇನ್ ಬೋಲ್ಟ್ ಕಳೆದ ವರ್ಷವಷ್ಟೇ ಅಥ್ಲೆಟಿಕ್ಸ್ ಬದುಕಿಗೆ ವಿದಾಯ ಹೇಳಿದ್ದಾರೆ. ಆಸ್ಟ್ರೇಲಿಯಾ ಸೆಂಟ್ರಲ್ ಕೋಸ್ಟ್ ಮ್ಯಾರಿನರ್ಸ್ ಫುಟ್ಬಾಲ್ ಕ್ಲಬ್ ಅವರ ಜೊತೆಗಿನ್ನೂ ಒಪ್ಪಂದ ಮಾಡಿಕೊಳ್ಳಬೇಕಿದೆ. ಸದ್ಯ, ಕ್ಲಬ್ ಜೊತೆಗೆ ಟ್ರಯಲ್‌ನಲ್ಲಿರುವ ಬೋಲ್ಟ್‌ಗೆ ಆಸ್ಟ್ರೇಲಿಯಾದ ಭ್ರಷ್ಟಾಚಾರ ತಡೆ ಪ್ರಾಧಿಕಾರ (ಅಸಾಡ) ನೀಡಿರುವ ಉದ್ದೀಪನಾ ತಡೆ ನೋಟಿಸ್ ದಿಗ್ಭ್ರಮೆ ತರಿಸಿದೆ.

ಎಂಟು ಬಾರಿಯ ಒಲಿಂಪಿಕ್ ಚಾಂಪಿಯನ್ ಬೋಲ್ಟ್, ಕಳೆದ ಶುಕ್ರವಾರವಷ್ಟೇ ನಡೆದಿದ್ದ ಎ ಲೀಗ್ ಕ್ಲಬ್ ಸೆಂಟ್ರಲ್ ಕೋಸ್ಟ್ ಮ್ಯಾರಿನರ್ಸ್ ಪರ ಎರಡು ಗೋಲು ಬಾರಿಸಿ ಗಮನ ಸೆಳೆದಿದ್ದರು. “ಟ್ರ್ಯಾಕ್ ಮತ್ತು ಫೀಲ್ಡ್ ವೃತ್ತಿಬದುಕಿಗೆ ನಾನು ವಿದಾಯ ಹೇಳಿದ್ದು, ಈಗಷ್ಟೇ ಫುಟ್ಬಾಲ್ ಆಟಗಾರನಾಗಿದ್ದೇನೆ,’’ ಎಂದು ೩೨ರ ಹರೆಯದ ಬೋಲ್ಟ್ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಫುಟ್ಬಾಲ್ ಫೆಡರೇಷನ್ ಆಸ್ಟ್ರೇಲಿಯಾದ ಸೂಚನೆಯ ಮೇರೆಗೆ ಅಸಾಡ, ಬೋಲ್ಟ್ ಅವರ ರಕ್ತ ಮತ್ತು ಮೂತ್ರ ಮಾದರಿಯನ್ನು ಕೇಳಿದೆ. ಬೋಲ್ಟ್ ಜೊತೆಗೆ ಕ್ಲಬ್ ಯಾವುದೇ ರೀತಿಯಲ್ಲೂ ಅಧಿಕೃತವಾದ ಒಪ್ಪಂದ ಮಾಡಿಕೊಳ್ಳದೆ ಹೋದರೂ, ಪ್ರಸಕ್ತ ಅವರು ಟ್ರಯಲ್‌ನಲ್ಲಿದ್ದರೂ, ಅವರು ಪರೀಕ್ಸೆಗೆ ಒಳಗಾಗಬೇಕಿರುವುದು ನಿಯಮಬಾಹಿರ ಏನಲ್ಲ ಎಂದು ಅಸಾಡ ಸ್ಪಷ್ಟನೆ ನೀಡಿದೆ.

“ನಾನು ಹೇಗೆ ತಾನೇ ಉದ್ದೀಪನಾ ಮದ್ದು ಪರೀಕ್ಷೆಗೆ ಒಳಗಾಗಲು ಸಾಧ್ಯ? ಈಗಷ್ಟೇ ಫುಟ್ಬಾಲ್ ಜಗತ್ತಿನಲ್ಲಿ ಕಣ್ಣು ಬಿಡುತ್ತಿರುವ ನಾನು ಪೂರ್ಣ ಪ್ರಮಾಣದಲ್ಲಿ ಫುಟ್ಬಾಲ್ ಆಟಗಾರನಾಗಿ ಹೊರಹೊಮ್ಮಿಲ್ಲ. ಇದೇ ವಾದವನ್ನು ನಾನು ನನ್ನನ್ನು ಪರೀಕ್ಷಾ ಮಾದರಿ ಕೇಳಿದ ಮಹಿಳೆಯೊಂದಿಗೆ ಮಂಡಿಸಿದೆ. ಅದಕ್ಕೆ ಆಕೆ, ‘ನೀವೊಬ್ಬರು ಎಲೀಟ್ ಅಥ್ಲೀಟ್ ಆಗಿದ್ದು, ಪರೀಕ್ಷೆಗೆ ಒಳಗಾಗಬೇಕಾದುದು ಅನಿವಾರ್ಯ’ ಎಂದರು,’’ ಎಂದು ಬೋಲ್ಟ್ ಹೇಳಿದ್ದಾರೆ.

ಯಾವುದೇ ಕ್ರೀಡಾಪಟುವು ಸ್ಪರ್ಧಿಸುವ ಕ್ರೀಡೆಯು ಭ್ರಷ್ಟಾಚಾರ ತಡೆ ನಿಯಮದಡಿ ಬರುವಂತಿದ್ದರೆ, ಅಂತಹ ಕ್ರೀಡಾಪಟು ಪರೀಕ್ಷೆಗೆ ಗುರಿಯಾಗುವುದು ಕಡ್ಡಾಯ ಆಗಿರುತ್ತದೆ ಎಂದು ಆಸ್ಟ್ರೇಲಿಯನ್ ಸ್ಪೋರ್ಟ್ಸ್ ಆಂಟಿ ಡೋಪಿಂಗ್ ಅಥಾರಿಟಿ (ಅಸಾಡ) ಬೋಲ್ಟ್ ಅವರಿಗೆ ಮನದಟ್ಟು ಮಾಡಿದೆ. ೨೦೦೮ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ೧೦೦ ಮತ್ತು ೨೦೦ ಮೀಟರ್ ಓಟದಲ್ಲಿ ಚಿನ್ನದ ಪದಕ ಜಯಿಸಿದ ಬೋಲ್ಟ್, ಲಂಡನ್ ಒಲಿಂಪಿಕ್ಸ್‌ನಲ್ಲೂ ಅದನ್ನು ಪುನರಾವರ್ತಿಸಿದ್ದರು. ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ಕ್ಲಬ್ ತಂಡದ ಅಪ್ಪಟ ಪ್ರೇಮಿಯಾಗಿರುವ ಬೋಲ್ಟ್, ಅಥ್ಲೆಟಿಕ್ಸ್ ಆಚೆಗೂ ತನ್ನ ಕ್ರೀಡಾಬದುಕನ್ನು ವಿಸ್ತರಿಸಿದ್ದು, ಪರಿಪೂರ್ಣ ಫುಟ್ಬಾಲ್ ಆಟಗಾರನಾಗಿ ಹೊರಹೊಮ್ಮಲು ಸತತ ಪರಿಶ್ರಮಿಸುತ್ತಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More